ನರೇಗಾ ಯೋಜನೆ ಕೂಲಿ ನೀಡಲು ಆಗ್ರಹ

ಇಳಕಲ್ಲ (ಗ್ರಾ): ಉದ್ಯೋಗ ನೀಡುವಂತೆ ಆಗ್ರಹಿಸಿ ಸಮೀಪದ ನಂದವಾಡಗಿ ಹಾಗೂ ಹರಿಣಾಪುರ ಗ್ರಾಮದ ನೂರಾರು ಜನರು ಬುಧವಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಸಮ್ಮ ಮಲ್ಲನಗೌಡ್ರ ಮಾತನಾಡಿ, ಭೀಕರ ಬರದಿಂದ ಕೃಷಿ ಕೂಲಿಕಾರರಿಗೆ ಉದ್ಯೋಗವೇ ಇಲ್ಲ. ಮಳೆಯಾಗದ ಕಾರಣ ರೈತರಿಗೆ ಬಿತ್ತಿದ ಬೀಜ, ಗೊಬ್ಬರಕ್ಕೆ ಹಾಕಿದ ಹಣ ನಷ್ಟವಾಗಿದೆ. ಜೀವನ ನಿರ್ವಹಣೆಗೆ ಕನಿಷ್ಠ ಆದಾಯ ಇಲ್ಲವಾಗಿದೆ. ಗ್ರಾಪಂ ಪಿಡಿಒ ಹಾಗೂ ಸದಸ್ಯರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಹಾಗೂ ರೈತರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಅಕ್ಬರ್ ಗುಡಿಹಾಳ ಮಾತನಾಡಿ, ಬರದಿಂದಾಗಿ ಕೂಲಿ ಕಾರ್ಮಿಕರು ಹಾಗೂ ರೈತರ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಪಂನವರು ಜನರಿಗೆ ಉದ್ಯೋಗ ನೀಡಲು, ಕುಡಿವ ನೀರು, ಜಾನುವಾರುಗಳಿಗೆ ನೀರು ಹಾಗೂ ಮೇವು ಒದಗಿಸಲು ಕ್ರಮಕೈಗೊಳ್ಳದೆ ನಿರ್ಲಕ್ಷೃ ವಹಿಸಿದೆ. ನೂರಾರು ಹೆಣ್ಣು ಮಕ್ಕಳು ಕೂಲಿ ನೀಡಿ ಎಂದು ಬಿಸಿಲಲ್ಲಿ ಗಂಟೆಗಟ್ಟಲೆ ಪ್ರತಿಭಟನೆ ನಡೆಸಿದರೂ ಪಂಚಾಯಿತಿ ಸಿಬ್ಬಂದಿ ಸ್ಪಂದಿಸದಿರುವುದು ದುರದೃಷ್ಟಕರ. ಸಹನೆ ಪರೀಕ್ಷಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಪಂ ಅಧ್ಯಕ್ಷೆ ಸರಸ್ವತಿ ಈಟಿ ಪ್ರತಿಭಟನಾನಿರತ ಮಹಿಳೆಯರನ್ನು ಭೇಟಿ ಮಾಡಿ, ವಾರದೊಳಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪಿಡಿಒ ಗೈರು ಹಾಜರಿಯಲ್ಲಿ ಕಾರ್ಯದರ್ಶಿ ನಬಿಸಾಬ್ ಭಾಗವಾನ ಮಾ.7ರಿಂದ ಉದ್ಯೋಗ ನೀಡುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನಾನಿರತರು ಪ್ರತಿಭಟನೆ ಹಿಂಪಡೆದರು.