blank

ಬದುಕಿನ ಅರ್ಥ ಅರಿತರೆ…

Nature

sujatha ಸುಜಾತಾ ಕುಲಕರ್ಣಿ ಛಬ್ಬಿ
ಒಬ್ಬ ರಾಜನಿಗೆ ತಾನು ಚಿರಂಜೀವಿಯಾಗಬೇಕೆಂಬ ಆಸೆ ಬಂದಿತು. ಧನ್ವಂತರಿಗಳನ್ನು ಕೇಳಿದ. ಜ್ಞಾನಿಗಳಲ್ಲಿ ವಿಚಾರಿಸಿದ. ವಿದ್ವಾಂಸರಲ್ಲಿ ಸಮಾಲೋಚಿಸಿದ. ಯಾರೂ ದಾರಿ ತೋರದಾದರು. ಕೊನೆಗೊಬ್ಬರು ಸಮೀಪದ ಅಡವಿಯಲ್ಲಿ ವಾಸಿಸುತ್ತಿರುವ ಸಂನ್ಯಾಸಿಯ ಬಳಿಗೆ ಹೋದರೆ ದಾರಿ ತೋರಬಹುದೆಂದು ಸಲಹೆ ಮಾಡಿದರು. ಅದರಂತೆ ಸಂನ್ಯಾಸಿಯನ್ನು ಭೇಟಿಯಾದಾಗ ಆತ, ‘ಇಲ್ಲಿಂದ ಪೂರ್ವದಿಕ್ಕಿನೆಡೆ ನೂರು ಹೆಜ್ಜೆ ನಡೆದರೆ ಅಲ್ಲೊಂದು ಸರೋವರವಿದೆ. ಸರೋವರದ ನೀರನ್ನು ಒಂದು ಬೊಗಸೆ ಕುಡಿ, ನಿನಗೆ ಅಮರತ್ವ ಪ್ರಾಪ್ತವಾಗುತ್ತದೆ’ ಎಂದು ಹೇಳಿದ. ರಾಜ ಸರೋವರವನ್ನು ಸಮೀಪಿಸಿದಂತೆ ನೀರಿನಿಂದ ಹೊರಡುತ್ತಿದ್ದ ದುರ್ವಾಸನೆ ಮೂಗಿಗೆ ಬಡಿಯಿತು. ಸರೋವರದ ತುಂಬ ಮುದಿಯಾದ ಮೊಸಳೆಗಳು ತೇಲುತ್ತಿದವು. ಅವುಗಳ ಚರ್ಮ ಸುಕ್ಕುಗಟ್ಟಿ ಕೈ ಮುಟ್ಟಿದರೆ ಕಿತ್ತು ಬರುವಂತೆ ತೋರುತ್ತಿತ್ತು. ಬದುಕಿಗಿಂತ ಸಾವೇ ಅವುಗಳಿಗೆ ಒಳಿತು ಎನ್ನುವಂತಿತ್ತು, ಅವುಗಳ ಸ್ಥಿತಿ. ರಾಜ ಒಂದು ಮೊಸಳೆಯನ್ನು ಕೇಳಿದ, ‘ಇಷ್ಟೆಲ್ಲ ಸಂಕಷ್ಟದಲ್ಲಿ ಬದುಕುವುದಕ್ಕಿಂತ ಸಾಯಬಾರದೇಕೆ?’ ಅದಕ್ಕೆ ಮೊಸಳೆ ಹೇಳಿತು, ‘ಸ್ವಾಮಿ ನನಗಂತೂ ಹಲವು ನೂರು ವರ್ಷಗಳಿಂದ ಈ ಬದುಕನ್ನು ಬಾಳಿ ಸಾಕಾಗಿಹೋಗಿದೆ. ಸಾವು ಬಂದು ಒಯ್ಯಬಾರದೆ ಎಂದು ನಿತ್ಯವೂ ಪ್ರಾರ್ಥಿಸುತ್ತೇನೆ. ಆದರೇನು ಮಾಡುವುದು? ನಾನು ಈ ಸರೋವರದ ನೀರನ್ನು ಕುಡಿದು ಅಮರನಾಗಿದ್ದೇನಲ್ಲ.’

ಕ್ಷಣಕಾಲ ರಾಜನ ಮೈಕಂಪಿಸಿತು. ಸರೋವರದ ನೀರನ್ನು ಕುಡಿಯದೆ ಮತ್ತೆ ಸಂನ್ಯಾಸಿಯ ಬಳಿಗೆ ಮರಳಿ, ‘ನನಗೆ ಮೊಸಳೆಗಳಿಗೆ ಲಭ್ಯವಾಗಿರುವಂಥ ಅಮರತ್ವ ಬೇಡ. ಚಿರಯೌವನವನ್ನು ದಯಪಾಲಿಸಿ’ ಎಂದ. ಸಂನ್ಯಾಸಿ ಹೇಳಿದ, ‘ಇಲ್ಲಿಂದ ಪಶ್ಚಿಮದಿಕ್ಕಿನೆಡೆ ನೂರು ಹೆಜ್ಜೆ ನಡೆದರೆ ಒಂದು ಮಾವಿನ ತೋಪು ಕಾಣಿಸುತ್ತದೆ. ಗಿಡಗಳ ತುಂಬ ಹಣ್ಣುಗಳಿವೆ. ಒಂದು ಹಣ್ಣನ್ನು ತಿಂದರೆ ಸಾಕು, ನೀನು ಅಜರನಾಗುತ್ತೀಯ’. ರಾಜ ಮಾವಿನ ತೋಪನ್ನು ಸಮೀಪಿಸುತ್ತಿದ್ದಂತೆ ಅಲ್ಲಿ ಅನೇಕ ರಾಜಕುಮಾರರು ಕತ್ತಿ ಹಿಡಿದು ಕಾದಾಡುತ್ತಿದ್ದರು. ರಾಜ ಜಗಳಕ್ಕೆ ಕಾರಣ ವಿಚಾರಿಸಿದ. ಅವರಲ್ಲೊಬ್ಬ ಹೇಳಿದ, ‘ನಾನೊಬ್ಬ ರಾಜಕುಮಾರ. ಈತ ನನ್ನ ತಂದೆ. ನನ್ನ ತಂದೆ ರಾಜ್ಯವನ್ನು ನನಗೆ ವಹಿಸಿಕೊಡಬಹುದೆಂದು ಹಲವು ನೂರು ವರ್ಷಗಳು ಕಾದೆ. ಪ್ರಯೋಜನವಾಗಲಿಲ್ಲ. ಹೋರಾಡಿಯಾದರೂ ಅದನ್ನು ಪಡೆಯಬೇಕೆಂದಿದ್ದೇನೆ’. ಅದಕ್ಕೆ ತಂದೆ ಹೇಳಿದ, ‘ಇನ್ನೂ ನನ್ನ ತಂದೆಯಿಂದಲೇ ರಾಜ್ಯ ನನಗೆ ಬಾರದಿರುವಾಗ ಮಗನಿಗೆ ಹೇಗೆ ವಹಿಸಿಕೊಡಲಿ?’ ‘ನಿನ್ನ ತಂದೆ ಎಲ್ಲಿ?’ ಎಂದು ಕೇಳಲು, ‘ಇದೇ ಕಾರಣಕ್ಕಾಗಿ ತನ್ನ ತಂದೆಯೊಡನೆ ಇನ್ನೊಂದು ಕಡೆ ಕಾಳಗದಲ್ಲಿ ತೊಡಗಿದ್ದಾನೆ’ ಎಂದ, ಅವರೆಲ್ಲ ಆ ಮರದ ಹಣ್ಣುಗಳನ್ನು ತಿಂದು ಅಜರರಾಗಿದ್ದರು.

ರಾಜ ಸಂನ್ಯಾಸಿಯಲ್ಲಿಗೆ ಹಿಂತಿರುಗಿ, ‘ನಾನು ಬೇಡಿದ ಅಜರತ್ವ, ಅಮರತ್ವಗಳು ಎಷ್ಟು ಮಿಥ್ಯ ಎಂಬುದು ಅರಿವಿಗೆ ಬಂದಿದೆ. ನೀವು ನನಗೆ ನಿಜವಾದ ಅಮರತ್ವ ದಯಪಾಲಿಸಬೇಕು’ ಎಂದ. ಸಂನ್ಯಾಸಿಯು, ‘ನಿನ್ನಲ್ಲಿ ಎಲ್ಲಿಯವರೆಗೆ ಉತ್ಸಾಹದ ಚಿಲುಮೆ ಬತ್ತದೆ ಇರುತ್ತದೆಯೋ ಅಲ್ಲಿಯವರೆಗೆ ಯೌವನ ನಿನ್ನ ಜೊತೆಗಿರುತ್ತದೆ. ಹಾಗಾಗಿ, ಸದಾ ಕಾರ್ಯಶೀಲನಾಗಿರು. ಬದುಕಿರುವವರೆಗೆ ಪರೋಪಕಾರವನ್ನು ಮಾಡು. ಆಗ ನಿನಗೆ ನಿಜವಾದ ಅಮರತ್ವ ಪ್ರಾಪ್ತವಾಗುತ್ತದೆ’ ಎಂದು ಹೇಳಿ ರಾಜನನ್ನು ಹರಸಿ ಕಳುಹಿಸಿದ. ಜೀವನದ ರಹಸ್ಯ ಇಷ್ಟೇ ಅಲ್ಲವೇ?

(ಲೇಖಕರು ಸಹ ಪ್ರಾಧ್ಯಾಪಕರು)

Border-Gavaskar ಟ್ರೋಫಿಯ ಮೂರನೇ ಪಂದ್ಯಕ್ಕೆ ಎದುರಾಯ್ತು ಮಳೆ ಭೀತಿ; ಗಾಬಾ ಪಿಚ್​ ಯಾರಿಗೆ ಸಹಕಾರಿ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Rohit Sharma ಕ್ರಿಕೆಟ್​ನಲ್ಲಿ ಹೆಚ್ಚು ದಿನ ಆಡುವ ಸಾಧ್ಯತೆಗಳಿಲ್ಲ; ಹಿಟ್​ಮ್ಯಾನ್​ ಕುರಿತು ಶಾಕಿಂಗ್​​ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

Share This Article

ಪ್ರಿ-ಡಯಾಬಿಟಿಸ್​ ಇರುವವರು ಈ ಆಹಾರದಿಂದ ಅಂತರ ಕಾಯ್ದುಕೊಳ್ಳಿ; ಮಿಸ್​ ಆದ್ರೆ ಅಪಾಯ ತಪ್ಪಿದ್ದಲ್ಲ | Health Tips

ಇಂದಿನ ಕಾಲದಲ್ಲಿ ಮಧುಮೇಹವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು ಅದನ್ನು ಗುಣಪಡಿಸಲಾಗದು. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು…

ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಏನನ್ನೂ ಸೂಚಿಸುತ್ತದೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಕಪ್ಪು ಕಣ್ಣು(Black Eye) ಎಂಬುದು ಕಣ್ಣು ಅಥವಾ ಸುತ್ತಮುತ್ತಲಿನ ಅಂಗಾಂಶಗಳಿಗೆ ಗಾಯದ ನಂತರ ಕಣ್ಣಿನ ಸುತ್ತ…

ಸೇಬು ಹಣ್ಣು ತಿಂದ ತಕ್ಷಣ ನೀರು ಕುಡಿಯಬಾರದು! Apple ತಿಂದು ಯಾಕೆ ನೀರು ಕುಡಿಯಬಾರದು ಗೊತ್ತಾ?

Apple: ಸಾಮಾನ್ಯವಾಗಿ ದಿನಕ್ಕೆ ಒಂದು ಸೇಬು ಹಣ್ಣು ತಿಂದರೆ ವೈದ್ಯರ ಬಳಿಗೆ ಹೋಗುವ ಅಗತ್ಯವಿಲ್ಲ ಎಂದು…