More

  ವಿಗ್ರಹ ಚೋರರ ವಿಲಕ್ಷಣ ಲೋಕ

  ಚನ್ನಕೇಶವ ದೇವಸ್ಥಾನದಿಂದ ಹೊಯ್ಸಳರ ಕಾಲದ ವಿಗ್ರಹಗಳ ಕಳವು; ಪಾಪಾಗ್ನಿ ದೇವಸ್ಥಾನದಿಂದ ಐದು ಶತಮಾನಗಳಷ್ಟು ಹಳೆಯ ಪಂಚಲೋಹದ ಮೂರ್ತಿಗಳು ನಾಪತ್ತೆ; ಮುಧೋಳದ ದೇಗುಲದಿಂದ ರಾತ್ರೋರಾತ್ರಿ ಕಾಣೆಯಾದ ಶ್ರೀರಾಮನ ವಿಗ್ರಹ… ಇಂತಹ ಸುದ್ದಿಗಳನ್ನು ನೀವು ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೀರಿ. ಇವು ಮೇಲ್ನೋಟಕ್ಕೆ ಅಲ್ಲೊಂದು ಇಲ್ಲೊಂದು ನಡೆದ ಸಣ್ಣಪುಟ್ಟ ಕಳ್ಳತನದ ಘಟನೆಗಳಂತೆ ಕಾಣುತ್ತವೆ. ಆದರೆ ಇವುಗಳ ಹಿಂದೆ ಅತ್ಯಂತ ಸಂಘಟಿತವಾಗಿ ಕೆಲಸ ಮಾಡುವ ಅಂತಾರಾಷ್ಟ್ರೀಯ ಜಾಲವೇ ಇದೆ. ಅದರ ಕಾರ್ಯನಿರ್ವಹಣೆ ಅತ್ಯಂತ ನಿಗೂಢ ಮತ್ತು ಕುತೂಹಲಕರ.

   ಭಾರತ ದೇಶದಷ್ಟು ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ಇನ್ನೊಂದು ಸ್ಥಳ ಇಡೀ ಜಗತ್ತಿನಲ್ಲೇ ಇಲ್ಲ. ಇಲ್ಲಿಯ ಧಾರ್ವಿುಕ ಸಾಮಾಜಿಕ ಆಚರಣೆಗಳು, ಸಂಗೀತ ನೃತ್ಯ ವೈವಿಧ್ಯ, ಕರಕುಶಲ ಶಿಲ್ಪ ಕಲೆ, ದೇವರ ವಿಗ್ರಹಗಳ ಬಗ್ಗೆ ಪರಕೀಯರಿಗೆ ಮೊದಲಿನಿಂದಲೂ ಕುತೂಹಲ. ಅವುಗಳನ್ನು ತಮ್ಮದಾಗಿಸಿಕೊಳ್ಳುವ ಹಂಬಲ. ಕೆಲವರು ಶ್ರದ್ಧೆ ಪರಿಶ್ರಮ ಪ್ರಾಮಾಣಿಕ ಮಾರ್ಗಗಳಿಂದ ಅವುಗಳನ್ನು ಕರಗತ ಮಾಡಿಕೊಳ್ಳಲು ಬಯಸಿದರೆ ಇನ್ನು ಕೆಲವರದು ವಾಮಮಾರ್ಗ. ಕದ್ದು ಸಾಗಿಸುವ ಧಾವಂತ. ಏಕೆಂದರೆ ಭಾರತದ ಈ ಕಲಾಕೃತಿಗಳಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಅವರ ದೇಶದಲ್ಲಿರುವ ಸಾಂಪ್ರದಾಯಿಕ ಕಲಾಕೃತಿಗಳು ನಮ್ಮಲ್ಲಿರುವಷ್ಟು ನಯನಮನೋಹರವಾಗಿರುವುದಿಲ್ಲ.

  ಭಾರತದ ಎಲ್ಲ ರಾಜ್ಯಗಳಲ್ಲಿ ವಿಗ್ರಹ ಕಳವು ಪ್ರಕರಣಗಳು ನಡೆಯುತ್ತಿದ್ದರೂ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಹೆಚ್ಚು. ಏಕೆಂದರೆ ಪಂಚಲೋಹ ಮತ್ತು ಶಿಲ್ಪದಲ್ಲಿ ಕೆತ್ತಿದ ಆಕರ್ಷಕ ಕಲಾಕೃತಿಗಳು ಇಲ್ಲೇ ಜಾಸ್ತಿ. ತಮಿಳುನಾಡಿನವರು ತಮ್ಮಲ್ಲಿನ ಸಾಂಸ್ಕೃತಿಕ ಸಂಪತ್ತಿನ ಕೂಲಂಕಷ ಅಧ್ಯಯನ-ದಾಖಲಾತಿ ಮಾಡಿದ್ದಾರೆ. ಒಂದು ವೇಳೆ ಕಳವಾದ ವಿಗ್ರಹಗಳು ವಿದೇಶದಲ್ಲಿ ಪತ್ತೆಯಾದರೆ, ಇಂತಹ ದಾಖಲಾತಿ ಇರುವವರು ಮಾತ್ರ ಅವುಗಳ ಮರುಸ್ವಾಧೀನಕ್ಕೆ ಹಕ್ಕು (ರೆಸ್ಟಿಟ್ಯೂಷನ್ ಕ್ಲೇಮ್ ಮಂಡಿಸಲು ಸಾಧ್ಯ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಈ ರೀತಿಯ ಅಧ್ಯಯನ, ದಾಖಲಾತಿ ಇನ್ನೂ ನಡೆದಿಲ್ಲ. ಹಾಗಾಗಿ ಈ ರಾಜ್ಯಗಳಲ್ಲಿ ವಿಗ್ರಹ ಕಳವು, ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.

  ಕಳ್ಳರ ಕಣ್ಣು ಬೀಳುವುದು ಹೀಗೆ: ದಕ್ಷಿಣದ ರಾಜ್ಯಗಳಲ್ಲಿ ಸಾವಿರಾರು ಪುರಾತನ ದೇವಾಲಯಗಳಿವೆ. ಗುಡ್ಡಗಾಡು, ಅರಣ್ಯ, ಪಾಳುಬಿದ್ದ ಊರುಗಳಲ್ಲಿಯೂ ನೂರಾರು ದೇವಸ್ಥಾನಗಳಿವೆ. ಅವು ದುರ್ಗಮ ಪ್ರದೇಶಗಳಲ್ಲಿ ಇರುವುದರಿಂದ ಸಾಮಾನ್ಯ ಜನರು ಅಲ್ಲಿಗೆ ತಲುಪುವುದು ಕಷ್ಟ. ಜೀರ್ಣ ಸ್ಥಿತಿಯಲ್ಲಿರುವ ಆ ದೇವಾಲಯಗಳಿಗೆ ಭಕ್ತರು ವರ್ಷಕ್ಕೊಮ್ಮೆ ಹೋಗಿ ಪೂಜೆ-ಜಾತ್ರೆ ಮಾಡಿದರೆ ಅದೇ ಹೆಚ್ಚು. ಬಾಕಿ ದಿನಗಳಲ್ಲಿ ಅಲ್ಲಿ ಕಾವಲುಗಾರರೂ ಇರುವುದಿಲ್ಲ. ಕಳ್ಳಸಾಗಾಣಿಕೆದಾರರಿಗೆ ಇಂತಹ ದೇವಸ್ಥಾನಗಳೇ ಟಾರ್ಗೆಟ್.

  ಇಂತಹ ದೇವಾಲಯಗಳಲ್ಲಿ ಪ್ರತಿಷ್ಠಾಪಿಸದೆ ಇರುವ ಅನೇಕ ಅದ್ಭುತ ಮೂರ್ತಿಶಿಲ್ಪಗಳಿವೆ. ಸಾಮಾನ್ಯವಾಗಿ ಗರ್ಭಗುಡಿಯಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಅದರಷ್ಟೇ ಆಕರ್ಷಕವಾದ ಉತ್ಸವಮೂರ್ತಿಗಳನ್ನು ಹಬ್ಬಹರಿದಿನ, ಜಾತ್ರೆಯ ಸಂದರ್ಭದಲ್ಲಿ ಊರ ತುಂಬ ಮೆರವಣಿಗೆ ಮಾಡುತ್ತಾರೆ. ಇವುಗಳ ‘ಕಲಾಶ್ರೀಮಂತಿಕೆ’ ಕಳ್ಳಸಾಗಾಣಿಕೆದಾರರ ಕಣ್ಣಿಗೆ ಬೀಳುವುದು ಆಗಲೇ. ಇನ್ನು ಕೆಲವು ದೇವಾಲಯಗಳಲ್ಲಿ ಬಡತನದ ಕಾರಣ, ವರ್ಷಾನುಗಟ್ಟಲೆ ಸರಿಯಾದ ಆದಾಯವಿಲ್ಲದೇ, ವಿಗ್ರಹಗಳ ಬೆಲೆ ಗೊತ್ತಿಲ್ಲದೆ, ಅತಿ ಕಡಿಮೆ ಬೆಲೆಗೆ ಅರ್ಚಕರೇ ವಿಗ್ರಹಗಳನ್ನು ಮಾರುವುದೂ ಉಂಟು. ಅಷ್ಟೇ ಅಲ್ಲ, ಉತ್ಖನನ ಮಾಡುವಾಗ ಭೂಗರ್ಭದಿಂದ ಹೊರತೆಗೆಯಲಾಗುವ ಅಮೂಲ್ಯ ವಿಗ್ರಹಗಳೂ ಪುಡಿಗಾಸಿಗಾಗಿ ಕಳ್ಳಸಾಗಾಣಿಕೆದಾರರ ಕೈಸೇರುತ್ತವೆ. ಸ್ಥಳೀಯರಿಗೆ ಅದರ ಬೆಲೆ ಗೊತ್ತಿಲ್ಲದ್ದರಿಂದ ಐನೂರು, ಸಾವಿರ ರೂ.ಗೆ ಮಾರಿಬಿಡುತ್ತಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದೇ ವಿಗ್ರಹಗಳು ಮಿಲಿಯಗಟ್ಟಲೆ ಡಾಲರ್​ಗಳ ಲೆಕ್ಕದಲ್ಲಿ ಮಾರಾಟವಾಗುತ್ತವೆ.

  ವಿಗ್ರಹಗಳ ಕಳ್ಳಸಾಗಾಣಿಕೆ ಮಾಡುವ ಅಂತಾರಾಷ್ಟ್ರೀಯ ಜಾಲದ ಸದಸ್ಯರು ಮೊದಲಿಗೆ ಕಳವು ಮಾಡಬಹುದಾದ ಸ್ಥಳಗಳಿಗೆ ಭೇಟಿ ನೀಡಿ, ಮಧ್ಯವರ್ತಿಗಳ ಮೂಲಕ ನಿಖರವಾದ ಮಾಹಿತಿ ಸಂಗ್ರಹಿಸುತ್ತಾರೆ. ಕಳವಿಗೆ ಸಹಕರಿಸುವವರಿಗೆ ಮೊದಲೇ ಸ್ವಲ್ಪ ಹಣ ಕೊಡುತ್ತಾರೆ. ಅವರು ಮತ್ತೆ ಕೆಲವರ ನೆರವು ಪಡೆಯುತ್ತಾರೆ. ಹೀಗೆ ಕಳವಿನ ಹೊಣೆಗಾರಿಕೆ ಕೈಯಿಂದ ಕೈಗೆ ಬದಲಾಗಿ, ಅಂತಿಮವಾಗಿ ವಿಗ್ರಹಗಳು ಕಳ್ಳಸಾಗಣೆದಾರರನ್ನು ತಲುಪುತ್ತವೆ.

  ಆಧುನಿಕ ತಂತ್ರಜ್ಞಾನ ಬಳಕೆ: ಟೆಕ್ನಾಲಜಿಯಲ್ಲಿನ ಆವಿಷ್ಕಾರದಿಂದಾಗಿ ಈಗ ಕಳ್ಳರು ಸೋಷಿಯಲ್ ಮೀಡಿಯಾ ಮೂಲಕ, ಯಾವ ವಿಗ್ರಹಗಳನ್ನು ಕಳವು ಮಾಡಬಹುದು, ಯಾವ ವಿಗ್ರಹಗಳು ಈಗಾಗಲೇ ಕಳ್ಳತನ ಮಾಡಲಾಗಿದ್ದು ಸಾಗಾಣಿಕೆಗೆ ಸಿದ್ಧವಿದೆ ಎಂಬ ಮಾಹಿತಿಯನ್ನು ಖರೀದಿದಾರರಿಗೆ ತಿಳಿಸುವಷ್ಟು ಮುಂದುವರೆದಿದ್ದಾರೆ. ಇವರೊಂದಿಗೆ ಕೈ ಮಿಲಾಯಿಸಿರುವ ಆರ್ಟ್ ಮಾರ್ಕೆಟ್​ನವರೂ ಕಳ್ಳಮಾಲನ್ನು ಜೋಪಾನ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಕಳ್ಳತನವಾದ ವಸ್ತುವನ್ನು ಜನರು ಮರೆಯುವವರೆಗೂ ವರ್ಷಾನುಗಟ್ಟಲೆ ಮರೆಮಾಚುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಕಳ್ಳಸಾಗಾಣಿಕೆಗೆ ಭಯೋತ್ಪಾದನೆ ಜಾಲದ ನಂಟೂ ದೊರೆತಿದೆ. ಶ್ರೀಮಂತ ದಾನಿಗಳಿಗೆ, ದೊಡ್ಡ ದೊಡ್ಡ ಮ್ಯೂಸಿಯಮ್ಳಿಗೆ ದಾನ ಕೊಡುವಂತೆ ತೋರಿಸಿ ಅದರಿಂದ ಬಂದ ಹಣವನ್ನು ಭಯೋತ್ಪಾದಕರಿಗೆ ನೀಡಲಾಗುತ್ತಿದೆ.

  ಹಾವಳಿ ತಡೆಗೆ ಎಎಸ್​ಐ ಪ್ರಯತ್ನ: ಸಾಂಸ್ಕೃತಿಕ ಸಂಪತ್ತಿನ ಕಳ್ಳಸಾಗಣೆಯನ್ನು ತಡೆಯಲು ನಮ್ಮಲ್ಲಿ ಅನೇಕ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಶ್ರಮಿಸುತ್ತಿವೆ. ಅವುಗಳಲ್ಲಿ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್​ಐ), ಇಂಡಿಯಾ ಪ್ರೌಡ್ ಪ್ರಾಜೆಕ್ಟ್ (ಐಪಿಪಿ) ಹಾಗೂ ಪೊಲೀಸ್ ಇಲಾಖೆ ಪ್ರಮುಖವಾದವುಗಳು. ಮೈಸೂರಿನ ಎಎಸ್​ಐನಿಂದ 609 ಸ್ಮಾರಕಗಳು, 200 ಪರಂಪರೆ ಕಟ್ಟಡಗಳನ್ನು ಪಟ್ಟಿ ಮಾಡಲಾಗಿದೆ. ಈಗ ಸಮೀಕ್ಷೆ ಶುರುವಾಗಿದ್ದು, 2-3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇವುಗಳ ಡೇಟಾ ಬೇಸ್ ಸಿದ್ಧಗೊಳ್ಳುತ್ತಿದೆ. ಸಂರಕ್ಷಣೆ ಮತ್ತು ಥ್ರೀಡಿ ಮ್ಯಾಪಿಂಗ್​ಗೆ ಪ್ರತ್ಯೇಕ ತಂಡಗಳು ಕೆಲಸ ಮಾಡುತ್ತಿವೆ. ಈಗಾಗಲೇ ಮೈಸೂರು ತಾಲೂಕಿನಲ್ಲಿ 25-30 ಹಳ್ಳಿಗಳ ಶೋಧನೆ ಆಗಿದೆ. ನ್ಯಾಷನಲ್ ಮಾನ್ಯುಮೆಂಟ್ ಮಿಷನ್ ಆನ್ ಆಂಟಿಕ್ವಿಟೀಸ್ (ಎನ್​ಎಂಎಂಎ) ಸಂಸ್ಥೆಯವರು ವಸ್ತುಗಳ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದು ಕೊನೆಗೆ ರಾಷ್ಟ್ರಮಟ್ಟದ ರಿಜಿಸ್ಟರ್​ನಲ್ಲಿ ದಾಖಲಾಗುತ್ತದೆ.

  ಯಾವುದೇ ಕಲಾಕೃತಿಯನ್ನು ಹೊರದೇಶಕ್ಕೆ ಒಯ್ಯಬೇಕಾದರೆ ಅದಕ್ಕೆ ನಿರಾಕ್ಷೇಪಣ ಪತ್ರ (ಎನ್​ಒಸಿ)ಪಡೆದಿರಬೇಕು. ಕಲಾಕೃತಿಯು ಆಂಟಿಕ್ವಿಟಿಯೋ, ನಾನ್​ಆಂಟಿಕ್ವಿಟಿಯೋ ಎಂಬುದನ್ನು ಪರೀಕ್ಷಿಸಿ ನಿರ್ಧರಿಸಲು ಎಎಸ್​ಐನ ಎಕ್ಸ್​ಪರ್ಟ್ ಅಡ್ವೈಸರಿ ಕಮಿಟಿ ಮೀಟಿಂಗ್ ನಡೆಯುತ್ತದೆ. ನಂತರವೇ ಕಸ್ಟಮ್ಸ್​ನವರು ಅದನ್ನು ಒಯ್ಯಲು ಅನುಮತಿ ನೀಡುತ್ತಾರೆ. ಇದು ಸುಲಭ ವಿಧಾನ. ಕೆಲವರು ಹಾಗೆ ಮಾಡದೆ ನೇರವಾಗಿ ಒಯ್ಯುವ ಪ್ರಯತ್ನ ಮಾಡಿ ಕಷ್ಟಕ್ಕೊಳಗಾಗುತ್ತಾರೆ. ಆಗ ಎಎಸ್​ಐ ಏನೂ ಮಾಡಲು ಸಾಧ್ಯವಾಗುವುದಿಲ್ಲ. ದಕ್ಷಿಣ ಭಾರತದ ಕಸ್ಟಮ್ಸ್ ಅಧಿಕಾರಿಗಳಿಗೆ ಇತ್ತೀಚೆಗೆ ಕಳ್ಳಸಾಗಣೆ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ನಡೆಸಲಾಯಿತು. ಕಸ್ಟಮ್ಸ್, ವಿಜಿಲೆನ್ಸ್, ಆರ್ಕಿಯಾಲಜಿ ಕಾನೂನುಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು. ಅಲ್ಲಿ ತಾವು ಎದುರಿಸುತ್ತಿರುವ ತೊಂದರೆಗಳನ್ನು ಅಧಿಕಾರಿಗಳು ವಿವರಿಸಿದರು. ನಿವಾರಣೋಪಾಯಗಳನ್ನೂ ರ್ಚಚಿಸಲಾಯಿತು.

  ಇಂಡಿಯಾ ಪ್ರೖೆಡ್ ಪ್ರಾಜೆಕ್ಟ್: ಸಿಂಗಪೂರ್​ನಲ್ಲಿ ನೆಲೆಸಿರುವ ಭಾರತೀಯ ವಿಜಯ್ಕುಮಾರ್ ಸ್ಥಾಪಿಸಿದ ಸಂಸ್ಥೆ ಇದು. ಲಂಡನ್​ನಲ್ಲಿ ಸಿಎ ಆಗಿರುವ ಅನುರಾಗ್ ಸಕ್ಸೇನಾ ಇದರ ಸಹಸ್ಥಾಪಕ. ನೂರಾರು ದೇಶಪ್ರೇಮಿ ಯುವಕ/ಯುವತಿಯರ ಬೆಂಬಲ ಇದಕ್ಕಿದೆ. ಪುರಾತನ ವಿಗ್ರಹಗಳ ಕಳ್ಳಸಾ ಗಣೆ-ಮಾರಾಟ ತಡೆಯುವುದು, ಈಗಾಗಲೇ ಕಳ್ಳಸಾಗಣೆಯಾಗಿರುವ ವಿಗ್ರಹಗಳನ್ನು ಭಾರತಕ್ಕೆ ವಾಪಸ್ ತರುವುದು ಈ ಸಂಸ್ಥೆಯ ಉದ್ದೇಶ. ಈವರೆಗೆ ಇಂಥ 47 ವಿಗ್ರಹಗಳ ಮರುಸ್ವಾಧೀನ ಐಪಿಪಿಯಿಂದ ಸಾಧ್ಯವಾಗಿದೆ. ಇನ್ನೂ 87 ವಿಗ್ರಹಗಳನ್ನು ಗುರುತಿಸಿದ್ದು ಅವುಗಳ ಮರುಸ್ವಾಧೀನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ. ಜತೆಗೆ ನಮ್ಮ ಸಾಂಸ್ಕೃತಿಕ ಸಂಪತ್ತಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ.

  ಪೊಲೀಸ್ ಇಲಾಖೆ ಸ್ಪಂದನೆ: ಈ ಮೊದಲು ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಮಾತ್ರ ಐಡಲ್ ವಿಂಗ್ ಇತ್ತು. ಎರಡು ತಿಂಗಳ ಹಿಂದೆ ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿಯೂ ಈ ವಿಂಗ್ ಆರಂಭಿಸಲಾಗಿದೆ. ಮಂಗಳೂರಿನ ದೇಗುಲದ ವಿಗ್ರಹ ಕಳವಾದ ನಂತರ ಸರ್ಕಾರ ಎಲ್ಲ ದೇವಾಲಯಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಆರಂಭಿಸಿದೆ.

  ದಾಖಲಾತಿ ಅತ್ಯಂತ ಮುಖ್ಯ: ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ವಿಗ್ರಹ ಕಳ್ಳಸಾಗಣೆಯ ಹಾವಳಿ ಜೋರಾಗಿತ್ತು. 1947ರಲ್ಲಿ ಎಕ್ಸ್​ಪೋರ್ಟ್ ಆಂಟಿಕ್ವಿಟಿ ಕಂಟ್ರೋಲ್ ಆಕ್ಟ್ ಬಂತು. ಬಳಿಕ ಅದರಲ್ಲಿನ ನ್ಯೂನತೆ ಸರಿಪಡಿಸಿ 1972ರಲ್ಲಿ ಆಂಟಿಕ್ವಿಟಿ ಆಂಡ್ ಆರ್ಟ್ ಟ್ರೆಷರ್ ಆಕ್ಟ್ ಜಾರಿಗೊಳಿಸಲಾಯಿತು. ಪುರಾತನ ವಸ್ತುಗಳನ್ನು ಇಟ್ಟುಕೊಳ್ಳಲು ಮೊದಲು ಯಾರ ಅಪ್ಪಣೆಯೂ ಬೇಕಿರಲಿಲ್ಲ. ಈಗ ಅದಕ್ಕೂ ಲೈಸೆನ್ಸ್ ಬೇಕು. ರಿಜಿಸ್ಟ್ರೇಶನ್ ಆಕ್ಟ್ ಜಾರಿಯಾಗಿರುವುದರಿಂದ ಯಾರೂ ಅವನ್ನು ವಿದೇಶಕ್ಕೆ ಒಯ್ಯುವಂತಿಲ್ಲ. ಈ ಆಕ್ಟ್​ನಡಿ ಇದುವರೆಗೆ ದೇಶದಾದ್ಯಂತ ನಾಲ್ಕೂವರೆ ಲಕ್ಷ ಪುರಾತನ ವಸ್ತುಗಳು ನೋಂದಣಿ ಆಗಿವೆ. ಕಲ್ಲು, ಕಂಚು ಮುಂತಾಗಿ ಎಲ್ಲ ಥರದ ವಿಗ್ರಹಗಳು, ವರ್ಣಚಿತ್ರಗಳು, ಹಸ್ತಪ್ರತಿಗಳು, ಮರದ ಕೆತ್ತನೆಗಳು ಮುಂತಾದವುಗಳನ್ನು ದಾಖಲಿಸುವುದು ಈ ಕಾಯ್ದೆ ಪ್ರಕಾರ ಕಡ್ಡಾಯ. ಮುಂದೊಂದು ದಿನ ಇವು ಕಳ್ಳಸಾಗಣೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವುಗಳ ಹಕ್ಕು ಪಡೆಯಲು ಈ ಡೇಟಾ ಬೇಕಾಗುತ್ತದೆ. ಅದರೊಂದಿಗೆ ಎಫ್​ಐಆರ್, ಫೋಟೋ ಇದ್ದರೆ ಮರುಸ್ವಾಧೀನ ಸುಲಭ.

  ಪ್ರಾಚೀನತೆ ಯಾರು ನಿರ್ಧರಿಸುತ್ತಾರೆ?: ಒಂದು ವಸ್ತು ಪುರಾತನವೋ ಅಲ್ಲವೋ ಎಂಬುದನ್ನು ನಿರ್ಧರಿಸುವು ದಕ್ಕೂ ನಿರ್ದಿಷ್ಟ ಮಾನದಂಡಗಳಿವೆ. ಚೋಳ, ಹೊಯ್ಸಳ ಇತ್ಯಾದಿ ಪ್ರತಿಯೊಂದು ಸಾಮ್ರಾಜ್ಯದ ಆಳ್ವಿಕೆಯ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಚೋಳರ ಕಾಲದ ಕಲಾಕೃತಿಗಳಲ್ಲಿ ಕಾಣುವ ವಿವರಗಳು ಹೊಯ್ಸಳರ ಕಲಾಕೃತಿಗಳಲ್ಲಿ ಇರುವುದಿಲ್ಲ. ಕಲ್ಲು, ಆಕೃತಿ, ಕೆತ್ತನೆ, ಲಿಪಿ ಎಲ್ಲವೂ ವಿಭಿನ್ನವಾಗಿರುತ್ತವೆ. ಇತ್ತೀಚಿನ ಕಲಾಕೃತಿಯಾದರೆ ಅದನ್ನು ಅಧಿಕಾರಿಗಳು ಸುಲಭವಾಗಿ ಪತ್ತೆ ಮಾಡುತ್ತಾರೆ.

  ನಾಗರಿಕರ ಹೊಣೆ ಏನು?: ಬಹಳಷ್ಟು ಮನೆಗಳಲ್ಲಿ ತಲೆತಲಾಂತರದಿಂದ ಕಾಪಾಡಿಕೊಂಡು ಬಂದ ಪುರಾತನ ಕಾಲದ ವಸ್ತುಗಳಿರುತ್ತವೆ. ಸಣ್ಣಪುಟ್ಟ ದೇವಸ್ಥಾನಗಳಲ್ಲಿಯೂ ಬಹುಪ್ರಾಚೀನ ವಿಗ್ರಹಗಳಿರುತ್ತವೆ. ಅವುಗಳನ್ನು ನೋಂದಾಯಿಸಲು ಹೋದರೆ ಸರ್ಕಾರವೇ ವಶಪಡಿಸಿಕೊಂಡುಬಿಡುತ್ತದೆ ಎಂಬ ತಪ್ಪುಕಲ್ಪನೆ ಹಲವರಲ್ಲಿದೆ. ಎಎಸ್​ಐನವರು ಅವನ್ನು ದಾಖಲಿಸಿ ಪ್ರಮಾಣಪತ್ರದೊಡನೆ ಹಿಂದಿರುಗಿಸುತ್ತಾರೆ. ಒಂದು ವೇಳೆ ಕಳವಾದರೆ ಆ ದಾಖಲೆಯನ್ನಾಧರಿಸಿ ಹುಡುಕಲು ಸಹಾಯವಾಗುತ್ತದೆ. ಇದಕ್ಕಾಗಿ ಎಎಸ್​ಐ ಆಗಾಗ ನೋಂದಣಿ ಅಭಿಯಾನವನ್ನೂ ನಡೆಸುತ್ತದೆ. ಕಾಯ್ದೆ ಪ್ರಕಾರ 100 ವರ್ಷಗಳಷ್ಟು ಪುರಾತನವಾದ ವಸ್ತು ಆಂಟಿಕ್ವಿಟಿ ಎಂದು ಪರಿಗಣಿತವಾಗುತ್ತದೆ. ಅಂಥವನ್ನು ಕಡ್ಡಾಯವಾಗಿ ನೋಂದಾಯಿಸಲೇಬೇಕು. ಎಎಸ್​ಐನ ನೋಂದಣಿ ಕಚೇರಿ ಶ್ರೀರಂಗಪಟ್ಟಣದ ದರಿಯಾದೌಲತ್​ನಲ್ಲಿದೆ.

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಯ್ದೆ: ಸಾಂಸ್ಕೃತಿಕ ಸಂಪತ್ತಿನ ಲೂಟಿ 1950ರಿಂದ 70ರವರೆಗಿನ ಅವಧಿಯಲ್ಲಿ ಮೇರೆ ಮೀರಿ, ಭಾರತ ಮತ್ತು ಇಟಲಿ ಇದನ್ನು ತಡೆಯಲು ಅಂತಾರಾಷ್ಟ್ರೀಯ ಕಾನೂನು ರೂಪಿಸುವಂತೆ ವಿಶ್ವಸಂಸ್ಥೆಯಲ್ಲಿ ಜಾಯಿಂಟ್ ಕ್ಯಾಂಪೇನ್ ಪ್ರಾರಂಭಿಸಿದವು. ಪರಿಣಾಮವಾಗಿ 1972ರಲ್ಲಿ ಸಾಂಸ್ಕೃತಿಕ ಸಂಪತ್ತಿನ ರಕ್ಷಣೆ ಕಾಯ್ದೆಯನ್ನು ವಿಶ್ವಸಂಸ್ಥೆ ರೂಪಿಸಿತು. ಆದರೆ ಇದರ ನಿಯಮ-ಸೂಚನೆಗಳನ್ನು ಭಾರತ ಸರಿಯಾಗಿ ಅನುಸರಿಸಲಿಲ್ಲ. ಪರಿಣಾಮವಾಗಿ ಅಂತಾರಾಷ್ಟ್ರೀಯ ಹರಾಜು ಸಂಸ್ಥೆಗಳ ಪ್ರತಿನಿಧಿಗಳು ಭಾರತಕ್ಕೆ ಪದೇಪದೆ ಭೇಟಿ ಕೊಟ್ಟು ಸ್ಥಳೀಯರ ಸಹಾಯದಿಂದ ಪ್ರಾಚೀನವಸ್ತುಗಳನ್ನು ಕಳವು ಮಾಡಿಸಿ ಕಳ್ಳಸಾಗಾಣಿಕೆ ಮಾಡಲಾರಂಭಿಸಿದರು. ಅದು ಈಗಲೂ ಅನೂಚಾನವಾಗಿ ಮುಂದುವರೆಯುತ್ತಿದೆ.

  ಇತ್ತೀಚೆಗಷ್ಟೇ ಸಿಐಡಿ ವಿಭಾಗದಲ್ಲಿ ಐಡಲ್ ವಿಂಗ್ ಪ್ರಾರಂಭಿಸಿದ್ದು, ರಾಜ್ಯದ ಪ್ರತಿಯೊಂದು ದೇವಾಲಯದಲ್ಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಯೋಚನೆ ಇದೆ. ಪುರಾತನ ವಿಗ್ರಹಗಳ ಕಳ್ಳಸಾಗಾಣಿಕೆದಾರರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರನ್ನು ನಿಗ್ರಹಿಸಲಾಗುವುದು. ಇದಕ್ಕಿರುವ ದೊಡ್ಡ ಅಡಚಣೆಯೆಂದರೆ ದೇವಾಲಯಗಳಲ್ಲಿರುವ ವಿಗ್ರಹಗಳ ನೋಂದಣಿ ಆಗದಿರುವುದು. ಆರ್ಕಿಯಾಲಜಿ, ಮುಜರಾಯಿ, ಪೊಲೀಸ್ ಇಲಾಖೆಗಳ ನಡುವಿನ ಸಮನ್ವಯ ಮತ್ತು ಕಸ್ಟಮ್ಸ್​ನಲ್ಲಿ ಬಿಗಿಯಾದ ತಪಾಸಣೆಯಿಂದ ಈ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಿದೆ.

  | ಬಿ. ದಯಾನಂದ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ, ಬೆಂಗಳೂರು

  ಈಗಾಗಲೇ ಕರ್ನಾಟಕದ ಹಳ್ಳಿಗಳಲ್ಲಿ ಸರ್ವೆ ಮಾಡಿ, ಪುರಾತನ ವಸ್ತುಗಳ ದಾಖಲಾತಿ ಕಾರ್ಯ ಪ್ರಾರಂಭಿಸಲಾಗಿದೆ. ಸ್ಮಾರಕ, ದೇವಾಲಯಗಳ ಒಳಹೊರಗಿರುವ ವಿಗ್ರಹಗಳು, ಹಾದಿ ಬದಿಯಲ್ಲಿ ಬಿದ್ದಿರುವ ಕೆತ್ತನೆಗಳು, ವೀರಗಲ್ಲು ಮುಂತಾದವುಗಳನ್ನು ನೊಂದಾಯಿಸುವ ಕೆಲಸ ನಡೆಯುತ್ತಿದೆ.

  | ಆರ್.ಎನ್. ಕುಮರನ್ ಸಹಾಯಕ ಸರ್ವೆಕ್ಷಣಾಧಿಕಾರಿ, ಎಎಸ್​ಐ, ಬೆಂಗಳೂರು

  ಕರ್ನಾಟಕದಲ್ಲಿ ಪೊಲೀಸರು ಐಡಲ್ ವಿಂಗ್ ಸ್ಥಾಪಿಸಿರುವುದು ಒಂದು ಪ್ರಾರಂಭವಷ್ಟೆ. ನಮ್ಮ ನಾಡಿನ ಕಳವಾದ ಪುರಾತನ ಸಂಪತ್ತನ್ನು ಪತ್ತೆ ಹಚ್ಚುವುದು, ಮರುಸ್ವಾಧೀನ ಮಾಡಿಕೊಳ್ಳುವುದು, ಅದರ ಸ್ವಸ್ಥಾನಕ್ಕೆ ಹಿಂದಿರುಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಐಡಲ್ ವಿಂಗ್​ಗೆ ಸಹಾಯ ಮಾಡಲು ಸಿದ್ಧರಿದ್ದೇವೆ.

  | ಎಸ್. ವಿಜಯ್​ ಕುಮಾರ್ ಸ್ಥಾಪಕರು, ಇಂಡಿಯಾ ಪ್ರೖೆಡ್ ಪ್ರೊಜೆಕ್ಟ್ (ಐಪಿಪಿ)

  ಪುರಾತನ ನಾಣ್ಯಗಳು, ಮೂರ್ತಿಶಿಲ್ಪ ಮತ್ತಿತರ ಪ್ರಾಚೀನ ಅವಶೇಷಗಳು ಕಳವಾದರೆ ಅದು ನಮ್ಮ ದೇಶಕ್ಕೆ ಆಗುವ ನಷ್ಟ. ಇದನ್ನು ತಡೆಯಲು ಎಎಸ್​ಐ ಸೇರಿದಂತೆ ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಶ್ರಮಿಸುತ್ತಿವೆ. ಜನರೂ ಸಕ್ರಿಯವಾಗಿ ಕೈಜೋಡಿಸಿದರೆ ಈ ಕೆಲಸ ಸುಲಭವಾಗುತ್ತದೆ.

  | ಡಾ. ಶಿವಕಾಂತ್ ಬಾಜಪೈ ಉಪ ಅಧೀಕ್ಷಕ ಸರ್ವೆಕ್ಷಣಾಧಿಕಾರಿ, ಎಎಸ್​ಐ, ಬೆಂಗಳೂರು

  ಪುರಾತತ್ವ ಇಲಾಖೆಯ ಕೋರಿಕೆಯ ಮೇರೆಗೆ ತಮಿಳು ನಾಡಿನಂತೆ ಕರ್ನಾಟಕದಲ್ಲಿಯೂ ಇತ್ತೀಚೆಗೆ ಪುರಾತನ ವಿಗ್ರಹಗಳ ಕಳವು ಪತ್ತೆಗಾಗಿ ಐಡಲ್ ವಿಂಗ್ ಸ್ಥಾಪಿಸಲಾಗಿದ್ದು, ಪ್ರಕರಣಗಳ ತನಿಖೆಯನ್ನು ಪೊಲೀಸ್ ಅಧೀಕ್ಷಕ ದರ್ಜೆ ಅಧಿಕಾರಿಯ ನೇತೃತ್ವದಲ್ಲಿ ನಡೆಸ ಲಾಗುತ್ತದೆ. ಇದು ಸ್ವಾಗತಾರ್ಹ ಕ್ರಮ.

  | ವೆಂಕಟೇಶ್ ಟಿ. ಆಯುಕ್ತರು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು

   

  ಗೀತಾ ಶ್ರೀನಿವಾಸನ್

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts