ನವದೆಹಲಿ: ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಹೋಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಅಲ್ಲಿ ಚೀನಾದ ರಕ್ಷಣಾ ಸಚಿವ ಜನರಲ್ ವೈ ಫೆಂಗಿ ಅವರನ್ನು ಭೇಟಿಯಾಗಿದ್ದಾರೆ.
ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಬಳಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ರಾಜನಾಥ್ ಸಿಂಗ್ ಅವರು ಚೀನಾ ಅಂತಾರಾಷ್ಟ್ರೀಯ ಗಡಿಯಲ್ಲಿ ಶಿಸ್ತು ಪಾಲನೆ ಮಾಡಬೇಕು. ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾವಣೆ ಮಾಡಲು ಮುಂದಾಗಬಾರದು ಎಂದೂ ಖಡಕ್ ಆಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಷ್ಟೆಲ್ಲ ಆದಮೇಲೆ ಕೂಡ ಚೀನಾ ಯುದ್ಧದ ಬಗ್ಗೆ ಮಾತನಾಡುತ್ತಿದೆ. ಒಂದೊಮ್ಮೆ ಯುದ್ಧ ಶುರುವಾದರೆ ಭಾರತಕ್ಕೆ ಗೆಲ್ಲುವ ಅವಕಾಶವೇ ಇಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವಿಶ್ಲೇಷಿಸಿದೆ. ಇದನ್ನೂ ಓದಿ: ವೈದ್ಯ ವೃತ್ತಿ ಬಿಟ್ಟು ಆಟೋ ಚಾಲಕರಾದ್ರು: ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ!
ಚೀನಾದ ರಾಷ್ಟ್ರೀಯತೆಯ ಶಕ್ತಿ, ಸೇನಾ ಶಕ್ತಿಗಳು ಭಾರತಕ್ಕಿಂತ ಪ್ರಬಲವಾಗಿವೆ ಎಂಬುದನ್ನು ನಾವು ಮತ್ತೊಮ್ಮೆ ನೆನಪಿಸಲು ಬಯಸುತ್ತೇವೆ. ಭಾರತ ಮತ್ತು ಚೀನಾ ಎರಡೂ ದೇಶಗಳು ಮಹಾನ್ ಶಕ್ತಿಗಳೇ ಆಗಿದ್ದರೂ ಕೂಡ, ಯುದ್ಧ ಎಂದು ಕೊನೆಯ ಸ್ಪರ್ಧೆಗೆ ಬಂದಾಗ ಭಾರತ ಖಂಡಿತ ಸೋಲುತ್ತದೆ. ಒಂದೊಮ್ಮೆ ಗಡಿಯುದ್ಧ ಶುರುವಾದರೆ ಭಾರತ ಗೆಲ್ಲಲು ಅವಕಾಶವೇ ಇಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ, ಪ್ರಮುಖ ಮಾಧ್ಯಮ ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಬರೆಯಲಾಗಿದೆ.
ರಷ್ಯಾದಲ್ಲಿ ಎರಡೂ ದೇಶಗಳ ರಕ್ಷಣಾ ಮಂತ್ರಿಗಳೂ ಭೇಟಿಯಾಗಿ 2 ತಾಸಿಗೂ ಅಧಿಕ ಕಾಲ ಚರ್ಚೆ ನಡೆಸಿರುವುದು ಉಭಯ ದೇಶಗಳ ಪಾಲಿಗೆ ಮಹತ್ವದ ತಿರುವು. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಎರಡೂ ದೇಶಗಳೂ ಪ್ರಯತ್ನ ಮಾಡುತ್ತವೆ ಎಂಬ ನಂಬಿಕೆ ಇದೆ ಎಂದೂ ಸಂಪಾದಕೀಯದಲ್ಲಿ ಬರೆಯಲಾಗಿದೆ. (ಏಜೆನ್ಸೀಸ್)