ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಸಂಭ್ರಮ

ಸಂಗಣ್ಣ ಮಲಗಿಹಾಳ

ಇಳಕಲ್ಲ: ಪ್ರಸಕ್ತ ವರ್ಷದಿಂದ ಶಿಕ್ಷಣ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಸ್ವಲ್ಪ ಓದು ಸ್ವಲ್ಪ ಮೋಜು’ ಹೆಸರಿನಲ್ಲಿ ಏ.24ರಿಂದ ಹುನಗುಂದ-ಇಳಕಲ್ಲ ಅವಳಿ ತಾಲೂಕುಗಳಲ್ಲಿ ಆಯ್ದ 72 ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಸಂಭ್ರಮದ ಶಿಬಿರ ಪ್ರಾರಂಭಿಸಿದೆ.

ಈ ಬೇಸಿಗೆ ಸಂಭ್ರಮ ಮೇ 28ರವರೆಗೆ ಸಾಗಲಿದ್ದು, ಶಿಕ್ಷಕರು ವಿದ್ಯಾಥಿಗಳಿಗೆ ವಿವಿಧ ತರಬೇತಿ ನೀಡಲಿದ್ದಾರೆ. ಖಾಸಗಿ ಶಾಲೆಗಳು ಬೇಸಿಗೆ ಶಿಬಿರ ಎಂಬ ಕಾರ್ಯಕ್ರಮ ಆರಂಭಿಸಿದ್ದವು. ಇದನ್ನು ಗಮನಿಸಿದ ಶಿಕ್ಷಣ ಇಲಾಖೆ ನಗರ ಹಾಗೂ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಸಂಭ್ರಮ ಆರಂಭಿಸುವ ಮೂಲಕ ಪೈಪೋಟಿ ನೀಡುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಮತ್ತಷ್ಟು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿ ಸ್ಪರ್ಧಾತ್ಮಕ ಮನೋಭಾವ ಹೊರಹೊಮ್ಮುವಂತೆ ಮಾಡಲಾಗುತ್ತಿದೆ.

ಐದು ವಿಷಯಗಳ ಮಾಹಿತಿ
ತಿಂಗಳು ಬೇಸಿಗೆ ಸಂಭ್ರಮದಲ್ಲಿ ಮಕ್ಕಳಿಗೆ ಐದು ವಿಷಯಗಳ ಕುರಿತು ಮಾಹಿತಿ, ತಿಳಿವಳಿಕೆ, ತರಬೇತಿ ನೀಡಲಾಗುತ್ತದೆ. ಮೊದಲ ವಾರದಲ್ಲಿ ಕುಟುಂಬದ ಬಗ್ಗೆ ತಿಳಿವಳಿಕೆ, ಎರಡನೇ ವಾರ ನೀರು, ಮೂರನೇ ವಾರ ಆಹಾರ, ನಾಲ್ಕನೇ ವಾರ ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಐದನೇ ವಾರ ಪರಿಸರ ಕಾಳಜಿ ಕುರಿತು ಮಾಹಿತಿ ನೀಡಲಾಗುತ್ತದೆ.

ಅಧಿಕಾರಿಗಳ ನಿಗಾ
ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು, ಬಿಆರ್‌ಸಿ, ಸಿಆರ್‌ಸಿ ಸಂಪನ್ಮೂಲ ವ್ಯಕ್ತಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಬೇಸಿಗೆ ಸಂಭ್ರಮ ಸುವ್ಯವಸ್ಥಿತವಾಗಿ ನಡೆಯಲು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಬೆಳಗ್ಗೆ 9 ರಿಂದ 11ರವರೆಗೆ ಎರಡು ತಾಸು ಆಟದೊಂದಿಗೆ ಪಾಠ, ಪಾಠದೊಂದಿಗೆ ಆಟ ಎಂಬ ತತ್ತ್ವದಡಿ ಶಿಬಿರ ನಡೆಯಲಿದೆ. ಬೇಸಿಗೆ ಸಂಭ್ರಮಕ್ಕೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ನಿತ್ಯ ಬಿಸಿಯೂಟಕ್ಕೆ ತರಹೇವಾರಿ ಅಡುಗೆ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬಿಸಿಯೂಟದೊಂದಿಗೆ ಬೇಸಿಗೆ ಸಂಭ್ರಮ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಿದೆ. ಒಂದೊಂದು ವಾರ ಒಂದೊಂದು ವಿಷಯ ಬಗ್ಗೆ ಚರ್ಚೆ, ಸಂವಾದ ನಡೆಯಲಿದೆ. ಇದರ ಜತೆಗೆ ವಿವಿಧ ಆಟ ಆಡಿಸುವುದು, ಕಥೆ, ಕವನ ಹೇಳುವುದು ಹೀಗೆ ಮಕ್ಕಳಲ್ಲಿರುವ ಅಭಿರುಚಿ ಗುರುತಿಸಿ ಪೊ್ರೀೀತ್ಸಾಹ ನೀಡಲಾಗುತ್ತದೆ.
– ಎನ್.ವೈ. ಕುಂದರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹುನಗುಂದ

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಬೇಸಿಗೆ ಸಂಭ್ರಮ ವರದಾನವಾಗಿದೆ. ಐದು ವಿಷಯಗಳಲ್ಲಿ ವಿವಿಧ ಚಟುವಟಿಕೆ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಜತೆಗೆ ಅವರ ಬೌದ್ಧಿಕ ಮಟ್ಟ ಹೆಚ್ಚಿಸಲು ಶಿಕ್ಷಕರು ಶ್ರಮಿಸಲಿದ್ದಾರೆ.
– ಗುರುರಾಜ ದಾಶ್ಯಾಳ ಕ್ಷೇತ್ರ ಸಮನ್ವಯಾಧಿಕಾರಿ ಹುನಗುಂದ

ಜಿಲ್ಲಾದ್ಯಂತ 432 ಶಾಲೆಗಳಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಬಾಗಲಕೋಟೆ ತಾಲೂಕು 62, ಜಮಖಂಡಿ 97, ಮುಧೋಳ 75, ಬೀಳಗಿ 38, ಬಾದಾಮಿ 83, ಹುನಗುಂದ ತಾಲೂಕಿನ 72 ಶಾಲೆಗಳಲ್ಲಿ ಆರಂಭವಾಗಿದೆ. ತರಬೇತಿ ಪಡೆದ 864 ಶಿಕ್ಷಕರು ಶಿಬಿರ ನಡೆಸಲಿದ್ದಾರೆ.
– ಬಿ.ಎಚ್. ಗೋನಾಳ ಡಿಡಿಪಿಐ ಬಾಗಲಕೋಟೆ