ಭಕ್ತಿ ಮಾರ್ಗದಲ್ಲಿ ಸಾಗಿದರೆ ಬದುಕಿನಲ್ಲಿ ಉನ್ನತಿ

ಅರಕಲಗೂಡು: ಭಾರತೀಯ ಸನಾತನ ಪರಂಪರೆಯ ಪ್ರತೀಕವಾಗಿರುವ ಪ್ರಾಚೀನ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳುವ ಮೂಲಕ ಭಕ್ತಿ ಮಾರ್ಗದಲ್ಲಿ ಸಾಗಿದರೆ ಬದುಕಿನಲ್ಲಿ ಉನ್ನತಿ, ನೆಮ್ಮದಿ ಕಂಡುಕೊಳ್ಳಬಹುದು ಎಂದು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹೇಳಿದರು.


ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಬುಧವಾರ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತದಲ್ಲಿ ಇಂದಿಗೂ ಬಡತನ, ಊಟಕ್ಕೆ ತೊಂದರೆ ಇರಬಹುದು, ಮನೆ ಕಟ್ಟಲು ತೊಂದರೆ ಇರಬಹುದು. ಆದರೆ, ಭಕ್ತಿಗೆ ಯಾವತ್ತೂ ಕೊರತೆ ಇಲ್ಲ. ದೇಶ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಂಪತ್ಭರಿತವಾಗಿದೆ. ಭಾರತೀಯರಲ್ಲಿ ಭಕ್ತಿ, ಭಾವನೆ ರಕ್ತಗತವಾಗಿ ಬಂದಿದೆ. ಭಗವಂತನಲ್ಲಿ ನಂಬಿಕೆ, ವಿಶ್ವಾಸ, ನಿಷ್ಠೆ ಭಾರತೀಯರಲ್ಲಿ ಬಂದಿದೆ. ಭಗವಂತನ ಬಿಟ್ಟು ಭಕ್ತರಿರಲು ಸಾಧ್ಯವಿಲ್ಲ. ಹಾಗೆಯೇ, ಭಕ್ತರನ್ನು ಬಿಟ್ಟು ಭಗವಂತ ಇರಲು ಸಾಧ್ಯವಿಲ್ಲ. ಭಗವಂತನಲ್ಲಿ ನಂಬಿಕೆ, ವಿಶ್ವಾಸ ಇರಬೇಕು. ಭಗವಂತನ ಅಸ್ತಿತ್ವದ ಬಗ್ಗೆ ಮನುಷ್ಯನಿಗೆ ಸಂಶಯ ಇರಬಾರದು. ಭಗವಂತ ಜಗತ್ತನೆಲ್ಲಾ ವ್ಯಾಪಿಸಿದ್ದಾನೆ. ಅದರ ಬಗ್ಗೆ ನಂಬಿಕೆ, ವಿಶ್ವಾಸ ಇಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದರು.


ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದಿರಬಹುದು. ಜಗತ್ತಿನಲ್ಲಿ ಬಹಳಷ್ಟು ಆವಿಷ್ಕಾರಗಳಾಗಿರಬಹುದು. ಆದರೆ ಮನುಷ್ಯ ಬದುಕಲು ಗಾಳಿಯನ್ನು ತಯಾರಿಸಲಾಗಲ್ಲ. ಒಂದು ಕಾಳನ್ನು ವಿಜ್ಞಾನ ತಯಾರಿಸಲಾಗಲ್ಲ. ಭಗವಂತ ನೀಡಿದ ಕಾಳನ್ನೇ ಸೇವಿಸಬೇಕು. ಮನುಷ್ಯನಿಗೆ ಎಷ್ಟೇ ಅದ್ಭುತ ಶಕ್ತಿ ಇದ್ದರೂ ಭಗವಂತನ ಶಕ್ತಿಯ ಮುಂದೆ ಸಮನಾಗಿ ನಿಲ್ಲಲಾಗುವುದಿಲ್ಲ. ಅಂತಹ ನಂಬಿಕೆ, ವಿಶ್ವಾಸ ಮೂಡಲು ದೇವಸ್ಥಾನಗಳು ಸಹಕಾರಿಯಾಗಿವೆ ಎಂದು ಹೇಳಿದರು.


ಒಮ್ಮೆ ಆಂಜನೇಯನಿಗೆ ಸಮುದ್ರ ದಾಟಲು ಸಮಸ್ಯೆ ಎದುರಾಗುತ್ತದೆ. ಈ ವೇಳೆ ಹನುಮ ಸೈನ್ಯ ನಾವು ನಿಮ್ಮೊಂದಿಗಿದ್ದೇವೆ. ನಮ್ಮ ಶಕ್ತಿ ಸ್ವರೂಪಿಯಾಗಿ ನೀವು ಸಮುದ್ರ ದಾಟಬೇಕೆಂದಾಗ ಆಂಜನೇಯ ಸಮುದ್ರ ದಾಟುತ್ತಾನೆ. ಅಂದರೆ, ಎಲ್ಲಿ ಜನಶಕ್ತಿ, ಜನ ಸಮುದಾಯ ಒಂದಾಗಿರುತ್ತೋ ಅವರಿಗೆ ಅಸಾಧ್ಯವಾದುದು ಯಾವುದು ಇರುವುದಿಲ್ಲ ಎಂಬುದಕ್ಕೆ ಆಂಜನೇಯ ಸಮುದ್ರ ದಾಟಿದ್ದೇ ಉದಾಹರಣೆ. ಈ ಕಲಿಯುಗದಲ್ಲಿ ಮಹತ್ವವಾದುದು ಸಂಘ ಶಕ್ತಿ. ಸಾಂಘಿಕವಾಗಿ ಮನುಷ್ಯ ಯಾವುದೇ ಕೆಲಸ ಮಾಡಿದರೂ ಯಶಸ್ವಿಯಾಗುತ್ತಾನೆ ಎಂಬುದು ಈ ಪ್ರಸಂಗದಿಂದ ತಿಳಿಯುತ್ತದೆ. ಅಂತಹ ವೀರಾಂಜನೇಯ ದೇವಸ್ಥಾನ ಜಿರ್ಣೋದ್ಧಾರ ಮಾಡಿ ಉದ್ಘಾಟಿಸಿರುವುದು ಪುಣ್ಯದ ಕಾಯಕವಾಗಿದೆ ಎಂದು ಹೇಳಿದರು.


ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜತೆಗೆ ಇನ್ನೊಂದು ದೇವಸ್ಥಾನ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದು, ಅದರ ಸಂಪೂರ್ಣ ಖರ್ಚುನ್ನು ಭರಿಸುವುದಾಗಿ ಭರವಸೆ ನೀಡಿದರು.


ಶಾಸಕ ಎ. ಮಂಜು ಮಾತನಾಡಿ, ದೇವಸ್ಥಾನವನ್ನು 7 ತಿಂಗಳೊಳಗೆ ಪೂರ್ಣಗೊಳಿಸಿರುವುದು ಸಂತೋಷದ ವಿಷಯ. ದೇವಸ್ಥಾನ ಮತ್ತು ಶಾಲೆ ಊರಿಗೊಂದು ಕಿರೀಟವಿದ್ದಂತೆ. ಹಾಗಾಗಿ ದೇವಸ್ಥಾನ ನಿರ್ಮಿಸಿ ಹಾಗೆ ಬಿಡದೆ ನಿತ್ಯ ದೀಪ ಹಚ್ಚಬೇಕು ಎಂದು ಹೇಳಿದರು.


ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕನಕ ಗುರು ಪೀಠ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ತೇಜೂರು ಮಠದ ಶ್ರೀ ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಟಿ. ಮಾಯಿಗೌಡನಹಳ್ಳಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವಾಪಟ್ಟಣ ಶ್ರೀ ತೊಂಟಾದರ್ಯ ಮಠದ ಶ್ರೀ ಸ್ವತಂತ್ರಲಿಂಗ ಶಿವಯೋಗಿ ಸ್ವಾಮೀಜಿ, ಕೊಡ್ಲಿಪೇಟೆ ಶ್ರೀ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಕಿರುಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕೆಸವತ್ತೂರು ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಜೆಡಿಎಸ್ ಮುಖಂಡರಾದ ಮುದ್ದನಹಳ್ಳಿ ರಮೇಶ್, ಯೋಗೇಶ್, ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಂತೋಷ್ ಶಣವಿನಕುಪ್ಪೆ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್. ರವಿಕುಮಾರ್, ಸಮಾಜ ಸೇವಕ ದಿವಾಕರಗೌಡ ಇತರರು ಇದ್ದರು.


ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಅಭಿಷೇಕ, ಅರ್ಚನೆ, ಪ್ರಾಣಪ್ರತಿಷ್ಠಾಪನೆ, ಶಿಖರ ಕಲಶ ಸ್ಥಾಪನೆ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಸಾಮೂಹಿಕ ದಾಸೋಹ ನಡೆಯಿತು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…