More

    ಬಲಿಷ್ಠ ಭಾರತ ನಿರ್ಮಾಣಕ್ಕೆ ಐಐಟಿ ಕೊಡುಗೆ

    ಬಲಿಷ್ಠ ಭಾರತ ನಿರ್ಮಾಣಕ್ಕೆ ಐಐಟಿ ಕೊಡುಗೆಐಐಟಿಗಳಲ್ಲಿ ಬಹಳಷ್ಟು ಸಂಶೋಧನೆ ಕೇವಲ ಥಿಯರಿ ಮತ್ತು ಫಂಡಮೆಂಟಲ್ ರಿಸರ್ಚ್ ಆಗಿದ್ದು, ಭಾರತದ ಔದ್ಯೋಗಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪ್ರಾಕ್ಟಿಕಲ್ ಮತ್ತು ಅಪ್ಲೈಡ್ ರಿಸರ್ಚ್ ಜಾಸ್ತಿಯಾಗಬೇಕಾಗಿದೆ. ಅಲ್ಲದೆ, ಸ್ಥಳೀಯ ಕೈಗಾರಿಕೆಗಳ ಜತೆ ಐಐಟಿ ಸಹಯೋಗ ಹೆಚ್ಚಬೇಕಿದೆ.

    ಸುಮಾರು 28 ವರ್ಷಗಳ ಹಿಂದೆ ಮದ್ರಾಸ್ ಐಐಟಿಯಲ್ಲಿ (ಭಾರತೀಯ ತಾಂತ್ರಿಕ ಸಂಸ್ಥೆ) ಓದುತ್ತಿದ್ದಾಗ ನನ್ನನ್ನು ಸದಾ ಕಾಡುತ್ತಿದ್ದ ಪ್ರಶ್ನೆ ಎಂದರೆ- ಕರ್ನಾಟಕದಲ್ಲಿ ಏಕೆ ಐಐಟಿ ಕ್ಯಾಂಪಸ್ ಇಲ್ಲ? ಐಐಟಿ ಕ್ಯಾಂಪಸ್ ಅನ್ನು ಕರ್ನಾಟಕದ ವಿದ್ಯಾಕಾಶಿಯಾದ ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಉದ್ಘಾಟನೆ ಮಾಡಿಸುವುದರ ಮೂಲಕ ಈಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಐಐಟಿ ಕನಸನ್ನು ಸಾಕಾರಗೊಳಿಸಿದ್ದಾರೆ. ಅದು ನನ್ನ ತುಮ್ಮಿನಕಟ್ಟಿ ಗ್ರಾಮದ, ರಾಣೇಬೆನ್ನೂರ ತಾಲೂಕಿನ ಹಳೆಯ ಜಿಲ್ಲೆಯಾದ ಧಾರವಾಡದಲ್ಲಿ ಎಂದು ಕೇಳಿ ಇನ್ನಷ್ಟು ಸಂತೋಷವಾಯಿತು.

    ಐಐಟಿ ವಿದ್ಯಾರ್ಥಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಬಾಬಾ ಪರಮಾಣು ಸಂಶೋಧನಾ ಸಂಸ್ಥೆ (BARC), ರಕ್ಷಣಾ ಸಂಶೋಧನಾ ಸಂಸ್ಥೆ (DRDO) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿಜ್ಞಾನಿಗಳಾಗಿ, ಇಂಜಿನಿಯರ್​ಗಳಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಈ 21ನೇ ಶತಮಾನದಲ್ಲಿ ಭಾರತ ದೇಶವು ಜಗತ್ತಿನಲ್ಲಿ ಸೂಪರ್ ಪವರ್ ಮತ್ತು ವಿಶ್ವಗುರು ಆಗಬೇಕೆಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಅಗತ್ಯ. ಈ ನಿಟ್ಟಿನಲ್ಲಿ ಐಐಟಿಗಳ ಪಾತ್ರ ಮಹತ್ವದ್ದು.

    ಭಾರತದ ಪ್ರತಿಭಾನ್ವಿತರಿಗೆ ಜಗತ್ತಿನ ತುಂಬಾ ಅದರಲ್ಲೂ ಅಮೆರಿಕಾದಲ್ಲಿ ಒಂದು ಬ್ರಾ್ಯಂಡ್​ನೇಮ್ ಅಂತ ಕೊಟ್ಟಿದ್ದೆ ಐಐಟಿಗಳು. ಸಾಫ್ಟ್​ವೇರ್ ಉದ್ಯಮದಲ್ಲಿ ಕ್ರಾಂತಿಯಾದ ನಂತರ ಭಾರತದ ಲಕ್ಷಾಂತರ ಸಾಫ್ಟ್​ವೇರ್ ಇಂಜಿನಿಯರ್​ಗಳು ಸುಲಭವಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಆದರೆ ನಾಲ್ಕು ದಶಕಗಳ ಹಿಂದೆ ಅಮೆರಿಕಕ್ಕೆ ಹೋಗುವುದು ತುಂಬಾ ಕಷ್ಟಕರವಾಗಿತ್ತು ಮತ್ತು ಅತಿ ವಿರಳವಾಗಿತ್ತು. ಅಂತಹ ಸಂದರ್ಭದಲ್ಲಿ ಭಾರತದಿಂದ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕೆ ಮತ್ತು ಕೆಲಸಕ್ಕೆ ಬಂದ ಇಂಜಿನಿಯರ್​ಗಳ ಮೊದಲ ಅಲೆಯೇ ಐಐಟಿ ವಿದ್ಯಾರ್ಥಿಗಳದ್ದು. ಅವರು ಶ್ರದ್ಧೆ, ಬುದ್ಧಿಮತ್ತೆ, ಕಠಿಣ ಪರಿಶ್ರಮದಿಂದ ನಾಸಾ, ಅಮೆರಿಕಾದ ಯೂನಿವರ್ಸಿಟಿಗಳಲ್ಲಿ ಮತ್ತು ಕಾರ್ಪೆರೇಟ್ ಜಗತ್ತಿನಲ್ಲಿ ಎತ್ತರಕ್ಕೆ ಬೆಳೆದು ಐಐಟಿ ಬ್ರಾ್ಯಂಡ್ ಕಟ್ಟಿದರು. ಹಾಗೆಯೇ ಭಾರತದ ಐಐಟಿಗಳಲ್ಲಿ ಓದುತ್ತಿದ್ದ ತಮ್ಮ ಜೂನಿಯರ್ಸ್ ಅಮೆರಿಕಾದಲ್ಲಿ ಎಂಎಸ್, ಡಾಕ್ಟರೇಟ್ ಓದಲು ಮಾರ್ಗದರ್ಶನ ಮತ್ತು ಸಹಾಯ ಮಾಡಿದರು. ಇಂಟರ್ನೆಟ್ ಇಲ್ಲದ ಆಗಿನ ಕಾಲದಲ್ಲಿ ಯಾವ ಯುನಿವರ್ಸಿಟಿಯಲ್ಲಿ ಯಾವ ಪೊ›ಫೆಸರ್ ಬಳಿ ಸ್ಕಾಲಶಿಪ್ ಇದೆ, ಫಂಡಿಂಗ್ ಇದೆ ಎಂಬ ಒಳರಹಸ್ಯಗಳನ್ನು ಜೂನಿಯರ್ಸ್​ಗೆ ಕೊಟ್ಟು ಅಮೆರಿಕಾಕ್ಕೆ ಬರಲು ನೆರವಾದರು. ಇಂದಿಗೂ ಈ ಸಂಪ್ರದಾಯ ಇದೆ.

    ನೀವು ಅದೆಷ್ಟೇ ಶ್ರೀಮಂತರಾಗಿದ್ದರೂ ಐಐಟಿಗಳಲ್ಲಿ ಸೀಟು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಭಾರತದ ಮಧ್ಯಮ ಮತ್ತು ಬಡವರ್ಗದ ಪ್ರತಿಭಾವಂತ ಮಕ್ಕಳಿಗೆ ಐಐಟಿಗಳೇ ಜೀವನದಲ್ಲಿ ಯಶಸ್ಸಿನ ಶಿಖರ ಏರುವ ಏಣಿಗಳಾಗಿವೆ.

    ಐಐಟಿಗಳಲ್ಲಿ ಕಲಿತು ಹೆಸರುಮಾಡಿದ ಕೆಲವರು- ಗೂಗಲ್ ಸಿಇಓ ಸುಂದರ ಪಿಚೈ, ಇನ್ಪೋಸಿಸ್ ಸಹ-ಸಂಸ್ಥಾಪಕರಾದ ನಾರಾಯಣಮೂರ್ತಿ ಮತ್ತು ನಂದನ್ ನಿಲೇಕಣಿ, ಜನಪ್ರಿಯ ಬರಹಗಾರ ಚೇತನ್ ಭಗತ್, ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ರಕ್ಷಣಾ ಮಂತ್ರಿ ದಿ. ಮನೋಹರ ಪರಿಕ್ಕರ್, ಸನ್ ಮೈಕ್ರೋ ಸಿಸ್ಟಮ್ ಸಂಸ್ಥೆಯ ಸಹಸಂಸ್ಥಾಪಕ ವಿನೋದ್ ಖೋಸ್ಲಾ, ಜೋಮ್ಯಾಟೋ ಕಂಪನಿಯ ಸಂಸ್ಥಾಪಕ ದೀಪಿಂದರ್ ಗೋಯಲ್ ಮುಂತಾದವರು.

    ಐಐಟಿಗಳ ಇತಿಹಾಸ: ಈಗ ಭಾರತದಲ್ಲಿ ಒಟ್ಟು 23 ಐಐಟಿ ಕ್ಯಾಂಪಸ್​ಗಳಾಗಿವೆ. 1994ವರೆಗೂ ಕೇವಲ ಐದು ಐಐಟಿಗಳು ಇದ್ದವು. ಆಗಸ್ಟ್ 1951 ರಲ್ಲಿ ಭಾರತದ ಮೊದಲ ಐಐಟಿಯನ್ನು ಪಶ್ಚಿಮ ಬಂಗಾಳದ ಖರಗಪುರದಲ್ಲಿ ಪ್ರಾರಂಭಿಸಲಾಯಿತು. 1956ರ ಸೆ. 15ರಂದು ಸಂಸತ್ತಿನಲ್ಲಿ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಕ್ಟ್ ಅಂಗೀಕರಿಸಿ, ಐಐಟಿ ಖರಗಪುರಕ್ಕೆ ಸಂಪೂರ್ಣ ಸ್ವಾಯತ್ತತೆ ಕೊಡಲಾಯಿತು. ಮುಂದೆ ದೇಶದ ನಾಲ್ಕು ದಿಕ್ಕುಗಳಲ್ಲಿ, 1958ರಲ್ಲಿ ಬಾಂಬೆಯಲ್ಲಿ, 1959ರಲ್ಲಿ ಮದ್ರಾಸ್ ಮತ್ತು ಕಾನ್ಪುರಗಳಲ್ಲಿ ಮತ್ತು 1961ರಲ್ಲಿ ದಿಲ್ಲಿಯಲ್ಲಿ ಐಐಟಿಗಳನ್ನು ಸ್ಥಾಪಿಸಲಾಯಿತು. ಇದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕನಸಾಗಿತ್ತು. ಭಾರತದಲ್ಲಿಯೇ ಪ್ರತಿಭಾನ್ವಿತ ಇಂಜಿನಿಯರ್​ಗಳನ್ನು ಸೃಷ್ಟಿಸಿ ಅವರಿಂದ ಭಾರತದ ಏಳಿಗೆಯನ್ನು ಮಾಡಬೇಕೆಂಬುದು ಅವರ ಆಸೆಯಾಗಿತ್ತು.

    ಆದರೆ ಐಐಟಿಗಳಲ್ಲಿ ಡಿಗ್ರಿ ಪಡೆದ ಬಹಳಷ್ಟು ವಿದ್ಯಾರ್ಥಿಗಳು ಹೊರದೇಶಕ್ಕೆ ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ಹೋದರು. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಒಳ್ಳೆಯ ಅವಕಾಶ ಇಲ್ಲದ್ದು. ಆದರೆ ಸರ್ಕಾರದ ಹಣದಲ್ಲಿ ಓದಿ ದೇಶ ಬಿಟ್ಟು ಹೋದ ಪ್ರತಿಭಾ ಪಲಾಯನ (Brain Drain) ಬಗ್ಗೆ ಟೀಕೆ, ವಿರೋಧಗಳು ಬರಲು ಪ್ರಾರಂಭವಾದವು. ಹೀಗಾಗಿ 1961 ರಿಂದ 1994 ರವರೆಗೆ ಐಐಟಿ ಪ್ರಾರಂಭಿಸಲಿಲ್ಲ.

    ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಅಸ್ಸಾಂನಲ್ಲಿ ವಿದ್ಯಾರ್ಥಿಗಳ ಚಳವಳಿಗೆ ಮಣಿದು 1994 ರಲ್ಲಿ ಗೌಹಾತಿಯಲ್ಲಿ ಐಐಟಿ ಪ್ರಾರಂಭಿಸಿದರು.

    1990 ರ ದಶಕದಲ್ಲಿ ಭಾರತದಲ್ಲಿ ಮುಕ್ತ ಆರ್ಥಿಕ ವ್ಯವಸ್ಥೆ ಬಂದ ನಂತರ, ವಿದೇಶಿ ಹೂಡಿಕೆ ಹರಿದು ಬಂದು ಭಾರತದಲ್ಲಿ ಔದ್ಯೋಗಿಕ ಕ್ರಾಂತಿಯಾಯಿತು. ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಅವಕಾಶಗಳು ಸೃಷ್ಟಿಯಾದವು. ಇದರ ಹಿಂದೆ ವಿದೇಶಗಳಲ್ಲಿ ನೆಲೆಸಿದ್ದ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊಡ್ಡ ಅಧಿಕಾರದಲ್ಲಿದ್ದ ಐಐಟಿ ವಿದ್ಯಾರ್ಥಿಗಳ ಕೊಡುಗೆ ಬಹಳವಿದೆ. ಬಹಳಷ್ಟು ಐಐಟಿ ವಿದ್ಯಾರ್ಥಿಗಳು ಭಾರತಕ್ಕೆ ವಾಪಸು ಬಂದು ಕಂಪನಿಗಳನ್ನು ತೆರೆದರು. ಇದು ಪ್ರತಿಭಾ ಪುನರಾಗಮನ (Reverse Brain Drain). ಹೀಗಾಗಿ ಭಾರತ ಸರ್ಕಾರ ಸಾರ್ವಜನಿಕರ ತೆರಿಗೆ ಹಣದಲ್ಲಿ ವಿದ್ಯಾಭ್ಯಾಸ ಕೊಡಿಸಿದ್ದ ಐಐಟಿ ವಿದ್ಯಾರ್ಥಿಗಳಿಂದ ನೂರು ಪಟ್ಟು ಲಾಭವಾಗಿದೆ ಎಂದು ಹೇಳಬಹುದು.

    ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ 9 ರಾಜ್ಯಗಳಲ್ಲಿ ಹೊಸ ಐಐಟಿಗಳನ್ನು ಸ್ಥಾಪಿಸಿದರು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ 7 ಕಡೆ, ಕೇರಳ, ಆಂಧ್ರಪ್ರದೇಶ, ಜಾರ್ಖಂಡ್, ಛತ್ತೀಸ್​ಗಢ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ ಹಾಗೂ ಗೋವಾ ರಾಜ್ಯಗಳಲ್ಲಿ ಹೊಸ ಐಐಟಿಗಳನ್ನು ಪ್ರಾರಂಭಿಸಿದರು. ಇದರಲ್ಲಿ ಧಾರವಾಡ ಐಐಟಿ ಕ್ಯಾಂಪಸ್ ಒಂದಾಗಿದೆ.

    ಐಐಟಿ ಧಾರವಾಡ ಸ್ಥಾಪನೆಯ ಹಿಂದಿನ ಕತೆ: 1990ರಲ್ಲಿ ಐಐಟಿಯನ್ನು ಧಾರವಾಡದಲ್ಲಿ ಆರಂಭಿಸಬೇಕೆಂಬ ಕನಸನ್ನು ಹೊತ್ತು ಅಂದು ಕೇಂದ್ರ ಸಚಿವರಾಗಿದ್ದ ಎಸ್.ಆರ್.ಬೊಮ್ಮಾಯಿ ಪ್ರಸ್ತಾವನೆಯನ್ನು ತಮ್ಮದೇ ಕೇಂದ್ರ ಸರ್ಕಾರದ ಮುಂದಿಟ್ಟಿದ್ದರು. ಆ ಕನಸು ಈಡೇರಿದ್ದು ಮೂರು ದಶಕಗಳ ನಂತರ ಅವರ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಕಾಲದಲ್ಲಿ ಎಂಬುದು ವಿಶೇಷ.

    2016ರಲ್ಲಿ ಧಾರವಾಡದಲ್ಲಿರುವ ಕರ್ನಾಟಕ ಹೈಕೋರ್ಟ್ ಪೀಠದ ಸಮೀಪದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಯಿತು. ಐಐಟಿ ಬಾಂಬೆಯ ಮಾರ್ಗದರ್ಶನದಲ್ಲಿ ನವಸಂಜಾತ ಐಐಟಿ ಧಾರವಾಡವನ್ನು ಆರಂಭದ ವರ್ಷಗಳಲ್ಲಿ ಬೆಳೆಸಲಾಯಿತು.

    ಧಾರವಾಡ ಸಮೀಪದ ಮಮ್ಮಿಗಟ್ಟಿಯಲ್ಲಿ ಸುಮಾರು 535 ಎಕರೆ ಜಮೀನಿನಲ್ಲಿ 850 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೃಹತ್ ಕ್ಯಾಂಪಸ್ ನಿರ್ವಿುಸಲಾಗಿದೆ. ಇದು ಪರಿಸರಸ್ನೇಹಿಯಾದ ಗ್ರೀನ್ ಮತ್ತು ಸ್ಮಾರ್ಟ್ ಕ್ಯಾಂಪಸ್.

    ಸವಾಲುಗಳು: ಮೊದಲು 5 ಇದ್ದ ಐಐಟಿಗಳು ಈಗ 23 ಆಗಿವೆ. ಹೀಗಾಗಿ ಗುಣಮಟ್ಟ ಕಡಿಮೆಯಾಗುವ ಸಂಭವವಿದೆ. ಅನೇಕ ಹೊಸ ಐಐಟಿ ಕ್ಯಾಂಪಸ್​ಗಳಲ್ಲಿ ಕಟ್ಟಡಗಳು, ಲ್ಯಾಬ್​ಗಳು ಇನ್ನೂ ಪೂರ್ಣಗೊಂಡಿಲ್ಲ. ಐದು ಐಐಟಿಗಳಿದ್ದಾಗ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿತ್ತು. ಈಗ 23 ಐಐಟಿಗಳಿಂದ ಐದು ಪಟ್ಟು ಹೆಚ್ಚು ವಿದ್ಯಾರ್ಥಿಗಳು ಹೊರಬರುತ್ತಿದ್ದು ಪೂರೈಕೆ ಹೆಚ್ಚಾಗಿದ್ದು ಬೇಡಿಕೆ ಕಡಿಮೆಯಾಗಿ ಮುಂದಿನ ವರ್ಷಗಳಲ್ಲಿ ಐಐಟಿ ಡಿಗ್ರಿ ಪಡೆದರೂ ನಿರುದ್ಯೋಗಿಯಾದರೆ ಅಚ್ಚರಿ ಪಡಬೇಕಾಗಿಲ್ಲ.

    ಐಐಟಿ ಪ್ರವೇಶ ಪರೀಕ್ಷೆಯಾದ ಒಉಉಗೆ ತಯಾರು ಮಾಡುವ ಕೋಚಿಂಗ್ ಕೇಂದ್ರಗಳು ಬಹು ದುಬಾರಿ ಶುಲ್ಕ ವಿಧಿಸುತ್ತವೆ. ಒಂದೇ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು ಸರಿಯಾದ ವಿಧಾನವಲ್ಲ. ಹೀಗಾಗಿ ಐಐಟಿ ಪ್ರವೇಶಕ್ಕೆ ಆಮೂಲಾಗ್ರ ಬದಲಾವಣೆ ತರುವ ಅವಶ್ಯಕತೆ ಇದೆ.

    ಐಐಟಿಗಳಲ್ಲಿ ಬಹಳಷ್ಟು ಸಂಶೋಧನೆ ಕೇವಲ ಥಿಯರಿ ಮತ್ತು ಫಂಡಮೆಂಟಲ್ ರಿಸರ್ಚ್ ಆಗಿದೆ. ಅಲ್ಲಿಯ ಪೊ›ಫೆಸರ್​ಗಳು ಹೆಚ್ಚು ಹೆಚ್ಚು ರಿಸರ್ಚ್ ಪೇಪರ್ ಪ್ರಕಟಿಸಿ ಪ್ರಮೋಷನ್ ಪಡೆಯಲು ಪ್ರಯತ್ನಿಸುತ್ತಾರೆ. ಇದರಿಂದ ನಮ್ಮ ಭಾರತದ ಕೈಗಾರಿಕಾ ಕ್ಷೇತ್ರಕ್ಕೆ ಯಾವುದೇ ಪ್ರಯೋಜನ ಇಲ್ಲ. ಬಹಳಷ್ಟು ಪೊ›ಫೆಸರ್​ಗಳಿಗೆ ಭಾರತದ ಫ್ಯಾಕ್ಟರಿಗಳ ವರ್ಕ್​ಶಾಪ್​ಗಳಲ್ಲಿ, ಶಾಪ್ ಫ್ಲೋರ್​ನಲ್ಲಿ ಕೆಲಸ ಮಾಡಿದ ಅನುಭವವಿಲ್ಲ. ಐಐಟಿಗಳಲ್ಲಿ ಭಾರತದ ಔದ್ಯೋಗಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪ್ರಾಕ್ಟಿಕಲ್ ಮತ್ತು ಅಪ್ಲೈಡ್ ರಿಸರ್ಚ್ ಜಾಸ್ತಿಯಾಗಬೇಕಾಗಿದೆ. ಐಐಟಿಗಳು ಸ್ಥಳೀಯ ಕೈಗಾರಿಕೆಗಳೊಂದಿಗೆ ಹೆಚ್ಚು ಸಹಯೋಗ ಹೊಂದಿ ಅಲ್ಲಿಯ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರಕೊಡುವಂಥಾದಲ್ಲಿ ಹೆಚ್ಚು ಅನುಕೂಲ.

    (ಲೇಖಕರು ಹವ್ಯಾಸಿ ಬರಹಗಾರರು, ಅಮೆರಿಕದ ನ್ಯೂಯಾರ್ಕ್ ನಿವಾಸಿ)

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts