ಕಲಿಕೆ ಗುಂಗು ಹೆಚ್ಚಿಸಿದ ರಂಗೋಲಿ

ಇಳಕಲ್ಲ: ಶಾಲೆ ಕೊಠಡಿ, ಮೈದಾನದಲ್ಲಿ ಬಣ್ಣ ಬಣ್ಣದ ರಂಗೋಲಿಯಲ್ಲಿ ಅರಳಿದ ಸಮಾಜ, ವಿಜ್ಞಾನ, ಗಣಿತ ವಿಷಯಗಳ ವಿವಿಧ ಚಿತ್ರಗಳು, ಅವುಗಳನ್ನು ಬಿಡಿಸುತ್ತ, ನೋಡುತ್ತ, ಮನನ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು!

ಈ ದೃಶ್ಯ ಕಂಡು ಬಂದಿದ್ದು ಇಳಕಲ್ಲ ನಗರ ಹಾಗೂ ತಾಲೂಕಿನ ಪ್ರತಿಯೊಂದು ಪ್ರಾಥಮಿಕ ಶಾಲೆಗಳಲ್ಲಿ. ಹೌದು, ಶಿಕ್ಷಣ ಇಲಾಖೆ ಸಹಯೋಗದಲ್ಲಿ ‘ಸರಳ ಜಿಯೋ ಕಿಟ್’ ಅಡಿಯಲ್ಲಿ ಎಲ್ಲ ಶಾಲೆಗಳಲ್ಲಿ ಮಕ್ಕಳ ಕಲಿಕೆ ಆಸಕ್ತಿ ಇಮ್ಮಡಿಗೊಳಿಸಲು, ಉತ್ಸಾಹ, ಸ್ಪರ್ಧಾ ಮನೋಭಾವ ಬೆಳೆಸಲು ಬಣ್ಣ ಬಣ್ಣದ ರಂಗೋಲಿ ಮೂಲಕ ಪಠ್ಯ ಚಿತ್ರಗಳನ್ನು ವಿದ್ಯಾರ್ಥಿಗಳಿಂದಲೇ ಬಿಡಿಸಿ ಅವರಲ್ಲಿ ಹೊಸತನದ ಕಲಿಕಾ ವಿಧಾನ ಪರಿಚಯಿಸಲಾಗುತ್ತಿದೆ.

ಏನಿದು ಚಿತ್ತಾರ ಕಲಿಕೆ
ಶಿಕ್ಷಕರ ಮಾರ್ಗದರ್ಶನದಲ್ಲಿ ಸರಳ ಜಿಯೋ ಕಿಟ್ ಸಹಯೋಗದಲ್ಲಿ ವಿದ್ಯಾರ್ಥಿಗಳು ರಂಗೋಲಿ ಬಳಕೆ ಮಾಡಿ ಸಮಾಜ, ವಿಜ್ಞಾನ, ಗಣಿತ ವಿಷಯಗಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸಿ, ಅವುಗಳ ಬಗ್ಗೆ ವಿವರಣೆ ನೀಡುವುದಾಗಿದೆ. ಈಗ ಈ ದೃಶ್ಯಗಳು ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಕಂಡು ಬರುತ್ತಿವೆ.

ಸಮಾಜ ವಿಷಯದಲ್ಲಿ ತಾಲೂಕು, ಜಿಲ್ಲೆ, ರಾಜ್ಯ, ದೇಶ, ಖಂಡ, ಜಗತ್ತು, ಗ್ಲೋಬ್, ಅಕ್ಷಾಂಶ, ರೇಖಾಂಶ, ವಿಧಾನಸೌಧ, ರಾಷ್ಟ್ರಧ್ವಜ, ಪ್ರಾಣಿಗಳು, ರಾಷ್ಟ್ರದ ಚಿಹ್ನೆಗಳು, ವಿಜ್ಞಾನದ ವಿಷಯ ನರಕೋಶ, ಜೀರ್ಣಾಂಗವ್ಯೆಹ, ಹೂವುಗಳ ಭಾಗಗಳು, ಮೂತ್ರಕೋಶ, ಜೀವಕೋಶ, ಸಸ್ಯಕೋಶ, ಪ್ರಾಣಿಕೋಶ ಚಿತ್ರಗಳು ಹಾಗೂ ಗಣಿತ ವಿಷಯದ ಚಿತ್ರಗಳನ್ನು ವಿದ್ಯಾರ್ಥಿಗಳು ಬಿಡಿಸುತ್ತಾರೆ.

ಮಕ್ಕಳಿಗೆ ಪ್ರೋತ್ಸಾಹ
ಪೂರ್ವ, ಪಶ್ಚಿಮ ವಲಯದ ಸಿಆರ್‌ಪಿ ವೀರೇಶ ದೋಟಿಹಾಳ, ಮಧ್ಯ ವಲಯದ ಸಿಆರ್‌ಪಿ ಶಾಂತಕುಮರ ಕುಟುಗಮರಿ ಸೇರಿ ತಾಲೂಕಿನ ಆಯಾ ಸಿಆರ್‌ಪಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಭೇಟಿ ನೀಡಿ, ವೀಕ್ಷಣೆ ಮಾಡಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ.

ಒಂದು ವಾರದಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ರಂಗೋಲಿ ಹವಾ ಜೋರಾಗಿದೆ. ಆಯಾ ಶಾಲೆಗಳಲ್ಲಿ ಉತ್ತಮ ರಂಗೋಲಿ ಹಾಕಿದ ಮಕ್ಕಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ.

ಬರೀ ಶಾಲೆ ಕೊಠಡಿಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಹೊಸ ರೀತಿಯ ಕಲಿಕಾ ವಿಧಾನಗಳತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ಕೈಯಲ್ಲಿ ರಂಗೋಲಿ ಕೊಟ್ಟು ಅವರ ಕಲಿತ ಪಠ್ಯದ ವಿಷಯದ ಚಿತ್ರಗಳನ್ನು ಬಿಡಿಸಲು ಹೇಳಲಾಗುತ್ತದೆ. ಇದು ಪರಿಣಾಮಕಾರಿ ಬೋಧನೆಯಾಗಿ ಕಂಡು ಬಂದಿದೆ.
– ಗುರುರಾಜ ದಾಶ್ಯಾಳ ಕ್ಷೇತ್ರ ಸಮನ್ವಯಾಧಿಕಾರಿ ಹುನಗುಂದ

ಡಯಟ್ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳ ಕಲಿಕೆಯಲ್ಲಿ ಹೊಸತನ ತುಂಬಲು ಮಕ್ಕಳ ಕೈಯಲ್ಲಿ ರಂಗೋಲಿ ಕೊಟ್ಟು ಅವರು ಬಿಡಿಸಿದ ಚಿತ್ರಗಳ ಬಗ್ಗೆ ಸಂಪೂರ್ಣ ತಂಡ ವೀಕ್ಷಣೆ ಮಾಡಲಿದೆ. ಸರಳ ಜಿಯೋ ಕಿಟ್ ಯೋಜನೆ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದೆ.
– ವೆಂಕಟೇಶ ಕೊಂಕಲ್ ಡಯಟ್ ಉಪನ್ಯಾಸಕರು, ಸರಳ ಜಿಯೋ ಕಿಟ್ ಯೋಜನೆ ನೋಡಲ್ ಅಧಿಕಾರಿ ಇಳಕಲ್ಲ