ಸಿಂಗಾಪುರದಿಂದ ಅಸ್ಸಾಂಗೆ ಪ್ರೀತಿ ಹಂಚಲು ಬಂದ ಐಐಟಿ ಹುಡುಗ!

ಎಲ್ಲಿಯ ಸಾತಾರಾ, ಸಿಂಗಾಪುರ! ಎಲ್ಲಿಯ ಅಸ್ಸಾಂನ ಪ್ರವಾಹಪೀಡಿತ ಹಳ್ಳಿ ಮಜುಲಿ…! ಇದೇನಪ್ಪ ಆರಂಭದಲ್ಲಿ ಒಗಟು ಅಂದುಕೊಳ್ಳಬೇಡಿ. ಜೀವನವನ್ನು ‘ಸೇಫರ್ ಝೋನ್’ ಅಲ್ಲ ಸಾರ್ಥಕವಾಗಿಸಿಕೊಳ್ಳಲು ಹೊರಟರೆ ಸಿಗುವ ಅದ್ಭುತ ತಿರುವುಗಳು ಹೇಗೆ ಬದುಕನ್ನು, ಸಮುದಾಯವನ್ನು ಕಟ್ಟಬಲ್ಲವು ಎಂಬುದಕ್ಕೆ ಸಾಕ್ಷಾತ್ ನಿದರ್ಶನ. ನಿಜಕ್ಕೂ, ಇಂಥ ಸಾಹಸಗಳಿಗೆಲ್ಲ ಸಾಧಾರಣ ಧೈರ್ಯ ಸಾಕಾಗುವುದಿಲ್ಲ. ಅಂತರಾತ್ಮದ ಮಾತಿನಂತೆಯೇ ನಡೆದುಕೊಳ್ಳುವ, ಆ ಹಾದಿಯಲ್ಲಿ ಕಷ್ಟಗಳು ಬಂದರೂ ನಗುವಿನಿಂದಲೇ ಗೆಲ್ಲುವ ಆತ್ಮಸ್ಥೈರ್ಯ ಬೇಕು. ಹಾಗಾಗಿಯೇ, ಬಿಪಿನ್ ಧಾನೆ ಎಂಬ ಇಪ್ಪತ್ತೊಂಬತ್ತು ವರ್ಷದ ಹುಡುಗನ ಜೀವನ ಮತ್ತು ಆತನ ಕೆಲಸ ಅಚ್ಚರಿ ಅಷ್ಟೇ ಅಲ್ಲ ಪ್ರೇರಣೆಯನ್ನು ನೀಡುವ ಜತೆಗೆ ಜೀವನ ಸಾಗಿಸಿದರೆ ಹೀಗೆ ಸಾಗಿಸಬೇಕು ಎಂಬ ಛಲವನ್ನು ಹುಟ್ಟಿಸುತ್ತದೆ.

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಬಿಪಿನ್ ಶಿವಾಜಿ ಧಾನೆ ಓದಿನಲ್ಲಿ ಮುಂಚೆಯಿಂದಲೂ ಜಾಣ. ಪುಸ್ತಕಗಳ ಓದಿನ ಜತೆಗೆ ಸಮಾಜದ ಜತೆ ಬೆರೆಯುವುದೆಂದರೆ ಈತನಿಗೆ ಎಲ್ಲಿಲ್ಲದ ಖುಷಿ. ದೇಶದ ಪ್ರತಿಷ್ಠಿತ ಖಡಗ್​ಪುರ್ ಐಐಟಿಯಲ್ಲಿ ಎಂ.ಟೆಕ್ ಪೂರ್ಣಗೊಳಿಸಿದ(2013). ಅಲ್ಲಿ ಓದುವಾಗಲೇ, ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನವಾಗಿ ಏನಾದರೂ ಪ್ರಯೋಗಗಳನ್ನು ಮಾಡಬೇಕು ಎಂದು ಯೋಚಿಸತೊಡಗಿದ. ಬೆಳಗ್ಗೆ ತನ್ನ ಕ್ಲಾಸುಗಳು ಆರಂಭಗೊಳ್ಳುವ ಮುನ್ನವೇ ಸ್ಥಳೀಯ ಬಡ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಗಣಿತ, ವಿಜ್ಞಾನದ ಪಾಠ ಮಾಡುತ್ತಿದ್ದ. ಆ ಮಕ್ಕಳ ಆತ್ಮವಿಶ್ವಾಸ ಕಂಡು ‘ಅಭೀ ಕುಛ್ ಬಡಾ ಕರ್ನಾ ಹೈ’ ಅಂತ ತನಗೆ ತಾನೇ ಹೇಳಿಕೊಳ್ಳುತ್ತಿದ್ದ. ಓದು ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ‘ತಡಮಾಡದೆ ಒಳ್ಳೆಯ ಉದ್ಯೋಗಕ್ಕೆ ಸೇರು’ ಎಂಬ ಒತ್ತಾಯ ತಂದೆ-ತಾಯಿಯಿಂದ. ತನ್ನ ಕನಸುಗಳನ್ನು ಹೃದಯದಲ್ಲಿ ಜೋಪಾನವಾಗಿಟ್ಟುಕೊಂಡೇ ಸಿಂಗಾಪುರದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡತೊಡಗಿದ. ಸಂಬಳದ ಪ್ಯಾಕೇಜ್ ಏನೋ ಭರ್ಜರಿಯಾಗಿಯೇ ಇತ್ತು. ಆದರೆ, ಸಂತೃಪ್ತಿ ಎಂಬುದು ಎಲ್ಲಿದೆ ಅಂತ ಹುಡುಕತೊಡಗಿದ. ದಿನಗಳೆದಂತೆ ‘ಇದು ನಾನು ಮಾಡುವ ಕೆಲಸವಲ್ಲ’ ಎಂದು ಅನಿಸತೊಡಗಿತು. ತಕ್ಷಣಕ್ಕೆ ಹೋಗಿ ರಾಜೀನಾಮೆ ನೀಡಬೇಕು ಅಂದುಕೊಂಡರೂ ಅಪ್ಪ-ಅಮ್ಮನ ಮಾತು ನೆನಪಾಗಿ ಸುಮ್ಮನಾಗುತ್ತಿದ್ದ. ಸಾಮಾಜಿಕ ಮಾಧ್ಯಮಗಳನ್ನು ಜಾಲಾಡುವಾಗ ಅಸ್ಸಾಂನಲ್ಲಿ ಶಿಕ್ಷಕನಾಗಿದ್ದ ಈತನ ಸ್ನೇಹಿತನೊಬ್ಬ ಸಂಪರ್ಕಕ್ಕೆ ಬಂದ. ಆತ ಅಸ್ಸಾಂನಲ್ಲಿ ಒಳ್ಳೆಯ ಶಿಕ್ಷಣ ಮತ್ತು ಶಿಕ್ಷಕರ ಕೊರತೆ ತುಂಬ ಇದೆ ಎಂದು ಸದಾ ಹೇಳುತ್ತಿದ್ದ. ಮೂರು ವರ್ಷ ಸಿಂಗಾಪುರದಲ್ಲಿ ಕೆಲಸ ಮಾಡಿದ ಬಿಪಿನ್ ‘ಇನ್ನು ನನ್ನಿಂದ ಸಾಧ್ಯವಿಲ್ಲ’ ಅಂದುಕೊಂಡು 2016ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ನೇರ ಬಂದದ್ದು ಅಸ್ಸಾಂಗೆ. ತಂದೆ-ತಾಯಿಗೆ ವಿಷಯ ಗೊತ್ತಾಗಿ ಬೇಜಾರು ಮಾಡಿಕೊಂಡರು. ತಂದೆಯಂತೂ ಕೋಪ ಪ್ರದರ್ಶಿಸಿದರು.

ಬ್ರಹ್ಮಪುತ್ರ ನದಿತೀರದಲ್ಲಿ ಇರುವ ಸಣ್ಣಗ್ರಾಮ ಮಜುಲಿ. ಪ್ರತಿ ವರ್ಷವೂ ಬರುವ ಪ್ರವಾಹ ಇಲ್ಲಿ ಕಾಯಂ ಅತಿಥಿ. ಪಕ್ಕಾ ರಸ್ತೆಯಿಲ್ಲ. ಸುತ್ತಮುತ್ತಲ ಹತ್ತು-ಹದಿನೈದು ಗ್ರಾಮಗಳಿಗೆ ಒಳ್ಳೆಯ ಶಾಲೆ ಇಲ್ಲ. ಸ್ಥಳೀಯರಿಗೆ ಸಾಂಪ್ರದಾಯಿಕ ಕಸುಬೇ ಜೀವನಾಧಾರ. ಸ್ನೇಹಿತನ ಜತೆಯಲ್ಲಿ ಬಿಪಿನ್ ಅಲ್ಲಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸತೊಡಗಿದ. ಅದೊಂದು ದಿನ ಬಿಪಿನ್ ಮತ್ತು ಅವನ ತಂಡ ಸುತ್ತಮುತ್ತಲಿನ ಕುಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜನ, ‘ನಮಗೆ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ನಡೆಯುತ್ತೆ. ಆದರೆ, ನಮ್ಮ ಮಕ್ಕಳು ಅವಿದ್ಯಾವಂತರಾಗಬಾರದು. ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಅದಕ್ಕಾಗಿ ಒಂದು ಶಾಲೆ ಆರಂಭಿಸಿ’ ಎಂದು ಪ್ರೀತಿಯಿಂದ ಭಿನ್ನವಿಸಿದಾಗ ಬಿಪಿನ್​ಗೆ ಇಲ್ಲ ಅಂತ ಹೇಳಲಾಗಲಿಲ್ಲ. ಸಿಂಗಾಪುರದಲ್ಲಿ ಉಳಿಸಿದ್ದ ಹಣವನ್ನು ಈತ ತಂದೆ-ತಾಯಿಗೆ ನೀಡಿಬಿಟ್ಟಿದ್ದ. ‘ನೀವು ಮುಂದಾಗಿ ನಾವೆಲ್ಲ ಸಹಕಾರ ನೀಡುತ್ತೇವೆ’ ಎಂದರು ಸ್ಥಳೀಯರು. ಮಜುಲಿ ಗ್ರಾಮದಲ್ಲಿ ಮೂರು ಜನ ಸೇರಿ ಶಾಲೆಗೆಂದು ಜಮೀನು ನೀಡಿದರು. ಬ್ಯಾಂಬೂ(ಬಿದಿರು) ಮೂಲಕ ಕಟ್ಟಡ ಕಟ್ಟುವ ಕೆಲಸ ಶುರುವಾಯಿತು. ಸುತ್ತಮುತ್ತಲ ಗ್ರಾಮದವರೇ ಸರದಿಯಂತೆ ಬಂದು ಶ್ರಮದಾನದ ಮೂಲಕ ಕಟ್ಟಡ ಕಟ್ಟತೊಡಗಿದರು. ನೆಲಮಹಡಿಯಲ್ಲಿ ಶಾಲೆ, ಮೊದಲನೇ ಮಹಡಿಯಲ್ಲಿ ಹಾಸ್ಟೆಲ್ ಕಟ್ಟಡ ಸಿದ್ಧವಾಯಿತು. 2017ರಲ್ಲಿ 70 ಮಕ್ಕಳೊಂದಿಗೆ ಆರಂಭವಾಯಿತು “The Hummingbird School’ ([email protected]). ಕ್ರಮೇಣ ನೂತನ ಕಲಿಕಾ ವಿಧಾನಗಳನ್ನು ಅಳವಡಿಸಲಾಯಿತು. ಈ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷೆ ಇಲ್ಲ. ಹೊಡೆಯುವುದಂತೂ ಬಿಡಿ, ಶಿಕ್ಷಕರು ಬೈಯ್ಯುವುದೂ ಇಲ್ಲ. ಅಷ್ಟೇ ಅಲ್ಲ, ಮಕ್ಕಳು ಇಲ್ಲಿ ಶಿಕ್ಷಕರನ್ನು ಅವರ ಹೆಸರಿನಿಂದಲೇ ಕರೆಯುತ್ತಾರೆ. ಪಾಠ ಮುಗಿದ ಬಳಿಕ ಮಕ್ಕಳೊಡನೆ ಶಿಕ್ಷಕರು, ಬಿಪಿನ್ ಒಟ್ಟಾಗಿ ಆಟವಾಡುತ್ತಾರೆ. ಕಂಠಪಾಠ ಮಾಡುವ ಗೊಡವೆ ಇಲ್ಲ, ಹೋಂವರ್ಕ್​ನ ಹೊರೆ ಇಲ್ಲ. ವಿಷಯವನ್ನು ಮಕ್ಕಳು ಚೆನ್ನಾಗಿ ಗ್ರಹಿಸಬೇಕು ಈ ನಿಟ್ಟಿನಲ್ಲಿ ಶಿಕ್ಷಕರು ವಿಶೇಷ ಶ್ರಮ ಹಾಕುತ್ತಾರೆ. ಒಂದರಿಂದ ಐದನೇ ತರಗತಿವರೆಗಿನ 240 ಮಕ್ಕಳು ಪ್ರಸಕ್ತ ವ್ಯಾಸಂಗ ಮಾಡುತ್ತಿದ್ದು, 70 ಮಕ್ಕಳು ಹಾಸ್ಟೆಲಿನಲ್ಲಿ ಇದ್ದಾರೆ. ತಂದೆ-ತಾಯಿ ಇರದ ಅಥವಾ ತುಂಬ ಬಡತನ ಎದುರಿಸುತ್ತಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಹಾಸ್ಟೆಲ್ ಸೌಲಭ್ಯ ನೀಡಲಾಗಿದೆ. ಸುತ್ತಲ 15ಕ್ಕೂ ಹೆಚ್ಚು ಗ್ರಾಮಗಳಿಂದ ಮಕ್ಕಳು ಶಾಲೆಗೆ ಬರುತ್ತಾರೆ.

ಮೊದಲ ಹಂತ ಯಶಸ್ವಿಯಾಗುತ್ತಿದ್ದಂತೆ ಬಿಪಿನ್ ಮುಂದಡಿ ಇಟ್ಟು ಅಯಾಂಗ್ ಟ್ರಸ್ಟ್ (www.ayang.org.in) ಅನ್ನು ಆರಂಭಿಸಿದರು. ಅಸ್ಸಾಮೀ ಭಾಷೆಯಲ್ಲಿ ಅಯಾಂಗ್ ಎಂದರೆ ಪ್ರೀತಿ ಎಂದರ್ಥ. ‘ವೈದ್ಯರು ರೋಗಿಯ ಪ್ರಾಣ ಉಳಿಸುತ್ತಾರೆ. ಹಾಗೇ ಶಿಕ್ಷಕರು ಜೀವನ ರೂಪಿಸುತ್ತಾರೆ. ಆದರೆ, ನಮ್ಮಲ್ಲಿ ಶಿಕ್ಷಕರಿಗೆ ದೊರೆಯಬೇಕಾದ ಶಿಕ್ಷಣದ ಬಗ್ಗೆ ಗಮನವೇ ವಹಿಸಿಲ್ಲ. ಅದೇ ಹಳೆಯ ಪದ್ಧತಿಗಳನ್ನು ಅನುಕರಿಸಿ ಪಾಠ ಮಾಡಿದರೆ ಮಕ್ಕಳು ಜ್ಞಾನವಂತರಾಗುವುದು ಹೇಗೆ? ಅವರೂ ಹೊಸ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು’ ಎನ್ನುವ ಬಿಪಿನ್ ಅಯಾಂಗ್ ಟ್ರಸ್ಟ್ ಮೂಲಕ ಐದು ಸರ್ಕಾರಿ ಮತ್ತು ಹತ್ತು ಕಮ್ಯುನಿಟಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ಅಲ್ಲಿಯೂ, ಮಕ್ಕಳು ವಿಷಯವನ್ನು ಗ್ರಹಿಸುವುದಕ್ಕೆ ಆದ್ಯತೆ ನೀಡಿ ಶಿಕ್ಷಕರನ್ನೂ ಹೊಸ ಕೌಶಲಗಳಿಂದ ತಯಾರು ಮಾಡಲಾಗುತ್ತಿದೆ. ಬಿಪಿನ್ ಜತೆ ಉಚ್ಚಶಿಕ್ಷಿತರ ತಂಡವೇ ಸೇರಿಕೊಂಡಿದ್ದು, ಅವರೆಲ್ಲ ಶಿಕ್ಷಣದ ಹೊಸ ಪ್ರಯೋಗಗಳಿಗೆ ಜೀವ ತುಂಬುತ್ತಿದ್ದಾರೆ. ಅಷ್ಟೇ ಅಲ್ಲ, ಅಸ್ಸಾಂನಲ್ಲಿ ಉತ್ತಮ ಶಿಕ್ಷಕರನ್ನು ತಯಾರು ಮಾಡಿ, ಆ ಮೂಲಕ ಬೋಧನಾ-ಕಲಿಕಾ ಗುಣಮಟ್ಟ ಹೆಚ್ಚಿಸಬೇಕೆಂದು ಅಯಾಂಗ್ ಮಂಥನ ಫೆಲೋಶಿಪ್ ಅನ್ನು ಆರಂಭಿಸಿದೆ. ಎರಡು ವರ್ಷದ ಫೆಲೋಶಿಪ್ ಕಾರ್ಯಕ್ರಮದಲ್ಲಿ ಪದವೀಧರ ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಸುತ್ತಲ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಾರೆ.

ಬಿಪಿನ್ ತಾವು ಆರಂಭಿಸಿದ ಶಾಲೆಯಲ್ಲಿ ಕೃಷಿಯನ್ನೂ ಹೇಳಿಕೊಡುತ್ತಿದ್ದಾರೆ. ಇದಕ್ಕಾಗಿ ಒಂದು ಪ್ರಾಯೋಗಿಕ ತರಗತಿಯನ್ನೇ ದಿನವೂ ನಡೆಸಲಾಗುತ್ತದೆ. ಜತೆಗೆ, ಸ್ಥಳೀಯ ಬುಡಕಟ್ಟು ಸಂಸ್ಕೃತಿಯನ್ನು ನವಪೀಳಿಗೆಗೆ ಹೇಳಿಕೊಡಲಾಗುತ್ತಿದ್ದು ನೃತ್ಯ, ಸಂಗೀತ ಪ್ರಮುಖ ಚಟುವಟಿಕೆಗಳಾಗಿವೆ. ಬಿದಿರಿನ ಮೂಲಕ ವಿವಿಧ ಉತ್ಪನ್ನಗಳನ್ನು ತಯಾರಿಸುವ ಸ್ಥಳೀಯ ಕಸುಬನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಮಕ್ಕಳಿಗೆ ಶುಲ್ಕ ವಿಧಿಸಲಾಗುತ್ತಿಲ್ಲ. ಮಕ್ಕಳ ಪಾಲಕರು ಶ್ರಮದಾನದ ಮೂಲಕವೇ ಶಾಲೆಯ ಕೆಲಸಗಳನ್ನು (ಕೈತೋಟ ಸೇರಿ) ಈಗಲೂ ಮಾಡಿಕೊಡುತ್ತಿದ್ದಾರೆ. ಹಾಗಾಗಿಯೇ ಅವರಿಗೆಲ್ಲ ‘ಇದು ನಾವು ನಿರ್ವಿುಸಿದ ಶಾಲೆ, ನಮ್ಮ ಮಕ್ಕಳು ಅಕ್ಷರದ ಬೆಳಕು ಕಾಣುತ್ತಿರುವ ಶಾಲೆ’ ಎಂಬ ಭಾವನಾತ್ಮಕ ಬಂಧ ಹುಟ್ಟಿಕೊಂಡಿದೆ.

ಇತ್ತೀಚೆಗೆ ಬಿಪಿನ್​ನ ಅಮ್ಮ ಮತ್ತು ಸೋದರಿ ಈ ಶಾಲೆಗೆ ಭೇಟಿ ನೀಡಿ ‘ಎಷ್ಟೊಂದು ಕೆಲಸ ಮಾಡಿದಿಯಲ್ಲೋ ಕಂದಾ’ ಅಂತ ಹೇಳಿದಾಗ ತಾಯಿ-ಮಗ ಅಷ್ಟೇ ಅಲ್ಲ ಅಲ್ಲಿದ್ದ ಮಕ್ಕಳು, ಊರಿನವರು ಆನಂದಾಶ್ರು ಸುರಿಸಿದರಂತೆ. ತಂದೆ ಕೂಡ ‘ನನ್ನ ಮಗ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದಾನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಅಯಾಂಗ್ ಟ್ರಸ್ಟ್​ನ ಕಾರ್ಯಚಟುವಟಿಕೆಗಳಿಗೆ ನಮ್ಮ ಬೆಂಗಳೂರಿನ ಎರಡು ಮತ್ತು ಮುಂಬೈನ ಒಂದು ಸ್ವಯಂಸೇವಾ ಸಂಸ್ಥೆ ನೆರವು ನೀಡುತ್ತಿವೆ. ಬಿಪಿನ್ ಸ್ನೇಹಿತರು ಕೂಡ ಸಹಾಯಹಸ್ತ ಚಾಚಿದ್ದಾರೆ. ಅಸ್ಸಾಮೀ ಭಾಷೆಯನ್ನೂ ಕಲಿತುಕೊಂಡಿರುವ ಬಿಪಿನ್ ಮರಾಠಿಯಲ್ಲಿ ‘ಯಾ ಸರ್ವಾಂಚಾ ಪ್ರೇಮಾಮುಳೇಚ ಹೇ ಸಗಳ್ ಶಕ್ಯ ಝಾಲ್… (ಇವರೆಲ್ಲರೂ ತೋರಿದ ಪ್ರೀತಿಯಿಂದಲೇ ಇದೆಲ್ಲ ಸಾಧ್ಯವಾಗಿದೆ) ಎಂದು ಹೇಳುವಾಗ ಭಾವುಕರಾಗುತ್ತಾರೆ.

‘ನಮ್ಮದು ಬರೀ ಶಾಲೆ ನಡೆಸಬೇಕೆಂಬ ಉದ್ದೇಶವಲ್ಲ. ಬೇರೆ ಶಾಲೆಗಳೂ ಹೇಗಿರಬೇಕು ಎಂಬ ಮಾದರಿಯನ್ನು ನಿರ್ವಿುಸೋದು ಮತ್ತು ಸಮುದಾಯದ ಶಾಲೆಗಳನ್ನೂ ಅದೇ ರೀತಿ ತಯಾರು ಮಾಡುವುದು ಮುಖ್ಯ ಆಶಯ’ ಎನ್ನುವ ಬಿಪಿನ್ ತಮ್ಮ ಶಾಲೆಯಲ್ಲಿ ಇಪ್ಪತ್ತು ಶಿಕ್ಷಕರು ಮತ್ತು ಹತ್ತು ಜನ ಬೋಧಕೇತರ ಸಿಬ್ಬಂದಿಯನ್ನು ಹೊಂದಿದ್ದಾರೆ. ಸದ್ಯಕ್ಕೆ ಹೃದಯವಂತ ಜನರ ದೇಣಿಗೆಗಳಿಂದ ಶಾಲೆ ನಡೆಯುತ್ತಿದ್ದು, ನಾಳೆಗಳ ಚಿಂತೆಯೂ ಇವರಿಗಿದೆ. ಪ್ರತಿ ಮಗುವಿನ ತಿಂಗಳ ಶಿಕ್ಷಣಕ್ಕೆ ಸರಾಸರಿ -ಠಿ; 1,200 ವೆಚ್ಚವಾಗುತ್ತಿದೆ. ಮಕ್ಕಳ ಶಿಕ್ಷಣವನ್ನು ಪ್ರಾಯೋಜಿಸುವವರಿಗೆ 80ಜಿ ಅನ್ವಯ ತೆರಿಗೆ ವಿನಾಯಿತಿಯೂ ಇದೆ. ಕಂಪ್ಯೂಟರ್ ಲ್ಯಾಬ್ ಮತ್ತು ವಿಜ್ಞಾನ ಪ್ರಯೋಗಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಇಷ್ಟೇ ಅಲ್ಲದೆ, ಸ್ಥಳೀಯ ಬುಡಕಟ್ಟು ಜನರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ, ಮಹಿಳಾ ಸಬಲೀಕರಣಕ್ಕೆ ಪೂರಕವಾದ ಕ್ರಮ ಕೈಗೊಳ್ಳುತ್ತಿದೆ.

‘ನಿನ್ನ ಸ್ನೇಹಿತರು ದೊಡ್ಡ ಸಂಬಳಗಳನ್ನು ಪಡೆಯುತ್ತಿರುವಾಗ ಈ ಬದುಕು ಹೇಗೆ ಏನಿಸುತ್ತಿದೆ?’ ಅಂತ ಕೇಳಿದರೆ, ‘ಅವರಿಗೆ ಅದೇ ಸಂತೋಷ. ನನಗೆ ಈ ಅವಕಾಶವಂಚಿತವಾಗಿದ್ದ ಮಕ್ಕಳ ಮೊಗದಲ್ಲಿ ಆತ್ಮವಿಶ್ವಾಸದ ನಗು ಕಾಣುತ್ತಿರುವಾಗ, ಶಿಕ್ಷಣ ಅವರು ಬದುಕು ಬದಲಿಸುತ್ತಿರುವುದನ್ನು ಕಂಡಾಗ ಖುಷಿಯಾಗುತ್ತದೆ. ಜೀವನ ವನ್ನು ಪ್ರಮುಖ ಉದ್ದೇಶಕ್ಕಾಗಿ ವಿನಿಯೋಗಿಸುತ್ತಿದ್ದೇನೆ ಎನ್ನುವ ಸಂತೃಪ್ತಿ ಇದೆ. ಇಷ್ಟಕ್ಕೆ ನಿಲ್ಲೋದಿಲ್ಲ. ಇಡೀ ಅಸ್ಸಾಂನಾದ್ಯಂತ ಈ ಕಾರ್ಯವನ್ನು ಹರಡುವ ಗುರಿ ಇದೆ’ ಎಂದು ಹೇಳುತ್ತಾನೆ. ತನ್ನ ಭಾಷೆ, ಸಂಸ್ಕೃತಿ ಯಾವುದೂ ಗೊತ್ತಿಲ್ಲದ ಪ್ರದೇಶದಲ್ಲಿ ಜನರ ಹೃದಯವನ್ನು ಗೆದ್ದು, ಹೀಗೆ ಪರಿವರ್ತನೆಯ ಸಾರ್ಥಕ ಮಾದರಿಯನ್ನು ಸೃಷ್ಟಿಸುವ ಕೆಲಸ ನಿಜಕ್ಕೂ ಅಸಾಧಾರಣ. ಮುಖ್ಯವಾಹಿನಿಯಲ್ಲಿ ದನಿಯೇ ಇಲ್ಲದಿದ್ದ ಈಶಾನ್ಯ ಭಾರತ ಇಂಥ ಕಾರ್ಯಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿದೆ. ಇನ್ನು, ಬಿಪಿನ್ ಮತ್ತು ಅವರ ತಂಡದ ಸದಸ್ಯರನ್ನು ಸ್ಥಳೀಯರು ಮನೆಮಕ್ಕಳಂತೆ ನೋಡಿ ಕೊಳ್ಳುತ್ತಿದ್ದಾರೆ. ಈ ಹೃದಯವೈಶಾಲ್ಯ, ಅಂತಃಕರಣವೇ ತಾನೇ ನಮ್ಮನ್ನೆಲ್ಲ ಪೊರೆಯುತ್ತಿರುವುದು!!

ಬ್ರಹ್ಮಪುತ್ರ ತೀರದ ಸಣ್ಣಹಳ್ಳಿಯ ಅದ್ಭುತ ಕಾರ್ಯ ನಮ್ಮ ಅಂತರಂಗವನ್ನೂ ಬಡಿದೆಬ್ಬಿಸಲಿ, ಜೀವನವನ್ನು ವಿಶಿಷ್ಟ ದೃಷ್ಟಿಕೋನದಿಂದ ನೋಡುವುದಕ್ಕೆ ಪ್ರೇರೇಪಿಸಲಿ.

Leave a Reply

Your email address will not be published. Required fields are marked *