ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

ಇಳಕಲ್ಲ: ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸಿದ್ದು, ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಮಾರ್ಗ ಸೇರಿ ಜಿಲ್ಲೆಯ ಸಮಗ್ರ ಪ್ರಗತಿಗೆ ಅವರೊಂದಿಗೆ ಶ್ರಮಿಸುವುದಾಗಿ ಶಾಸಕ ದೊಡ್ಡನಗೌಡ ಪಾಟೀಲ ಭರವಸೆ ನೀಡಿದರು.

ಹುನಗುಂದ ಮತಕ್ಷೇತ್ರ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ನನಗೆ ನೀಡಿದ ಮತಗಳಿಗಿಂತ ಹೆಚ್ಚು ಮತಗಳನ್ನು ಗದ್ದಿಗೌಡರ ಅವರಿಗೆ ನೀಡಿದ್ದಾರೆ. ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸ, ಪ್ರೀತಿ ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷ ನಡೆದ ವಿಧಾನಸಭೆ ಹಾಗೂ ಸದ್ಯದ ಲೋಕಸಭೆ ಚುನಾವಣೆಯಲ್ಲಿ ಜನಾದೇಶ ಬಿಜೆಪಿ ಪರವಾಗಿದ್ದು, ತಕ್ಷಣವೇ ಮೈತ್ರಿಕೂಟದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಮತದಾರರು ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ಈ ಲೋಕಸಭೆ ಲಿತಾಂಶವೇ ಸಾಕ್ಷಿಯಾಗಿದೆ. ಹೀಗಾಗಿ ಸಿಎಂ, ಡಿಸಿಎಂ, ಸಚಿವರು ತಮ್ಮ ಹುದ್ದೆಗಳಲ್ಲಿ ಮುಂದುವರಿಯುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ದೂರಿದರು.

ಬಿಜೆಪಿ ಮುಖಂಡ ಜಿ.ಪಿ. ಪಾಟೀಲ, ಎಂ.ವಿ. ಪಾಟೀಲ, ಮಹಾಂತಪ್ಪ ಚೆನ್ನಿ, ಕೆ.ಎಸ್. ಕಂದಿಕೊಂಡ, ಚಂದ್ರಶೇಖರ ಚಾಪಗಲ್ಲ, ರಾಜು ಕುಲಕರ್ಣಿ, ನಗರಸಭೆ ಸದಸ್ಯರಾದ ಮಂಜುನಾಥ ಶೆಟ್ಟರ, ಸುಗ್ಗೂರೇಶ ನಾಗಲೋಟಿ, ಚಂದ್ರಶೇಖರ ಚಾಪಗಲ್ಲ, ಜೋಳಪ್ಪ ಇಂಡಿ, ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಯ್ಯ ಮೂಗನೂರಮಠ ಇತರರು ಇದ್ದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ
ತಾಲೂಕಿನಲ್ಲಿ ತೀವ್ರ ಬರ ಇರುವುದರಿಂದ ಜನ-ಜಾನುವಾರುಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಚುನಾವಣೆ ನೀತಿ ಸಂಹಿತೆ ಜಾರಿಗೂ ಮೊದಲೇ ಅಧಿಕಾರಿಗಳಿಗೆ ತಿಳಿಸಿದ್ದರೂ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಳಕಲ್ಲ-ಹುನಗುಂದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ನೀರಿನ ತೊಂದರೆ ಇದ್ದರೂ ಅಧಿಕಾರಿಗಳು ಭೇಟಿ ನೀಡಿಲ್ಲ. ಮೇವು ಬ್ಯಾಂಕ್, ಗೋ ಶಾಲೆ ಆರಂಭಿಸಿಲ್ಲ. ನಾನು ಹೇಳುವ ಕೆಲಸವನ್ನು ಮಾಡದೆ ರಾಜ್ಯದ ಮೈತ್ರಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜನಪರ ಆಡಳಿತ ನೀಡಿದ್ದರಿಂದ ಮತದಾರರು ಮತ್ತೊಮ್ಮೆ ಆಶೀರ್ವದಿಸಿದ್ದಾರೆ.
– ದೊಡ್ಡನಗೌಡ ಪಾಟೀಲ, ಶಾಸಕ

Leave a Reply

Your email address will not be published. Required fields are marked *