ನವದೆಹಲಿ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್ವಾಷ್ ಸೋಲು ಅನುಭವಿಸಿ ಮುಖಭಂಗ ಎದುರಿಸಿರುವ ಭಾರತ ತಂಡಕ್ಕೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗಾವಸ್ಕರ್ ಟ್ರೋಫಿ ಪ್ರತಿಷ್ಠೆಯ ಪ್ರಶ್ನೆ ಎನಿಸಿದೆ. ಒಂದು ವೇಳೆ ಆಸೀಸ್ ನೆಲದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಭಾರತ ತಂಡ ಹೀನಾಯವಾಗಿ ಸೋತರೆ, ಗೌತಮ್ ಗಂಭೀರ್ ಟೆಸ್ಟ್ ತಂಡದ ಕೋಚ್ ಹುದ್ದೆ ಕಳೆದುಕೊಳ್ಳಲಿದ್ದಾರೆ. ಆಗ ಬಿಸಿಸಿಐ ಟೆಸ್ಟ್ ಮತ್ತು ಸೀಮಿತ ಓವರ್ ತಂಡಗಳಿಗೆ ಪ್ರತ್ಯೇಕ ಕೋಚ್ ನೇಮಿಸಲಿದೆ. ಗಂಭೀರ್ ಏಕದಿನ ಮತ್ತು ಟಿ20 ತಂಡಗಳ ಕೋಚ್ ಆಗಿ ಮಾತ್ರ ಮುಂದುವರಿದರೆ, ವಿವಿಎಸ್ ಲಕ್ಷ್ಮಣ್ಗೆ ಟೆಸ್ಟ್ ತಂಡದ ಹೊಣೆ ನೀಡಲಾಗುವುದು ಎಂದು ವರದಿಯಾಗಿದೆ.
ಕಿವೀಸ್ ವಿರುದ್ಧದ ಸೋಲಿನ ಹಿನ್ನೆಲೆಯಲ್ಲಿ ಬಿಸಿಸಿಐ ಪದಾಧಿಕಾರಿಗಳೊಂದಿಗೆ ಶುಕ್ರವಾರ ನಡೆದ 6 ಗಂಟೆಗಳ ಸುದೀರ್ಘ ಸಭೆಯಲ್ಲಿ ಗಂಭೀರ್ ಜತೆಗೆ ನಾಯಕ ರೋಹಿತ್ ಶರ್ಮ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ಭಾಗವಹಿಸಿದ್ದರು. ಈ ವೇಳೆ ಕಿವೀಸ್ ವಿರುದ್ಧದ ಸರಣಿಯ ಮುಂಬೈ ಟೆಸ್ಟ್ಗೆ ಸಂಪೂರ್ಣ ಸ್ಪಿನ್ ಸ್ನೇಹಿ ಪಿಚ್ ಆಯ್ಕೆ ಮತ್ತು ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದ ನಿರ್ಧಾರ ಕುರಿತು ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿತು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಷಾ, ಕೋಚ್ ಆಗಿ ಗಂಭೀರ್ ಕಾರ್ಯವಿಧಾನದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
43 ವರ್ಷದ ಮಾಜಿ ಎಡಗೈ ಆರಂಭಿಕ ಗಂಭೀರ್ ಮೂರು ತಿಂಗಳ ಹಿಂದಷ್ಟೇ ಕೋಚ್ ಆಗಿ ನೇಮಕಗೊಂಡಿದ್ದು, 2027ರ ಏಕದಿನ ವಿಶ್ವಕಪ್ವರೆಗೂ ಅವಧಿ ಹೊಂದಿದ್ದಾರೆ. ಆದರೆ ಆಸ್ಟ್ರೇಲಿಯಾ ನೆಲದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಟೆಸ್ಟ್ ತಂಡದ ಕೋಚ್ ಹುದ್ದೆಯಿಂದ ಬಿಸಿಸಿಐ ಅವರನ್ನು ಕೆಳಗಿಳಿಸಲಿದೆ. ಇದರಿಂದ ಭಾರತ ಮೊಟ್ಟಮೊದಲ ಬಾರಿಗೆ ಟೆಸ್ಟ್ ಮತ್ತು ಸೀಮಿತ ಓವರ್ಗಳಿಗೆ ಪ್ರತ್ಯೇಕ ಕೋಚ್ ನೇಮಿಸಿದಂತೆ ಆಗಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರುವ ನಿಟ್ಟಿನಲ್ಲಿ ಭಾರತ 4-0 ಅಥವಾ 5-0ಯಿಂದ ಸರಣಿ ಗೆಲ್ಲಬೇಕಿದೆ. ಇನ್ನು ಇತರ ಪೂರಕ ಫಲಿತಾಂಶಗಳ ಆಧಾರದಲ್ಲಿ ಫೈನಲ್ಗೇರುವ ಆಸೆ ಜೀವಂತ ಉಳಿಸಿಕೊಳ್ಳಲು ಭಾರತ ಸರಣಿಯಲ್ಲಿ ಕನಿಷ್ಠ 2 ಟೆಸ್ಟ್ ಪಂದ್ಯಗಳನ್ನಾದರೂ ಗೆಲ್ಲಬೇಕಿದೆ.
ಟೆಸ್ಟ್ ತಂಡದ ಕೋಚ್ ಹುದ್ದೆಯಿಂದ ಬಿಡುಗಡೆಗೊಳಿಸಿದರೆ ಗಂಭೀರ್ ಕೇವಲ ಟಿ20-ಏಕದಿನ ತಂಡಗಳ ಕೋಚ್ ಆಗಿ ಮಾತ್ರ ಮುಂದುವರಿಯಲು ಒಪು್ಪವರೇ ಎಂಬ ಪ್ರಶ್ನೆಯೂ ಎದ್ದಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಸದ್ಯ ಭಾರತ ಟಿ20 ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹಂಗಾಮಿ ಕೋಚ್ ಆಗಿ ತೆರಳಿದ್ದಾರೆ.