ಬಸವಣ್ಣ ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಿರಿ

ಇಳಕಲ್ಲ: ವಿಶ್ವ ಗುರು ಬಸವಣ್ಣನವರ ತತ್ತ್ವಾದರ್ಶಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ನಗರದಲ್ಲಿರುವ ಬಸವಣ್ಣನವರ ಕಂಚಿನ ಮೂರ್ತಿ ಬಳಿಯ ಆವರಣದಲ್ಲಿ ಬಸವ ಕೇಂದ್ರ, ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಸಹಯೋಗದಲ್ಲಿ ಬಸವ ಜಯಂತ್ಯುತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಜನ ಜಾಗೃತಿಗಾಗಿ ಪಾದಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ವಚನಗಳ ಮೂಲಕ ಬಸವಣ್ಣನವರು ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದು ಅಗತ್ಯವಿದೆ ಎಂದರು.
ಗುರುಮಹಾಂತ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರೂ ಬಸವ ತತ್ತ್ವವನ್ನು ಉಸಿರಾಗಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂದರು.

ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರ್ಮನ್ ಎಂ.ಜಿ. ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿಲೀಪ ದೇವಗಿರಿಕರ, ಶರಣಪ್ಪ ಅಕ್ಕಿ, ಎಂ.ವಿ. ಪಾಟೀಲ, ಶಿವಾನಂದ ರುಳಿ, ಮಹೇಶಪ್ಪ ಸಜ್ಜನ, ಮಹಾಬಳೇಶ ಮರಟದ, ಶಿವರುದ್ರಪ್ಪ ಗೊಂಗಡಶೆಟ್ಟಿ, ಡಾ. ಕೆ.ವಿ. ಅಕ್ಕಿ, ಡಾ.ಮಹಾಂತೇಶ ಅಕ್ಕಿ, ಡಾ.ಮಹಾಂತೇಶ ಕಡಪಟ್ಟಿ, ಶಂಕರ ತೋಟದ, ಮಹಾಂತೇಶ ಹೋಳಿ, ಅರವಿಂದ ಮಂಗಳೂರ, ಚೋಳಪ್ಪ ಇಂಡಿ, ನಾಗಪ್ಪ ಅಂಗಡಿ, ಶರಣಪ್ಪ ಅಂಗಡಿ ಇತರರು ಇದ್ದರು. ಇದಕ್ಕೂ ಮೊದಲು ವಿಜಯ ಮಹಾಂತೇಶ ಸಂಸ್ಥಾನಮಠದಲ್ಲಿ ಡಾ. ಅರುಣಾ ಅಕ್ಕಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಸವಣ್ಣನವರ ಭಾವಚಿತ್ರದೊಂದಿಗೆ ಜನಜಾಗೃತಿ ಪಾದಯಾತ್ರೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಮಾವೇಶವಾಗಿ ಮಾರ್ಪಟ್ಟಿತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಪಾಲ್ಗೊಂಡಿದ್ದರು.

ವಿವಿಧೆಡೆ ಆಚರಣೆ
ತಹಸೀಲ್ದಾರ್ ಕಚೇರಿ, ನಗರಸಭೆ, ಪೊಲೀಸ್ ಠಾಣೆ, ಬಸ್ ಡಿಪೋ, ಶಿಕ್ಷಣ ಸಂಸ್ಥೆಗಳು ಸೇರಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಬಸವ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.