ಇಂದಿನಿಂದ ಇಳಕಲ್ಲ ಶಿವಯೋಗಿಗಳ ಜಾತ್ರೆ

ಇಳಕಲ್ಲ: 800 ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಪ್ರಮುಖ ಧಾರ್ವಿುಕ ಕೇಂದ್ರಗಳಲ್ಲೊಂದಾದ ಚಿತ್ತರಗಿ-ಇಳಕಲ್ಲ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಸೆ. 3 ಹಾಗೂ 4ರಂದು ಎರಡು ದಿನಗಳವರೆಗೆ ಸಂಭ್ರಮದಿಂದ ನಡೆಯಲಿದೆ.

ಸೋಮವಾರ ಬೆಳಗ್ಗೆ 7ಕ್ಕೆ ಶ್ರೀಮಠದಿಂದ ಗುರುಮಹಾಂತ ಶ್ರೀಗಳು ಬೆನ್ನಿಗೆ ವಚನ ಕಟ್ಟಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಗದ್ದುಗೆ ತಲುಪುವರು. ಭಕ್ತರು, ಶಾಲಾ ಮಕ್ಕಳು, ಸಾರ್ವಜನಿಕರು ಭಾಗವಹಿಸುವರು.

ಬೆಳಗ್ಗೆ 10ಕ್ಕೆ ಶ್ರೀ ವಿಜಯ ಮಹಾಂತ ಶಿವಯೋಗಿಗಳ ತಪೋವನದಲ್ಲಿ ಗುರುಮಹಾಂತ ಶ್ರೀಗಳು ಸೇರಿ ಶ್ರೀಮಠದ ಶಾಖಾಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಜರುಗಲಿದೆ. ರಾಜಕೀಯ ನಾಯಕರು, ಗಣ್ಯರು ಪಾಲ್ಗೊಳ್ಳುವವರು.

ಸಂಜೆ 6ಕ್ಕೆ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯದ ಮಹಾರಥೋತ್ಸವ ಹರಗುರು-ಚರಮೂರ್ತಿಗಳ ಸಮ್ಮುಖದಲ್ಲಿ ವೈಭವದಿಂದ ನಡೆಯಲಿದೆ. ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವರು.

ಸೆ.4ರಂದು ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳುವ ಬಸವಾದಿ ಶರಣರ ಧರ್ಮಗ್ರಂಥ ವಚನ ಸಾಹಿತ್ಯದ ತಾಡೋಲೆ ಕಟ್ಟಿನ ಪಲ್ಲಕ್ಕಿ ಮಹೋತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮರುದಿನ ಮರಳಿ ಶ್ರೀಮಠ ತಲುಪುವುದು.ಮಹೋತ್ಸವಕ್ಕೆ ಭರದ ಸಿದ್ಧತೆಗಳು ಸಾಗಿವೆ. ಶ್ರೀಮಠ ಹಾಗೂ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಗದ್ದುಗೆಗೆ ವಿದ್ಯುತ್ ದೀಪಾಂಲಕಾರ ಮಾಡಿದ್ದು, ಇಡೀ ನಗರ ನವ ವಧುವಿನಂತೆ ಕಂಗೊಳಿಸುತ್ತಿದೆ.

ಭಕ್ತರಿಗ ಕಂಠಿ ವೃತ್ತದಲ್ಲಿರುವ ಅನುಭವ ಮಂಟಪದ ಆವರಣ ಹಾಗೂ ಶ್ರೀ ವಿಜಯ ಮಹಾಂತೇಶ ಮಠದ ದಾಸೋಹ ಭವನದಲ್ಲಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅನೇಕ ಗಣ್ಯರು ದಾಸೋಹ ಸೇವೆಗೈಯುವವರು. ಉತ್ಸವ ಯಶಸ್ವಿಗಾಗಿ ಶ್ರೀಮಠದ ಶರಣ ಸಂಸ್ಕೃತಿ ಮಹೋತ್ಸವ ಸಮಿತಿ, ಅಕ್ಕನ ಬಳಗ, ಬಸವ ಕೇಂದ್ರ, ತರುಣ ಸಂಘ, ಹೀಗೆ ಅನೇಕ ಸ್ವಯಂ ಸಂಘ ಸಂಸ್ಥೆಗಳ ಸದಸ್ಯರು ತೊಡಗಿಸಿಕೊಂಡಿದ್ದಾರೆ.