ವೇಮಗಲ್: ಸಚಿವ ಎಂ.ಬಿ.ಪಾಟೀಲ ಅವರು ಆಸಕ್ತಿವಹಿಸಿ ಕಳೆದ 4 ತಿಂಗಳಿಂದ ದೇಶ&ವಿದೇಶ ಪ್ರವಾಸ ಮಾಡಿದ ಪರಿಣಾಮ ಕೋಲಾರದ ವೇಮಗಲ್&-ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಮೊದಲ ಭೂಮಿಪೂಜೆ ಮಾಡಲಾಗಿದೆ ಎಂದು ಮಾಜಿ ಸಭಾಪತಿ ವಿ. ಆರ್ ಸುದರ್ಶನ್ ಹೇಳಿದರು.

ಕೈಗಾರಿಕಾ ಪ್ರದೇಶದಲ್ಲಿ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರದ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನಂತರ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶದಲ್ಲಿ ಯಾರಿಗೆ ಭೂಮಿ ನಿಗದಿಯಾಗಿರುತ್ತದೋ ಅವರು 5 ವರ್ಷದ ಒಳಗೆ ಅಭಿವೃದ್ಧಿ ಮಾಡದಿದ್ದರೇ ಭೂಮಿ ಹಿಂಪಡೆಯಬೇಕು ಎಂದರು.
ಕೆಲವೇ ಕಂಪನಿಗಳು ತಮ್ಮ ಸಿಎಸ್ಆರ್ ಅನುದಾನವನ್ನು ಈ ಭಾಗದಲ್ಲಿ ನೀಡುತ್ತಿದ್ದು, ಉಳಿದ ಕಂಪನಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇಲ್ಲವಾಗಿದೆ. ಅಂಥಹ ಕಂಪನಿಗಳನ್ನು ಗುರುತಿಸಿ ಕಟ್ಟು ನಿಟ್ಟಿನ ನಿರ್ದೇಶನ ನೀಡಬೇಕು. ಈ ಭಾಗದಲ್ಲಿ ಭೂಮಿಯ ಬೆಲೆ ಬಂಗಾರವಾಗಿದೆ. ಮೊದಲ ಹಂತದಲ್ಲಿ ವಶಪಡಿಸಿಕೊಂಡ ಭೂಮಿಗೆ 35 ಲಕ್ಷ ರೂ. ಹಾಗೂ ಎರಡನೇ ಹಂತದಲ್ಲಿ 1.15 ಕೋಟಿ ರೂ. ನಿಗದಿ ಮಾಡಿದ್ದರು. ಆದರೆ, 2ನೇ ಹಂತದ ಹಣ ರೈತರ ಖಾತೆಗೆ ಜಮಾ ಆಗಿಲ್ಲ. ಅತ್ತ ಭೂಮಿಯೂ ಇಲ್ಲ, ಕೈ ತಪ್ಪಿ ಹೋದ ಭೂಮಿಯ ಹಣವೂ ಇಲ್ಲ ಎಂದರೆ ಜನ ಬದುಕುವುದು ಹೇಗೆ ಎಂದು ಪ್ರಶ್ನಿಸಿದರು. ಕುರುಗಲ್ನಿಂದ ಬೆಳಮಾನಹಳ್ಳಿ ಮಾರ್ಗವಾಗಿ ರಸ್ತೆ ಅಭಿವೃದ್ಧಿಪಡಿಸಿದರೆ 10 ಕಿಲೋ ಮೀಟರ್ ಸುತ್ತಿಕೊಂಡು ಹೋಗುವುದನ್ನು ತಪ್ಪಿಸುವುದರ ಜತೆಗೆ ಟ್ರಾಫಿಕ್ ಸಮಸ್ಯೆ ತಪ್ಪಿಸಿದಂತಾಗುತ್ತಾಗುತ್ತದೆ.
ವೇಮಗಲ್ ಕೈಗಾರಿಕಾ ಪ್ರದೇಶದಿಂದ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ 3 ರಿಂದ 4 ಕಿ.ಮೀ ನಲ್ಲಿ ತಲುಪಬಹುದು ಎಂದು ಕೈಗಾರಿಕಾ ಸಚಿವ ಎಂಬಿ.ಪಾಟೀಲ ಅವರಿಗೆ ಮನವಿ ಮಾಡಿದರು. ರೈತ ಮುಖಂಡ ಕುರುಗಲ್ ಮಂಜುನಾಥ್ ಮಾತನಾಡಿ, ಶಿವಂ ಕಂಪನಿ ಸಿಎಸ್ಆರ್ ಹಣ ಹರಿದ್ವಾರ ಮತ್ತು ಜಾರ್ಖಂಡ್ ಭಾಗದಲ್ಲಿ ಖರ್ಚು ಮಾಡಿ ಹೆಚ್ಚುವರಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಆ ಕಂಪನಿ ವಿರುದ್ಧ ಕ್ರಮ ಜರುಗಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದರು. ಸ್ಥಳಿಯರಿಗೆ, ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಉದ್ಯೋಗ ಹಾಗೂ ರೈತರ ಸಮಸ್ಯೆಗಳನ್ನು 15 ದಿನದ ಒಳಗೆ ಬಗೆಹರಿಸಬೇಕು ಎಂದು ಕೆಐಎಡಿಬಿ ಸಿಇಒ ಡಾ.ಮಹೇಶ್ ಅವರಿಗೆ ಸಚಿವ ಎಂ.ಬಿ ಪಾಟೀಲ್ ಸೂಚನೆ ನೀಡಿದರು.