ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಘಾತ: ಸಿಎಂ ಸ್ಥಾನ ನೀಡದಿದ್ದರೆ ನಮ್ಮ ದಾರಿ ನಮಗೆ ಎಂದ ಮಿತ್ರ ಪಕ್ಷ ಶಿವಸೇನೆ

ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿರುವುದಾಗಿ ಬಿಜೆಪಿ ಮತ್ತು ಶಿವಸೇನೆ ಎರಡು ದಿನಗಳ ಹಿಂದಷ್ಟೇ ಘೋಷಣೆ ಮಾಡಿದ್ದವು. ಆದರೆ, ಈಗ ಮೈತ್ರಿ ಮುರಿದುಕೊಳ್ಳುವ ಮಾತುಗಳು ಕೇಳಿ ಬರುತ್ತಿವೆ.

ಸಿಎಂ ಸ್ಥಾನವನ್ನು ನಮಗೆ ನೀಡಲು ಬಿಜೆಪಿಗೆ ಸಾಧ್ಯವಿಲ್ಲವಾದರೆ ನಮ್ಮೊಂದಿಗೆ ಮಾಡಿಕೊಂಡಿರುವ ಮೈತ್ರಿ ಮುರಿದುಕೊಕೊಳ್ಳಬಹುದು. ನಮ್ಮ ದಾರಿ ನಮಗೆ ಎಂದು ಶಿವಸೇನೆ ಹೇಳಿದೆ.

ಈ ಕುರಿತು ಮಾತನಾಡಿರುವ ಶಿವಸೇನೆಯ ಶಾಸಕ ರಾಮದಾಸ್​ ಕದಮ್​, ” ಮಹಾರಾಷ್ಟ್ರದಲ್ಲಿ ಮೊದಲ ಎರಡೂವರೆ ವರ್ಷ ಶಿವಸೇನೆಯ ಮುಖ್ಯಮಂತ್ರಿ ಮತ್ತು ನಂತರದ ಎರಡೂವರೆ ವರ್ಷ ಬಿಜೆಪಿಯ ಮುಖ್ಯಮಂತ್ರಿ ಎಂಬ ಒಪ್ಪಂದದ ಆಧಾರದಲ್ಲೇ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲುತ್ತದೋ ಆ ಪಕ್ಷದವರೇ ಮುಖ್ಯಮಂತ್ರಿ ಎಂಬ ಮಾತುಗಳು ಬಿಜೆಪಿ ಕಡೆಯಿಂದ ಕೇಳಿ ಬರುತ್ತಿದೆ. ಹೀಗಾದರೆ, ಬಿಜೆಪಿ ಮೈತ್ರಿ ರದ್ದು ಮಾಡಿಕೊಳ್ಳಬಹುದು,” ಎಂದು ಅವರು ಹೇಳಿದ್ದಾರೆ.

ಫೆ.18ರಂದು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ನಾಯಕ ಅಮಿತ್​ ಷಾ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಮಹಾರಾಷ್ಟ್ರ ವಿಧಾನಸಭೆಯಲ್ಲಿ 50:50 ಸೀಟುಗಳನ್ನು ಹಂಚಿಕೊಂಡಿರುವುದಾಗಿಯೂ, ಲೋಕಸಭೆ ಚುನಾವಣೆಯಲ್ಲಿ 48 ಸೀಟುಗಳ ಪೈಕಿ ಬಿಜೆಪಿ 25 ಕ್ಷೇತ್ರಗಳನ್ನು ಮತ್ತು ಶಿವಸೇನೆ 23 ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡಿರುವುದಾಗಿಯೂ ಘೋಷಿಸಿದ್ದರು.

ಇದಾದ ಎರಡೇ ದಿನದಲ್ಲಿ ಸೇನಾ ಮತ್ತು ಬಿಜೆಪಿ ನಡುವಿನ ಮೈತ್ರಿನಲ್ಲಿ ಮುನಿಸು ತಲೆದೋರಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಇದು ಬಿಜೆಪಿಗೆ ಇರುಸುಮುರುಸು ಉಂಟು ಮಾಡಿದೆ.

https://twitter.com/ANI/status/1098203795857772545