More

    ಮನಸ್ಸು ಹತೋಟಿ ಇಲ್ಲದವರು ನಾಯಕರಾದರೆ?; ಡಾ.ಕೆ.ಎಸ್.ನಾರಾಯಣಾಚಾರ್ಯರ ಅಂಕಣ..

    ಮನಸ್ಸು ಹತೋಟಿ ಇಲ್ಲದವರು ನಾಯಕರಾದರೆ?; ಡಾ.ಕೆ.ಎಸ್.ನಾರಾಯಣಾಚಾರ್ಯರ ಅಂಕಣ..

    ಜಗತ್ತಿನ ಅನೇಕ ದುರಂತಾಧ್ಯಾಯಗಳ ಇತಿಹಾಸವನ್ನು ಅವಲೋಕಿಸಿ, ಇಲ್ಲಿ ಬರೆಯುತ್ತಿರುವ ಸಂಗತಿಗಳ, ತತ್ತ್ವಗಳ ವಿವೇಚನೆಯನ್ನು ನೀವೇ ಮಾಡಿಕೊಳ್ಳಿ. ‘ಹುಚ್ಚರು’ ಎನ್ನಬಾರದು. ಅದು ಅಸಂಸದೀಯ ಶಬ್ದ. ಮನಸ್ಸು ಸ್ಥಿಮಿತದಲ್ಲಿರದವರು ಎನ್ನಬೇಕು. ‘ವೊಲಟೈಲ್’ (volatile) ಎಂದರೆ ವಾಸಿ. ತಿಳಿಯದ ಶಬ್ದವಿದು. ಕನ್ನಡದಲ್ಲಿ ಹೇಳಿದರೆ ‘ಬೈಗುಳ’ವಾಗುತ್ತದೆ. ಸಂಸ್ಕೃತದಲ್ಲೋ, ಇಂಗ್ಲಿಷಿನಲ್ಲೋ ಹೇಳಿದರೆ ಗಂಭೀರ ಭಾಷೆಯಾದುದರಿಂದ, ಪರಕೀಯವಾದುದರಿಂದ ಅಪಾಯ ಕಡಿಮೆ. ಈ ಎಚ್ಚರಿಕೆ ಗಮನಿಸಿದ ಬಳಿಕ ಈಗ ಈ ಲೇಖನ ವಿಷಯಕ್ಕೆ ಬರೋಣ. ಆಂಜನೇಯನ ಒಂದು ಮಾತಿನಿಂದ ಆರಂಭಿಸೋಣ. ಅದು ಲಂಕಾ ಪುರಿಯನ್ನು ವಾಲಾಗ್ನಿಯಿಂದ ಸುಟ್ಟ ಬಳಿಕ, ಸಮುದ್ರದಲ್ಲಿ ಅದನ್ನು-ಅಗ್ನಿಯನ್ನು-ಆರಿಸುವಾಗ ಈ ವಿವೇಕದ ಮಾತನ್ನು ಆಡುತ್ತಾನೆ. ‘ಕ್ರುದ್ಧಃ ಕುರ್ಯಾತ್ ನ ಕಿಂ ಪಾಪಂ’-‘ಕೋಪಗೊಂಡವನು ಯಾವ ಪಾಪವನ್ನು ತಾನೇ ಮಾಡಲಾರ’ ಎಂಬ ರಿಯಲೈಸೇಷನ್! ಪ್ರಬುದ್ಧತೆ! ‘ಟೂ ಲೇಟ್’! ‘ಊರೇ ಸುಟ್ಟ ಮೇಲೆ, ಅಶೋಕ ವನ ಸುಡದಿರುತ್ತದೆಯೇ? ಸೀತೆ ಸುಟ್ಟು ಭಸ್ಮವಾಗದೆ ಇರುತ್ತಾಳೆಯೇ?’ ಎಂಬ ಪರಿತಾಪ! ಸದ್ಯಕ್ಕೆ ಸೀತೆ ಬದುಕಿದ್ದಳು, ಹನುಮಂತನ ‘ವಾಲಾಗ್ನಿಯೂ ಅವನನ್ನು ಸುಡದಿರಲಿ’-‘ಶೀತೋ ಭವ ಹನುಮತಃ’ ಎಂದು ಹರಸಿದ್ದವಳು.

    ಹನುಮಂತನ ವಾಲಾಗ್ನಿಯಲ್ಲಿದ್ದುದು ‘ಸೀತಾ ಶೋಕಾಗ್ನಿ’, ‘ದುಃಖದ ಬೆಂಕಿ’ ಎಂದು ಒಂದು ಸ್ತುತಿ ವರ್ಣಿಸುತ್ತದೆ. ಇರಲಿ. ಈಚೆಗೆ ಪಾಕಿಸ್ತಾನದ ಅಣುವಿಜ್ಞಾನಿಯೊಬ್ಬರು ಧೈರ್ಯ ಮಾಡಿ, ಒಂದು ಸತ್ಯವನ್ನು ಬಹಿರಂಗವಾಗಿ ಜಗತ್ತಿಗೆ, ಪಾಕಿಸ್ತಾನದ ಮುಸ್ಲಿಂರಿಗೆ, ಪಾಕ್ ಸೇನಾನಾಯಕರಿಗೆ ಗಮನಕ್ಕೆ ತಂದಿದ್ದಾರೆ. ಅದು ಹೀಗೆ: ‘ಪಾಕ್ ವಿಭಜಿತವಾಗಿ ಸ್ವತಂತ್ರ ರಾಷ್ಟ್ರವಾದಾಗ ಅದರ ಮೂಲಸ್ವರೂಪ, ರಾಷ್ಟ್ರದ ಧ್ಯೇಯ, ಅದು ಏತಕ್ಕಾಗಿ ಉದಯಿಸಿದ್ದು, ಏಕೆ ಬೇಕಿತ್ತು ಎಂಬ ವಿಷಯದಲ್ಲಿ ಜಿನ್ನಾ ಸಾಹೇಬರಿಗೆ ಗೊಂದಲವಿತ್ತು. “Confusion’ನಲ್ಲಿ ಹುಟ್ಟಿದ ದೇಶ ಆ ‘Confusion’ನಲ್ಲೇ ಇರುವುದು ಹೀಗೆ ಅಪರಿಹಾರ್ಯ; ಈ ಗೊಂದಲದಿಂದ ಪಾರಾದ ಬಾಂಗ್ಲಾದೇಶ ಹೇಗೆ ಇಂದು ಅಭಿವೃದ್ಧಿ ಪಥದಲ್ಲಿದೆ ಎಂದು ನೀವೇ ನೋಡಿ. ಇಸ್ಲಾಂಗೆ ಒಂದುಗೂಡಿಸುವ ಶಕ್ತಿ ಇದ್ದರೆ, ಪಾಕ್ ಪಠಾಣರು ಬಾಂಗ್ಲಾದೇಶದ ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುತ್ತಿರಲಿಲ್ಲ. ಭಾರತಕ್ಕೆ ಸ್ವರೂಪ, ಧ್ಯೇಯ, ಪರಂಪರೆ, ಗುರಿ ಎಲ್ಲ ಇದೆ. ಪಾಕ್​ಗೆ ಏನೂ ಇಲ್ಲ’ ಎಂದು ಹೇಳಿ, ತೇಪೆ ಹಾಕಲು, ಮೋದಿಯವರ ಬಗೆಗೆ ಒಂದೆರಡು ನಿಂದಾವಾಕ್ಯಗಳನ್ನೂ ಆಡಿದ್ದಾರೆ. ಹಿಂದೂ ಅತಿರೇಕ, ಉಗ್ರಗಾಮಿತ್ವಗಳು ಇಲ್ಲಿ ಇವರಿಂದ ಮೇಲೇಳಲು ಪಾಕ್ ನಾಯಕರೇ ಕಾರಣ ಎಂದು ಹೇಳಿದ್ದಾರೆ. ಈವರೆಗೆ ಅವರನ್ನು ಯಾರೂ ಟೀಕಿಸಿಯೂ ಇಲ್ಲ. ಕೊಂದೂ ಇಲ್ಲ. ಅಂದರೆ ಅಲ್ಲಿ ಎಲ್ಲೋ ಅರುಣೋದಯ ಆಗುತ್ತಿದೆ. ಈ ಜಿನ್ನಾ ಸಾಹೇಬರು ಯಾರು? ವಿವರ ಬೇಡ. ಅವರು ಅಸಮಾಧಾನ ಮನಸ್ಸಿನ, ‘ಡಿಸ್ಟ್ ರ್ಬಡ್’, ‘ಡಿಸ್ಯಾಟಿಸ್​ಫೈಡ್’ ಎಂಬ ಅವಿವೇಕಿ ವರ್ಗದಲ್ಲಿ ಸೇರಿದವರು. ಅದನ್ನೇ ‘ವೊಲಟೈಲ್’ ಎಂದದ್ದು. ದೃಢವಾಗಿ ನಿಲ್ಲದ ಅನಿಲಗಳಿಗೆ ಹಾಗೂ ಶೀಘ್ರ ಬೆಂಕಿ ಹತ್ತಿ್ತೊಳ್ಳುತ್ತವೆ ಎಂಬ ‘ಇನ್​ಫ್ಲೇಮಬಲ್’ ಎಂಬ ವರ್ಗದ ಹೈಡ್ರೋಜನ್ ರೀತಿಯ ಅನಿಲಗಳೂ ಈ ಜಾತಿಯವೇ! ಮನುಷ್ಯರಲ್ಲೂ ಈ ಅವಗುಣ ಸಂಪನ್ನ ವ್ಯಕ್ತಿಗಳಿರುತ್ತಾರೆ ಎಂಬುದಕ್ಕೆ ಜಿಲ್ಲೆ ಜಿಲ್ಲೆಗಳಲ್ಲೂ ಇಂದು ರಾಜಕೀಯ ಪುಢಾರಿಗಳನ್ನು ನಾನು, ನೀವೂ ಕಾಣುತ್ತಲೇ ಇದ್ದೇವೆ.

    ಇಂದಿರಾ ಗಾಂಧಿಯವರಲ್ಲಿ ‘ಷಿಜೋಫ್ರೇನಿಯಾ’ ಎಂಬ ಒಡೆದ ಮನಸ್ಸಿನ ಒಂದು ಹುಚ್ಚು ಬಗೆ, ಭಯ ಹಿಡಿದ ಮನಸ್ಸಿನ ಹುಚ್ಚಾಟದ ವ್ಯಾಧಿ ಇತ್ತು. ಅವರಿಂದಲೇ ನಿಜಲಿಂಗಪ್ಪ, ಅಜಯ್ ಘೋಷ್, ಕಾಮರಾಜರಂಥ ನುರಿತ, ನಿರ್ಭೀತ ಕಾಂಗ್ರೆಸ್ ನಾಯಕರಲ್ಲಿ ಭಯವಿದ್ದೇ ಕಾಂಗ್ರೆಸ್ಸನ್ನು ಒಡೆದು, ತುರ್ತು ಸ್ಥಿತಿ ಹೇರಿದರು. ಅರೆಸ್ಟ್ ಆದರು. ‘ಕಿಸ್ಸಾ ಕುರ್ಸಿ ಕಾ’ ರೇಸಿನಲ್ಲಿ ಸಿಕ್ಕರೂ, ಮಗನನ್ನೂ ಸಂಶಯಿಸಿದರು. ನೆಹ್ರೂಗೆ ಈ ರೋಗವಿತ್ತು. ಅವರು ದಿವಾನ್ ವಿಶ್ವೇಶ್ವರಯ್ಯ, ಜನರಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ, ರಾಜಾಜಿ, ಇಂಥ ಪ್ರಬುದ್ಧ ದೇಶಭಕ್ತರನ್ನು ನಂಬದೆ, ಸದಾ ಸಂಶಯಿಸುತ್ತ, ಅಗೌರವಿಸುತ್ತ, ಶತ್ರುಗಳನ್ನು ನಂಬಿ, ನಮ್ಮನ್ನೂ ಹಾಳುಮಾಡಿದರು. ಎಲ್ಲ ಕಡೆಯೂ ಇದೇ ಗೋಳು! ಹಿಟ್ಲರ್, ಸ್ಟಾಲಿನ್, ಮಾವೋ, ಲೆನಿನ್, ಇರಲಿ, ಬಿಡಿ.

    ಇತ್ತ ಸುಭಾಷರನ್ನೂ ನೆಹ್ರೂ ನಂಬಲಿಲ್ಲ. ದ್ವೇಷಿಸಿದರು. ಎಲ್ಲ ಪ್ರತಿಸ್ಪರ್ಧಿಗಳ ಭಯದಲ್ಲಿ ಜಯಪ್ರಕಾಶರನ್ನೂ, ಅಂಬೇಡ್ಕರರನ್ನೂ, ಸಂಶಯಿಸಿ, ಹೋದರು! ದೇಶದ ಗತಿ? ಮತ ಪ್ರವರ್ತಕರೋ? ಒಬ್ಬರು ತನ್ನನ್ನು ‘ದೇವದೂತ’-‘Messiah’ ಎಂದು ತಾವೇ ಘೋಷಿಸಿಕೊಂಡರು. ಆ ದೇಶದವರನ್ನು-ನಂಬದವರನ್ನು-ಸೇನೆ ಕಟ್ಟಿ ತಾವೇ ಕೊಂದರು. ಅದು ಸಾವಿರ ವರ್ಷಕ್ಕೂ ಮಿಕ್ಕ ಇತಿಹಾಸ! ಅನುಯಾಯಿಗಳು ಇಂದಿಗೂ ಇದೇ ರೋಲ್ ಮಾಡೆಲ್ ಅನುಸರಿಸಿರುವುದು ವಿಶ್ವಪ್ರಚುರವಾಗಿದೆ. ಮನಸ್ಸು ಪಕ್ವವಾಗಿ ಅರಳಿದವರ ರೀತಿ ಇದಲ್ಲ! ‘ನನ್ನಲ್ಲಿ ಶ್ರದ್ಧೆ ಇಲ್ಲದಿದ್ದರೂ ಸರಿ, ದೇವತಾವತಾರವನ್ನು ಉಪಾಸಿಸಿದವರೂ ಅವರೂ ನನ್ನವರೇ, ನನ್ನಡೆಗೇ ಬರುತ್ತಾರೆ’ ಎಂದ ಶ್ರೀಕೃಷ್ಣ. ಆ ವಿಶಾಲ ಹೃದಯ ಗೀತೆಯಲ್ಲಿದೆ, ಮಹಾಭಾರತದಲ್ಲಿದೆ, ನಮ್ಮ ಅವತಾರ ತತ್ತ್ವದಲ್ಲೇ, ವೇದದಲ್ಲೇ ಇದೆ. ಮನುಷ್ಯನ ಮನಸ್ಸಿಗೆ ದೃಢತೆ ತಂದುಕೊಡಲು ಒಂದು ಅಕೃತಕ ಶುದ್ಧ, ಶ್ರದ್ಧಾ ಬೇರು ಬೇಕು. ಬಾಂಗ್ಲಾದಲ್ಲಿ ಭಾಷಾಭಿಮಾನ ಇದ್ದೇ ಅವರು ಬೇರೆಯಾಗಿಯೂ ಉಳಿದರು. ಭಾರತಕ್ಕೆ, ಅಲ್ಲಿನ ಮುಲ್ಲಾ ಮೌಲ್ವಿಗಳನ್ನು ಬಿಟ್ಟರೆ, ರಾಜಕೀಯವಾಗಿಯೂ ತುಂಬ ಅಪಾಯವಿಲ್ಲ. ಪಾಕ್ ಹಾಗಲ್ಲ! ಸೇನೆಗೆ ಪಂಜಾಬಿ, ಸಿಂಧಿ, ಬಲೂಚಿ, ಫಕ್ತೂನಿ-ಯಾವ ಭಾಷೆಯಲ್ಲೂ ಶ್ರದ್ಧೆ ಇಲ್ಲ. ದ್ವೇಷ ಬದುಕಿಸುವುದಿಲ್ಲ! ಹಣ, ಅಧಿಕಾರ ಬದುಕಿಸುವುದಿಲ್ಲ. ಈ ದಾಹ, ಈ ಮೋಹ, ಮಾರಣಾಂತಿಕ! ಕಮ್ಯುನಿಸಂಗೆ ಬದುಕಿಸುವ ಶಕ್ತಿ ಇಲ್ಲ. ವಿಭಜಕ, ವಿಧ್ವಂಸಕ, ದ್ವೇಷ ಪ್ರಸರಣ ಪ್ರಣಾಳಿಯ ಯಾವ ಮತಕ್ಕೂ ಒಳಗೆ ಭಯ ಇದ್ದೇ ಇರುತ್ತದೆ. ಇಂದಿನ ಚೀನಾ ಸ್ಥಿತಿಯೂ ಇದೇ. ಇಂದಿನ ಕಾಂಗ್ರೆಸ್ ನಾಯಕರ ಸ್ಥಿತಿಯೂ ಇದೇ! ಅವರಿಗೆ ತಿಳಿದಿದೆ. ಮಾರಿಗುಡಿಯಲ್ಲಿ ವಧಶಿಲೆಯಲ್ಲಿ ತಲೆಯೊಡ್ಡಿದ್ದ ಕುರಿಯಂತೆ- ಅವರಿಗೆ ಭಯದಿಂದ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ.

    ಸೋನಿಯಾ ಕೂಡ ಇಂದಿರಾ ಮನಸ್ಥಿತಿಯ ಒಂದು ರೋಗಗ್ರಸ್ತೆ. Non-Security ಎಂಬ ಅಭದ್ರತೆಯ ಪೀಡೆಯಲ್ಲಿ ಆಕೆ ನಾಟಕ ಮಂಡಳಿ ಕಟ್ಟಿ ಅತೃಪ್ತರ ನಾಯಕಿಯಾಗಿ, ಒಂದು ಸರ್ಕಸ್ ಕಂಪನಿಯಂತೆ, ಆಡಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬೇಕು. ಸರ್ಕಸ್ ಎಂದೆನಲ್ಲ? ಪಳಗಿದ ಸಿಂಹ, ಹುಲಿ, ಆನೆ, ಕುದುರೆ, ಕೊನೆಗೆ ಒಂಟಿ ಚಕ್ರದ ಸೈಕಲ್ ಮೇಲೆ ಓಡುವ ತೆಳು ಶರೀರದ ಸುಂದರಿಯರೂ, ‘ಟ್ರೆಪೀಸ್’ ಎಂಬ ಹಿಡಿಕೆಯ ಹ್ಯಾಂಡಲ್​ಗಳಲ್ಲಿ, ಒಂದರಿಂದ ಇನ್ನೊಂದಕ್ಕೆ ಜಿಗಿದು ಹಾರುವ ಸಾಹಸಿಗರೂ, ಅಲ್ಲಿದ್ದೇ ಒಂದು ಸರ್ಕಸ್ ಕಂಪನಿ ತಯಾರಾಗುತ್ತದೆ. ಅವಮಾನ ಸಹಿಸಿಯೂ, ಹಲ್ಲು ಗಿರಿದೂ, ಸಿಂಹ, ಸಣ್ಣ ನಾಲ್ಕು ಕಾಲಿನ ಸ್ಟೂಲ್ ಮೇಲೆ ಕೂಡುತ್ತದೆ. ಅಂಥವರು ಕಾಂಗ್ರೆಸ್ಸಿನಲ್ಲಿ ಯಾರೆಂದು ಊಹಿಸಿ. ಸರ್ಕಸ್ ಎಂದ ಮೇಲೆ ಬಫೂನ್ ಎಂಬ ವಿದೂಷಕನೂ ಇರಬೇಕಲ್ಲ? ಅಂಥವರು ಕೇರಳದಲ್ಲೂ, ದೆಹಲಿಯಲ್ಲೂ, ಕರ್ನಾಟಕದಲ್ಲೂ ಇರುವುದು ಸೂರ್ಯಸತ್ಯ. ಇವರೆಲ್ಲ ರೋಗಗ್ರಸ್ತರೇ! ಸ್ವಾತ್ಮಗೌರವ ಕಳೆದುಕೊಂಡವರೂ ರೋಗಿಗಳೇ! ಭಾರತಕ್ಕೆ ಅದೃಷ್ಟ ಇದ್ದಿದ್ದರೆ ನಿರೋಗಿಯಾದ ಪಟೇಲರು ಪ್ರಧಾನಿಯಾಗುತ್ತಿದ್ದರು. ಅಥವಾ ಜಯಪ್ರಕಾಶ್, ಅಥವಾ ಸಾವರ್ಕರ್, ಸುಭಾಷ್, ರಾಜಾಜಿ, ಶ್ಯಾಂಪ್ರಸಾದರೂ ಅಲ್ಲಿ ಚುಕ್ಕಾಣಿ ಹಿಡಿಯುತ್ತಿದ್ದರು. ಆಗಲಿಲ್ಲ! ಅಲ್ಲಿ ಮೋಸ ನಡೆಯಿತು. ಮನಸ್ಸು ಹತೋಟಿ ತಪು್ಪವುದು ಹಣ, ಹೆಣ್ಣು, ಹೆಂಡ, ಅಧಿಕಾರ ವ್ಯಾಮೋಹ, ಇಂಥ ಚಪಲ-Temptationಗಳಿಂದ.

    ದುರ್ಯೋಧನನ ಕಡೆ ಕರ್ಣ ದುಃಶಾಸನರು ಇಂಥವರೂ ಭೀಷ್ಮ ದ್ರೋಣರು ಸರ್ಕಸ್ಸಿನ ಪಳಗಿದ ಸಿಂಹಗಳಂತೆ ಆದರು. ಇಡೀ ರಾಜಕಾರಣಕ್ಕೆ ಹುಚ್ಚು ಹಿಡಿದಾಗ ಒಂದು ಮಹಾಭಾರತ ಆಗಿ ಬಿಡುತ್ತದೆ. ಫ್ರಾನ್ಸಿನಲ್ಲಿ ಕ್ರಾಂತಿಕಾಲದಲ್ಲಿ ಆದದ್ದೂ ಇದೇ! ಸಿಕ್ಕ ಸಿಕ್ಕವರನ್ನೆಲ್ಲ ‘ಗೀಲೋಟೀನ್’ ಯಂತ್ರಕ್ಕೆ ಹಾಕಿ, ತಲೆ ಕಡಿದರು. ಯಂತ್ರ ಕಂಡುಹಿಡಿದವನನ್ನೇ ಕೊಂದರು! ಯುರೋಪ್ ಇಂದೂ ಸಮತೋಲನವಿಲ್ಲದ, ದೃಢಮೂಲವಿಲ್ಲದ ಖೊಟ್ಟಿ ಡೆಮಾಕ್ರಸಿ ಎಂಬ ಪುಟ್ಟ ಶ್ರದ್ಧೆಯಲ್ಲಿ ಸಾಯುತ್ತಿದೆ. ಸಹಕಾರವಿಲ್ಲದೆ, ಸಮಾನತೆಯೇ? ವ್ಯಕ್ತಿತ್ವ ಗೌರವ-Individual dignity-ಎಂಬುದು ಮೋಸದ ರಾಜಕೀಯ ನಾಣ್ಯವಾಗಿದೆ.

    ಭಾರತದಲ್ಲಿ ಮೋದಿ ಬರುವ ಮುನ್ನ ಇದ್ದ ಸ್ಥಿತಿ ಇಂದು ಬದಲಾಗುತ್ತಿದೆ. ಆದರೂ ಹಿಂದಿನ ಗ್ರಹಣ ಇನ್ನೂ ಬಿಟ್ಟಿಲ್ಲ. ಒಂದು ಕೊನೆಯ ಮಾತು. ಕೆಲವರನ್ನು ಏಕೆ ‘ಮುದಿಗೂಬೆ’ ಎನ್ನುತ್ತಾರೆ? ಮುದಿಯರು, ಕಾಲಕ್ಕೆ ಹೆಜ್ಜೆ ಕೂಡಿಸುವ ಶಕ್ತಿ ಕಳೆದು ಕೊಂಡು, ಮುನ್ನಡೆಗೆ ಅಡಚಣೆಯಾದರೆ, ಅವರು, ಕಾಲ ಮುಗಿದದ್ದು, ತಿಳಿಯದೇ ಹಾವಳಿ ಮಾಡುತ್ತಿದ್ದರೆ ಅವರನ್ನು ಹಾಗೆ ‘Old Hags’ ಅಂತ ಕರೆಯುತ್ತಾರೆ. ಅರಳುಮರುಳಾದರೂ, ರಾಜಕೀಯ ಚಟ ಬಿಡದವರು, ಈ ಬಗ್ಗೆ, ಯೋಚಿಸಿದರೂ ಸತ್ಯ ತಿಳಿಯುವುದಿಲ್ಲ. ಸೋನಿಯಾರನ್ನು ಗಾದಿಯಲ್ಲಿ ಕೂರಿಸುವಾಗ ಸೀತಾರಾಂ ಕೇಸರಿಯವರು ಹೀಗಾಗಿದ್ದರು. ಗುಜರಾತಿನ ಕೇಶೂಭಾಯ್ ಪಟೇಲರು (ಇತ್ತೀಚೆಗೆ ನಿಧನರಾದರು) ಇನ್ನೊಂದು ಉದಾಹರಣೆ. ಕರ್ನಾಟಕದಲ್ಲಿ ಹಾವಳಿ ಮಾಡುತ್ತಿರುವ ‘ಕಮ್ಯುನಲ್’ ಪಕ್ಷಗಳ ಧುರೀಣರೂ ಇಲ್ಲೇ ಸೇರುತ್ತಾರೆ. ಇವರ ರೋಗ? ‘ಗೌರವದಿಂದ ಸಾಯುವುದು ಬೇಡ’ ಎಂಬುದು. ಗಾಂಧಿಯವರ ರೋಗ ಇದೇ ಇರಲಿಲ್ಲವೇ? ಆಟಗಳು? ಸಂತರಾಗಲು ಹೊರಟು ಕಟ್ಟಿದ ಆಶ್ರಮಗಳು, ಪಟ್ಟ ಶ್ರಮಗಳು, ರೋಗಿಗಳನ್ನೇ ನಂಬಿದ್ದು, ರಾಷ್ಟ್ರ ಒಡೆದದ್ದು, ಸಮಾಧಾನ ಮನಃಸ್ಥಿತಿಯೇ? ಮಠಪತಿಗಳನ್ನೋ? ಅವರಿಗೆ ರಾಜಕೀಯ ಬಲ ಬೇಕು, ಹಣ ಬೇಕು, ಕಾಲಿಗೆ ಬೀಳುವ ಮುಗ್ಧರು ಬೇಕು. ಜಪ, ತಪ, ಅನುಷ್ಠಾನ, ತ್ಯಾಗ, ವಿದ್ಯೆ, ಉಪಾಸನೆ ಬೇಡ; ಮನ ತೆರೆಯದವರು ಕಾಷಾಯ ಹಾಕಿದರೆ, ಪ್ರಾಣಿಗಳಿಗೆ ಕಾಷಾಯ ಚೆಡ್ಡಿ ತೊಡಿಸಿದಂತೆ ಎಂದು ಖಾರವಾಗಿ ಹೇಳಿ ಮುಗಿಸುವೆ. ಕ್ಷಮೆ ಇರಲಿ.

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts