ಆರ್.ತುಳಸಿಕುಮಾರ್
ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ತಡೆಹಾಕುವ ನಿಟ್ಟಿನಲ್ಲಿ ಸರ್ಕಾರ ಕೆಲವೊಂದು ನಿಯಮ ರೂಪಿಸಿದ ಬೆನ್ನಲ್ಲೇ, ವಸತಿ ಸೇರಿ ಎಲ್ಲ ಬಗೆಯ ಬಿಲ್ಡಿಂಗ್‌ಗಳಿಗೂ ಅನ್ವಯವಾಗುವಂತೆ ನಕ್ಷೆ ಮಂಜೂರಾತಿ, ಆರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರಲು ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಂ) ನಿರ್ಧರಿಸಿವೆ.
ಈ ನಿಯಮವು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನ್ವಯವಾಗಲಿದೆ. ಇಂಥದ್ದೊಂದು ಕಠಿಣ ನಿಯಮವುಳ್ಳ ಆದೇಶವನ್ನು ಆಯಾ ಎಸ್ಕಾಂಗಳ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರು ಕೆಳ ಹಂತದ ಅಧಿಕಾರಿಗಳಿಗೆ ರವಾನಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ವಿಶೇಷವೆಂದರೆ ಹೊಸ ಕಟ್ಟಡಗಳ ಜತೆಗೆ ಹಾಲಿ ನಿರ್ಮಾಣ ಹಂತದಲ್ಲಿರುವ ಬಿಲ್ಡಿಂಗ್‌ಗಳಿಗೂ ಆದೇಶ ಅನ್ವಯವಾಗಲಿದೆ.
ಕಳೆದ ಡಿ.17ರಂದು ಸುಪ್ರೀಂಕೋರ್ಟ್, ಅನಧಿಕೃತ ಕಟ್ಟಡ ಮತ್ತು ನಕ್ಷೆ ಉಲ್ಲಂಸಿ ನಿರ್ಮಿಸುವ ಬಿಲ್ಡಿಂಗ್‌ಗಳಿಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬಹುದೆಂದು ಆದೇಶ ನೀಡಿತ್ತು. ಇದನ್ನಾಧರಿಸಿ ಕಳೆದ ಜ.9ರಂದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಖ್ಯ ಆಯುಕ್ತರು ಬೆಸ್ಕಾಂ ಹಾಗೂ ಜಲಮಂಡಳಿಗೆ ಪತ್ರ ಬರೆದು ಸಿಸಿ, ಒಸಿ ಪಡೆಯದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಮನವಿ ಮಾಡಿದ್ದರು. ಇದೀಗ ಈ ನಿಯಮ ಜಾರಿಗೆ ಸರ್ಕಾರಿ ಸಂಸ್ಥೆಗಳು ಮುಂದಡಿ ಇಟ್ಟಿವೆ.
ತಾತ್ಕಾಲಿಕ ಸಂಪರ್ಕಕ್ಕೂ ನಿಯಮ ಅನ್ವಯ:
ನಕ್ಷೆ ಮಂಜೂರಾತಿ ಪಡೆಯದೆ ಕಟ್ಟಡ ನಿರ್ಮಿಸುತ್ತಿದ್ದಲ್ಲಿ ಅಂತಹ ಬಿಲ್ಡಿಂಗ್‌ಗಳಿಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ಈ ಹಿಂದೆ ಒಸಿ ಪಡೆಯದಿದ್ದಲ್ಲಿ ಕಾಯಂ ಆಗಿ ವಿದ್ಯುತ್ ಸರಬರಾಜು ನೀಡುವ ವೇಳೆ ಕಠಿಣ ನಿಯಮ ಪಾಲಿಸಲಾಗುತ್ತಿತ್ತು. ಒಮ್ಮೆ ಕಟ್ಟಡ ನಿರ್ಮಿಸಿದ ಮೇಲೆ ಅದು ಅಕ್ರಮ ಬಿಲ್ಡಿಂಗ್ ಆಗಿದ್ದಲ್ಲಿ ಅದನ್ನು ಹೊಡೆದುಹಾಕಲು ಸಾಧ್ಯವಾಗುತ್ತಿರಲಿಲ್ಲ. ನೋಟಿಸ್ ಜಾರಿ ಮಾಡಿದ್ದಲ್ಲಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲಾಗುತ್ತಿತ್ತು. ಹೀಗಾಗಿ ಅನಧಿಕೃತ ಕಟ್ಟಡಗಳಿಗೆ ತಡೆಹಾಕಲು ಸಾಧ್ಯವಾಗುತ್ತಿರಲಿಲ್ಲ.
ನೀರಿನ ಸಂಪರ್ಕಕ್ಕೂ ನಿಯಮ ಅನ್ವಯ:
ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ, ಸಿಸಿ ಹಾಗೂ ಒಸಿ ಪಡೆಯದಿದ್ದಲ್ಲಿ ನೀರಿನ ಸಂಪರ್ಕವೂ ಸಿಗದು. ಸುಪ್ರೀಂಕೋರ್ಟ್ ಆದೇಶ ವಿದ್ಯುತ್ ಹಾಗೂ ನೀರಿನ ಸಂಪರ್ಕ – ಎರಡೂ ಸೌಲಭ್ಯಕ್ಕೆ ಅನ್ವಯವಾಗಲಿದೆ. ಸಂಸ್ಥೆಗಳು ಬೇರೆ ಬೇರೆ ಆಗಿರುವುದರಿಂದ ಎಸ್ಕಾಂಗಳು ವಿದ್ಯುತ್ ಸಂಪರ್ಕ ಕಡಿತ ಮಾಡುವ ಅಧಿಕಾರ ಹೊಂದಿದ್ದರೆ, ಜಲಮಂಡಳಿ ಅಥವಾ ಜಲ ಪೂರೈಸುವ ಏಜೆನ್ಸಿ ನೀರಿನ ಸಂಪರ್ಕ ಕಟ್ ಮಾಡಬಹುದಾಗಿದೆ.
ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆಯ ನಿಯಮ 43ರ ಅನ್ವಯ ನಾಗರಿಕನೊಬ್ಬ ಹೊಸದಾಗಿ ಮನೆ ಕಟ್ಟಲು ಎಸ್ಕಾಂಗೆ ಅರ್ಜಿ ಸಲ್ಲಿಸಿದರೆ ಅದನ್ನು ಮಾನ್ಯ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದಿದೆ. ಅಂದರೆ ತಾತ್ಕಾಲಿಕ ಸಂಪರ್ಕ ನೀಡಿ ನಂತರ ನಿಯಮ ಪೂರೈಸಿದರೆ ಕಾಯಂ ಸಂಪರ್ಕ ಕಲ್ಪಿಸಬಹುದಾಗಿದೆ. ಆದರೀಗ, ತಾತ್ಕಾಲಿಕ ಸಂಪರ್ಕ ಪಡೆಯಲು ಎಸ್ಕಾಂಗಳು ಕಠಿಣ ನಿಯಮ ರೂಪಿಸಿವೆ.
ಸರ್ಕಾರಕ್ಕೆ ಶೀಘ್ರ ಮನವಿಪತ್ರ:
ಎಸ್ಕಾಂಗಳ ಆದೇಶದಿಂದ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವ ಕಾರಣ ಕೆಲವೊಂದು ಅಂಶಗಳನ್ನು ಮಾರ್ಪಡಿಸಬೇಕು. ಇದನ್ನಾಧರಿಸಿ ಸರ್ಕಾರ ಸುಪ್ರೀಂಗೆ ಮನವರಿಕೆ ಮಾಡಿಕೊಟ್ಟು ನಾಗರಿಕರಿಗೆ ಬಿಲ್ಡಿಂಗ್ ನಿರ್ಮಿಸಲು ಅನುಕೂಲ ಮಾಡಿಕೊಡುವುದರಿಂದ ಒಳಿತಾಗಲಿದೆ. ಹಾಗಾಗಿ ಶೀಘ್ರವೇ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಗುತ್ತಿಗೆದಾರರ ಸಂಘ ಮುಂದಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಕಟ್ಟಡ ನಿರ್ಮಿಸುವ ಮುನ್ನವೇ ಸಿಸಿ ಪಡೆಯಬೇಕು. ಇಂತಹ ಬಿಲ್ಡಿಂಗ್‌ಗಳಿಗೆ ಮಾತ್ರ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಸಿಗುತ್ತದೆ. ನಂತರ ಒಸಿ ಸಲ್ಲಿಸಿದರಷ್ಟೇ ಕಾಯಂ ಸಂಪರ್ಕ ನೀಡಲಾಗುತ್ತದೆ. ಷರತ್ತು ಪೂರೈಸದಿದ್ದಲ್ಲಿ ನಿಯಮದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಸಂಸ್ಥೆ ಹೊರಡಿಸಿರುವ ಆದೇಶ ಪಾಲಿಸುತ್ತೇವೆ.
– ಮಾಲತೇಶ್ ಎನ್.ಕೆ., ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ, (ಕಾರ್ಯಾಚರಣೆ ವಿಭಾಗ)
ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳು ಕಟ್ಟಡ ನಿರ್ಮಿಸುವವರಿಗೆ ಕಠಿಣ ನಿಯಮ ರೂಪಿಸಿರುವುದು ನಿರ್ಮಾಣ ಚಟುವಟಿಕೆಯನ್ನೇ ಸ್ಥಗಿತಗೊಳಿಸುವಂತಿದೆ. ಸರ್ಕಾರದ ಸಂಸ್ಥೆಗಳು ತ್ವರಿತವಾಗಿ ಸಿಸಿ, ಒಸಿ ನೀಡದೆ ಜನರನ್ನು ಸತಾಯಿಸುತ್ತದೆ. ಹೀಗಿರುವಾಗ ನಾಗರಿಕರು ಕಾಲಮಿತಿಯೊಳಗೆ ಪ್ರಮಾಣಪತ್ರ ಪಡೆಯುವುದು ಹೇಗೆ? ನಿಯಮಗಳಲ್ಲಿ ಕೆಲ ಅಂಶವನ್ನು ಸಡಿಲಗೊಳಿಸಲು ಸರ್ಕಾರ ಮುಂದಾಗಲಿ.
– ರುದ್ರೇಶ್, ಪ್ರಧಾನ ಕಾರ್ಯದರ್ಶಿ, ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ
ಸಿಸಿ, ಒಸಿ ಕಡ್ಡಾಯದಿಂದ ಅನುಕೂಲ, ಅನನುಕೂಲ ಏನು:
ಅನುಕೂಲ –
* ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕಲು ಸಾಧ್ಯ
* ನಕ್ಷೆ ಮಂಜೂರಾತಿಯಂತೆ ಕಟ್ಟಡ ನಿರ್ಮಿಸಬಹುದು
* ನಗರ ಯೋಜನೆ ನಿಯಮ ಪಾಲಿಸಿ ಬಿಲ್ಡಿಂಗ್ ನಿರ್ಮಾಣ
* ಸ್ಥಳೀಯ ಸಂಸ್ಥೆಗಳಿಂದ ಕಟ್ಟಡದ ತೆರಿಗೆ ವಸೂಲಿ ಸುಲಭ
* ಮಾಲಿಕತ್ವ ತಗಾದೆ ಕಡಿಮೆ, ವ್ಯಾಜ್ಯ ಪರಿಹಾರ ಸುಲಭ
ಅನನುಕೂಲ –
* ಸಾರ್ವಜನಿಕರಿಗೆ ಸುಲಭ/ತ್ವರಿತ ಪ್ರಮಾಣಪತ್ರ ಸಿಗದು
* ಅಂದುಕೊಂಡ ಸಮಯದೊಳಗೆ ಬಿಲ್ಡಿಂಗ್ ಕಟ್ಟಲಾಗದು
* ನಿರ್ಮಾಣ ಸಂಸ್ಥೆ, ಗುತ್ತಿಗೆದಾರರಿಂದ ಹೆಚ್ಚಿನ ಶುಲ್ಕ ವಸೂಲಿ?
* ಸರ್ಕಾರಿ ಕಟ್ಟಡ ಸೇರಿ ಎಲ್ಲೆಡೆ ಕಾರ್ಮಿಕರ ಕೊರತೆ ಆಗಬಹುದು
* ಸರ್ಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ.