ರಾಮ ಮಂದಿರ ನಿರ್ಮಿಸಲು ಕಾನೂನು ರೂಪಿಸಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

ಇಂದೋರ್(ಮಧ್ಯಪ್ರದೇಶ)​: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಯಾವುದಾದರೂ ಕಾನೂನು ತಂದು ದಾರಿಮಾಡಿಕೊಟ್ಟಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಖಂಡಿತವಾಗಿಯು ಗೆಲ್ಲಲಿದೆ ಎಂದು ವಿಶ್ವ ಹಿಂದು ಪರಿಷತ್​ ನಾಯಕ ವಿ.ಎಸ್​.ಕೊಕ್ಜೆ ಅವರು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣದ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಲು ಚಿಂತಿಸುತ್ತಿರುವ ಕೇಂದ್ರ ಸರ್ಕಾರ ಒಂದು ವೇಳೆ ಹಾಗೆ ಮಾಡಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಯೋಚಿಸುತ್ತಿದೆ ಎಂದು ಕೊಕ್ಜೆ ತಿಳಿಸಿದರು.

ಈ ಮಧ್ಯೆ ಐವರು ನ್ಯಾಯಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠದಲ್ಲಿ ಓರ್ವ ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬ್ದೆ ಅವರು ಅಲಭ್ಯವಾಗಿರುವುದರಿಂದ ಜನವರಿ 29ರ ಮಂಗಳವಾರ ನಡೆಯಬೇಕಿದ್ದ ಅಯೋಧ್ಯೆ ಪ್ರಕರಣದ ವಿಚಾರಣೆಯು ನಡೆಯುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಭಾನುವಾರ ಸುತ್ತೋಲೆ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ ಕೊಕ್ಜೆ ಅವರು, ಅಯೋಧ್ಯೆ ಪ್ರಕರಣ ಸುಪ್ರೀಂ ಕೋರ್ಟ್​ ಆದ್ಯತೆಯ ಪಟ್ಟಿಯಲ್ಲಿಲ್ಲ ಎಂಬುದು ಕಾಣುತ್ತಿದೆ. ನವೆಂಬರ್​ನಲ್ಲಿ ನ್ಯಾಯಾಮೂರ್ತಿಯೊಬ್ಬರು ನಿವೃತ್ತಿ ಹೊಂದುವುದರಿಂದ ಪ್ರಕರಣದ ತೀರ್ಪು ನವೆಂಬರ್​ ಮುಂಚೆಯೇ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.

ನೂತನ ಸಂವಿಧಾನಿಕ ಪೀಠವನ್ನು ರಚಿಸಿದ್ದು, ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎನ್‌.ವಿ. ರಮಣ, ಡಿ.ವೈ. ಚಂದ್ರಚೂಡ್, ಅಬ್ದುಲ್‌ ನಜೀರ್‌, ಎಸ್‌.ಎ. ಬೊಬ್ದೆ ಮತ್ತು ಅಶೋಕ್‌ ಭೂಷಣ್‌ ಇದ್ದಾರೆ. (ಏಜೆನ್ಸೀಸ್)