ಶೃಂಗೇರಿ: ವೈದ್ಯ, ಇಂಜಿನಿಯರ್ ಆಗದೆ ಜೀವನ ಸಮರ್ಥವಾಗಿ ನಡೆಸಲು ಹಲವಾರು ಮಾರ್ಗವಿದೆ. ನಮ್ಮ ಸಾಮರ್ಥ್ಯ, ಕೆಲಸದ ಮೇಲೆ ನಿಷ್ಠೆ ನಮ್ಮ ಬದುಕನ್ನು ರೂಪಿಸುತ್ತದೆ ಎಂದು ಕುವೆಂಪು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯಕ್ ಹೇಳಿದರು.
ಜೆಸಿಬಿಎಂ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಸಂಘ ಗುರುವಾರ ಏರ್ಪಡಿಸಿದ್ದ ಗುರುನಮನ ಮತ್ತು ಡಾ. ಕೆ.ಬಿ.ರಾಮಕೃಷ್ಣರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಬಹುತೇಕ ಪಾಲಕರಿಗೆ ಮಕ್ಕಳು ವೈದ್ಯರು, ಇಂಜಿನಿಯರ್ ಆಗುವ ಕನಸು ಕಾಣುತ್ತಾರೆ. ಅಂಕ ಗಳಿಕೆಯೊಂದೇ ವಿದ್ಯಾರ್ಥಿ ಜೀವನದ ಗುರಿಯಾಗಿರುತ್ತದೆ. ಅಂಕ ಗಳಿಕೆಯೊಂದಿಗೆ ಮನುಷ್ಯತ್ವ, ಸಂಸ್ಕಾರ ಇಲ್ಲದೆ ಇರುವುದು ದುರಾದೃಷ್ಟ ಎಂದರು.
ನಿವೃತ್ತ ಪ್ರಾಚಾರ್ಯೆ ವಿ.ಡಿ.ತಾರಾ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಆಶಯದ ಜತೆ ನಗರ ವಿದ್ಯಾರ್ಥಿಗಳಿಗೆ ಸರಿ ಸಮಾನಾಗಿ ಬೆಳೆಯಬೇಕು. ವಿದ್ಯಾರ್ಥಿ ಜೀವನದಲ್ಲಿ ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಳೇ ವಿದ್ಯಾರ್ಥಿ ಸಂಘದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ ಎಂದರು.
ಕಾಲೇಜಿನ ಉಪನ್ಯಾಸಕರಿಗೆ ಗುರುನಮನ, ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ಅಜಿತ್ ಅಣ್ಕುಳಿ, ಕೆ.ಎನ್.ಗೋಪಾಲ ಹೆಗ್ಡೆ, ಡಾ. ಎಂ.ಸ್ವಾಮಿ, ಎ.ಜಿ.ಪ್ರಶಾಂತ್, ಕೆ.ಎಂ.ಶ್ರೀನಿವಾಸ್, ಎಚ್.ಟಿ.ರಮೇಶ್ ಇತರರಿದ್ದರು.