ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಾದರೆ ಅದಕ್ಕೆ ಜಾಗತಿಕ ಸಮುದಾಯವೇ ಹೊಣೆ: ಇಮ್ರಾನ್​ ಖಾನ್​

ಇಸ್ಲಾಮಾಬಾದ್​: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತುಂಬಾ ಹಳಸಿದೆ. ಉಭಯ ರಾಷ್ಟ್ರಗಳ ನಡುವೆ ಯಾವುದೇ ಸಮಯದಲ್ಲಿ ಯುದ್ಧವಾಗಬಹುದು. ಹಾಗೆ ಆದಲ್ಲಿ ಅದಕ್ಕೆ ಜಾಗತಿಕ ಸಮುದಾಯವೇ ಹೊಣೆಯಾಗುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಹೇಳಿದ್ದಾರೆ.

ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪಾಕ್​ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್​ನಲ್ಲಿರುವ ಸಂಸತ್​ನ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡಿದರು. ಕಾಶ್ಮೀರ ಕುರಿತು ವಿಶ್ವಸಂಸ್ಥೆ ಸೇರಿ ಜಾಗತಿಕ ಮಟ್ಟದ ಪ್ರತಿಯೊಂದು ವೇದಿಕೆಯಲ್ಲೂ ಪದೇಪದೆ ಪ್ರಸ್ತಾಪಿಸುವುದಾಗಿ ಹೇಳಿದರು.

ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಜಾಗತಿಕ ಸಮುದಾಯ ಜಾಣಮೌನಕ್ಕೆ ಒಳಗಾಗಿದೆ. ಇದು ಏಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತಂದುಕೊಡುತ್ತಿದ್ದ ಭಾರತದ ಸಂವಿಧಾನದ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದು ಭಾರಿ ಪ್ರಮಾದ ಎಸಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಈ ವಿಷಯವಾಗಿ ತಮ್ಮ ಕೊನೆಯ ನಡೆಯನ್ನು ನಡೆಸಿದ್ದಾರೆ. ತನ್ಮೂಲಕ ಈ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಯನ್ನಾಗಿಸಿದ್ದಾರೆ. ಹಾಗಾಗಿ ಅವರಿಬ್ಬರ ಪಾಲಿಗೂ ಇದು ತುಂಬಾ ದುಬಾರಿಯಾಗಿ ಪರಿಣಮಿಸಲಿದೆ ಎಂದು ಎಚ್ಚರಿಸಿದರು.

ಇಡೀ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಿ ಭಾರತ ಕಾಶ್ಮೀರಕ್ಕೆ ವಿರುದ್ಧವಾದ ಕ್ರಮವನ್ನು ಕೈಗೊಂಡಿದೆ. ಈ ಕುರಿತು ಜಾಗತಿಕವಾಗಿ ಗಮನ ಸೆಳೆಯುವ ಮೂಲಕ ಇದಕ್ಕೆ ನೀವೇ ಹೊಣೆ ಎಂಬುದನ್ನು ಸಾರಿ ಸಾರಿ ಹೇಳಲಿದ್ದೇನೆ. ಈ ವಿಷಯದಲ್ಲಿ ನಾನು ಕಾಶ್ಮೀರದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ಹೇಳಿದರು.

ಅಂತ್ಯದವರೆಗೂ ಹೋರಾಟ
ಪಾಕ್​ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಭಾರತ ಯೋಜನೆ ರೂಪಿಸಿದೆ. ಹಾಗೇನಾದರೂ ದಾಳಿ ಮಾಡಿದ್ದಲ್ಲಿ, ಬೀಳುವ ಪ್ರತಿಯೊಂದು ಇಟ್ಟಿಗೆಗೂ, ಒಂದೊಂದು ಕಲ್ಲಿನಿಂದ ಉತ್ತರ ನೀಡಲು ಪಾಕಿಸ್ತಾನ ಸನ್ನದ್ಧವಾಗಿದೆ. ಅದು ಏನೆಲ್ಲ ಶಕ್ತಿ ಪ್ರಯೋಗಿಸುತ್ತೀರೋ ಅದಕ್ಕೆ ಪ್ರತಿಯಾಗಿ ಭಾರಿ ಶಕ್ತಿಯನ್ನು ಪ್ರಯೋಗಿಸಿ ಪ್ರತ್ಯುತ್ತರ ನೀಡಲಿದ್ದೇವೆ. ಕೊನೆಯವರೆಗೂ ಹೋರಾಟ ಮಾಡುತ್ತೇವೆ. ನಾವು ಯುದ್ಧವನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ. ಒಂದು ವೇಳೆ ಯುದ್ಧ ನಡೆದದ್ದೇ ಆದಲ್ಲಿ, ಅದಕ್ಕೆ ಜಾಗತಿಕ ಸಮುದಾಯವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಸೆಪ್ಟೆಂಬರ್​ನಲ್ಲಿ ಭಾರಿ ಜನಬೆಂಬಲ
ಸೆಪ್ಟೆಂಬರ್​ನಲ್ಲಿ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಕಾಶ್ಮೀರದ ವಿಷಯವಾಗಿ ಜಾಗತಿಕ ಮುಸ್ಲಿಂ ಸಮುದಾಯವಲ್ಲದೆ ಇಡೀ ಜಗತ್ತು ನಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಇಮ್ರಾನ್​ ಖಾನ್​ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *