ರಿಪ್ಪನ್‌ಪೇಟೆ: ಮನುಷ್ಯ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾನೆ. ಆದರೆ ದೊಡ್ಡವನಾಗಿ ಬಾಳಲು ಯತ್ನಿಸುತ್ತಿಲ್ಲ. ದೊಡ್ಡ ಮನಸ್ಸು, ದೊಡ್ಡ ಗುಣದಿಂದ ದೊಡ್ಡಸ್ತಿಕೆ ಸಿಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮಳಲಿ ಸಂಸ್ಥಾನ ಮಠದಲ್ಲಿ ಗುರುವಾರ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸತ್ಯ ಮತ್ತು ಧರ್ಮವನ್ನು ಅರಿತು ಬಾಳುವುದರಿಂದ ಜೀವನದಲ್ಲಿ ಸುಖ, ಶಾಂತಿ ಪ್ರಾಪ್ತವಾಗುತ್ತದೆ ಎಂದರು.
ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ನೆರಳಿನಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು. ದುರ್ಜನರ ಒಡನಾಟದಿಂದ ಬದುಕು ಸರ್ವನಾಶವಾಗುತ್ತದೆ. ಮೌಢ್ಯ ಎಂಬ ಅಂಧಕಾರವನ್ನು ಕಳೆದು ಶಿವಜ್ಞಾನದ ಅರಿವನ್ನು ಗುರುವಿನಿಂದ ಪಡೆಯಲು ಸಾಧ್ಯ. ಶಿವಪಥವನರಿಯಲು ಗುರು ಬೋಧಾಮೃತ ಅವಶ್ಯಕ ಎಂದು ತಿಳಿಸಿದರು.
ಹೊರಗಿನ ಕತ್ತಲೆಯನ್ನು ಸೂರ್ಯ ಕಳೆಯುತ್ತಾನೆ. ಅಂತರಂಗದಲ್ಲಿನ ಅಜ್ಞಾನವನ್ನು ಗುರು ಕಳೆಯುತ್ತಾನೆ. ಪ್ರತಿ ವರ್ಷ ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯಲು ಈ ಭಾಗದ ಭಕ್ತರು ಕಾರಣ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಗುರಿಯಿಲ್ಲದ, ಗುರಿ ಸಾಧಿಸದ ಬದುಕು ನಿರರ್ಥಕ. ಪ್ರಾಣ, ಯೌವನ ಕಾಲ ಒಮ್ಮೆ ಕಳೆದರೆ ತಿರುಗಿ ಬರಲಾರವು. ಶ್ರಮದ ಬೆವರಿನ ಲ ಶಾಶ್ವತ ಮತ್ತು ಸುಖದಾಯಕ. ವೀರಶೈವ ಧರ್ಮದ ಮಠಗಳು ಭಕ್ತರ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಿವೆ ಎಂದು ಹೇಳಿದರು.
ಮಳಲಿ ಸಂಸ್ಥಾನ ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಜೀವನ ಸಮೃದ್ಧಿ ಮತ್ತು ಶಾಂತಿಗೆ ದೈವಿ ಗುಣಗಳ ಅವಶ್ಯವಿದೆ. ನೀರು, ಗಾಳಿ, ಬೆಳಕು, ನೆಲ ಇವೆಲ್ಲವುಗಳನ್ನು ಕೊಟ್ಟ ಭಗವಂತನನ್ನು ನೆನಪಿಸಿಕೊಂಡು ಬಾಳುವುದು ನಮ್ಮೆಲ್ಲರ ಗುರಿಯಾಗಬೇಕು. ಕಾರ್ತಿಕ ದೀಪೋತ್ಸವ ಸಮಾರಂಭದಿಂದ ಭಕ್ತರ ಬಾಳಿನಲ್ಲಿ ಹೊಸ ಉತ್ಸಾಹ ಪ್ರಾಪ್ತವಾಗಲಿ ಎಂದರು.
ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಅವರು ಶ್ರೀಗುರು ಮಹಿಮೆ ಬಗ್ಗೆ ಉಪನ್ಯಾಸ ನೀಡಿದರು. ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯರು, ಬಂಕಾಪುರ ರೇವಣಸಿದ್ದೇಶ್ವರ ಶಿವಾಚಾರ್ಯರು, ಕವಲೇದುರ್ಗದ ಶ್ರೀ ಮರುಳಸಿದ್ಧ ಶಿವಾಚಾರ್ಯರು ವೀರಶೈವ ಹಿರಿಮೆ, ಗುರು ಮಹಿಮೆ ಕುರಿತು ಉಪನ್ಯಾಸ ನೀಡಿದರು.
ಧರ್ಮ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿದರು. ಶಾಂತಪುರ, ಬಿಳಕಿ, ಕೋಣಂದೂರು, ಸಂಗೊಳ್ಳಿ, ತಾವರೆಕೆರೆ, ಕಡೇನಂದಿಹಳ್ಳಿ, ಹನಮಾಪುರ, ಹಾರನಹಳ್ಳಿ, ಸಿಂದಗಿ ಶ್ರೀಗಳು ಪಾಲ್ಗೊಂಡಿದ್ದರು. ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಆಪ್‌ಕೋಸ್ ಅಧ್ಯಕ್ಷ ಇಂದೂಧರ ಗೌಡ, ಉದ್ಯಮಿ ಕೆ.ಆರ್.ಪ್ರಕಾಶ, ಮುಖಂಡರಾದ ಜಗದೀಶ್, ಚನ್ನಬಸಪ್ಪ ಗೌಡ, ಬಿ.ಯುವರಾಜ, ವೀರೇಶ್ ಅಲುವಳ್ಳಿ, ಎಚ್.ಎಸ್.ಈಶ್ವರಪ್ಪ ಇತರರಿದ್ದರು.
ಪ್ರಶಾಂತ ರಿಪ್ಪನ್‌ಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಕಾಶ ಪಾಟೀಲ ಕಗ್ಗಲಿ ಸ್ವಾಗತಿಸಿದರು. ಬಿ.ಎಂ.ಸುರೇಶ, ನಾಗರತ್ನಮ್ಮ ಚಂದ್ರಶೇಖರಯ್ಯ ಅವರಿಂದ ಸಂಗೀತ ಸೌರಭ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅರಿತು ಬಾಳಿದರೆ ಸುಖ, ಶಾಂತಿ ಪ್ರಾಪ್ತಿ
You Might Also Like
ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits
Goat Milk Health Benefits : ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…
ಪೋಷಕರೇ ಹುಷಾರ್! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips
Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…
ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?
ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…