ನಾಯಕನಹಟ್ಟಿ: ಪಟ್ಟಣದಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಒಳಮಠದ ಮುಂಭಾಗದಲ್ಲಿ ಮಧ್ಯಾಹ್ನ ಬೇವಿನ ಸೊಪ್ಪಿನ ಹಸಿರು ಗುಡಿಯಲ್ಲಿ ಹುತ್ತದ ಮಣ್ಣಿನಿಂದ ತಯಾರಿಸಿದ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಭಕ್ತರು ಹೋಳಿಗೆ, ಅನ್ನಸಾರು, ಮುಂತಾದ ಅಡುಗೆ ಪದಾರ್ಥಗಳು, ಚಿಕ್ಕ ಮಡಿಕೆಯಲ್ಲಿ ಬಳೆ, ಬಟ್ಟೆ ಹಣ್ಣು ಕಾಯಿಯನ್ನು ದೇವಿಯ ಬಳಿ ತಂದು ಪೂಜೆ ಸಲ್ಲಿಸಿದರು. ಮಕ್ಕಳು ಎಡೆಯನ್ನು ನೀಡಿ ಭಕ್ತಿ ಸಮರ್ಪಿಸಿದರು.
ಸಂಜೆ ಯುವಕರು ಕೂಡಿ ಬಂದಂತಹ ಅಡುಗೆ, ದೇವಿಯ ಮೂರ್ತಿಯನ್ನು ಜಾನಪದ ವಾದ್ಯಗಳೊಂದಿಗೆ ಪೂರ್ವ ದಿಕ್ಕಿನಲ್ಲಿನ ತಳಕು ರಸ್ತೆಯ ಪಟ್ಟಣದ ಗಡಿ ಭಾಗಕ್ಕೆ ಕೊಂಡೊಯ್ದು ವಿಸರ್ಜಿಸಿದರು.
ಪ್ರಸಾದ ಹಂಚಿದ ನಂತರ ಪಟ್ಟಣಕ್ಕೆ ಹಿಂತಿರುಗಿದರು. ಬಯಲು ಸೀಮೆಯಲ್ಲಿ ಆಷಾಢ ಮಾಸದಲ್ಲಿ ಆಚರಿಸುವ ಹಬ್ಬ ರೈತರಿಗೆ ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ದೇವಿಯನ್ನು ಆರಾಧಿಸುವುದು ವಾಡಿಕೆ ಎಂಬುದು ಹಿರಿಯರಾದ ವೆಂಕಟಸ್ವಾಮಿಯವರ ಅನಿಸಿಕೆ.