More

    ರೋಗಿಗಳ ಜೀವ ಉಳಿಸುವ ಸಂಕಲ್ಪ, ಹೊಸ ತಂತ್ರಜ್ಞಾನದ ಕಾಯಕಲ್ಪ; ಆಂಬುಲೆನ್ಸ್ ತಡವಾದ್ರೆ ನಿಮಿಷಕ್ಕೆ 1000 ರೂಪಾಯಿ ದಂಡ!

    ರಾಜ್ಯಾದ್ಯಂತ ಆರೋಗ್ಯ ಕವಚ ಆಂಬುಲೆನ್ಸ್​ಗಳ ಸೇವೆ ಸಕಾಲಕ್ಕೆ ಸಿಗದೆ ರೋಗಿಗಳು ಸಾವನ್ನಪ್ಪುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಈಗ ದಂಡ ಪ್ರಯೋಗಕ್ಕೆ ಮುಂದಾಗಿದೆ. ಸೇವೆ ಬಯಸುವ ರೋಗಿಗಳ ಸಂಬಂಧಿಕರು ಕರೆ ಮಾಡಿದ ನಂತರ ಸ್ಥಳಕ್ಕೆ ಬರಲು ತಡಮಾಡಿದಲ್ಲಿ 1 ನಿಮಿಷಕ್ಕೆ 1 ಸಾವಿರ ರೂ. ದಂಡ ಬೀಳಲಿದೆ!

    ಹೇಗಿರಲಿದೆ ಹೊಸ ವ್ಯವಸ್ಥೆ?: ಆಂಬುಲೆನ್ಸ್ ವಿಳಂಬ ತಡೆಗೆ ಮೊಬೈಲ್ ಫೋನ್ ಅಪ್ಲಿಕೇಷನ್ ಅಳವಡಿಸಲು ಇಲಾಖೆ ಸಿದ್ಧತೆ ನಡೆಸಿದೆ. ಕ್ಯಾಬ್ ರೀತಿಯಲ್ಲೇ 108 ಆರೋಗ್ಯ ಕವಚ ಆಂಬುಲೆನ್ಸ್ ಬುಕ್ ಮಾಡಬಹುದು. ಇದರಲ್ಲಿನ ಟ್ರಾ್ಯಕಿಂಗ್ ವ್ಯವಸ್ಥೆಯಿಂದ ಆಂಬುಲೆನ್ಸ್ ಚಲನೆ, ಅದು ತಲುಪುವ ನಿಖರ ಸಮಯವನ್ನೂ ಮೊಬೈಲ್ ಮೂಲಕವೇ ತಿಳಿಯಬಹುದಾಗಿದೆ. ಇದಕ್ಕಾಗಿ ಇಲಾಖೆ ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್​ಐಸಿ) ಆಪ್ ಅಭಿವೃದ್ಧಿ ಪಡಿಸಬೇಕೇ ಅಥವಾ ಬಿಡ್​ದಾರರಿಗೆ ವಹಿಸಬೇಕೇ ಎಂಬ ಬಗ್ಗೆ ಐಟಿ ವಿಭಾಗದೊಂದಿಗೆ ಚರ್ಚೆ ನಡೆಯುತ್ತಿದೆ.

    ವಿಶೇಷ ತಂಡ ರಚನೆ: ಹೊಸ ವ್ಯವಸ್ಥೆಯಲ್ಲಿ ಸೇವೆಯ ಗುಣಮಟ್ಟ ಪರಿಶೀಲಿಸಲು ಸರ್ಕಾರದಿಂದ ವಿಶೇಷ ತಂಡ ರಚಿಸಲಾಗುವುದು. ಈ ತಂಡ ಆಂಬುಲೆನ್ಸ್ ಸೇವೆ ಒದಗಿಸುತ್ತಿರುವ ಕುರಿತು ದೈನಂದಿನ ಮಾಹಿತಿ ಸಂಗ್ರಹಿಸಲಿದೆ. ಇದನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸೇವೆಯಲ್ಲಿ ಬದಲಾವಣೆ

    ಪ್ರಸ್ತುತ 108 ಆಂಬುಲೆನ್ಸ್​ಗಳನ್ನು ಹೈದರಾಬಾದ್​ನ ಜಿವಿಕೆ ಸಂಸ್ಥೆ ನಿರ್ವಹಿಸುತ್ತಿದ್ದು, ಇದೀಗ ಸಂಸ್ಥೆಯೊಂದಿಗಿನ ಒಪ್ಪಂದದ ಅವಧಿ ಪೂರ್ಣಗೊಳ್ಳುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಆಂಬುಲೆನ್ಸ್ ಗಳ ನಿರ್ವಹಣೆಗೆ ಹೊಸ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಈ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆ ಆಗಲಿದೆ.

    ಎಷ್ಟು ಆಂಬುಲೆನ್ಸ್ ಇವೆ?

    ಸದ್ಯ ರಾಜ್ಯದಲ್ಲಿ 711 ಆರೋಗ್ಯ ಕವಚ ಆಂಬುಲೆನ್ಸ್ ಗಳಿವೆ. ಸರ್ಕಾರಿ ಆಸ್ಪತ್ರೆಗಳಿಂದ 800 ಆಂಬುಲೆನ್ಸ್ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲ ಸೇರಿ ಸದ್ಯ ರಾಜ್ಯದಲ್ಲಿ ಪ್ರತಿ 90 -95 ಸಾವಿರ ಜನರಿಗೆ 1 ಆಂಬುಲೆನ್ಸ್ ಲಭ್ಯವಿದೆ. ಹೀಗಾಗಿ ಹೆಚ್ಚುವರಿ 100 ಆಂಬುಲೆನ್ಸ್​ಗಳನ್ನು ಸೇರಿಸಲು ಹಾಗೂ ಹಳೆಯದನ್ನು ಬದಲಾಯಿಸಲು 150 ಕೋಟಿ ರೂ. ಅನುದಾನ ನೀಡುವಂತೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    108 ಸೇವೆ ಹೊಣೆ ಹೊತ್ತಿರುವ ಸಂಸ್ಥೆಗೆ ಹಲವು ಬಾರಿ ದಂಡ ವಿಧಿಸಲಾಗಿದೆ. ಪಾರದರ್ಶಕ ಹಾಗೂ ಗುಣಮಟ್ಟದ ಸೇವೆ ಒದಗಿಸಲು ಹೊಸ ತಂತ್ರಜ್ಞಾನ ಅಳವಡಿಕೆ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಟೆಂಡರ್ ಕರೆಯಲಾಗುತ್ತದೆ.

    | ಪಂಕಜ್ ಕುಮಾರ್ ಪಾಂಡೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts