ಕಾಶಪ್ಪನವರ ಕಾಲ್ಗುಣವೇ ಸರಿಯಿಲ್ಲ

ಇಳಕಲ್ಲ: ಮಗ ಉಂಡರೆ ಕೇಡಲ್ಲ, ಮಳೆ ಬಂದರೆ ಕೇಡಲ್ಲ ಎಂಬ ಗಾದೆ ಮಾತು ಇದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಪ್ರವಾಹ ಬರುತ್ತದೆ ಎಂದಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಾಲ್ಗುಣವೇ ಸರಿ ಇಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ತಿರುಗೇಟು ನೀಡಿದರು.

5 ವರ್ಷ ಶಾಸಕರಾಗಿ ಕ್ಷೇತ್ರದಲ್ಲಿ ನಿರುದ್ಯೋಗ ಹೆಚ್ಚಿಸಿದರು. ಮರಳು, ಕಲ್ಲು ಲೂಟಿ ಮಾಡಿದರು. ಭ್ರಷ್ಟಾಚಾರದಿಂದಾಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿಲ್ಲ. ನೆರೆ, ಹಾವಳಿಗೆ ತುತ್ತಾಗಿರುವ ಗ್ರಾಮಸ್ಥರಿಗೆ ಹಕ್ಕು ಪತ್ರಗಳನ್ನೂ ಕೊಡಲಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ನೆರೆ ಪರಿಸ್ಥಿತಿ ಕಂಡ ಕೂಡಲೇ ಅಧಿಕಾರಿಗಳ ಜತೆಗೆ ಗ್ರಾಮಗಳಲ್ಲಿ ಸಂಚರಿಸಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಯಿತು. ಇದರಿಂದಾಗಿ ಯಾವುದೇ ಜೀವಹಾನಿ ಆಗಿಲ್ಲ ಎಂದ ಅವರು, ಕ್ಷೇತ್ರದ 33 ಗ್ರಾಮಗಳಲ್ಲಿ ನೀರು ನುಗ್ಗಿದೆ. ಇದರಲ್ಲಿ ಹುನಗುಂದ ತಾಲೂಕಿನ 28 ಮತ್ತು ಇಳಕಲ್ಲ ತಾಲೂಕಿನ 5 ಗ್ರಾಮಗಳು ಸೇರಿವೆ. ಎಲ್ಲರಿಗೂ ಪರಿಹಾರ ಕೇಂದ್ರಗಳಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೂ ಈ ಬಗ್ಗೆ ತಪ್ಪು ಹೇಳಿಕೆ ನೀಡಿ ಜನರನ್ನು ಪ್ರಚೋದಿಸುವ ಕಾರ್ಯವನ್ನು ಮಾಜಿ ಶಾಸಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಜುನಾಥ ಶೆಟ್ಟರ, ಪರತಗೌಡ ಪಾಟೀಲ, ವಿಜಯ ಗಿರಡ್ಡಿ, ಸುಗುರೇಶ ನಾಗಲೋಟಿ, ವಿವಿಧ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *