ಗುಜ್ಜಾಡಿ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗುಜ್ಜಾಡಿ ಗ್ರಾಮದ ಗುಜ್ಜಾಡಿ-ಕಂಚುಗೋಡು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾಗಿರುವ ಗುಜ್ಜಾಡಿ-ಕಂಚುಗೋಡು ರಸ್ತೆ , ಕಂಚುಗೋಡು, ಹೊಸಾಡು ಮತ್ತು ತ್ರಾಸಿ ಗ್ರಾಮಗಳನ್ನು ಬೆಸೆಯುವ ಪ್ರಮುಖ ರಸ್ತೆ. ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆಗೆ ಪರ್ಯಾಯ ರಸ್ತೆಯೂ ಆಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಸಂಪರ್ಕ ರಸ್ತೆ ಹಲವು ದಶಕಗಳಿಂದ ದುರಸ್ತಿ ಕಂಡಿಲ್ಲ. ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ರಸ್ತೆಗಳಲ್ಲಿ ಬಿದ್ದಿರುವ ಹೊಂಡಗಳಿಗೆ ತೇಪೆ ಹಾಕುವ ಕಾರ್ಯವೂ ನಡೆದಿಲ್ಲ. ಈಗ ರಸ್ತೆ ಮೇಲ್ಪದರ ಸಂಪೂರ್ಣ ಕಿತ್ತು ಹೋಗಿ ಜಲ್ಲಿಗಳು ರಸ್ತೆ ಮೇಲೆಲ್ಲ ಹರಡಿಕೊಂಡಿದೆ. ಹೀಗಾಗಿ ರಸ್ತೆಯಲ್ಲಿ ದ್ವಿಚಕ್ರ ಸಹಿತ ಇತರ ವಾಹನಗಳು ಸಂಚರಿಸಲು ಕಷ್ಟವಾಗುತ್ತಿದ್ದು, ಆಟೋ ರಿಕ್ಷಾದವರು ಈ ರಸ್ತೆ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.

ನಿರ್ಲಕ್ಷ್ಯ ಆರೋಪ: ಸುತ್ತಮುತ್ತಲಿನ ಪ್ರದೇಶದ ಹಲವು ರಸ್ತೆಗಳು ಅಭಿವೃದ್ಧಿಗೊಂಡಿದ್ದರೂ ಗುಜ್ಜಾಡಿ-ಕಂಚುಗೋಡು ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತಾಳಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ. ಈ ಮಾರ್ಗದಲ್ಲಿ ನೂರಕ್ಕೂ ಅಧಿಕ ಮನೆಗಳಿದ್ದು ಗುಜ್ಜಾಡಿ, ಬೆಣ್ಗೆರೆ, ಕಂಚುಗೋಡು ಮೊದಲಾದ ಪ್ರದೇಶಗಳಲ್ಲಿ ಮೀನುಗಾರಿಕೆ ಹಾಗೂ ಇನ್ನಿತರ ಕೂಲಿ ಕೆಲಸ ಮಾಡುವವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಪರಿಸರದ ಜನರು ಗುಜ್ಜಾಡಿ, ತ್ರಾಸಿ ಹಾಗೂ ಗಂಗೊಳ್ಳಿಗೆ ಬರಲು ಇದೇ ರಸ್ತೆ ಅವಲಂಬಿಸಿದ್ದಾರೆ.

ಸ್ಪಂದಿಸದ ಜನಪ್ರತಿನಿಧಿಗಳು: ಅನೇಕ ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಜನಪ್ರತಿನಿಧಿಗಳು ಇತ್ತ ಕಣ್ಣೆತ್ತಿಯೂ ನೋಡಿಲ್ಲ. ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಗಳು ಹುಸಿಯಾಗುತ್ತಿದೆ. ಓಟಿಗಾಗಿ ರಸ್ತೆ ಬಳಸಿಕೊಳ್ಳುವ ರಾಜಕೀಯ ನಾಯಕರು ಚುನಾವಣೆ ಬಳಿಕ ಈ ವಿಚಾರವನ್ನೇ ಮರೆತು ಬಿಡುತ್ತಿದ್ದಾರೆ. ಈ ಭಾಗದ ಜನರ ಸಮಸ್ಯೆ ಕೇಳುವವರೇ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಆದಷ್ಟು ಶೀಘ್ರ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಗುಜ್ಜಾಡಿ-ಕಂಚುಗೋಡು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ತ್ರಾಸದಾಯಕವಾಗಿದೆ. ರಸ್ತೆ ಅಭಿವೃದ್ಧಿ ಬೇಡಿಕೆಗೆ ಈವರೆಗೆ ಸ್ಪಂದನೆ ದೊರೆತಿಲ್ಲ. ಜನಪ್ರತಿನಿಧಿಗಳು ಆಶ್ವಾಸನೆ ನೀಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಣ್ಗೆರೆ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
| ಮಹೇಶ್ ಗಾಣಿಗ, ಗ್ರಾಮಸ್ಥರು, ಗುಜ್ಜಾಡಿ