ಎರಡು ಕುಡಿಗಳ ನಡುವೆ ಅಂತರ ಕಡಿಮೆ ಇದ್ದರೆ ಕ್ಷೇಮ

ಮೊದಲ ಮಗು ಹುಟ್ಟಿ 8-10 ವರ್ಷಗಳಾದ ಬಳಿಕ ಎರಡನೇ ಮಗುವಿಗೆ ಹಂಬಲಿಸುವುದಕ್ಕಿಂತ 3-5 ವರ್ಷಗಳ ಅವಧಿಯಲ್ಲೇ ಮತ್ತೊಂದು ಮಗುವನ್ನು ಪಡೆಯುವುದು ಉತ್ತಮ ಆಯ್ಕೆ. ಮಕ್ಕಳ ನಡುವೆ ವಯಸ್ಸಿನ ಅಂತರ ಹೆಚ್ಚುತ್ತಿರುವುದಕ್ಕೆ ಇಂದಿನ ಜೀವನಶೈಲಿ ಕಾರಣವಿರಬಹುದಾದರೂ ಮೊದಲೇ ಯೋಜಿಸಿಕೊಂಡರೆ ಎಲ್ಲವೂ ಸುಲಭ.

|ಡಾ.ನಿರ್ಮಲಾ ಬಟ್ಟಲ ಬೆಳಗಾವಿ

ರೇಖಾ ಮುಜುಗರದ ಮುಖ ಹೊತ್ತು ವೈದ್ಯರೆದುರು ಕುಳಿತಿದ್ದರು. ಈಗ ಆಕೆಗೆ 40 ವರ್ಷ. ಎರಡನೇ ಕುಡಿಯೊಂದನ್ನು ಹೊಂದುವ ಬಯಕೆ ಈಗ ಮೂಡಿದೆ. ತನ್ನ ಆಶಯ ಈಡೇರಬಹುದೇ, ಈ ವಯಸ್ಸಿನಲ್ಲಿ ಹೆರಲು ತಾನು ಶಕ್ತಳೇ ಇತ್ಯಾದಿ ಗೊಂದಲಗಳನ್ನಿಟ್ಟುಕೊಂಡು ವೈದ್ಯರನ್ನು ಕಂಡಿದ್ದಳು. ಅವರು ಧೈರ್ಯ ನೀಡಿದಾಗಲೇ ಅಲ್ಪ ನಿರಾಳತೆ. ಆದರೆ, ಇನ್ನೂ ಹಲವಾರು ವಿಚಾರಗಳ ಬಗ್ಗೆ ಮುಜುಗರ ಹಾಗೆಯೇ ಉಳಿದಿತ್ತು. ಸಂಬಂಧಿಕರು, ಮನೆಯ ಇತರ ಸದಸ್ಯರು ಏನನ್ನುವರೋ, ಈ ವಯಸ್ಸಿನಲ್ಲಿ ಇವಳಿಗೆ ಇದೆಲ್ಲ ಯಾಕಾಗಿತ್ತು ಎಂದುಕೊಂಡು ತಾತ್ಸಾರ ಮಾಡುವರೋ ಎಂದೆಲ್ಲ ಯೋಚನೆಗಳು ನುಗ್ಗುತ್ತಿದ್ದವು.

ರೇಖಾಳ ಮೊದಲ ಮಗನಿಗೆ ಈಗ ಹತ್ತು ವರ್ಷ. ಮಗನ ಆಟಪಾಠ, ತುಂಟಾಟ, ಜತೆಗೆ ತನ್ನ ಕೆಲಸ, ಅನೇಕ ಜವಾಬ್ದಾರಿಗಳ ಮಧ್ಯೆ ದಿನಗಳು ಕಳೆದುದೇ ಗೊತ್ತಾಗಿರಲಿಲ್ಲ. ಅವನಿಗೆ ಹತ್ತು ವರ್ಷವಾಗುವ ಹೊತ್ತಿಗೆ ಎರಡನೇ ಮಗು ಬೇಕೆಂಬ ಬಯಕೆ ದಿನೇ ದಿನೆ ಗಾಢವಾಗುತ್ತಿತ್ತು. ಅಷ್ಟಕ್ಕೂ…ಇದು ರೇಖಾಳೊಬ್ಬಳ ಸಮಸ್ಯೆ ಅಲ್ಲ. ಒಂದು ಮಗು ಸಾಕೆಂದುಕೊಂಡವರು ಅನೇಕ ವರ್ಷಗಳ ಬಳಿಕ ಎರಡನೇ ಮಗುವನ್ನು ಮಾಡಿಕೊಳ್ಳುವವರ ಸಂಖ್ಯೆ ಇಂದು ಸಾಕಷ್ಟಿದೆ. ಮೊದಲೇ ನಿರ್ಧರಿಸಿಕೊಳ್ಳದೆ ವಯಸ್ಸು ಹೆಚ್ಚುತ್ತಿದ್ದಂತೆ ಇಂಥ ಹೊಯ್ದಾಟಕ್ಕೆ ಬೀಳುವ ದಂಪತಿಗಳು ಇಂದು ಹೆಚ್ಚಾಗುತ್ತಿದ್ದಾರೆ.

ಆಧುನಿಕ ಯುಗದ ಬದಲಾಗುತ್ತಿರುವ ಜೀವನಶೈಲಿ ನಮ್ಮ ಆಚಾರ ವಿಚಾರ ಮತ್ತು ಕೌಟುಂಬಿಕ ಮೌಲ್ಯಗಳ ಮೇಲೆ ತನ್ನದೇ ಆದ ಪ್ರಭಾವ ಬೀರಿದೆ. ಕೌಟುಂಬಿಕ ಜವಾಬ್ದಾರಿ ಮತ್ತು ಉದ್ಯೋಗ ಮಾಡುತ್ತಿದ್ದರೆ ತನ್ನ ವೃತ್ತಿಯನ್ನು ಸರಿದೂಗಿಸುವಲ್ಲಿ ಇಂದಿನ ಮಹಿಳೆ ಒತ್ತಡಕ್ಕೆ ಒಳಗಾಗುತ್ತಿದ್ದಾಳೆ. ಈ ಒತ್ತಡ ಅವಳ ಹೆಣ್ತನದ ನೆಲೆಯನ್ನೇ ಅವಳಿಗರಿವಿಲ್ಲದಂತೆ ಕಸಿದುಕೊಳ್ಳುತ್ತಿದೆ. ಹೆಣ್ಮನದ ಪ್ರತೀಕವಾಗಿ ನಿಲ್ಲುವ ಜಾನಪದ ಗರತಿ ‘ಮಕ್ಕಳ ಕೊಡು ಶಿವನೆ, ಮತ್ತೊಂದ ನಾ ಒಲ್ಲೆ’ಎನ್ನುತ್ತಾಳೆ. ತಾಯ್ತನವೇ ಹೆಣ್ಣಿಗೆ ಹಿರಿದಾದ ಸಂಪತ್ತು. ಅದಕ್ಕಿಂತ ಮಿಗಿಲಾದ ಯಾವ ಭಾಗ್ಯವೂ ಬೇಡ ಎಂದು ನಿರಾಕರಿಸುವ ಅವಳು ಮತ್ತವಳ ಮೌಲ್ಯ ಇಂದು ಸವಕಲು.

ಚಿಕ್ಕ ಕುಟುಂಬದ ಪರಿಕಲ್ಪನೆ: ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಬಡತನದಿಂದ ಹೊರಬರಲು ‘ಚಿಕ್ಕ ಕುಟುಂಬ ಸುಖಿ ಕುಟುಂಬ’ ಎನ್ನುವ ಕುಟುಂಬ ಕಲ್ಯಾಣ ಯೋಜನೆಗಳು ದೇಶದಲ್ಲಿ ಜಾರಿಗೆ ಬಂದವು. 1952ರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಅಂಗೀಕರಿಸಿ ರಾಷ್ಟ್ರೀಯ ಕುಟುಂಬ ಯೋಜನಾ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. 1975-77ರಲ್ಲಿ ಕುಟುಂಬ ಯೋಜನೆಯನ್ನು ಜನರ ಮೇಲೆ ಒತ್ತಾಯಪೂರ್ವಕ ಹೇರಿ ಸಾರ್ವತ್ರಿಕವಾಗಿ ಕಡ್ಡಾಯಗೊಳಿಸಲು ಪ್ರಯತ್ನಿಸಲಾಯಿತು. ಏನೇ ಆದರೂ, ಜನನ ನಿಯಂತ್ರಣ ಮಾಡುವ ಉದ್ದೇಶದಿಂದ ಪ್ರಪಂಚದಲ್ಲೇ ಪ್ರಪ್ರಥಮವಾಗಿ ಜನಸಂಖ್ಯಾ ನೀತಿಯನ್ನು ಅಧಿಕೃತವಾಗಿ ರೂಪಿಸಿ ಅಳವಡಿಸಿಕೊಂಡ ರಾಷ್ಟ್ರವೆಂದರೆ ಭಾರತ. ಅದಕ್ಕೂ ಮುನ್ನವೇ 1930ರ ಜೂನ್ 11ರಂದು ಪ್ರಪಂಚದಲ್ಲೇ ಮೊದಲ ಬಾರಿಗೆ ಮೈಸೂರು ಪ್ರಾಂತ್ಯದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನನ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದರು ಎನ್ನುವುದು ನಮ್ಮ ರಾಜ್ಯದ ಹೆಮ್ಮೆ.

1980-85ರ ದಶಕದಲ್ಲಿ ಕುಟುಂಬ ನಿಯಂತ್ರಣಕ್ಕಾಗಿ ಶಿಕ್ಷಣ ಮಾರ್ಗವನ್ನು ಪ್ರೋತ್ಸಾಹಿಸಲಾಯಿತು. ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯನ್ನು ಆರಂಭಿಸಿ, ಜನರಿಗೆ ಕುಟುಂಬದ ಗಾತ್ರ, ಜೀವನ, ಜವಾಬ್ದಾರಿಯುತ ಪಾಲಕತ್ವ, ಮಗುವಿನ ಆರೋಗ್ಯ, ಸಂತಾನೋತ್ಪತ್ತಿ, ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ಒದಗಿಸುವುದು, ಶಿಕ್ಷಣ ನೀಡುವುದು ಹಾಗೂ ಸಂವಹನ ಕಾರ್ಯಕ್ರಮಗಳ ಮೂಲಕ ಮನವೊಲಿಸುವ ದಿಕ್ಕಿನಲ್ಲಿ ಪ್ರಯತ್ನ ಮಾಡಲಾಯಿತು. ಇಂಥ ಸುದೀರ್ಘ ಪ್ರಯತ್ನದ ಫಲವಾಗಿ ಕುಟುಂಬದ ಗಾತ್ರ ಚಿಕ್ಕದಾಗುತ್ತ 2019ರ ಇಂದಿನ ಕಾಲಘಟ್ಟದಲ್ಲಿ ತಮಗೆ ಅನುಕೂಲವಾದಾಗ ಮಕ್ಕಳನ್ನು ಪಡೆಯಬೇಕೆಂಬ ಮನಸ್ಥಿತಿಗೆ ಇಂದಿನ ದಂಪತಿ ಬಂದಿದ್ದಾರೆ. ಇನ್ನು ಎರಡನೆಯ ಮಗುವಿನ ವಿಷಯದಲ್ಲಂತೂ ಇನ್ನಷ್ಟು ಮುಂದೂಡುವವರೇ ಹೆಚ್ಚು. ಕೆಲವು ವಿಶೇಷ ಸಂದರ್ಭಗಳಲ್ಲಿ ವೈದ್ಯರೇ ಎರಡು ಮಕ್ಕಳ ನಡುವೆ ಮೂರು ವರ್ಷಗಳ ಅಂತರವಿರಲಿ ಎಂದು ಸಲಹೆ ನೀಡಿದರೆ, ಬಹುತೇಕ ದಂಪತಿಗಳು ಸಕಾರಣವಿಲ್ಲದೆ ಮುಂದೂಡಿ ಮತ್ತೆ ಮಗುವಿಗಾಗಿ ಹಂಬಲಿಸುತ್ತಾರೆ. ಅನೇಕ ಕಾರಣಗಳಿಂದ 2ನೇ ಮಗುವನ್ನು ಪಡೆಯಬಯಸುವ ದಂಪತಿಗಳು ಆಸೆಯನ್ನು ಅದುಮಿಟ್ಟುಕೊಂಡು ಸಮಯ ಮುಂದೂಡುತ್ತಲೇ ಬರುತ್ತಾರೆ.

ಬಾಂಧವ್ಯದ ಕೊರತೆ: ಒಂಬತ್ತು ತಿಂಗಳು ಗರ್ಭದಲ್ಲಿರಿಸಿಕೊಂಡು ಬೆಳೆಸಿ, ಜೀವಕೊಟ್ಟು ಅಣ್ಣ ತಂಗಿ ಅಕ್ಕ ತಮ್ಮ ಎಂದು ಕರುಳು ಬಾಂಧವ್ಯಗಳನ್ನು ಬೆಸೆಯುವವಳೇ ‘ಒಂದೇ ಮಗು ಸಾಕು’ ಎಂದು ನಿರ್ಧರಿಸಿದರೆ ಈ ಬಾಂಧವ್ಯಗಳೆಲ್ಲ ಎಲ್ಲಿ ನೆಲೆಗೊಳ್ಳಬೇಕು? ಮಗುವಿನಲ್ಲಿ ಸಾಮಾಜಿಕ ಮೌಲ್ಯಗಳಾದ ಪ್ರೀತಿ, ಸಹಕಾರ, ಸಹಾನುಭೂತಿ, ಸಹಬಾಳ್ವೆ ಇವು ಮನೆಯಿಂದಲೇ ಅದು ತನ್ನ ತಮ್ಮ ಅಥವಾ ತಂಗಿಯೊಂದಿಗೆ ಪ್ರಾರಂಭವಾಗುತ್ತದೆ. ಇಂದು ಒಂಟಿ ಮಗು ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಅರಿವಿಲ್ಲದೆ ಒಳಗಾಗುತ್ತಿರಲು ಮನೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದೇ ಕಾರಣ. ಒಂದೇ ಮಗು ಎನ್ನುವ ಕಾರಣಕ್ಕಾಗಿ ತೋರುವ ಅತಿಯಾದ ಪ್ರೀತಿ, ಕಾಳಜಿಗಳೇ ಮಗುವಿನ ಬೆಳವಣಿಗೆಗೆ ಮಾರಕವಾಗುತ್ತಿವೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ.

ಒಂದು ಮಗುವಿನ ಜನನದ ನಂತರ 3 ತಿಂಗಳ ಬಾಣಂತನ ಕಳೆದು, ಪುನಃ ಋತುಚಕ್ರ ಪ್ರಾರಂಭವಾದರೆ ಸ್ತ್ರೀ ದೈಹಿಕವಾಗಿ 2ನೇ ಮಗುವಿಗೆ ಜನ್ಮ ನೀಡಲು ಸಿದ್ಧಳಾದಂತೆ. ಮಗು ಎದೆಹಾಲು ಕುಡಿಯುವವರೆಗೂ ತಾಯಿಗೆ ನೈಸರ್ಗಿಕವಾಗಿ ಜನನ ನಿಯಂತ್ರಣವಾಗುತ್ತದೆ. ಆ ಕಾರಣಕ್ಕಾಗಿ ಕೆಲವು ಸಮುದಾಯಗಳಲ್ಲಿ ಮಗುವಿಗೆ 3 ತಿಂಗಳವರೆಗೆ ಮಾತ್ರ ಎದೆಹಾಲು ಕುಡಿಸುತ್ತಾರೆ, ಅದು ಮುಂದಿನ ಮಗುವಿನ ಹುಟ್ಟುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎನ್ನುವ ನಂಬಿಕೆ. ಆದರೆ, ಇದು ಸಹ ಆ ಮಗುವಿನ ಆರೋಗ್ಯದ ದೃಷ್ಟಿಯಿಂದ ತಪ್ಪೇ.

ಲಾಭವೇನು?: ಇನ್ನೊಂದು ಮಗು ಪಡೆಯಬೇಕೆಂಬ ಹಂಬಲವಿದ್ದರೆ ಬಹಳ ಅಂತರ ಮಾಡುವುದರಲ್ಲಿ ಅರ್ಥವಿಲ್ಲ. ಮಡಿಲಲ್ಲೊಂದು ಒಡಲಲ್ಲೊಂದು ಒಟ್ಟಿಗೆ ಬೆಳೆಸಿದರೆ, ಉತ್ತಮ ದೈಹಿಕ, ಮಾನಸಿಕ ಸ್ವಾಸ್ಥ್ಯ ಮಕ್ಕಳನ್ನು ಪಡೆಯಲು ಸಾಧ್ಯ. ಮೊದಲ ಮಗುವಿಗೆ ಅಭದ್ರತೆಯ ಕೊರತೆ ಕಾಡುವುದಿಲ್ಲ. ಅಲ್ಲದೆ, ಎರಡು ಮಕ್ಕಳನ್ನು ಒಟ್ಟಿಗೆ ಸಾಕುವುದು ಸುಲಭ. ಮಕ್ಕಳು ಒಟ್ಟಿಗೆ ದೊಡ್ಡವರಾಗುವುದರಿಂದ ಸಲಿಗೆ, ಪ್ರೀತಿ ಹೆಚ್ಚಿರುತ್ತದೆ. ಪ್ರಾರಂಭದಲ್ಲಿಯೇ ಆದರೆ ಬಸಿರು, ಬಾಣಂತನಕ್ಕಾಗಿ ಹೆಣ್ಣು ಮಕ್ಕಳಿಗೆ ತವರು ಮನೆಯ ಕಡೆಯಿಂದ ಪ್ರೀತಿ ಸಹಕಾರಗಳು ದೊರೆಯುತ್ತವೆ. ಅಂತರದ ಎರಡನೇ ಹೆರಿಗೆಯಾದರೆ ಶಾಲೆಗೆ ಹೋಗುವ ಮೊದಲ ಮಗುವಿಗೆ ಆಗುವ ಶೈಕ್ಷಣಿಕ ತೊಂದರೆಗಳಿಗೆ ಮಾನಸಿಕವಾಗಿ ಸಿದ್ಧವಾಗಬೇಕಾಗುತ್ತದೆ. ಮೊದಲ ಮಗುವಿನ ಶಾಲೆ ಅವಧಿ ಪ್ರಾರಂಭವಾಗುವುದರೊಳಗೆ 2ನೇ ಮಗು ಜನಿಸಿದರೆ ಸಂಭಾಳಿಸುವುದು ಸುಲಭ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ, ಎರಡು ಕುಡಿಗಳ ನಡುವೆ ಅಂತರ ಕಡಿಮೆ ಇದ್ದರೆ ತಾಯಿ ತಂದೆಯರಿಗೆ ನಿರಾಳ.

ಒಂದೇ ಮಗುವಿನ ಕಷ್ಟ

ಓನ್ಲಿ ಚೈಲ್ಡ್ ಸಿಂಡ್ರೋಮ್ ಎಂದೇ ಕರೆಯಲ್ಪಡುವ ಒಂದು ರೀತಿಯ ಸಮಸ್ಯೆ ಒಡಹುಟ್ಟಿದವರಿಲ್ಲದೆ ಬೆಳೆಯುವ ಮಕ್ಕಳಲ್ಲಿ ಕಾಣಬಹುದು. ಹೊಂದಾಣಿಕೆಯ ಸಮಸ್ಯೆಯಿಂದ ಹಿಡಿದು ಹೆಚ್ಚು ಸ್ವಾರ್ಥಪರರಾಗಿ ಬೆಳೆಯುವುದು ಇವರ ಸಮಸ್ಯೆ. ಇದನ್ನು ಇತ್ತೀಚೆಗೆ ವೈದ್ಯ ವಿಜ್ಞಾನ ಅಲ್ಲಗಳೆದಿದೆಯಾದರೂ ಒಂದೇ ಮಗುವಾಗಿ ಬೆಳೆದವರ ನಡವಳಿಕೆಯನ್ನು ಗಮನಿಸಿದಾಗ ಇದು ಅನುಭವಕ್ಕೆ ಬರುವ ಸತ್ಯ. ಒಂದೇ ಮಗುವಿಗಿಂತ ಎರಡು ಮಕ್ಕಳಿದ್ದರೆ ಅವರಿಗೆ ಅನುಕೂಲ, ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಅರಿವು ಈಗ ನಿಧಾನವಾಗಿ ಮೂಡುತ್ತಿದೆ. ಪರಿಣಾಮವಾಗಿ, ಕೆಲವು ವರ್ಷಗಳ ಬಳಿಕ ಎರಡನೇ ಮಗುವಿಗೆ ಪ್ರಯತ್ನಿಸುವ ದಂಪತಿ ಹೆಚ್ಚುತ್ತಿದ್ದಾರೆ ಎನ್ನುತ್ತಾರೆ ತಜ್ಞರು.

40ರ ಮೇಲೆ…

ಮೊದಲ ಮತ್ತು ಎರಡನೇ ಮಕ್ಕಳ ನಡುವಿನ ಅಂತರ ಮೂರರಿಂದ ಐದು ವರ್ಷಗಳ ನಡುವೆ ಇರುವುದು ಉತ್ತಮ ಎನ್ನುವುದು ವೈದ್ಯರ ಸಲಹೆ. ಹತ್ತು ವರ್ಷಗಳವರೆಗೆ ಹೋದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ತಾಯಿಯಾಗಬಯಸುವ ಮಹಿಳೆಯ ವಯಸ್ಸು 40 ದಾಟಿದರಂತೂ ಮಗುವನ್ನು ಪಡೆಯುವುದು ಕಷ್ಟದಾ ಯಕ ಆಗಬಹುದು. ವಯಸ್ಸಿಗೆ ಅನುಗುಣವಾಗಿ ಕುಂದುವ ಮಹಿಳೆಯ ದೈಹಿಕ ಶಕ್ತಿ ಅವಳ ತಾಯ್ತನಕ್ಕೆ ಹಿನ್ನಡೆ ತರಬಲ್ಲದು. ವಯಸ್ಸಾದಂತೆ ಪುರುಷ ಮತ್ತು ಮಹಿಳೆಯ ಫಲವತ್ತತೆಯ ಶಕ್ತಿ ಕುಂದುತ್ತಾ ಸಾಗುತ್ತದೆ. ಇದರಿಂದ ಹುಟ್ಟುವ ಮಗುವಲ್ಲಿ ನ್ಯೂನತೆಗಳು ಕಂಡು ಬರಬಹುದು. ಬೆಳೆದ ಮೊದಲ ಮಗು ಮಾನಸಿಕ ದುಗುಡಕ್ಕೆ ಒಳಗಾಗುವ ಸಾಧ್ಯತೆಯೂ ಇಲ್ಲದಿಲ್ಲ. ಹುಟ್ಟುವ ಮಗುವನ್ನು ಭಾವನಾತ್ಮಕವಾಗಿ ‘ತನ್ನ ತಂಗಿ/ತಮ್ಮ’ ಎಂದು ಸ್ವೀಕರಿಸದೇ ಇರಬಹುದು. ಮಗುವಿನ ಹುಟ್ಟನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳುವ ಅಪಾಯಗಳೂ ಇರುತ್ತವೆ. ಆಗ ಸ್ವತಃ ದಂಪತಿಗಳೇ ಮುಜುಗರಕ್ಕೆ ಒಳಗಾಗುವ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ.

ಯಾಕೆ ಲೇಟು?

  • ಮಕ್ಕಳ ಪಾಲನೆಯ ಜವಾಬ್ದಾರಿ ವಹಿಸಿಕೊಳ್ಳಲು ಕುಟುಂಬಸ್ಥರ ಸಹಕಾರವಿಲ್ಲದಿರುವುದು.
  • ಮಗು ದೊಡ್ಡದಾಗಲಿ, ಸ್ವಲ್ಪ ಸುಧಾರಿಸಿಕೊಂಡರಾಯಿತು ಎನ್ನುವ ಮನೋಭಾವ.
  • ವಿಭಕ್ತ ನಗರವಾಸಿ ಕುಟುಂಬಗಳ ಮನೋಸ್ಥಿತಿ.
  • ತಾಯಿಯಾದವಳು ಮಗುವಿನ ಪಾಲನೆ, ಪೋಷಣೆಗಾಗಿ ವೃತ್ತಿ ಬದುಕನ್ನು ಬಿಡಬೇಕಾಗುತ್ತದೆ ಅಥವಾ ಸ್ವಲ್ಪ ಸಮಯವಾದರೂ ನಿರ್ಲಕ್ಷಿಸಬೇಕಾಗುತ್ತದೆ.
  • ಮಗುವಿನ ಪಾಲನೆ ಪೋಷಣೆಗೆ ತಗಲುವ ಹೆಚ್ಚುವರಿ ಖರ್ಚುವೆಚ್ಚಗಳು.
  • ಒಂದೇ ಮಗುವಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಕನಸು.
  • ಎರಡು ಮಕ್ಕಳನ್ನು ಒಟ್ಟಿಗೆ ಸಂಭಾಳಿಸುವುದು ಕಷ್ಟ ಎನ್ನುವ ಭಾವನೆ.
  • ‘ಒಂದೇ ಮಗು ಸಾಕು’ ಎನ್ನುವ ತಾತ್ಕಾಲಿಕ ನಿರ್ಧಾರಗಳು.

Leave a Reply

Your email address will not be published. Required fields are marked *