ಐಐಟಿ ಮದ್ರಾಸ್‌ ಹಾಸ್ಟೆಲ್‌ ಕೊಠಡಿಯಲ್ಲಿ ಕಾಂಡೋಮ್‌ ಪತ್ತೆ: ವಿದ್ಯಾರ್ಥಿಯ ವಿವರ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟ

ಚೆನ್ನೈ: ಐಐಟಿ ಮದ್ರಾಸ್‌ ಹಾಸ್ಟೆಲ್‌ ಕೊಠಡಿಯಲ್ಲಿ ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿದ್ದು, ಕಾಂಡೋಮ್‌ ದೊರಕಿದ ಕೊಠಡಿಯ ವಿದ್ಯಾರ್ಥಿಯ ವಿವರಗಳನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಲಾಗಿದೆ. ಹೀಗಾಗಿ ಐಐಟಿ ಮದ್ರಾಸ್​ ಈಗ ವಿವಾದದ ಕೇಂದ್ರ ಬಿಂದುವಾಗಿದೆ.

ಈ ರೀತಿ ಮಾಹಿತಿ ಬಹಿರಂಗ ಮಾಡಿದ್ದರಿಂದ ತಮ್ಮ ಗೌಪ್ಯತೆ ಮತ್ತು ಘನತೆಗೆ ಧಕ್ಕೆಯಾಗಿದೆ, ಕಿರಿಕಿರಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಕೆರಳಿದ್ದಾರೆ.

ವಿಚಕ್ಷಣ ತಂಡದ ತಪಾಸಣೆ ಸಮಯದಲ್ಲಿ ಬ್ರಹ್ಮಪುತ್ರ ಬಾಲಕರ ಹಾಸ್ಟೆಲ್‌ನಲ್ಲಿ ಅಧಿಕಾರಿಗಳಿಗೆ ಹಲವಾರು ನಿಷೇಧಿತ ವಸ್ತುಗಳು ದೊರಕಿವೆ. ಅವುಗಳಲ್ಲಿ ಇಸ್ತ್ರಿ ಪೆಟ್ಟಿಗೆ, ಎಗ್‌ ಬಾಯ್ಲರ್‌, ಎಲೆಕ್ಟ್ರಿಕ್‌ ಕೆಟಲ್‌, ವಾಟರ್‌ ಕೂಲರ್‌, ಮಿನಿ ಫ್ರಿಡ್ಜ್, ವಾಟರ್‌ ಹೀಟರ್‌ ರಾಡ್‌ ಸೇರಿ ಇತ್ಯಾದಿ ವಸ್ತುಗಳು ದೊರಕಿವೆ. ಮತ್ತೊಂದು ಕೊಠಡಿಯಲ್ಲಿ 20 ಸಿಗರೇಟ್‌ ತುಂಡುಗಳು, ಬೆಂಕಿಪೊಟ್ಟಣ ಮತ್ತು ಬಳಸಿದ ಕಾಂಡೋಮ್‌ಗಳು ಕಸದ ಬುಟ್ಟಿಯಲ್ಲಿ ಪತ್ತೆಯಾಗಿವೆ.

ವಿದ್ಯಾರ್ಥಿಗಳಿಗೆ ಈಗಾಗಲೇ 5000 ರೂ. ದಂಡ ವಿಧಿಸಲಾಗಿದೆ. ನಂತರ ವಿದ್ಯಾರ್ಥಿಯ ವಿವರಗಳನ್ನು ನೋಟಿಸ್‌ ಬೋರ್ಡ್‌ನಲ್ಲಿ ಹಾಕಿ ಸಾರ್ವಜನಿಕವಾಗಿ ಅಪಮಾನ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿಗಳು, ವಿಚಕ್ಷಣ ತಂಡದ ಅಧಿಕಾರಿಗಳು ಕೊಠಡಿಗೆ ಏಕಾಏಕಿ ಪ್ರವೇಶಿಸಿದ್ದಲ್ಲದೆ ತಮ್ಮ ಅನುಮತಿ ಇಲ್ಲದೆಯೇ ಚಿತ್ರಗಳನ್ನು ತೆಗೆದರು ಎಂದಿದ್ದಾರೆ.

ಕ್ಯಾಂಪಸ್‌ನಲ್ಲಿ ವ್ಯಾಪಕ ಕಿರುಕುಳ ಮತ್ತು ನೈತಿಕ ಪೊಲೀಸ್‌ಗಿರಿ ಚಾಲ್ತಿಯಲ್ಲಿದೆ ಎಂದು ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾಳೆ. (ಏಜೆನ್ಸೀಸ್)

Leave a Reply

Your email address will not be published. Required fields are marked *