ಬೆಂಗಳೂರು
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆ/ಕಾಲೇಜುಗಳಿಗೆ ರಜೆ ನೀಡುವ ಸಂಬಂಧ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿರ್ಧಾರ ಕೈಗೊಳ್ಳುವುದು ಸೂಕ್ತವೆಂದು ಖಾಸಗಿ ಶಾಲೆಗಳು ಒತ್ತಾಯಿಸಿದ್ದು. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೂ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಬಂದ್‌ಗೆ ಖಾಸಗಿ ಶಾಲೆಗಳು ನೈತಿಕ ಬೆಂಬಲ ನೀಡುತ್ತಿವೆ. ಆದರೆ, ರಜೆ ನೀಡುವುದು ಆಯಾ ಶಾಲಾ ಆಡಳಿತ ಮಂಡಳಿಗೆ ಬಿಟ್ಟ ವಿಚಾರವಾಗಿದೆ. ಸ್ಥಳೀಯ ಸಮಸ್ಯೆಗಳನ್ನು ಅವಲೋಕಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಿಂದಿನ ದಿನವೇ ಜಿಲ್ಲಾಧಿಕಾರಿಗಳು ರಜೆ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಈ ಮೂಳಕ ರಜೆಯ ಗೊಂದಲ ನಿವಾರಿಸಬೇಕು ಎಂದು ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ.
ನಿರಂತರ ರಜೆ:
ಈಗಾಗಲೇ ಕೆಲವು ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಮತ್ತು ನಿರಂತರವಾಗಿ ರಜೆ ಇರುವುದರಿಂದ ಮಕ್ಕಳಿಗೆ ರಜೆಯ ಗೊಂದಲವುಂಟಾಗುತ್ತಿದೆ. ಸೆ.26ರಂದು ಬೆಂಗಳೂರು ಬಂದ್, ಸೆ.27ರಂದು ಮಕ್ಕಳು ಶಾಲೆಗಳಿಗೆ ಕಡಿಮೆ ಸಂಖ್ಯೆಯಲ್ಲಿ ಹಾಜರಾಗಿದ್ದಾರೆ. ಸೆ.28ರಂದು ಈದ್ ಮಿಲಾದ್ ಸರ್ಕಾರಿ ರಜೆ, ಸೆ.29ರಂದು ಮತ್ತೆ ಕರ್ನಾಟಕ ಬಂದ್, ಶನಿವಾರ, ಭಾನುವಾರ, ಬಳಿಕ ಸೋಮವಾರ (ಅ.2) ಗಾಂಧಿ ಜಯಂತಿ ರಜೆ ಇದೆ.
ಹೀಗೆ ನಿರಂತರವಾಗಿ ರಜೆ ಇರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ರಜೆ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸರ್ಕಾರವನ್ನು ಒತ್ತಾಯಿಸಿವೆ.