ಬಸವನಬಾಗೇವಾಡಿ: ಸಾಧನೆಯ ಶಿಖರದ ಗರಿಮುಟ್ಟಲು ಹತ್ತಾರು ಅಡೆತಡೆಗಳು ನಮ್ಮ ಬದುಕಿನಲ್ಲಿ ಬರುತ್ತವೆ. ಅವುಗಳನ್ನು ಎದುರಿಸಿದಾಗ ಮಾತ್ರ ನಮ್ಮ ಸಾಧನೆಯ ಶಿಖರವನ್ನುಮುಟ್ಟಲು ಸಾಧ್ಯ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಕೆಲೂರ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಒಳಾವರಣದಲ್ಲಿರುವ ಬಸವೇಶ್ವರ ಕಲ್ಯಾಣಮಂಟಪದಲ್ಲಿ ಬುಧವಾರ ಅಕ್ಕನಾಗಮ್ಮ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ 2023/24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಕಲ್ಲು ಉಳಿಯ ಪೆಟ್ಟನ್ನು ತಿಂದಾಗ ಅದು ಒಂದು ಮೂರ್ತಿಯಾಗುತ್ತದೆ. ಅದರಂತೆ ನಾವು ಕಷ್ಟಗಳಿಗೆ ಹೆದರದೆ ಅದನ್ನು ಸಹಿಸಿಕೊಳ್ಳಬೇಕು. ಮಕ್ಕಳ ಬದುಕಿನ ಬುನಾದಿ 6ರಿಂದ 10ನೇ ತರಗತಿ. ಈ ಅವಧಿಯಲ್ಲಿ ಗಟ್ಟಿಯಾಗಿ ತಳಪಾಯ ಹಾಕಿದರೆ ತಮ್ಮ ಮುಂದಿನ ಬದುಕು ಮತ್ತು ತಾವು ಸಾಧಿಸಬೇಕೆಂಬ ಆಸೆಗಳು ಈಡೇರಲು ಸುಲಭವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿರಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಜ್ಞಾನದ ಶಕ್ತಿ ಕಡಿತವಾಗುತ್ತದೆ. ಹೀಗಾಗಿ ಅದರಿಂದ ಆದಷ್ಟು ದೂರವಿರುವುದು ಸೂಕ್ತ. ಸಾಧನೆ ಸೋಮಾರಿಗಳ ಸ್ವತ್ತಲ್ಲ. ಸಾಧನೆಯ ಗುರಿ ಮುಟ್ಟಬೇಕಾದರೆ ನಿರಂತರ ಪರಿಶ್ರಮ ಅವಶ್ಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಬಾಬು ಕೆಂಬಾವಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಲಹಾ ಸಮಿತಿ ಅಧ್ಯಕ್ಷ ಭರತ್ ಅಗರವಾಲ, ಪುರಸಭೆ ಸದಸ್ಯ ದೇವೆಂದ್ರ ನಾಯಕ, ಕ್ಷೇತ್ರ ಸಮನ್ವಯ ಅಧಿಕಾರಿ ಪಿ.ಯು. ರಾಠೋಡ, ನಿವೃತ್ತ ಸೈನಿಕ ಶರಣಗೌಡ ಬಿರಾದಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಬೆಣ್ಣೂರ, ಮುರಗೇಶ ನಾಯ್ಕೋಡಿ, ಶಿವಲಿಂಗ ಕಿಣಗಿ, ಎಸ್.ಎ. ದೇಗಿನಾಳ, ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಪಿ.ಎಚ್. ಡವಳಗಿ, ಶಿಕ್ಷಕಿ ಆರ್.ಐ. ಗಬ್ಬೂರ ಇತರರಿದ್ದರು.
ಶಿಕ್ಷಕ ಶಿವಕುಮಾರ ಹುಲಸೂರ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು. ಸ್ನೇಹಾ ಪೂಜಾರಿ ವಂದಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.