ಸಮಾನತೆಗೆ ಹೋರಾಡಿದ ಇಳಕಲ್ಲ, ಗದಗದ ಶ್ರೀಗಳು

ರಬಕವಿ/ಬನಹಟ್ಟಿ: ಗದಗದ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ನಾಡಿನ ಜಲ, ನೆಲ, ಭಾಷೆ, ಪರಿಸರ ಮತ್ತು ಸಮಾನತೆಗಾಗಿ ಹೋರಾಡಿದ ಮಹಾ ನುಭಾವರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಬಡವರ ಸ್ವಾಮೀಜಿಯಾಗಿದ್ದರು ಎಂದು ಗದಗ ತೋಂಟದ ಮಠದ ನೂತನ ಪೀಠಾಧಿಕಾರಿ ಡಾ. ಸಿದ್ಧರಾಮ ಶ್ರೀಗಳು ಹೇಳಿದರು.

ರಬಕವಿಯ ಬ್ರಹ್ಮಾನಂದ ಆಶ್ರಮದ ಬ್ರಹ್ಮಾನಂದರ 151ನೇ ಜಯಂತ್ಯುತ್ಸವ ನಿಮಿತ್ತ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಹಾಗೂ ಇಳಕಲ್ಲದ ಡಾ. ಮಹಾಂತ ಶಿವಯೋಗಿಗಳಿಗೆ ಹಮ್ಮಿಕೊಂಡ ಗುರುಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನವರ ಹಾಗೆ ಪ್ರಗತಿಪರ ವಿಚಾರಗಳನ್ನು ನಾಡಿನ ಜನತೆಗೆ ತಿಳಿಸಿದ ಇಳಕಲ್ಲದ ಡಾ. ಮಹಾಂತ ಶ್ರೀಗಳು ಸಾಮಾನ್ಯರಿಗೂ ಸಂಸ್ಕಾರ ನೀಡಿದ್ದಾರೆ. ಅವರ ಅಗಲಿಕೆಯಿಂದ ನಾಡು ಬಡವಾಗಿದೆ ಎಂದು ಹೇಳಿದರು.

ಅವರಾದಿಯ ಫಲಹಾರೇಶ್ವರ ಮಠದ ಶಿವ ಮೂರ್ತಿ ಶ್ರೀಗಳು ಮಾತನಾಡಿ, ನಾವು ಮಾಡುವ ಕಾಯಕವನ್ನು ಸ್ವಚ್ಛ ಮನಸ್ಸಿನಿಂದ ಮಾಡಬೇಕು. ಬಸವಣ್ಣನವರು ಕಾಯಕವನ್ನು ಆರ್ಥಿಕ ಮತ್ತು ಆಧ್ಯಾತ್ಮಿಕ ಸಿದ್ಧಾಂತಕ್ಕೆ ಹೋಲಿಸಿ ದವರು. ಅವರಂತೆಯೇ ಡಾ. ಸಿದ್ಧಲಿಂಗ ಶ್ರೀಗಳು ಹಾಗೂ ಡಾ. ಮಹಾಂತ ಶ್ರೀಗಳು ಕಾಯಕ ಜೀವನಕ್ಕೆ ಮಹತ್ವ ನೀಡಿದ್ದಾರೆ ಎಂದು ಹೇಳಿದರು.

ಲಿಂ. ಡಾ.ಸಿದ್ಧಲಿಂಗ ಶ್ರೀಗಳ ಕುರಿತು ಗುರುಸಿದ್ಧೇಶ್ವರ ಸ್ವಾಮೀಜಿ ಸಂಪಾದಿಸಿದ ಬೆಳಗಿದ ಬಸವಪ್ರಜ್ಞೆ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಮಕ್ಕಳ ಸಾಹಿತಿ ಜಯವಂತ ಕಾಡದೇವರ, ಹಾರೂಗೇರಿಯ ಶರಣ ವಿಚಾರ ವಾಹಿನಿಯ ಐ.ಆರ್. ಮಠಪತಿ ನುಡಿ ನಮನ ಸಲ್ಲಿಸಿದರು. ಉದ್ದಿಮೆದಾರ ಗಣಪತಿರಾವ ಹಜಾರೆ, ಪೌರಾಯುಕ್ತ ಆರ್.ಎಂ. ಕೊಡಗೆ, ಕಾನಿಪ ಸಂಘದ ಅಧ್ಯಕ್ಷ ಕಿರಣ ಆಳಗಿ ಅವರನ್ನು ಸನ್ಮಾನಿ ಸಲಾಯಿತು. ಅಶೋಕ ಬೀಳಗಿ, ಗೀತಾ . ಎಸ್. ಪ್ರಾರ್ಥಿಸಿದರು. ಗುರುಸಿದ್ಧೇಶ್ವರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ ಮುತ್ತೂರ ನಿರೂಪಿಸಿದರು.

ಮಹಾದೇವ ಕವಿಶೆಟ್ಟಿ, ಶಿವಾನಂದ ಬಾಗಲ ಕೋಟಮಠ, ವಜ್ರಕಾಂತ ಬಾಪುರೆ, ಮಹದೇವ ಮುತ್ತೂರ, ಬುದ್ದಿವಂತಪ್ಪ ಕುಂದಗೋಳ, ಪ್ರೊ. ವೈ.ಬಿ. ಕೊರಡೂರ ಇತರರಿದ್ದರು.