ಹುಬ್ಬಳ್ಳಿ : ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಅವರಿಗೆ ಬೇಕಾದವರನ್ನು ರಬ್ಬರ್ಸ್ಟಾ್ಯಂಪ್ ರೂಪದಲ್ಲಿ ಆ ಸ್ಥಾನದಲ್ಲಿ ಕೂರಿಸುತ್ತಾರೆ. ಅದು ಸಾಧ್ಯವಾಗದಿದ್ದರೆ ರಾಜ್ಯದಲ್ಲಿ ಚುನಾವಣೆ ನಡೆದು, ಕರ್ನಾಟಕ ಅಷ್ಟೇ ಅಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ, ವಿವಿಧ ರಾಜ್ಯಗಳಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಕರ್ನಾಟಕದಿಂದಲೇ ಹಣ ಕಳಿಸಿದೆ. ಒಂದು ವೇಳೆ ಇಲ್ಲಿನ ಸರ್ಕಾರ ಬಿದ್ದರೆ ಇಡೀ ದೇಶದಲ್ಲಿ ಕಾಂಗ್ರೆಸ್ನ ಹಣಕಾಸಿನ ಮೂಲ ಕಡಿತಗೊಂಡಂತಾಗುತ್ತದೆ ಎಂದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥರೆಂದು ಸಾಬೀತಾದಲ್ಲಿ ತಕ್ಷಣದಿಂದಲೇ ಮರ್ಯಾದೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಳಗೆ ಇಳಿಯಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಜತೆಗೆ ಬಂಡೆಗಲ್ಲಿನಂತೆ ನಿಲ್ಲುವುದಾಗಿ ಮೇಲ್ನೋಟಕ್ಕೆ ಹೇಳುತ್ತಿರುವ ಕಾಂಗ್ರೆಸ್ ಮುಖಂಡರು, ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಯುವುದನ್ನೇ ಕಾಯುತ್ತಿದ್ದಾರೆ. ಸಿಎಂ ಕುರ್ಚಿ ಬಗ್ಗೆ ಹೇಳಿಕೆ ನೀಡದಂತೆ ಕಾಂಗ್ರೆಸ್ ಹೈ ಕಮಾಂಡ್ ನೀಡುತ್ತಿರುವ ಸೂಚನೆಯನ್ನೂ ಲೆಕ್ಕಿಸದೇ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ ಎಂದರು.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ ನಡೆಸಿದ ಮುಸ್ಲಿಂ ಗೂಂಡಾಗಳನ್ನು ಸರ್ಕಾರ ತಕ್ಷಣ ಬಂಧಿಸಬೇಕು. ಅಮಾಯಕ ಹಿಂದು ಹೆಣ್ಣು ಮಕ್ಕಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಈಶ್ವರಪ್ಪ, ಇದೊಂದು ಸಣ್ಣ ಘಟನೆ ಎಂದಿರುವ ಗೃಹ ಸಚಿವ ಪರಮೇಶ್ವರ ಹೇಳಿಕೆ ಖಂಡಿಸಿದರು. ಬಾಂಬ್ ಸ್ಪೋಟ ಆದಗಲೂ ಸಣ್ಣ ಘಟನೆ ಎಂದಿರುವ ಗೃಹ ಸಚಿವರಿಗೆ ದೊಡ್ಡ ಘಟನೆ ಎಂದರೆ ಏನು ? ಎಂದು ಪ್ರಶ್ನಿಸಿದರು.
ಬಾಂಗ್ಲಾ ದೇಶದ ಮಾದರಿಯಲ್ಲಿ ಕರ್ನಾಟಕದಲ್ಲಿ ಗಲಭೆಯಾಗುತ್ತದೆ ಎಂದಿದ್ದ ಕಾಂಗ್ರೆಸ್ ಶಾಸಕ ಐವಾನ್ ಡಿಸೋಜಾ ಹೇಳಿಕೆಯೇ ಪಾಕಿಸ್ತಾನಿ ಮನೋಸ್ಥಿತಿಯ ಮುಸ್ಲಿಂರಿಗೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತಕ್ಕೆ ಪ್ರೇರಣೆಯಾಗಿದೆ ಎಂದು ದೂರಿದರು.
ಗಣೇಶ ವಿಸರ್ಜನೆಯ ಮೆರವಣಿಗೆ ಯಾವ ಮಾರ್ಗದಲ್ಲಿ ನಡೆಯಬೇಕು ಎಂಬುದರ ಬಗ್ಗೆ ಮೊದಲೇ ಪೊಲೀಸರಿಂದ ಪರವಾನಿಗೆ ಪಡೆದಿರುತ್ತಾರೆ. ಮಸೀದಿ ಎದುರು ಗಣೇಶ ಮೆರವಣಿಗೆ ಹೋಗಬಾರದೆಂಬ ನಿಯಮ ಅಥವಾ ಕಾನೂನು ಇಲ್ಲ ಎಂದರು.
ಚಾಮುಂಡಿ ಬೆಟ್ಟಕ್ಕೆ ಹೋದ ಸಿಎಂ ಸಿದ್ದರಾಮಯ್ಯ, ವೈಷ್ಣವಿದೇವಿ ದರ್ಶನ ಪಡೆದ ಡಿಸಿಎಂ ಶಿವಕುಮಾರ ಹಿಂದುತ್ವ ವಿಚಾರಗಳ ಬಗ್ಗೆ ಬದಲಾದಂತೆ ತೋರುತ್ತಿದ್ದಾರೆ. ಆದರೂ, ಅವರು ಓಲೈಕೆ ರಾಜಕಾರಣ ಬಿಡುತ್ತಿಲ್ಲ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣ ಬೇಡ ಎಂಬ ಅಪೇಕ್ಷ ಹೊಂದಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಯಡಿಯೂರಪ್ಪ ಕುಟುಂಬದವರು ಮೋದಿ ಅವರ ಅಪೇಕ್ಷೆಯ ವಿರುದ್ಧದ ಮನೋಭಾವನೆ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಸನಗೌಡ ಪಾಟೀಲ ಯತ್ನಾಳ, ಪ್ರತಾಪ ಸಿಂಹ, ಅನಂತಕುಮಾರ ಹೆಗಡೆ ಅವರಂತವರನ್ನು ದೂರ ಇಟ್ಟಿರುವ ಯಡಿಯೂರಪ್ಪ, ಕೇವಲ ತಮ್ಮ ಕುಟುಂಬದವರನ್ನು ಹಾಗೂ ಹೊಗಳುಬಟ್ಟರನ್ನು ಬೆಳೆಸುತ್ತಿದ್ದಾರೆ ಎಂದು ದೂರಿದರು.
ತವರು ಮನೆಗೆ ಹೋಗುವ ಅಪೇಕ್ಷೆ ನನಗೂ ಇದೆ. ಆದರೆ, ಅಲ್ಲಿನ ಅಣ್ಣ, ತಮ್ಮಂದಿರು ಸರಿ ಇಲ್ಲ. ಮೇಲೆ ಕುಳಿತಿರುವ ತಂದೆ-ತಾಯಿ, ಮತ್ತಿತರ ಹಿರಿಯರು ಇದನ್ನು ಗಮನಿಸಬೇಕು. ಬಿಜೆಪಿ ಒಂದಿಬ್ಬರು ಕಟ್ಟಿದ ಪಕ್ಷ ಅಲ್ಲ. ಲಕ್ಷಾಂತರ ಜನರ ಪರಿಶ್ರಮದಿಂದ ಪಕ್ಷ ಇಂದು ದೊಟ್ಟ ಮಟ್ಟಕ್ಕೆ ಬೆಳೆದಿದೆ ಎಂದರು.
ಕಾಂತೇಶ ಈಶ್ವರಪ್ಪ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.