ದಕ್ಷಿಣ ಭಾರತಕ್ಕೂ ಉಷ್ಣಮಾರುತ ಭೀತಿ: ಐಐಟಿಎಂ ಅಧ್ಯಯನ ವರದಿ ಎಚ್ಚರಿಕೆ

ಪುಣೆ: ಮುಂದಿನ ವರ್ಷದಿಂದ ಭಾರತದಲ್ಲಿ ಉಷ್ಣ ಮಾರುತ ತೀವ್ರಗೊಳ್ಳಲಿದೆ ಎಂದು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೋಲಜಿ (ಐಐಟಿಎಂ) ಅಧ್ಯಯನ ವರದಿಯೊಂದು ತಿಳಿಸಿದೆ. ಎಲ್​ನಿನೊ ಮೊಡಕ್ಕಿ ಎಂಬ ವಿಶಿಷ್ಟ ರೀತಿಯ ವಾತಾವರಣ ಸೃಷ್ಟಿಯಾಗುತ್ತಿರುವುದು ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.

ಮಣ್ಣಿನಲ್ಲಿ ತೇವಾಂಶ ಕಡಿಮೆ ಆಗಿರುವುದು, ಭೂಮಿಯಲ್ಲಿನ ಉಷ್ಣಾಂಶ ವಾತಾವರಣಕ್ಕೆ ವರ್ಗಾವಣೆಯಾಗುವ ಕಾರಣ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ದಕ್ಷಿಣ ಭಾರತ ರಾಜ್ಯಗಳಲ್ಲೂ ಉಷ್ಣ ಮಾರುತ ಪ್ರಭಾವ ಹೆಚ್ಚಾಗಿ ಕಂಡುಬರಲಿದೆ ಎನ್ನಲಾಗಿದೆ.

ಕ್ಲೈಮೆಟ್ ಡೈನಮಿಕ್ಸ್ ಎಂಬ ಅಂತಾರಾಷ್ಟ್ರೀಯ ನಿಯತಕಾಲಿಕೆಯಲ್ಲಿ ವರದಿ ಪ್ರಕಟವಾಗಿದೆ. 2020ರಿಂದ 2064ರ ವರೆಗೆ ಬಿಸಿಗಾಳಿ ತೀವ್ರಗೊಳ್ಳಿದೆ ಎಂದು ಇದರಲ್ಲಿ ಹೇಳಲಾಗಿದೆ. 9 ವಿಧದ ಹವಾಮಾನ ಮಾದರಿಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಿ, ಭಾರತದಲ್ಲಿನ ಬಿಸಿಗಾಳಿಯ ತೀವ್ರತೆ, ಅವಧಿ, ಜನಸಾಮಾನ್ಯರ ಆರೋಗ್ಯದ ಮೇಲೆ ಆಗುವ ಪ್ರಭಾವ ಕುರಿತು ಪರಿಶೀಲನೆ ನಡೆಸಲಾಗಿದೆ.

1961ರಿಂದ 2005ರ ಅವಧಿಯಲ್ಲಿ 54 ಉಷ್ಣ ಮಾರುತಗಳು ಕಂಡುಬಂದಿದ್ದವು. 2020ರಿಂದ 2064ರ ಈ ಉಷ್ಣ ಮಾರುತಗಳ ಸಂಖ್ಯೆ 138ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಏನಿದು ಎಲ್ ನಿನೊ ಮೊಡಕ್ಕಿ?: ಪೆಸಿಫಿಕ್ ಸಮುದ್ರದ ಮಧ್ಯಭಾಗದಲ್ಲಿ ಮೇಲ್ಮೈ ಬಿಸಿಯಾಗುತ್ತಿದೆ. ಇಲ್ಲಿನ ಉಷ್ಣ ಮಾರುತಗಳು ಭಾರತ ಸಹಿತ ವಿವಿಧೆಡೆ ಪ್ರಭಾವ ಬೀರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಪ್ರಸಕ್ತ ವರ್ಷ ಏಪ್ರಿಲ್ ಹಾಗೂ ಮಾರ್ಚ್​ನಲ್ಲಿ ಮಹಾರಾಷ್ಟ್ರಕ್ಕೆ ಉಷ್ಣ ಮಾರುತ ಬೀಸಿತ್ತು.

ಅವಧಿಯಲ್ಲೂ ಹೆಚ್ಚಳ

ಈ ವರೆಗೆ ಮಧ್ಯ ಭಾರತ ಹಾಗೂ ವಾಯವ್ಯ ಭಾರತದಲ್ಲಿ ಬೀಸುತ್ತಿದ್ದ ಉಷ್ಣ ಮಾರುತ ಪ್ರಭಾವ 4ರಿಂದ 7 ದಿನ ಇರುತ್ತಿತ್ತು. ಆದರೆ ಮುಂದಿನ ವರ್ಷದಿಂದ ಇದರ ಅವಧಿ ಏರಿಕೆ ಆಗಲಿದೆ. ಉಷ್ಣ ಮಾರುತ ಪ್ರಭಾವ 12-18 ದಿನಗಳ ವರೆಗೆ ಇರುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

Leave a Reply

Your email address will not be published. Required fields are marked *