ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ನಡುವಿನ ಸಂಬಂಧವೇ ವಿಚಿತ್ರ ಮತ್ತು ಅಯೋಮಯ. ಹಲವು ಪಲ್ಲಟಗಳು, ಉದ್ವಿಗ್ನತೆಯನ್ನು ದಾಟಿ ಈಗ ಮತ್ತೊಂದು ತಿರುವಿಗೆ ಬಂದು ನಿಂತಿದೆ. ಅಪ್ಘಾನಿಸ್ತಾನದಿಂದ ಬಂದು ಆಶ್ರಯ ಪಡೆದಿದ್ದ ಲಕ್ಷಾಂತರ ನಿರಾಶ್ರಿತರನ್ನು ಪಾಕಿಸ್ತಾನ ಬಲವಂತದಿಂದ ತನ್ನ ದೇಶದಿಂದ ಹೊರದಬ್ಬುತ್ತಿದ್ದು, ಈ ವಿದ್ಯಮಾನ ಎಲ್ಲಿಗೆ ಕೊನೆಗೊಳ್ಳುವುದೋ ಸದ್ಯಕ್ಕಂತೂ ಹೇಳಲಾಗದು.
ನವೆಂಬರ್ 1933ರಿಂದ ಅಧಿಕಾರದಲ್ಲಿದ್ದ ಅರಸ ಮೊಹಮ್ಮದ್ ಝುರ್ ಶಾ ಜುಲೈ 1973ರಲ್ಲಿ ಕಣ್ಣಿನ ತೊಂದರೆಗಾಗಿ ಚಿಕಿತ್ಸೆ ಪಡೆಯಲು ಇಟಲಿಗೆ ತೆರಳಿದಾಗ ಇತ್ತ ಕಾಬೂಲ್ನಲ್ಲಿ ಅವರ ಸೋದರ ಸಂಬಂಧಿ ಮತ್ತು ಪ್ರಧಾನಮಂತ್ರಿ ಮೊಹಮ್ಮದ್ ದಾವೂದ್ ಖಾನ್ ಕ್ಷಿಪ್ರ ಕ್ರಾಂತಿಯೆಸಗಿ, ಅರಸರನ್ನು ಪದಚ್ಯುತಗೊಳಿಸಿದ. ರಾಜಸತ್ತೆಯನ್ನು ಕಿತ್ತುಹಾಕಿ ಅಫ್ಘಾನಿಸ್ತಾನವನ್ನು ಗಣರಾಜ್ಯವನ್ನಾಗಿಸಿ ತಾವೇ ಅದರ ಮೊದಲ ಅಧ್ಯಕ್ಷರಾದರು. ಇದೊಂದು ರಕ್ತರಹಿತ ಕ್ರಾಂತಿ. ಇಲ್ಲಿ ಆದ ಒಂದೇ ಒಂದು ಜೀವಹಾನಿಯೆಂದರೆ ಟ್ಯಾಂಕ್ ಚಾಲಕ ಹಬೀಬುಲ್ಲಾ ಖಾನ್. ಆ ಸೇನಾನಿ ಬಸ್ ಒಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ತನ್ನ ಟ್ಯಾಂಕ್ ಅನ್ನು ಕಾಬೂಲ್ ನದಿಗಿಳಿಸಿ ಅದರೊಂದಿಗೆ ತಾನೂ ಮುಳುಗಿಹೋದ!
ಈ ಕ್ರಾಂತಿಯಿಂದಾಗಿ ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡ ರಾಜಮನೆತನದವರು ಮತ್ತವರ ಹತ್ತಿರದ ಸುಮಾರು ಎರಡು ಸಾವಿರ ಜನ ದೇಶವನ್ನು ತೊರೆದು, ಗಡಿನಾಡು ಪ್ರಾಂತ್ಯದ ಪೆಷಾವರ್ (ಹಿಂದಿನ ಪುರುಷಪುರ) ನಗರಕ್ಕೆ ಓಡಿಬಂದರು. 1947ರ ನಂತರ ಪಾಕಿಸ್ತಾನಕ್ಕೆ ಅಫ್ಘನ್ನರ ಮೊದಲ ವಲಸೆ ಇದು. ಇಂದು ಪಾಕಿಸ್ತಾನ ತನ್ನಲ್ಲಿ ಆಶ್ರಯ ಪಡೆದಿರುವ ಸುಮಾರು ಹದಿನೇಳು ಲಕ್ಷ ಅಫ್ಘನ್ನರನ್ನು ಬಲವಂತವಾಗಿ ತನ್ನ ಗಡಿಯಿಂದಾಚೆಗೆ ಅಟ್ಟುತ್ತಿದೆ! ಧ್ರುವಗಳಷ್ಟು ಅಂತರದ ಈ ಎರಡು ಬೆಳವಣಿಗೆಗಳ ನಡುವಿನ ಅವಧಿಯಲ್ಲಿ ಕಾಬೂಲ್ ನದಿಯಲ್ಲಿ ಅದೆಷ್ಟು ನೀರು ಹರಿದಿದೆ!
ಪಾಕಿಸ್ತಾನದ ಸೃಷ್ಟಿಯನ್ನೇ ವಿರೋಧಿಸಿದ್ದ, ಅದರ ಪಖ್ತೂನಿ ಪ್ರದೇಶಗಳ ಮೇಲೆ ತಮ್ಮ ದೇಶದ ಹಕ್ಕನ್ನು ದೊಡ್ಡದಾಗಿ ಹೇಳಿಕೊಳ್ಳುತ್ತಿದ್ದ, ಅಂದರೆ ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನೇ ಪ್ರಶ್ನಿಸಿದ್ದ ಅಫ್ಘನ್ ರಾಜಮನೆತನ ಅದೇ ಪಾಕಿಸ್ತಾನದಲ್ಲಿ ರಾಜಕೀಯ ಆಶ್ರಯ ಪಡೆಯಬೇಕಾದ್ದು ವಿಪರ್ಯಾಸ. ಈ ತಿರುವನ್ನು ಪಾಕಿಸ್ತಾನದ ಅನುಕೂಲಕ್ಕಾಗಿ ಬಳಸಿಕೊಳ್ಳಲು ಪ್ರಧಾನಮಂತ್ರಿ ಝುುಲ್ಪೀಕರ್ ಆಲಿ ಭುಟ್ಟೋ ಯೋಜಿಸಿದರು. ಅಫ್ಘನ್ ಅರಸು ಮನೆತನಕ್ಕೆ ಆಶ್ರಯ ನೀಡುವ ಮೂಲಕ ಅಫ್ಘನ್ ಪಖ್ತೂನಿಗಳ ವಿಶ್ವಾಸವನ್ನು ಪಾಕಿಸ್ತಾನ ಗಳಿಸಿಕೊಳ್ಳುತ್ತದೆಂದೂ, ಅರಸುಮನೆತನವೇ ಪಾಕಿಸ್ತಾನದಲ್ಲಿ ಆಶ್ರಯ ಪಡೆದ ಕಾರಣ ಇನ್ನು ಗಡಿನಾಡು ಪ್ರಾಂತ್ಯ ಮತ್ತು ಉತ್ತರ ಬಲೂಚಿಸ್ತಾನದ ಮೇಲೆ ಅಫ್ಘನ್ ಕಣ್ಣು ಬೀಳುವುದಿಲ್ಲವೆಂದೂ, ಬಿದ್ದರೂ ಅದು ಹಿಂದಿನಂತೆ ಇಸ್ಲಾಮಾಬಾದ್ಗೆ ತಲೆನೋವು ತರುವಷ್ಟು ಆತಂಕಕಾರಿಯಾಗುವುದಿಲ್ಲವೆಂದೂ ಅವರ ತರ್ಕವಾಗಿತ್ತು. ಆದರೆ ಕಾಬೂಲ್ನಲ್ಲಿ ಅಧಿಕಾರ ಹಿಡಿಯುವ ಯಾರಿಗೇ ಆಗಲಿ ಜನಬೆಂಬಲ ಗಳಿಸಿಕೊಳ್ಳಲು ವಿಶಾಲ ಅಫ್ಘಾನಿಸ್ತಾನದ ಕನಸನ್ನು ಸದಾ ಜೀವಂತವಾಗಿಡುವುದು ಪರಿಣಾಮಕಾರಿ ಅಸ್ತ್ರ ಎನ್ನುವುದನ್ನು ಅದೆಷ್ಟೇ ಚಾಣಾಕ್ಷ ್ಯಾದರೂ ಭುಟ್ಟೋ ಅರಿಯದಾದರು. ಆ ಅರಿವು ಕೆಲವೇ ದಿನಗಳಲ್ಲಿ ತಟ್ಟಿದಾಗ ಅಫ್ಘಾನಿಸ್ತಾನದ ಹೊಸ ನೇತಾರ ದಾವೂದ್ ಖಾನ್ರಿಗೆ ಅಫ್ಘಾನಿಸ್ತಾನದಲ್ಲೇ ಕಂಟಕಗಳನ್ನು ಸೃಷ್ಟಿಸಿ, ಅವರ ಗಮನ ಪಾಕ್ ಪಖ್ತೂನಿ ಪ್ರದೇಶಗಳತ್ತ ತಿರುಗದಂತೆ ಮಾಡುವುದು ಭುಟ್ಟೋ ಸರ್ಕಾರದ ತಂತ್ರವಾಯಿತು.
ಅದರಂತೆ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಅಫ್ಘನ್ ಗಡಿಯೊಳಗೆ ಭಯೋತ್ಪಾದನಾ ಕೃತ್ಯಗಳಿಗೆ ಮುಂದಾಯಿತು. ಐಎಸ್ಐನ ಬ್ರಿಗೇಡಿಯರ್ ನಸ್ರುಲ್ಲಾ ಖಾನ್ ಬಾಬರ್ ವಿವಿಧ ಅಫ್ಘನ್ ಜನಾಂಗಗಳ ನೇತಾರರಾದ ಗುಲ್ಬುದ್ದೀನ್ ಹೆಕ್ಮತ್ಯಾರ್, ಅಬ್ದುಲ್ ರಶೀದ್ ದೋಸ್ತುಂ, ಅಹ್ಮದ್ ಶಾ ಮಾಸೂದ್ ಮುಂತಾದವರನ್ನು ದಾವೂದ್ ಖಾನ್ ಸರ್ಕಾರದ ವಿರುದ್ಧ ಎತ್ತಿಕಟ್ಟಿದರು. ಆದರೆ ಇದಕ್ಕಿಂತಲೂ ದೊಡ್ಡ ಅಪಾಯ ದಾವೂದ್ ಖಾನ್ಗೆ ಮಾಸ್ಕೋ ಕಡೆಯಿಂದ ಬಂತು. ಸೋವಿಯತ್ ಪರವಾದ ನೂರ್ ಮಹಮದ್ ತರಾಕಿ ಏಪ್ರಿಲ್ 1978ರಲ್ಲಿ ಕ್ಷಿಪ್ರಕ್ರಾಂತಿಯೆಸಗಿ ದಾವೂದ್ ಖಾನ್ ಮತ್ತವರ ಕುಟುಂಬವರ್ಗವನ್ನು ಭೀಕರವಾಗಿ ಹತ್ಯೆಗೈದರು.
ದಾವೂದ್ ಖಾನ್, ತರಾಕಿಯವರಿಗಿಂತಲೂ ಉಗ್ರ ಅಫ್ಘನ್ ರಾಷ್ಟ್ರೀಯವಾದಿಯಾಗಿದ್ದ ಅಮೀನ್ ಅಫ್ಘಾನಿಸ್ತಾನದ ಗಡಿಯು ಪಾಕಿಸ್ತಾನಿ ಪಂಜಾಬ್ನ ಗಡಿಗೆ ಹತ್ತಿರದ ಅಟ್ಟೋಕ್ವರೆಗೂ ವಿಸ್ತರಿಸಿದೆ ಎಂದು ಘೊಷಿಸಿ ಕಾಬೂಲ್ ಮತ್ತು ಇಸ್ಲಾಮಾಬಾದ್ ತಿಕ್ಕಾಟದ ಹಾದಿಗಿಳಿಯುವ ಸೂಚನೆ ನೀಡಿದರು. ಆದರೆ ಆ ದಿನಗಳಲ್ಲಿ ಕಾಬೂಲ್ನಲ್ಲಿ ತನ್ನ ಪ್ರಭಾವ ಕುಗ್ಗದಂತೆ ನೋಡಿಕೊಳ್ಳುತ್ತಿದ್ದ ಮಾಸ್ಕೋ, ಹೊಸ ಅಫ್ಘನ್ ನಾಯಕ ಅಮೀನ್ ಹಿಂದಿನ ಅಧ್ಯಕ್ಷ ತರಾಕಿಯಷ್ಟು ತನಗೆ ನಿಷ್ಠನಾಗಿಲ್ಲ ಎಂದರಿತೊಡನೆ ಅವರನ್ನು ಡಿಸೆಂಬರ್ 1979ರಲ್ಲಿ ನಿವಾರಿಸಿಕೊಂಡು ತನ್ನ ಕೈಗೊಂಬೆ ಬಬ್ರಾಕ್ ಕರ್ವಲ್ ಅವರನ್ನು ಗದ್ದುಗೆಗೇರಿಸಿತು. ಆದರೆ ಇದಕ್ಕೆ ಎದ್ದ ವಿರೋಧ ಕರ್ವಲ್ರನ್ನು ಕೊಚ್ಚಿಕೊಂಡು ಹೋಗುವಷ್ಟು ಪ್ರಬಲವಾಗಿದೆಯೆಂದೂ, ಅದರಿಂದಾಗಿ ಕಾಬೂಲ್ನಲ್ಲಿ ತನ್ನ ಪ್ರಭಾವ ಅಂತ್ಯಗೊಳ್ಳುವುದೆಂದೂ ತಿಳಿದ ಮಾಸ್ಕೋ ತನ್ನ ಕೈಗೊಂಬೆ ಕರ್ವಲ್ ಸರ್ಕಾರವನ್ನು ಉಳಿಸಿಕೊಳ್ಳಲು 1979 ಡಿಸೆಂಬರ್ 27ರಂದು ಅಫ್ಘಾನಿಸ್ತಾನಕ್ಕೆ ತನ್ನ ಸೇನೆಯನ್ನು ಕಳುಹಿಸಿತು. ಪಾಕ್-ಅಫ್ಘನ್ ಸಂಬಂಧಗಳು, ಜಾಗತಿಕ ದೈತ್ಯರಾಷ್ಟ್ರಗಳು ಮತ್ತು ಒಟ್ಟಾರೆ ಜಾಗತಿಕ ರಾಜಕಾರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದ ಪ್ರಕರಣ ಇದು.
ತಮ್ಮ ಸರ್ಕಾರಕ್ಕೆ ಮತ್ತು ಸೋವಿಯತ್ ಸೇನೆಗೆ ಅಫ್ಘನ್ ಗಡಿಯೊಳಗೇ ಎದ್ದ ವಿರೋಧವನ್ನು ನಿಭಾಯಿಸುವ ಉದ್ದೇಶದಿಂದ ಪಾಕಿಸ್ತಾನಿ ಗಡಿಯನ್ನು ಶಾಂತವಾಗಿಟ್ಟುಕೊಳ್ಳಲು ಯೋಚಿಸಿದ ಅವರು ಪಾಕ್ ಪಖ್ತೂನಿ ಪ್ರದೇಶಗಳ ಮೇಲೆ ತಮ್ಮ ಸರ್ಕಾರ ಯಾವುದೇ ಹಕ್ಕನ್ನೂ ಸಾಧಿಸುವುದಿಲ್ಲವೆಂದೂ, ಡ್ಯೂರಾಂಡ್ ಗಡಿರೇಖೆಯನ್ನು ತಾವು ಮಾನ್ಯ ಮಾಡುವುದಾಗಿಯೂ ಹೇಳಿದರು. ಅಂದರೆ ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ನೀಡದ ಸರ್ಕಾರವೊಂದು ಮೊದಲ ಬಾರಿಗೆ ಕಾಬೂಲ್ನಲ್ಲಿ ಬಂತು. ಆದರೆ ಅಫ್ಘಾನಿಸ್ತಾನಕ್ಕೆ ಸೋವಿಯತ್ ಸೇನೆ ಪ್ರವೇಶಿಸಿದ್ದು ತನ್ನ ಶೀತಲ ಸಮರದ ಭೂ-ರಾಜಕೀಯ ಹಾಗೂ ಭೂ-ಸಾಮರಿಕ ಹಿತಾಸಕ್ತಿಗಳಿಗೆ ಅಪಾಯಕಾರಿ ಎಂದು ಅಮೆರಿಕ ತೀರ್ವನಿಸಿತು. ಸೋವಿಯತ್ ಸೇನೆಗೆ ಇನ್ನಿಲ್ಲದ ಕಾಟ ಕೊಟ್ಟು ಅದು ಅಫ್ಘನ್ ನೆಲದಿಂದ ಓಡಿಹೋಗುವಂತೆ ಮಾಡುವ ಯೋಜನೆ ರೂಪಿಸಿದ ಜಿಮ್ಮಿ ಕಾರ್ಟರ್ ಸರ್ಕಾರ ತನ್ನ ಯೋಜನೆಯಲ್ಲಿ ಸಹಕರಿಸಬೇಕೆಂಬ ಒತ್ತಡವನ್ನು ಪಾಕಿಸ್ತಾನದ ಮೇಲೆ ಹಾಕಿತು. ಅದಕ್ಕಾಗಿ ಬಿಲಿಯನ್ಗಟ್ಟಲೆ ಡಾಲರ್ಗಳು ಮತ್ತು ಅಗಾಧ ಪ್ರಮಾಣದ ಶಸ್ತ್ರಾಸ್ತ್ರಗಳ ಆಮಿಷವನ್ನೊಡ್ಡಿತು.
ಈಗ ಪಾಕಿಸ್ತಾನದ ಮುಂದೆ ಎರಡು ಆಯ್ಕೆಗಳು- ಡ್ಯೂರಾಂಡ್ ಗಡಿರೇಖೆಯನ್ನು ಒಪ್ಪಿಕೊಂಡ ಕರ್ವಲ್ ಸರ್ಕಾರದ ಜತೆ ಸ್ನೇಹ ಬೆಳೆಸಿ ತನ್ನ ಉತ್ತರ ಗಡಿಯಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವುದು ಅಥವಾ ಅಮೆರಿಕದ ಜತೆ ಸೇರಿ, ಮುಂದೆ ಭಾರತದ ವಿರುದ್ಧ ಬಳಸಬಹುದಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮತ್ತು ಅಪಾರ ಹಣವನ್ನು ಪಡೆದುಕೊಳ್ಳುವುದು! ಪಾಕ್ ನೇತಾರ ಜಿಯಾ-ಉಲ್-ಹಕ್ ಎರಡನೆಯದನ್ನು ಆಯ್ದುಕೊಂಡರು. ಅಮೆರಿಕದ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಪಡೆದುಕೊಳ್ಳುವುದರ ಜತೆಗೇ, ಸೋವಿಯತ್ ಸೇನೆಯನ್ನು ವಿರೋಧಿಸತೊಡಗಿದ್ದ ಅಫ್ಘನ್ ರಾಷ್ಟ್ರೀಯವಾದಿಗಳಿಗೆ ಬೆಂಬಲ ನೀಡುವುದರ ಮೂಲಕ ಅವರ ವಿಶ್ವಾಸವನ್ನೂ ಗಳಿಸಿಕೊಂಡು ಆ ಮೂಲಕ ಅವರೂ ಡ್ಯೂರಾಂಡ್ ಗಡಿರೇಖೆಯನ್ನು ಒಪ್ಪಿಕೊಳ್ಳುವಂತೆ ಮಾಡಬಹುದು ಎನ್ನುವುದು ಆ ಚಾಣಾಕ್ಷ್ಯ
ಸೇನಾ ಸರ್ವಾಧಿಕಾರಿಯ ಹಂಚಿಕೆಯಾಗಿತ್ತು. ಅದರಂತೆ ಜಿಮ್ಮಿ ಕಾರ್ಟರ್ ಸರ್ಕಾರ ಪಾಕಿಸ್ತಾನಕ್ಕೆ ನೇರವಾಗಿ ನೀಡಿದ್ದು 3.2 ಬಿಲಿಯನ್ ಡಾಲರ್ಗಳ ಸೇನಾ ಸಹಾಯಧನ. ನಾಲ್ಕು ದಶಕಗಳ ಹಿಂದೆ ಅದು ಭಾರಿ ಮೊತ್ತ. ಇದರ ಜತೆಗೆ ಸೋವಿಯತ್-ವಿರೋಧಿ ಅಫ್ಘನ್ ಗೆರಿಲ್ಲಾಗಳಿಗೆ ತಲುಪಿಸಲೆಂದು ಪಾಕಿಸ್ತಾನಕ್ಕೆ ಬಂದ ಹಣದ ಸ್ಪಷ್ಟ ಲೆಕ್ಕ ಸಿಕ್ಕಿಲ್ಲ. ಆದರೆ ಅದು ಅಗಾಧ ಪ್ರಮಾಣದ್ದಾಗಿತ್ತು ಎನ್ನುವುದಂತೂ ಸ್ಪಷ್ಟ. ಬ್ಯಾಂಕ್ ಟ್ರಾನ್ಸ್ಫರ್ನಂಥ ಸೌಲಭ್ಯಗಳೇನೂ ಇಲ್ಲದ ಆ ದಿನಗಳಲ್ಲಿ ಡಾಲರ್ ನೋಟುಗಳ ಕಟ್ಟುಗಳಿಂದ ತುಂಬಿದ್ದ ಚೀಲಗಳು ಅಡಿಗಡಿಗೆ ವಿಮಾನದ ಮೂಲಕ ಇಸ್ಲಾಮಾಬಾದ್ಗೆ ಬಂದು ಜಿಯಾ-ಉಲ್-ಹಕ್ರ ಕಚೇರಿ ತಲುಪುತ್ತಿದ್ದವು. ಜಿಯಾ ಸಾಹೇಬರು ಅವುಗಳೊಳಗೆ ಕೈ ಹಾಕಿ ಸಿಕ್ಕಿದಷ್ಟು ಕಟ್ಟುಗಳನ್ನು ಎತ್ತಿ ಐಎಸ್ಐ ಏಜೆಂಟರುಗಳ ಕೈಗೆ ಹಾಕಿ, ಅಫ್ಘಾನಿಸ್ತಾನದಲ್ಲಿ ಎಲ್ಲೆಲ್ಲಿ, ಯಾರ್ಯಾರ ಮೂಲಕ ಗೆರಿಲ್ಲ ಯುದ್ಧವನ್ನು ಆಯೋಜಿಸಬೇಕೆಂದು ತಾಕೀತು ಮಾಡುತ್ತಿದ್ದರು ಎಂದು ಕಂಡವರು ಹೇಳುತ್ತಾರೆ! ಅವರ್ಯಾರೂ ಇಲ್ಲದಾಗ ಎಷ್ಟು ಕಟ್ಟುಗಳು ಜಿಯಾ ಮಹಾಶಯರ ಮತ್ತವರ ಹತ್ತಿರದವರ ಜೇಬು ಸೇರಿದವು ಎನ್ನುವುದರ ಲೆಕ್ಕ ಅಮೆರಿಕನ್ನರಿಗೂ ಸಿಕ್ಕಿರುವ ಸಾಧ್ಯತೆ ಇಲ್ಲ. ಒಟ್ಟಿನಲ್ಲಿ ಅಫ್ಘನ್ ಯುದ್ಧ ಅಂದು ಪಾಕಿಸ್ತಾನದ ಪಾಲಿಗೆ ಆಲಿಬಾಬಾನ ಕಥೆಯಲ್ಲಿ ಬರುವ ಕಳ್ಳರ ಲೂಟಿ ತುಂಬಿದ ಗುಹೆಯೇ ಸರಿ.
ಅಮೆರಿಕ ಮತ್ತು ಪಾಕಿಸ್ತಾನದ ಈ ಸೋವಿಯತ್-ವಿರೋಧಿ ಸಂಚುಗಳಿಂದಾಗಿ ಅಫ್ಘಾನಿಸ್ತಾನ ಅಂತರ್ಯುದ್ಧದ ದಳ್ಳುರಿಗೆ ಸಿಕ್ಕಿಹೋಯಿತು. ಅದರಿಂದ ತಪ್ಪಿಸಿಕೊಳ್ಳಲು ಸುಮಾರು ನಲವತ್ತರಿಂದ ಅರವತ್ತು ಲಕ್ಷ ಅಫ್ಘನ್ ನಾಗರಿಕರು ಗಡಿ ದಾಟಿ ಪಾಕಿಸ್ತಾನಕ್ಕೆ ಓಡಿಬಂದರು. ಇವರೆಲ್ಲರಿಗೂ ಪಾಕಿಸ್ತಾನ ಆಶ್ರಯವನ್ನಷ್ಟೇ ಅಲ್ಲ, ಜೀವನ ನಿರ್ವಹಣೆಗೆ ಅಮೆರಿಕನ್ ಹಣವನ್ನೂ ಧಾರಾಳವಾಗಿಯೇ ನೀಡಿತು. ಆದರೆ ಈ ‘ಮಾನವೀಯ’ ಕೃತ್ಯ ಒಂದು ನಿಬಂಧನೆಗೊಳಗಾಗಿತ್ತು. ಆಶ್ರಯ ಮತ್ತು ಸಹಾಯಧನಕ್ಕೆ ಯೋಗ್ಯರಾಗಲು ಅಫ್ಘನ್ ನಿರಾಶ್ರಿತರು ಪಾಕ್ ಐಎಸ್ಐ ಹುಟ್ಟುಹಾಕಿದ್ದ ಏಳು ಮುಜಾಹಿದೀನ್ ಸಂಘಟನೆಗಳಲ್ಲಿ ಯಾವುದಾದರೊಂದರಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿತ್ತು. ಮಿಲಿಯನ್ಗಟ್ಟಲೆ ಅಫ್ಘನ್ನರನ್ನು ಮತೀಯ ಮೂಲಭೂತವಾದಕ್ಕೆ ಕಟ್ಟಿಹಾಕಿ ಜಿಹಾದಿಗಳನ್ನಾಗಿ ಪರಿವರ್ತಿಸುವ ಜಿಯಾ-ಉಲ್ಹಕ್ರ ಹಂಚಿಕೆ ಇದು. ಅದಕ್ಕಾಗಿ ಸ್ಥಾಪನೆಯಾದ ಸುಮಾರು ಇಪ್ಪತೆ ôದು ಸಾವಿರ ಮದ್ರಸಾಗಳಲ್ಲಿ ಅಫ್ಘನ್ ನಿರಾಶ್ರಿತರ ಮಕ್ಕಳೊಂದಿಗೆ ಬಡ ಪಾಕಿಸ್ತಾನೀ ಮಕ್ಕಳೂ ಸೇರಿ ಪಾಕಿಸ್ತಾನ ಜಾಗತಿಕ ಮೂಲಭೂತವಾದಿ ಭಯೋತ್ಪಾದನೆಯ ಕೇಂದ್ರಸ್ಥಾನವಾಗಿ ಉಗಮಿಸಲು ರಂಗಸಜ್ಜಿಕೆ ಆರಂಭವಾಯಿತು. ಇಂದು ಅಲ್ಲಿ ಅಂತಹ ಮದ್ರಸಾಗಳ ಸಂಖ್ಯೆ ನಲವತ್ತು ಸಾವಿರವನ್ನು ದಾಟಿದೆಯಂತೆ. ಅಮೆರಿಕ ಮತ್ತು ಪಾಕಿಸ್ತಾನದಿಂದ ಹೀಗೆ ಸೃಷ್ಟಿಯಾದ ಗೆರಿಲ್ಲಾ ಸಮರದಿಂದ ಘಾಸಿಗೊಂಡ ಸೋವಿಯತ್ ಸೇನೆ 1989ರಲ್ಲಿ ಅಫ್ಘಾನಿಸ್ತಾನದಿಂದ ಓಡಿಹೋದಾಗ ಮುಜಾಹಿದೀನ್ ಸಂಘಟನೆಗಳು ಒಟ್ಟುಗೂಡಿ ಐಕಮತ್ಯ ಸರ್ಕಾರ ರಚಿಸುವ ಕಸರತ್ತು ನಡೆಯಿತು. ಶಿಬ್ಘತುಲ್ಲಾ ಮೊಜಾದ್ದೇಡಿ ಮತ್ತು ಬುರ್ಹಾನುದ್ದೀನ್ ರಬ್ಬಾನಿ ಅಧ್ಯಕ್ಷತೆಯಲ್ಲಿ ಒಂದರ ನಂತರ ಒಂದು ಸರ್ಕಾರಗಳು ಬಂದದ್ದೂ ಆಯಿತು. ಆದರೆ ಆ ಸರ್ಕಾರಗಳು ಪಾಕಿಸ್ತಾನದ ಮರ್ಜಿಗೆ ಮತ್ತು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿಯೇ ನಡೆಯಲಾರವು ಎಂದು ತಿಳಿದ ಪಾಕಿಸ್ತಾನದ ಐಎಸ್ಐ ಮತ್ತು ಅಮೆರಿಕದ ಸಿಐಎ ತಮ್ಮದೇ ಹೊಸ ಕಾರಸ್ಥಾನವನ್ನು ಆರಂಭಿಸಿದವು. ಅದೇ ತಾಲಿಬಾನ್ನ ಸೃಷ್ಟಿ.
ಪಾಕಿಸ್ತಾನಕ್ಕೆ ಓಡಿಬಂದು, ಅಮೆರಿಕದ ಹಣದಿಂದ ಬದುಕತೊಡಗಿದ್ದ ಅಫ್ಘನ್ ನಿರಾಶ್ರಿತರು ಮೂಲತಃ ಅಫ್ಘನ್ ಪಖ್ತೂನಿಗಳು. ಡ್ಯೂರಾಂಡ್ ಗಡಿರೇಖೆಗೆ ಹತ್ತಿರವೇ ಇದ್ದ ಇವರಿಗೆ ಗಡಿ ದಾಟಿ ಪಾಕಿಸ್ತಾನದ ಪಖ್ಯೂನಿ ಪ್ರದೇಶಗಳಲ್ಲಿ ನೆಲೆಸುವುದು ಜನಾಂಗೀಯ ಹಾಗೂ ಭಾಷಿಕ ಕಾರಣಗಳಿಂದಾಗಿ ಸುಲಭವಾಗಿತ್ತು. ಉತ್ತರ ಅಫ್ಘಾನಿಸ್ತಾನದ ಉಜ್ಬೇಗ್ ಮತ್ತು ತಾಜಿಕ್ ಜನತೆ ಪಖ್ತೂನಿ ನೆಲವನ್ನು ಸುರಕ್ಷಿತ ಎಂದು ಭಾವಿಸದ ಕಾರಣ ಅವರು ದಕ್ಷಿಣದ ದಾರಿ ಹಿಡಿದಿರಲಿಲ್ಲ. ಹೀಗಾಗಿ ಪಾಕಿಸ್ತಾನದ ಗಡಿನಾಡು ಪ್ರಾಂತ್ಯದಲ್ಲಿದ್ದ ಜಿಹಾದಿ ಕಾರ್ಖಾನೆಗಳಾದ ಮುಜಾಹಿದೀನ್ ಸಂಘಟನೆಗಳು ಮತ್ತು ಮದ್ರಸಾಗಳಲ್ಲಿದ್ದವರು ಪಖ್ತೂನಿಗಳೇ. ಪಾಕ್ ಆಶ್ರಯ ಮತ್ತು ಅಮೆರಿಕನ್ ಹಣದಿಂದ ಬದುಕುತ್ತಿದ್ದ ಇವರು ಸಹಜವಾಗಿಯೇ ತಮಗೆ ನಿಷ್ಠವಾಗಿದ್ದಾರೆ ಎಂದು ಇಸ್ಲಾಮಾಬಾದ್ ಮತ್ತು ವಾಷಿಂಗ್ಟನ್ಗಳೆರಡೂ ತಿಳಿದವು. ಹೀಗಾಗಿಯೇ ಇವರನ್ನು ಮೂಲವಾಗಿ ಇಟ್ಟುಕೊಂಡು ತಾಲಿಬಾನ್ ಅನ್ನು ಸೃಷ್ಟಿಸಿ ಅದನ್ನು 1986ರಲ್ಲಿ ಕಾಬೂಲ್ನಲ್ಲಿ ಅಧಿಕಾರಕ್ಕೇರಿಸಿದವು. ಈ ಕ್ರಮದಿಂದ ಅಫ್ಘಾನಿಸ್ತಾನವನ್ನು ಸದಾ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬಹುದೆಂದು ಅವು ಬಗೆದವು. ಆದರೆ ತಮ್ಮ ಕೈಗಳನ್ನೇ ಕತ್ತರಿಸುವ ಕತ್ತಿಗಳನ್ನು ತಾವು ಹುಮ್ಮಸ್ಸಿನಿಂದ ತಯಾರಿಸುತ್ತಿದ್ದೇವೆ ಎಂದು ಅಂದು ಅಮೆರಿಕಕ್ಕೂ ತಿಳಿದಿರಲಿಲ್ಲ, ಪಾಕಿಸ್ತಾನಕ್ಕೂ ತಿಳಿದಿರಲಿಲ್ಲ. ಪಖ್ತೂನಿಗಳ ಜನಾಂಗನಿಷ್ಠೆಯ ಅರಿವು ಅಮೆರಿಕಕ್ಕೇನೋ ಇರಲಿಲ್ಲ. ಆದರೆ ಪಾಕಿಸ್ತಾನಕ್ಕೆ? ದುರಂತವೆಂದರೆ ಅದರ ಪರಿಚಯವಿದ್ದ ಐಎಸ್ಐ ಮತ್ತು ಬೆನಝೀರ್ ಭುಟ್ಟೋ ಸರ್ಕಾರ ಆ ಕ್ಷಣದಲ್ಲಿ ವಾಸ್ತವಪ್ರಜ್ಞೆ ಕಳೆದುಕೊಂಡು ಹಗಲುಗನಿಸಿಗಿಳಿದವು. ಇತಿಹಾಸವನ್ನು ನಿರ್ಲಕ್ಷಿಸುವವರು ಅದನ್ನು ಪುನರಾವರ್ತಿಸುವ ದುಃಸ್ಥಿತಿಗೆ ಒಳಗಾಗುತ್ತಾರೆ ಎಂಬ ಜಾನ್ ಸಾಂತ್ಯಾಯಾನಾರ ಮಾತಿಗೆ ಇಂದು ಪಾಕಿಸ್ತಾನ ಒಂದು ಒಳ್ಳೆಯ ಉದಾಹರಣೆಯಾಗಿ ನಮ್ಮೆದುರಿಗಿದೆ. ಅದೀಗ ಅದೇ ಪಖ್ತೂನಿಗಳನ್ನು ತನ್ನ ವಿರೋಧಿಗಳು ಎಂದು ಘೊಷಿಸಿ ಪಾಕಿಸ್ತಾನ ಹೊರಗಟ್ಟುತ್ತಿದೆ. ಈ ವಿಪರ್ಯಾಸದ ಪರಿಚಯಕ್ಕೆ ಒಂದಿಡೀ ಲೇಖನವೇ ಅಗತ್ಯ. ಹೀಗಾಗಿ ಅದನ್ನು ಮುಂದಿನವಾರಕ್ಕೆ ಮುಂದೂಡೋಣ.
(ಮುಂದುವರಿಯುವುದು)
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)