ಬಸವಾದಿ ಶರಣ ವಚನ ಪಠಣ ಮಾಡಿ

ಇಳಕಲ್ಲ: ಮಹಾಂತ ಜೋಳಿಗೆ ಹರಿಕಾರ ಡಾ.ಮಹಾಂತಪ್ಪಗಳ ಪ್ರಥಮ ಪುಣ್ಯಸ್ಮರಣೆ, 49ನೇ ಶಿವಾನುಭವ ತರಬೇತಿ ಅಂಗವಾಗಿ ನಗರದ ವಿಜಯ ಮಹಾಂತೇಶ ಸಂಸ್ಥಾನ ಮಠದ ಸಹಯೋಗದಲ್ಲಿ ಶರಣ ಸಿದ್ಧಾಂತ ವಿದ್ಯಾಪೀಠ ಹಾಗೂ ಮಠದ ಸಂಘಟನೆಗಳ ವತಿಯಿಂದ ಭಾನುವಾರ ಪ್ರಭಾತ ಸಂಚಲನ ಅದ್ದೂರಿಯಾಗಿ ನಡೆಯಿತು.

ಅನುಭವ ಮಂಟಪದಿಂದ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಿಂ.ಡಾ.ಮಹಾಂತ ಶ್ರೀಗಳ ಕರ್ತೃ ಗದ್ದುಗೆ ತಲುಪಿತು. ಶ್ರೀಮಠದ ಭಕ್ತರು, ಮಕ್ಕಳು ಭಾಗವಹಿಸಿದ್ದರು. ಬಸವಾದಿ ಶರಣರ ವಚನಗಳನ್ನು ಪಠಿಸಲಾಯಿತು.

ಗುರುಮಹಾಂತ ಶ್ರೀಗಳು ಮಾತನಾಡಿ, ಡಾ. ಮಹಾಂತ ಶ್ರೀಗಳು ಲಿಂಗೈಕ್ಯರಾಗಿ ವರ್ಷವಾಯಿತು. ಅವರು ಹಾಕಿಕೊಟ್ಟ ಬಸವ ತತ್ವ ಮಾರ್ಗದಲ್ಲಿ ಶ್ರೀಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಅವರ ಆಶೀರ್ವಾದ, ಅಂತಃಕರಣ ಎಲ್ಲ ಭಕ್ತರ ಮೇಲೆ ಇರಲಿ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಒಂದು ಗಂಟೆಯಾದರೂ ಬಸವಾದಿ ಶರಣರ ವಚನ ಪಠಣ ಮಾಡಬೇಕು. ಇದರಿಂದ ತಮ್ಮ ಕಷ್ಟಗಳು ದೂರಾಗುತ್ತವೆ ಎಂದರು. ನಂತರ ಅನುಭವ ಮಂಟಪದಲ್ಲಿ ಇಷ್ಟಲಿಂಗ ಪೂಜಾ ವಿಧಿ ವಿಧಾನಗಳ ಬಗ್ಗೆ ಭಕ್ತರಿಗೆ ತಿಳಿಸಿಕೊಡಲಾಯಿತು.

ಮಹಾಂತ ಶ್ರೀಗಳ ಗದ್ದುಗೆಗೆ ಅಲಂಕಾರ
ಲಿಂ.ಡಾ. ಮಹಾಂತ ಶ್ರೀಗಳ ಗದ್ದುಗೆ ಹಾಗೂ ಆವರಣವನ್ನು ಹೂಮಾಲೆ, ಬಾಳೆಕಂಬ, ತೆಂಗಿನಗರೆಯಿಂದ ಅಲಂಕಾರ ಮಾಡಲಾಗಿತ್ತು. ಮಹಾಂತ ಶ್ರೀಗಳ ಕರ್ತೃ ಗದ್ದುಗೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿತ್ತು. ವಚನ ಪಠಣ ಮಾಡಲು ಅಲ್ಲಿ ಒಂದು ಕಟ್ಟೆ ಕಟ್ಟಲಾಗಿತ್ತು. ಭಾನುವಾರ ಅಕ್ಕನ ಬಳಗದ ಅಧ್ಯಕ್ಷೆ ಡಾ. ಅರುಣಾ ಅಕ್ಕಿ ವಚನ ಪಠಣ ಮಾಡುವ ಮೂಲಕ ಉದ್ಘಾಟಿಸಿದರು.

Leave a Reply

Your email address will not be published. Required fields are marked *