ಮಾನವನು ಕೆಟ್ಟವನಲ್ಲ.ಆತನಲ್ಲಿರುವ ಅಜ್ಞಾನದ ಕತ್ತಲೆ ಅವನನ್ನು ಕೆಡಿಸಿದೆ

ಬಾಳೆಹೊನ್ನೂರು: ಮಾನವನು ಕೆಟ್ಟವನಲ್ಲ.ಆತನಲ್ಲಿರುವ ಅಜ್ಞಾನದ ಕತ್ತಲೆ ಅವನನ್ನು ಕೆಡಿಸಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಜ್ಞಾನದ ಕೊಳೆಯನ್ನು ಮೊದಲು ನಾವು ಕಳೆದುಕೊಳ್ಳಬೇಕು. ಸಜ್ಜನರ ಮಾತೆಂದರೆ ಬೆಳಕಿನ ಹೊಳೆ. ಈ ಹೊಳೆಯಲ್ಲಿ ಮಿಂದು ಮಡಿವಂತನಾದರೆ ಜೀವನ ಸಾರ್ಥಕವಗುತ್ತದೆ ಎಂದರು.

ಪ್ರಾಪಂಚಿಕ ಸಂಬಂಧಗಳು ಧನ ಕನಕಾದಿ ವಸ್ತುಗಳನ್ನು ಆಶ್ರಯಿಸಿವೆ. ಬಯಕೆಗಳು ಪೂರ್ಣಗೊಳ್ಳದಿದ್ದರೆ ಸಂಬಂಧಗಳೂ ಶಿಥಿಲವಾಗುತ್ತವೆ. ಆದರೆ ಗುರು ಶಿಷ್ಯರ ಸಂಬಂಧ ಹಾಗಲ್ಲ. ಗುರು ತಂಗಾಳಿಯಂತೆ ಸುಳಿದು ಶಿಷ್ಯನ ಭಾವ ಕುಸುಮ ವಿಕಸನಗೊಳಿಸುತ್ತಾನೆ. ಎಲ್ಲ ರಂಗಗಳಲ್ಲಿ ಕೆಟ್ಟಿದ್ದರೂ ಸಹ ಕೆಲವರು ಸತ್ಯ, ನೀತಿವಂತರು ಇರುವುದರಿಂದ ಈ ಜಗತ್ತು ಜೀವಿಸುತ್ತಿದೆ. ಸತ್ಯ ಧರ್ಮವನ್ನು ನಾಶಗೊಳಿಸಿದರೆ ಆಘಾತ ತಪ್ಪಿದ್ದಲ್ಲ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಚ್ಚರಿಸಿದ್ದಾರೆ. ಅರಿವಿನ ಹಾದಿಯಲ್ಲಿ ಮುನ್ನಡೆಸುವುದೇ ಗುರುವಿನ ಧರ್ಮ ಎಂದರು.

ಶ್ರೀಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿ, ಶಕ್ತಿಮಾತೆ ಚೌಡೇಶ್ವರಿ ಮತ್ತು ಶ್ರೀ ಸೋಮೇಶ್ವರ ಮಹಾಸ್ವಾಮಿಗೆ ಪೌರ್ಣಿಮೆ ನಿಮಿತ್ಯ ವಿಶೇಷ ಪೂಜೆ ಜರುಗಿತು. ಶ್ರೀಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೊಷ, ವೇ.ದಾರುಕಾಚಾರ್ಯ ಶಾಸ್ತ್ರಿಗಳಿಂದ ಭಕ್ತಿ ಗೀತೆ ಜರುಗಿತು.

ಶ್ರೀ ಬನಹಟ್ಟಿ ಸದಾನಂದ ಸ್ವಾಮೀಜಿ, ಲೋಕಾಪುರ ಸ್ವಾಮೀಜಿ, ಕಾರ್ಜುವಳ್ಳಿ ಶಂಭುಲಿಂಗ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷ ಗುರುದೇವ, ಶಿಕ್ಷಕ ವೀರೇಶ ಕುಲಕರ್ಣಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *