More

  ವಿಶ್ವವಿದ್ಯಾಲಯಗಳು ಗ್ರೀನ್​ ಕ್ಯಾಂಪಸ್ ಹೊಂದುವಂತಾದರೆ…

  ವಿಶ್ವವಿದ್ಯಾಲಯಗಳು ಗ್ರೀನ್​ ಕ್ಯಾಂಪಸ್ ಹೊಂದುವಂತಾದರೆ...ವಿಶ್ವವಿದ್ಯಾಲಯಗಳಿಗೆ ಜಾಗದ ಲಭ್ಯತೆ, ತಂತ್ರಜ್ಞಾನ, ಮಾನವ ಸಂಪನ್ಮೂಲ ಇರುವುದರಿಂದ ಶೈಕ್ಷಣಿಕ ಚಟುವಟಿಕೆಗಳ ಜತೆಗೇ ಆವರಣವನ್ನು ಹಸಿರುಮಯವಾಗಿಸುವ ಮತ್ತು ಅಲ್ಲಿನ ಎಲ್ಲ ಚಟುವಟಿಕೆಗಳನ್ನು ನಿಸರ್ಗಸ್ನೇಹಿಯಾಗಿ ನಡೆಸುವ ಅವಕಾಶ ಇದ್ದೇ ಇದೆ. ಈ ನಿಟ್ಟಿನಲ್ಲಿ ಸ್ಪಷ್ಟ ಯೋಜನೆ ಮತ್ತು ಪ್ರಬಲ ಇಚ್ಛಾಶಕ್ತಿ ಬೇಕು.

  ಅದು 2016ರ ಅದಮ್ಯ ಚೇತನದ ಸೇವಾ ಉತ್ಸವದ ಸಂದರ್ಭ. ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಖ್ಯ ಅತಿಥಿಯಾಗಿದ್ದರು. ಅವರು ಕಾರ್ಯಕ್ರಮ ಸ್ಥಳಕ್ಕೆ ಬರುವ ಮುನ್ನ ಅದಮ್ಯ ಚೇತನದ ಅನ್ನಪೂರ್ಣ ಅಡುಗೆಮನೆ ವೀಕ್ಷಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ‘ಅಡುಗೆಮನೆಯಲ್ಲಿ ನೊಡುವಂಥದ್ದೇನಿದೆ’ ಎಂದು

  ಅಧಿಕಾರಿಗಳು ದಿಢೀರಾಗಿ ಆ ಭೇಟಿ ರದ್ದುಗೊಳಿಸಿ, ನೇರವಾಗಿ ಕಾರ್ಯಕ್ರಮದ ವೇದಿಕೆಗೆ ಬರುತ್ತಾರೆ ಎಂದು ತಿಳಿಸಿದರು. ಅನಂತಕುಮಾರ್ ಅವರು ಅಧಿಕಾರಿಗಳಿಗೆ ಅನ್ನಪೂರ್ಣ ಅಡುಗೆಮನೆಯ ವೈಶಿಷ್ಟ್ಯಗಳನ್ನು ವಿವರಿಸಿದರಲ್ಲದೆ, ರಾಷ್ಟ್ರಪತಿಗಳ ಭೇಟಿಯ ಪ್ರಮುಖ ಉದ್ದೇಶವೇ ಹಸಿರು ಇಂಧನದ ಅಡುಗೆಮನೆ ನೋಡುವುದಾಗಿದೆ ಎಂದು ತಿಳಿಸಿದರು. ಬಳಿಕ, ಪ್ರಣಬ್ ಮುಖರ್ಜಿ ಅಡುಗೆಮನೆಗೆ ಭೇಟಿ ನೀಡಿ, ಆಸಕ್ತಿಯಿಂದ ಎಲ್ಲ ವಿವರ ಪಡೆದುಕೊಂಡರು. ಯಾವುದೇ ಪೆಟ್ರೋಲಿಯಂ ಉತ್ಪನ್ನ ಬಳಸದೆ, ಕೃತಕ ಬಣ್ಣಗಳನ್ನು ಬಳಸದೆ ಅಡುಗೆಯ ತಯಾರಿಕೆ, ನೀರಿನ ಮಿತಬಳಕೆ/ಮರುಬಳಕೆ, ಸಾವಿರಾರು ವಿದ್ಯಾರ್ಥಿಗಳಿಗೆ ಊಟ ಒದಗಿಸುವ ಬಗೆ, ಶೂನ್ಯತ್ಯಾಜ್ಯದ ಮಾದರಿ- ಇದೆಲ್ಲದರ ಬಗ್ಗೆ ಅನಂತಕುಮಾರ್ ವಿವರಿಸಿದಾಗ, ರಾಷ್ಟ್ರಪತಿಗಳು ಸಂತಸಪಟ್ಟರು. ಇಂಥ ಮಾದರಿಯನ್ನು ಎಲ್ಲಡೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

  ಹಾಗಂತ, ಇದೇನು ದೊಡ್ಡ ವಿಜ್ಞಾನವಲ್ಲ. ಸೇವಾಸಂಸ್ಥೆಗಳು, ಶಿಕ್ಷಣಸಂಸ್ಥೆಗಳು, ಮಹಾವಿದ್ಯಾಲಯಗಳು, ವಿಶೇಷವಾಗಿ ವಿಶ್ವವಿದ್ಯಾಲಯಗಳು ಇಂಥ ಸಂಗತಿಗಳನ್ನು ಗಮನಿಸಿ, ಅನುಷ್ಠಾನಕ್ಕೆ ತರಬೇಕು. ಈ ಸ್ಥಳಗಳಿಂದ ಜಾಗೃತಿಯ ಪ್ರಯತ್ನ, ಬದಲಾವಣೆಯ ಪ್ರಕ್ರಿಯೆ ಆರಂಭವಾದರೆ ಉತ್ತಮ ಫಲಿತಾಂಶ ಸಿಗಲು ಸಾಧ್ಯ. ನಾವು ಆಹಾರ ತಯಾರಿಸುವ ಅಡುಗೆಮನೆಗಳಿಂದ ಹಿಡಿದು, ಕೆಲಸದ ಕ್ಷೇತ್ರ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಪರಿಸರಕ್ಕೆ ಹಾನಿ ಮಾಡದೆ, ಪರಿಸರಕ್ಕೆ ಹೆಚ್ಚು ಪೂರಕವಾಗಿ ಹೇಗೆ ಕೆಲಸ ಮಾಡಬಹುದು ಎಂಬುದರ ಬಗ್ಗೆ ಪ್ರತಿಯೊಬ್ಬರು ಚಿಂತನೆ ಮಾಡಬೇಕು. ಈ ನಿಟ್ಟಿನಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳು ಗರಿಗೆದರಿದಾಗ ಪ್ರಕೃತಿಯ ಮೇಲಿನ ಹಾನಿಯ ಪ್ರಮಾಣ ಕೊಂಚವಾದರೂ ಕಡಿಮೆಯಾಗಬಹುದು. ಇತ್ತೀಚಿನ ದಿನಗಳಲ್ಲಿ ಹಲವು ಸಂಸ್ಥೆಗಳು ಇಂಥ ಪ್ರಯತ್ನಕ್ಕೆ ಮುಂದಾಗಿರುವುದು ಸಮಾಧಾನಕರ ಬೆಳವಣಿಗೆ.

  ದೂರದ ಉತ್ತರಪ್ರದೇಶದ ಗೋರಖಪುರ ವಿಶ್ವವಿದ್ಯಾಲಯದವರು ನಮ್ಮ ಕೆಲಸಗಳನ್ನು ಅವಲೋಕಿಸಿ, ನಮ್ಮೊಂದಿಗೆ ರ್ಚಚಿಸಿ, ಇದೇ ಮಾದರಿಯನ್ನು ವಿ.ವಿ.ಯಲ್ಲಿ ಅನುಷ್ಠಾನಗೊಳಿಸಲು ಒಡಂಬಡಿಕೆ ಮಾಡಿಕೊಂಡಿರುವುದು ಅದಮ್ಯ ಚೇತನಕ್ಕೆ ಹೆಮ್ಮೆಯೇ ಸರಿ. ಇಂಥ ಪರಿಸರಸ್ನೇಹಿ ಕ್ರಮಗಳನ್ನು ಹೆಚ್ಚೆಚ್ಚು ವಿಶ್ವವಿದ್ಯಾಲಯಗಳು ಮತ್ತು ಇತರ ಸಂಸ್ಥೆಗಳು ಅಳವಡಿಸಿಕೊಳ್ಳುವುದು ಅಗತ್ಯ. ಈ ಒಡಂಬಡಿಕೆ ಇತರರೂ ಅನುಷ್ಠಾನಕ್ಕೆ ತರುವಂಥ ಅಂಶಗಳನ್ನು ಹೊಂದಿದೆ.

  ಕಾಗದದ ಬಳಕೆ ತಗ್ಗಿಸುವುದು: ಕಾಗದವು ಮರಗಳಿಂದಲೇ ತಯಾರಾಗುತ್ತದೆ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಆದರೆ, ಕಾಗದವನ್ನು ಬಳಸುವಾಗ, ಪೋಲು ಮಾಡುವಾಗ ಆ ಮರಗಳ ಸ್ಥಿತಿ ನೆನಪಾಗುವುದೇ ಇಲ್ಲ! ಒಂದೊಂದು ಕಾಗದದ ಬಳಕೆ ತಗ್ಗಿಸಿದಷ್ಟೂ, ಮರಗಳನ್ನು ಉಳಿಸಿದಂತಾಗುತ್ತದೆ. ಮಾಹಿತಿ-ತಂತ್ರಜ್ಞಾನ, ಡಿಜಿಟಲ್ ವೇದಿಕೆಗಳ ಬಳಕೆ ಹೆಚ್ಚುತ್ತಿದ್ದರೂ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಾಗದದ ಬಳಕೆ ವ್ಯಾಪಕವಾಗಿದೆ. ಕಿರುಪರೀಕ್ಷೆಗಳು, ತ್ರೖೆಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಪರೀಕ್ಷೆಗಳು, ಅಸೈನ್​ವೆುಂಟ್​ಗಳು, ಅಬ್ಬಾ! ಎಷ್ಟೊಂದು ಕಾರಣಗಳಿಗಾಗಿ ಕಾಗದಗಳನ್ನು ಬಳಸಲಾಗುತ್ತದೆ. ಇವುಗಳಿಗೆ ಪರ್ಯಾಯ ಕಂಡುಕೊಳ್ಳುವುದು ಸಾಧ್ಯವಿಲ್ಲವೇ? ಕಾಗದದ ಬಳಕೆಯನ್ನು ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಕಡಿಮೆ ಮಾಡಬೇಕು. ಕಾಗದವನ್ನು ಮರುಬಳಕೆ ಮಾಡಬೇಕು. ಫೈಲ್ಸ್, ಕಾರ್ಡ್​ಬೋರ್ಡ್, ಬ್ರಿಕೇಟ್ಸ್ ಮತ್ತು ಗೊಬ್ಬರ ತಯಾರಿಕೆಯಲ್ಲಿ ಕಾಗದವನ್ನು ಮರುಬಳಸಬಹುದು. ಉಳಿದ ಪುಟಗಳನ್ನು ಬೈಂಡ್ ಮಾಡಿ, ನೋಟ್ ಪುಸ್ತಕ ಮಾಡಿಕೊಂಡು ಉಪಯೋಗಿಸಬಹುದು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ, ಅಧ್ಯಾಪಕರಲ್ಲಿ ಜಾಗೃತಿ ಮೂಡಿಸಬೇಕು. ಮುಖ್ಯವಾಗಿ, ಕಾಗದ ಕೈಗಾರಿಕೆಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ, ಆ ಪ್ರಕ್ರಿಯೆಯನ್ನು ತೋರಿಸಬೇಕು. ನೀರು ಎಷ್ಟು ಪೋಲಾಗುತ್ತದೆ, ಪರಿಸರಕ್ಕೆ ಹೇಗೆ ಹಾನಿಯಾಗುತ್ತದೆ ಎಂಬುದನ್ನು ನೋಡಿ, ಅದನ್ನು ಮನದಟ್ಟು ಮಾಡಿಕೊಂಡಾಗ ವೈಯಕ್ತಿಕ ಹಂತದಲ್ಲಿ ಕಾಗದದ ಬಳಕೆ ಸಾಕಷ್ಟು ತಗ್ಗುತ್ತದೆ. ಪ್ರಮುಖ ಮಾಹಿತಿ-ತಂತ್ರಜ್ಞಾನ ಕಂಪನಿಗಳು ಪೇಪರ್​ಲೆಸ್ ಆಗಿರುವ ನಿದರ್ಶನ ನಮ್ಮ ಕಣ್ಮುಂದೆಯೇ ಇದೆ. ಉಳಿದ ವಲಯಗಳು ಇದನ್ನು ಅನುಸರಿಸಬೇಕು.

  ಸ್ವಚ್ಛ ಇಂಧನ: ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಬಹುತೇಕ ಕಾರ್ಯಕ್ಷೇತ್ರಗಳಲ್ಲಿ ಕಳೆದ 25-30 ವರ್ಷಗಳಿಂದ ವಿದ್ಯುತ್ ಬೆಳಕನ್ನೇ ಅವಲಂಬಿಸಿದ್ದೇವೆ. ಶಾಲೆ-ಕಾಲೇಜುಗಳಲ್ಲಿ ಫ್ಯಾನು, ಹವಾನಿಯಂತ್ರಿತ (ಎಸಿ) ತರಗತಿಗಳು ಬಂದುಬಿಟ್ಟಿವೆ. ಆದರೆ, ವಿಶ್ವವಿದ್ಯಾಲಯಗಳಲ್ಲಿ ನೈಸರ್ಗಿಕ ಬೆಳಕನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಡೆ ಗಮನ ನೀಡಬೇಕು. ತರಗತಿಗಳನ್ನು ಇದಕ್ಕೆ ಪೂರಕವಾಗಿ ನಿರ್ವಿುಸಬೇಕು ಅಥವಾ ಮಾರ್ಪಾಡು ಮಾಡಿಕೊಳ್ಳಬೇಕು. ಇದಲ್ಲದೆ, ಎಲ್​ಇಡಿ

  ಬಲ್ಬ್​ಗಳ ಬಳಕೆ ಹೆಚ್ಚಬೇಕು, ಲಿಫ್ಟ್​ಗಳ ಬಳಕೆ ತಗ್ಗಿಸಬೇಕು. ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಸ್ಪರ್ಧೆಗಳನ್ನು ಆಯೋಜಿಸಬಹುದು. ಹಿಂದೆ ಅದಮ್ಯ ಚೇತನದ ವತಿಯಿಂದ ಬೆಂಗಳೂರಿನ ಶಾಲೆ, ಕಾಲೇಜುಗಳಲ್ಲಿ ಇಂಥ ಸ್ಪರ್ಧೆ ಆಯೋಜಿಸಿದ್ದಾಗ 20 ಸಾವಿರಕ್ಕೂ ಅಧಿಕ ಮಕ್ಕಳು ನೋಂದಣಿ ಮಾಡಿಕೊಂಡಿದ್ದರು. ‘ಮನೆಯ ವಿದ್ಯುತ್ ಬಿಲ್​ನ್ನು ಮೂರು ತಿಂಗಳಲ್ಲಿ ಕಡಿಮೆಗೊಳಿಸುವುದು ಹೇಗೆ?’ ಎಂಬುದು ಸ್ಪರ್ಧೆಯ ವಿಷಯ. ಇದಕ್ಕಾಗಿ ಬೇಕಾದ ಸಲಹೆಗಳು, ವಿದ್ಯುತ್ ಉಳಿತಾಯದ ಉಪಾಯಗಳನ್ನು ಮಕ್ಕಳಿಗೆ ತಿಳಿಹೇಳಲಾಗಿತ್ತು. ಅಂದರೆ, ಮೊದಲು ಎಷ್ಟು ಯೂನಿಟ್​ಗಳನ್ನು ಬಳಸಲಾಗುತ್ತಿತ್ತು, ಈಗ ಎಷ್ಟು ತಗ್ಗಿದೆ ಎಂಬುದರ ಆಧಾರದ ಮೇಲೆ ಮಕ್ಕಳಿಗೆ ಬಹುಮಾನ ನೀಡಲಾಯಿತು. ವಿ.ವಿ.ಯ ವಿಭಾಗಗಳ ನಡುವೆಯೇ ಇಂಥದ್ದೊಂದು ಸ್ಪರ್ಧೆ ಆಯೋಜಿಸಿದರೆ, ವಿದ್ಯಾರ್ಥಿಗಳಲ್ಲಿ ವಿದ್ಯುತ್ ಉಳಿತಾಯದ ಮನೋಭಾವ ಸಹಜವಾಗಿಯೇ ಬೆಳೆಯುತ್ತದೆ. ಜತೆಗೆ, ಪೋಲು ಕೂಡ ನಿಲ್ಲುತ್ತದೆ. ನೈಸರ್ಗಿಕ ಬೆಳಕಿನ ಬಳಕೆಯೂ ಹೆಚ್ಚುತ್ತದೆ. ಅನೇಕ ವಿ.ವಿ.ಗಳಲ್ಲಿ ಕ್ಯಾಂಪಸ್ ಒಳಗಡೆ ಸಂಚರಿಸಲು ವಾಹನಗಳಿಗೆ ಅವಕಾಶ ನೀಡದೆ, ಸೈಕಲ್ ಬಳಕೆಗೆ ಆದ್ಯತೆ ನೀಡಲಾಗಿದೆ. ಇದೊಂದು ಉತ್ತಮ ಕ್ರಮ. ಇದರಿಂದ ಶಬ್ದಮಾಲಿನ್ಯ ಕಡಿಮೆಯಾಗುತ್ತದೆ, ವಾಯುಮಾಲಿನ್ಯವೂ ಆಗುವುದಿಲ್ಲ.

  ಜಲಸಂಪನ್ಮೂಲದ ಸದ್ಬಳಕೆ: ವಿ.ವಿ.ಗಳಲ್ಲಿ ಎತ್ತರದ ಕಟ್ಟಡಗಳಿರುತ್ತವೆ. ಛಾವಣಿಗಳಲ್ಲಿ ನೀರನ್ನು ತಡೆಹಿಡಿದು, ಬಳಿಕ ಸಣ್ಣ ತೆರೆದ ಬಾವಿಗಳಲ್ಲಿ ಇಂಗಿಸಬಹುದು. ತಾರಸಿ ನೀರನ್ನು ಫೀಲ್ಟರ್ ಮಾಡಿ ಕುಡಿಯಲು ಉಪಯೋಗಿಸಬಹುದು. ಮಳೆಯ ಪ್ರತಿಹನಿಯನ್ನು ಇಂಗಿಸಲು ಅಥವಾ ಉಪಯೋಗಿಸಲು ಯೋಜನೆ ಹಾಕಿಕೊಳ್ಳಬೇಕು. ತ್ಯಾಜ್ಯನೀರಿನ ಸಂಸ್ಕರಣೆಯೂ ಅಷ್ಟೇ ಅವಶ್ಯ. ಕೈಗಾರಿಕೆಗಳಿಗೆ ಈ ಬಗ್ಗೆ ನಿಯಮ ಮಾಡಲಾಗಿದೆ. ವಿ.ವಿ.ಗಳು ಕೂಡ ಯಾವುದೇ ರಾಸಾಯನಿಕಗಳನ್ನು ಹೊರಬಿಡಬಾರದು. ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ವಿದ್ಯಾರ್ಥಿಗಳು ನೋಟ್​ಪುಸ್ತಕ, ಪೆನ್ನಿನ ಜತೆ ನೀರಿನ ಬಾಟಲಿ ಜತೆಗೆ ಇರಿಸಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧಿಸಬೇಕು.

  ಕಸ ನಿರ್ವಹಣೆ: ಅಡುಗೆಮನೆಯನ್ನು ಶೂನ್ಯತ್ಯಾಜ್ಯವಾಗಿಸಬಹುದಾದರೆ, ಪ್ರತಿಭಾವಂತರು, ವಿಚಾರವಂತರು ಇರುವ ವಿ.ವಿ ಅಥವಾ ಇತರ ಶೈಕ್ಷಣಿಕ ಸಂಸ್ಥೆಗಳನ್ನು ಶೂನ್ಯತ್ಯಾಜ್ಯವಾಗಿಸಲು ಏನು ಅಡ್ಡಿ? ಡಸ್ಟ್​ಬಿನ್​ಗಳ ಕನಿಷ್ಠ ಬಳಕೆ, ಕಸದ ಮರುಬಳಕೆಯನ್ನು (ರೀಸೈಕಲ್) ಅಳವಡಿಸಿಕೊಳ್ಳಬೇಕು. ಉಪಯೋಗಿಸಿ, ಬಿಸಾಡುವ ಪ್ರವೃತ್ತಿ ಕಡಿಮೆಯಾದಾಗ ಇಂಥ ಉಪಾಯಗಳು ಹೊಳೆಯುತ್ತವೆ. ಅಲ್ಲದೆ, ಹಾಸ್ಟೇಲ್​ಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಸೂಕ್ತ ವಿಲೇವಾರಿಗೆ ವ್ಯವಸ್ಥೆ ಮಾಡಬೇಕು. ಕೆಲ ಯುವಕರು ಇತ್ತೀಚಿನ ದಿನಗಳಲ್ಲಿ ಕಸನಿರ್ವಹಣೆ ಮತ್ತು ಮರುಬಳಕೆ ನಿಟ್ಟಿನಲ್ಲಿ ನವೋದ್ಯಮ ಆರಂಭಿಸಿದ್ದು, ಇವುಗಳಿಗೆ ಉತ್ತೇಜನ ಸಿಗಬೇಕು. ಆಹಾರ ತ್ಯಾಜ್ಯವನ್ನು ನಿರ್ವಹಿಸಲು ಬಯೋಗ್ಯಾಸ್​ನ ಸಣ್ಣ ಪ್ಲಾಂಟ್ ಸ್ಥಾಪಿಸಬಹುದು. ಕ್ಯಾಂಪಸಿನಲ್ಲಿ ಸಂಗ್ರಹವಾಗುವ ಎಲೆಗಳಿಂದ ಗೊಬ್ಬರ ತಯಾರಿಸಬಹುದು.

  ಹಸಿರು ಹೊದಿಕೆ: ಶಾಲೆ-ಕಾಲೇಜುಗಳು ಸಾಮಾನ್ಯವಾಗಿ ಮಳೆಗಾಲದ ಜೂನ್​ನಲ್ಲಿ ಆರಂಭವಾಗುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಸ್ಥೆ ಆವರಣದಲ್ಲಿ ಒಂದು ಸಸಿ ನೆಡಬೇಕು ಮತ್ತು ಅದರ ನಿರ್ವಹಣೆ ನೋಡಿಕೊಳ್ಳಬೇಕು. ವಿ.ವಿ. ಹೊರಗಡೆಯೂ ಹಸಿರು ವಿಸ್ತರಿಸಲು ಪ್ರತಿ ಭಾನುವಾರ ಸಸಿ ನೆಡುವಂಥ ಕಾರ್ಯಕ್ರಮ ರೂಪಿಸಬೇಕು. ಗಿಡ ನೆಟ್ಟರೆ ವಿದ್ಯಾರ್ಥಿಗಳಿಗೆ ಕ್ರೆಡಿಟ್ ನೀಡಬೇಕು. ಊರಲ್ಲಿ ಎಷ್ಟು ಗಿಡಗಳಿವೆ, ಪ್ರಭೇದ, ಅವುಗಳ ವೈಶಿಷ್ಟ್ಯವೇನು- ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಬೇಕು. ವಿದ್ಯಾರ್ಥಿಗಳ ಒಳಗೊಳ್ಳುವಿಕೆ ಮೂಲಕ ಗಣತಿಕಾರ್ಯ ಕೈಗೊಳ್ಳಬಹುದು. ಆದಷ್ಟು ಸ್ಥಳೀಯ ತಳಿಗಳನ್ನು ನೆಟ್ಟು, ಬೆಳೆಸಬೇಕು. ಒಂದು ಮರದಿಂದ ಎಷ್ಟು ಆಮ್ಲಜನಕ ಸಿಗುತ್ತದೆ, ನಮಗೆ ಮರಗಳು ಎಷ್ಟು ಅವಶ್ಯ ಎಂಬ ಪ್ರಾಯೋಗಿಕ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು.

  ಪುರಾತನ ವನದ ಕಲ್ಪನೆಯನ್ನು ಮತ್ತೆ ಅನುಷ್ಠಾನಕ್ಕೆ ತರಬೇಕು. ಗಣೇಶ ವನ, ನಕ್ಷತ್ರ ವನ, ನವಗ್ರಹ ವನ- ಇಂಥವುಗಳನ್ನು ಸ್ಥಾಪಿಸಬೇಕು. ಬೀಜಗಳಿಂದ ಸಸಿ ಮಾಡುವುದನ್ನು ಹೇಳಿಕೊಡಬೇಕು. ಹತ್ತು-ಹದಿನೈದು ಸಾವಿರ ವಿದ್ಯಾರ್ಥಿಗಳು ಇರುವ ವಿ.ವಿ.ಯಲ್ಲಿ ತಲಾ ಒಂದು ಸಸಿ ನೆಟ್ಟರೂ, ಹಸಿರು ಹೊದಿಕೆ ಎಷ್ಟು ವ್ಯಾಪಕವಾಗಬಹುದು (ಶೈಕ್ಷಣಿಕ ವೇಳಾಪಟ್ಟಿ ತಯಾರಿಸುವಾಗಲೇ ಇದಕ್ಕೆ ಸಮಯ ಹೊಂದಿಸಬೇಕು). ಔಷಧೀಯ ಸಸ್ಯ, ತರಕಾರಿ ಕೂಡ ಬೆಳೆಯಬಹುದು. ಪಕ್ಷಿವೀಕ್ಷಣೆ, ಗುರುತಿಸುವಿಕೆಯ ಚಟುವಟಿಕೆ ಕೈಗೊಳ್ಳಬಹುದು. ಗಿಡ ಬಂದರೆ, ಅದರಿಂದ ಪಕ್ಷಿಗಳು ಬರುತ್ತವೆ. ಆಮ್ಲಜನಕ ಪ್ರಮಾಣ ಹೆಚ್ಚುತ್ತದೆ. ಅಂತರ್ಜಲ ಮಟ್ಟ ಹೆಚ್ಚುತ್ತದೆ.

  ಆಹಾರ ಮತ್ತು ಪೌಷ್ಟಿಕತೆ: ನಾವು ಸೇವಿಸುವ ಆಹಾರ ಎಷ್ಟು ದೂರದಿಂದ ಬರುತ್ತಿದೆ, ಯಾವೆಲ್ಲ ರಾಸಾಯನಿಕ ಹೊಂದಿವೆ ಎಂಬ ಮಾಹಿತಿ ನೀಡಬೇಕು. ಪೌಷ್ಟಿಕ ಆಹಾರ ತೆಗೆದುಕೊಳ್ಳಲು ಪ್ರೋತ್ಸಾಹ ನೀಡಬೇಕು. ಹಸಿರು ಜೀವನಶೈಲಿಯ ಭಾಗವಾಗಿ ಖಾದಿ ಬಟ್ಟೆಗಳ ಬಳಕೆ, ಸ್ಥಳೀಯ ಆಹಾರದ ಬಳಕೆ, ಇಲೆಕ್ಟ್ರಿಕ್ ವಾಹನ, ಸೋಲಾರ್ ಚಾರ್ಜಿಂಗ್ ಲೈಟ್ ಬಳಕೆಯನ್ನು ಉತ್ತೇಜಿಸಬೇಕು. ವಿದ್ಯಾರ್ಥಿಗಳು ತಮ್ಮದೇ ತಂಡ ರೂಪಿಸಿಕೊಂಡು ಈ ವಿಷಯಗಳನ್ನು ಬೇರೆಡೆ ತಿಳಿಸುತ್ತ, ಅರಿವನ್ನು ವಿಸ್ತರಿಸಬೇಕು.

  ಖರೀದಿ ತಗ್ಗಿಸಿ: ಸಂಗ್ರಹದಲ್ಲಿರುವ ಸಾಮಗ್ರಿಗಳನ್ನು ಸರಿಯಾಗಿ ಗಮನಿಸದೆ ಪ್ರತಿ ಬಾರಿ ಖರೀದಿಸುವಂಥ ಪ್ರವೃತ್ತಿಗೆ ತಡೆ ಹಾಕಬೇಕು. ಎಲ್ಲ ವಿಭಾಗಗಳಿಗೆ ಸಾಮಾನ್ಯವಾಗಿ ತುಂಬ ಅವಶ್ಯವಾಗುವಂಥ ಸಾಮಗ್ರಿ ಮಾತ್ರ ಖರೀದಿಸಬೇಕು. ಹಳೆಯ ವಸ್ತುಗಳ ಮರುಬಳಕೆಗೆ ಆದ್ಯತೆ ನೀಡಬೇಕು. ಸ್ಟಾ್ಯಪ್ಲರ್ ಪಿನ್, ಗಮ್ ಟೇಪ್​ಗಳ ಬಳಕೆ ಆದಷ್ಟು ಕಡಿಮೆ ಮಾಡಬೇಕು. ಕಾರ್ಡ್​ಬೋರ್ಡ್, ಫೈಲ್, ಗಮ್ಳನ್ನು ಅಲ್ಲೇ ತಯಾರಿಸಿಕೊಳ್ಳಬಹುದು. ಇವು ಸಣ್ಣ ಸಣ್ಣ ಹೆಜ್ಜೆಗಳು ಎನಿಸಿದರೂ, ಇದರಿಂದಾಗುವ ದೂರಗಾಮಿ ಪರಿಣಾಮಗಳು ಅನೇಕ. ಈ ಅಂಶಗಳನ್ನು ಯಾವುದೇ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆ ಅಳವಡಿಸಿಕೊಂಡು, ಸಮರ್ಪಕವಾಗಿ ಅನುಷ್ಠಾನಕ್ಕೆ ತರಬಹುದು. ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೇ. ವಿ.ವಿ.ಗಳು ನೀತಿಬೋಧನೆಯ ಜತೆ ಇಂಥ ಕ್ರಮಗಳನ್ನೂ ಅಳವಡಿಸಿಕೊಂಡರೆ ‘ನುಡಿದಂತೆ ನಡೆ…’ ನಾಣ್ಣುಡಿ ಸಾರ್ಥಕವಾಗುತ್ತದೆ.

  (ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts