ತುಮಕೂರು : ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿಲಯಗಳ ಅಡುಗೆ ಸಿಬ್ಬಂದಿ, ಅಡುಗೆ ಸಹಾಯಕರ ಹೋರಾಟ ಹತ್ತಿಕ್ಕುವ ಪ್ರಯತ್ನಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಕಳೆದ 6-7 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನ ನೀಡುವಂತೆ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಅಡುಗೆ ನೌಕರರು ಫೆ.5 ರಂದು ಹಮ್ಮಿಕೊಂಡಿರುವ ಹೋರಾಟ ಕೈಬಿಡುವಂತೆ ಒತ್ತಡ ಹೇರುತ್ತಿರುವ ಅಧಿಕಾರಿಗಳು ಕೆಲಸದಿಂದಲೇ ವಜಾಗೊಳಿಸುವುದಾಗಿ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ.
ತುಮಕೂರು ನಗರ ಸೇರಿ ತಾಲೂಕಿನಲ್ಲಿ 24 ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 119 ಮಂದಿ ದುಡಿಯುತ್ತಿದ್ದು, ಈ ಸಿಬ್ಬಂದಿಗೆ ಕಳೆದ 6-7 ತಿಂಗಳಿನಿಂದ ವೇತನ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಫೆ.5 ರಂದು ಅಡುಗೆ ಸಿಬ್ಬಂದಿ ಅಡುಗೆ ತಯಾರಿ ಸ್ಥಗಿತಗೊಳಿಸಿ ಹೋರಾಟಕ್ಕೆ ಮುಂದಾಗಿದ್ದರು. ವಿಜಯವಾಣಿ ಈ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಅಡುಗೆ ಸಿಬ್ಬಂದಿಗೆ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ಬಂದು ಪ್ರತಿಭಟನೆ ನಡೆಸಿದರೆ ಕೆಲಸದಿಂದಲೇ ವಜಾಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಲ್ಲದೆ, ವಾರ್ಡನ್‌ಗಳ ಮೂಲಕ ಒತ್ತಡ ಹೇರುತ್ತಿದ್ದಾರೆ.
ಕೆಲಸಕ್ಕೆ ಬರಬೇಡಿ!: ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳ ಅಡುಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿರುವ ವಾರ್ಡನ್‌ಗಳು ಪ್ರತಿಭಟನೆಗೆ ಹೋದರೆ ಕೆಲಸಕ್ಕೆ ಬಾರದಂತೆ ತಾಕೀತು ಮಾಡಿದ್ದಾರೆ. ಸಂಬಳ ಆಗದಿದ್ರೆ ನಮ್ಮನ್ನು ಏಕೆ ಕೇಳ್ತೀರಾ, ಗುತ್ತಿಗೆದಾರರ ಮನೆ ಮುಂದೆ ಹೋಗಿ ಪ್ರತಿಭಟಿಸಿ, ಇಲ್ಲದಿದ್ದರೆ ಇದಕ್ಕೆ ಸರಿಯಾದ ಬೆಲೆ ತೆರಬೇಕಾದೀತು ಎಂದು ಅವಾಜ್ ಹಾಕುತ್ತಿದ್ದಾರೆ ಎಂದು ಅಡುಗೆ ಸಿಬ್ಬಂದಿ ‘ವಿಜಯವಾಣಿ’ ಬಳಿ ಅಳಲು ತೋಡಿಕೊಂಡಿದ್ದಾರೆ.
ಹೋರಾಟದಿಂದ ಹಿಂದೆ ಸರಿಯಲ್ಲ: ಬಾಕಿ ವೇತನ ನೀಡುವಂತೆ ಫೆ.5ರಿಂದ ಅಡುಗೆ ತಯಾರಿ ನಿಲ್ಲಿಸಿ ಹೋರಾಟಕ್ಕೆ ಮುಂದಾಗಲಿರುವ ಅಡುಗೆ ಸಿಬ್ಬಂದಿ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನ್ಯಾಯ ಕೇಳಿದ್ರೆ ವಜಾ ಮಾಡುವ ಬೆದರಿಕೆ ಒಡ್ಡುತ್ತಾರೆ. ಇಲಾಖೆ ಅಧಿಕಾರಿಗಳಾಗಲಿ, ವಾರ್ಡನ್‌ಗಳಾಗಲಿ ತಮ್ಮ ಹಕ್ಕಿಗಾಗಿ ಹೋರಾಟ ಮಾಡಬಹುದು. ನಾವು ಮಾತ್ರ ನ್ಯಾಯ ಕೇಳುವಂತಿಲ್ಲ ಎನ್ನುತ್ತಾರೆ ಅಸಹಾಯಕ ಅಡುಗೆ ಸಿಬ್ಬಂದಿ. ಇನ್ನಾದಾರೂ ಜಿಲ್ಲಾಡಳಿತ ಇತ್ತ ಕಡೆ ಗಮನಹರಿಸಬೇಕಿದೆ.