ವಿಜಯ ಬ್ಯಾಂಕ್ ವಿಲೀನ ತಪ್ಪಿಸದಿದ್ದರೆ ನಳಿನ್ ಬಟ್ಟೆ ಹರಿಯುತ್ತೇವೆಂದ ಐವನ್!

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ತಂದು ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಸ್ಥಗಿತಗೊಳಿಸದಿದ್ದರೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಬಟ್ಟೆ ಹರಿಯುತ್ತೇವೆ, ಕೈಕಾಲು ಎಳೆಯುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಎಚ್ಚರಿಕೆ ನೀಡಿದ್ದಾರೆ.

ಬ್ಯಾಂಕ್ ಆಫ್ ಬರೋಡ ಜತೆಗೆ ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಮಂಗಳೂರು ಪುರಭವನ ಮುಂಭಾಗದ ಗಾಂಧಿ ಪಾರ್ಕ್‌ನಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಾಯಂಕಾಲವರೆಗೆ ಉಪವಾಸ ಸತ್ಯಾಗ್ರಹ ನಡೆಸಿ ಅವರು ಮಾತನಾಡಿದರು.

ವಿಜಯ ಬ್ಯಾಂಕ್ ನಮ್ಮದು, ವಿಲೀನ ಸಹಿಸಲಾಗದು, ನಮ್ಮ ಬ್ಯಾಂಕ್‌ಗೆ ಅನ್ಯಾಯವಾಗುವಾಗ ಕರಾವಳಿಯವರೇ ಆಗಿರುವ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಈ ಭಾಗದ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ವಿಲೀನ ವಿರುದ್ಧ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ, ಆದರೆ ಸಂಸದರು ಏನು ಮಾಡುತ್ತಿದ್ದಾರೆ? ಅವರು ಲೋಕಸಭೆಯಲ್ಲಿ ಮಾತನಾಡದಿದ್ದರೆ ನಾಲಾಯಕ್, ಅವರ ಕೈಕಾಲು ಎಳೆಯುತ್ತೇವೆ, ಬಟ್ಟೆ ಹರಿಯುತ್ತೇವೆ ಎಂದರು.

ಇದೇ ಸಂದರ್ಭ ಅಖಿಲ ಭಾರತ ವಿಜಯ ಬ್ಯಾಂಕ್ ಅಧಿಕಾರಿಗಳ ಸಂಘದ ಮಂಗಳೂರು ವಿಭಾಗದ ಅಧ್ಯಕ್ಷ ಸುರೇಂದ್ರ ಸತ್ಯಾಗ್ರಹ ನಿರತ ಐವನ್‌ರನ್ನು ಅಭಿನಂದಿಸಿದರು.

ಮಂಗಳೂರು ಉಪಮೇಯರ್ ಕೆ.ಮಹಮ್ಮದ್, ಕಾರ್ಪೊರೇಟರ್‌ಗಳಾದ ಅಶೋಕ್ ಕುಮಾರ್ ಡಿ.ಕೆ, ಎಂ.ಶಶಿಧರ ಹೆಗ್ಡೆ ಮುಂತಾದವರು ಭಾಗವಹಿಸಿದ್ದರು.

ಹರಿಕೃಷ್ಣ ಬಂಟ್ವಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ: ಸೇಂಟ್ ಅಲೋಶಿಯಸ್ ಕಾಲೇಜು ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಡುವ ಬಗ್ಗೆ ಸರ್ಕಾರದ ಆದೇಶವಾಗಿದ್ದರೂ ನಾನು ತಡೆಯಾಜ್ಞೆ ತಂದಿದ್ದೆ ಎಂಬ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿಕೆ ಸುಳ್ಳು. ಇದಕ್ಕಾಗಿ ಅವರು ಕ್ಷಮೆ ಕೇಳಬೇಕು ಇಲ್ಲವಾದಲ್ಲಿ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಐವನ್ ಡಿಸೋಜ ತಿಳಿಸಿದ್ದಾರೆ.