‘ಏನಾದ್ರೂ ಮಾಡಿ ಹೇಗಾದ್ರೂ ಮಾಡಿ ಸಾರ್, ಈ ಹೊಟ್ಟೆ ಕರಗಿ ಮೊದಲಿನಂತಾದರೆ ಸಾಕು. ನನಗಿನ್ನೂ ಮದುವೆಯಾಗಿಲ್ಲ. ಹೀಗಿದ್ದರೆ ಯಾರು ತಾನೇ ಮದುವೆ ಆಗ್ತಾರೆ? ದಯವಿಟ್ಟು ಏನಾದರೂ ಒಂದು ಪರಿಹಾರ ಕಲ್ಪಿಸಿ’ ಎಂದು ಯುವಕನೊಬ್ಬ ಬಂದು ಪರಿಪರಿಯಾಗಿ ಅಳಲು ತೋಡಿಕೊಂಡ. ತಾನು ಎದುರಿಸುತ್ತಿರುವ ಈ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತ ಕಚೇರಿಗೆ ಹೋಗುವುದನ್ನು ಮತ್ತು ಸಂಬಂಧಿಕರ ಸಮಾರಂಭಗಳಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದ. ಎಲ್ಲರೂ ನನ್ನನ್ನೇ ನೋಡ್ತಾರೆ. ಅಪಹಾಸ್ಯ ಮಾಡ್ತಾರೆ ಎನ್ನುವುದು ಆತನ ಅಳಕಾಗಿತ್ತು. ನಾನು ಹೇಳುತ್ತಿರುವ ಈ ವಿದ್ಯಮಾನ ಒಂದು ಉದಾಹರಣೆಯಷ್ಟೇ. ಇಂತಹ ಅನೇಕರು ಇಂದು ನಮ್ಮ ಮಧ್ಯೆ ಇದ್ದಾರೆ. ಆದರೆ ಗಟ್ಟಿ ಮನಸ್ಸು ಮತ್ತು ದೃಢ ನಿರ್ಧಾರವೊಂದಿದ್ದರೆ ಈ ಬೊಜ್ಜಿನ ಸಮಸ್ಯೆ ಬಗೆಹರಿಸಬಹುದು.
ಸ್ಥೂಲಕಾಯ ಎಂದಾಕ್ಷಣ ಇತ್ತೀಚೆಗೆ ಕಾಮನ್ ಎನ್ನುವ ಉದ್ಗಾರ ಕೇಳಿ ಬರುತ್ತದೆ. ಅಂದರೆ ಅಷ್ಟರ ಮಟ್ಟಿಗೆ ಅದು ಸರ್ವೆ ಸಾಮಾನ್ಯ ಎನ್ನುವ ಸ್ಥಿತಿ ಬಂದಿದೆ. ಆದರೆ ನಾವಂದುಕೊಂಡಷ್ಟು ನಿರ್ಲಕ್ಷಿಸುವ ಅಥವಾ ಉದಾಸೀನ ಮಾಡುವ ಸಮಸ್ಯೆ ಇದಲ್ಲ. ಇದೊಂದು ಜಾಗತಿಕ ಸಮಸ್ಯೆಯಾಗಿ ಹೊರಹೊಮ್ಮಿದೆ. ಇದನ್ನು ಮೊನ್ನೆ ನಮ್ಮ ನೆಚ್ಚಿನ ಪ್ರಧಾನಿ ಮೋದಿಜೀ ಅವರು ಕೂಡ ಒತ್ತಿ ಒತ್ತಿ ಹೇಳಿದ್ದಾರೆ. ಸ್ಥೂಲಕಾಯದ ಸಮಸ್ಯೆಯ ಆಳ ಅಗಲ ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲು 10 ಜನ ರಾಯಭಾರಿಗಳನ್ನು ಕೂಡ ನೇಮಿಸಿದ್ದಾರೆ ಎಂದರೆ ಅದರ ತೀವ್ರತೆ ಊಹಿಸಬಹುದು. ಅಲ್ಲದೇ ಇದಕ್ಕಾಗಿ ಒಂದು ಅಭಿಯಾನವನ್ನು ಕೂಡ ಆರಂಭಿಸಿದ್ದಾರೆ.
ಇದಕ್ಕೆ ಜನ ಸ್ಪಂದಿಸುವುದು ಮಾತ್ರ ಈಗಿರುವ ಮಾಗೋಪಾಯ. ಹೌದು, ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆ ಎಲ್ಲ ವಯೋಮಾನದವರನ್ನು ಅಪ್ಪಿಕೊಂಡಿರುವ ಈ ಸಮಸ್ಯೆ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತ ಹೊರಟಿದೆ. ಅಷ್ಟೇ ಪರಿಣಾಮ ಬೀರುತ್ತ ಸಾಗಿದೆ. ವ್ಯಕ್ತಿಗೆ ಆತಂಕ ಮತ್ತು ಖಿನ್ನತೆ ತರುವ ಈ ಕಾಯಿಲೆ ಮನುಷ್ಯನನ್ನು ದೈಹಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿಯೂ ಕುಬ್ಜನನ್ನಾಗಿಸುತ್ತದೆ. ಸ್ಥೂಲಕಾಯದಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಕೂಡ ಬೆನ್ನುಹತ್ತಿ ಬರುತ್ತವೆ. ಹಾಗಿದ್ದರೆ ಈ ಸಮಸ್ಯೆಯ ಮೂಲ ಹುಡುಕಿ ಹೊರಟರೆ ಸಿಗುವ ಉತ್ತರ ಆಹಾರ ಮತ್ತು ಆಹಾರಶೈಲಿ.
ಇಂದು ಬಹುತೇಕ ಯುವಸಮೂಹ ಮತ್ತು ಮಕ್ಕಳ ಆಹಾರದತ್ತ ಒಮ್ಮೆ ನೋಡಿದಾಗ ನಮಗೆ ಕಂಡು ಬರುವ ವಿಷಯವೆಂದರೆ ಫಾಸ್ಟಫುಡ್ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳ ಅತಿಯಾದ ಸೇವನೆ. ಬಾಯಿರುಚಿಯ ಸೆಳೆತಕ್ಕೆ ಸಿಕ್ಕು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಕಾಯಿಲೆಗಳ ಪೈಕಿ ಶೇ. 54 ರಷ್ಟರ ಮೂಲವೇ ಆಹಾರ ಎಂದು ಸಂಶೋಧನಾ ವರದಿ ಹೇಳಿದ್ದು ಇದು ಆತಂಕಕಾರಿಯೇ ಸರಿ. ಮಕ್ಕಳಷ್ಟೇ ಏಕೆ ಬಹುತೇಕರು ಇಂದು ಫಾಸ್ಟ್ಫುಡ್ ಸೇವನೆ ಶುರು ಹಚ್ಚಿಕೊಂಡಿದ್ದಾರೆ. ಮನೆ ಊಟವಂತೂ ಮರೀಚಿಕೆಯಾಗಿದೆ. ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋಗುವವರೇ. ಬೇಗ ಎದ್ದು ಅಡುಗೆ ಮಾಡಿ ಡಬ್ಬಿ ಕಟ್ಟಿಕೊಂಡು ಹೋಗುವಷ್ಟು ಪುರಸೊತ್ತು ಮತ್ತು ಮನಸ್ಸಿಲ್ಲ. ಪರಿಣಾಮ ಹೊರಗಿನ ಆಹಾರವೇ ಆಗಿಹೋಗಿದೆ. ಬೆಳಗಿನ ಉಪಾಹಾರದಲ್ಲಿ ರಾಗಿರೊಟ್ಟಿ, ಚಪಾತಿ ಅಥವಾ ಜೋಳದ ರೊಟ್ಟಿಯ ಜಾಗವನ್ನು ಸ್ಯಾಂಡ್ವಿಚ್ ಆವರಿಸಿದೆ. ಉದ್ಯೋಗಸ್ಥ ಮಹಿಳೆಯರಂತೂ ಅಡುಗೆ ಮಾಡುವುದನ್ನೇ ಮರೆಯುವಂತಾಗಿದೆೆ. ಹೀಗಾದರೆ ಮಕ್ಕಳ ಜೀವನಶೈಲಿ ಕಥೆ ಏನಾಗಬಾರದು ಹೇಳಿ.
ಫಾಸ್ಟಫುಡ್ಗಳ ಸೇವನೆ ಇಂದು ಅನಿವಾರ್ಯತೆ ಜತೆಗೆ ಪ್ರತಿಷ್ಠೆಯ ಸಂಕೇತವಾಗಿ ಹೊರಹೊಮ್ಮಿದೆ. ಸ್ನೇಹಿತರೊಡನೆ ವೀಕೆಂಡ್ಗೆ ಹೋಟೆಲ್, ರೆಸಾರ್ಟ್ಗಳಿಗೆ ಹೋಗುವುದು ಕಡ್ಡಾಯ ಎನ್ನುವ ಮನಸ್ಥಿತಿಗೆ ಇಂದು ಅನೇಕರು ಬಂದು ತಲುಪಿದ್ದಾರೆ. ಕಚೇರಿಯಲ್ಲಿ ಸಹೋದ್ಯೋಗಿಯ ಬರ್ತ್ಡೇ, ಬೀಳ್ಕೊಡುಗೆ ನೆಪದಲ್ಲಿ ನಡೆಯುವ ತಡರಾತ್ರಿ ಪಾರ್ಟಿಗಳು ಸದ್ದಿಲ್ಲದೇ ನಮ್ಮಲ್ಲಿ ಸ್ಥೂಲಕಾಯಕ್ಕೆ ಪ್ರವೇಶ ಒದಗಿಸಿಕೊಡುತ್ತಿವೆ. ಸಮರ್ಪಕ ನಿದ್ರೆಯ ಕೊರತೆ, ತಡವಾಗಿ ಏಳುವುದು ಎಲ್ಲಕ್ಕಿಂತ ಮಿಗಿಲಾಗಿ ಶ್ರಮರಹಿತ ಜೀವನಶೈಲಿ ಮನುಷ್ಯನ ದೇಹದಲ್ಲಿ ಕೆಟ್ಟದಾದ ಕೊಬ್ಬು ತುಂಬಿಸಿ ಆತನ ದೇಹದ ಆಕಾರವನ್ನು ವಿಕೃತಗೊಳಿಸುತ್ತದೆ. ಇದು ಬೇಗ ಅರ್ಥವಾದರೆ ಆರಂಭದಲ್ಲೇ ಈ ಸಮಸ್ಯೆ ಚಿವುಟಿ ಹಾಕಬಹುದು. ಹಾಗೇ ಬಿಟ್ಟರೆ ಬೆಟ್ಟದಷ್ಟು ದೊಡ್ಡದಾಗಿ ಈ ಸಮಸ್ಯೆ ಉಲ್ಬಣಿಸುವುದು ಪಕ್ಕಾ. ಒಮ್ಮೆ ನಮ್ಮ ಹಿರಿಯರ ಜೀವನ ಮತ್ತು ಆಹಾರಶೈಲಿಯತ್ತ ಗಮನಹರಿಸಿದರೆ ನಮಗೆ ಸಿಗುವ ಉತ್ತರದಿಂದ ನಾವು ಮಾಡಿಕೊಳ್ಳಬೇಕಾದ ಬದಲಾವಣೆ ಸಾಕಷ್ಟಿದೆ. ಆದರೆ ಅದಕ್ಕೆ ನಾವೆಲ್ಲರೂ ಮನಸ್ಸು ಮಾಡಬೇಕು.
ಭೂಮಿಯತ್ತ ಸುನೀತಾ: ಆಕೆ ಸುರಕ್ಷಿತವಾಗಿ ಹಿಂತಿರುಗಿದ್ರೆ ಸಾಕು! ಅದೇ ನಮಗೆ ಹಬ್ಬ, ಸಂಭ್ರಮ | Sunita Williams