ಇಂದಬೆಟ್ಟು ರಂಗಮಂದಿರ ಅಪೂರ್ಣ

 >

ಮನೋಹರ್ ಬಳಂಜ ಬೆಳ್ತಂಗಡಿ
ಇಂದಬೆಟ್ಟಿನಲ್ಲಿ ಸಾರ್ವಜನಿಕರ ಸಾಂಸ್ಕೃತಿಕ, ಕಲಾ ಪ್ರತಿಭೆ ಪ್ರದರ್ಶನಕ್ಕೆಂದು ಸರ್ಕಾರದಿಂದ ನಿರ್ಮಿಸಲಾದ ರಂಗಮಂದಿರ ಕುಡುಕರ ಮೋಜಿನ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಅಧಿಕಾರಿಗಳ ನಿರ್ಲಕ್ಷೃದಿಂದ ಕಾಮಗಾರಿ ಪೂರ್ಣಗೊಳ್ಳದಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ.
ಇಂದಬೆಟ್ಟು ಬಸ್ ನಿಲ್ದಾಣ ಪಕ್ಕದಲ್ಲೇ ಜನರಿಗೆ ಅನುಕೂಲವಾಗಲೆಂದು ಲಕ್ಷಾಂತರ ರೂ. ವ್ಯಯಿಸಿ 10 ವರ್ಷಗಳ ಹಿಂದೆ ರಂಗಮಂದಿರ ನಿರ್ಮಾಣವಾಗಿದೆ. ಅದರ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕ ಉಪಯೋಗಕ್ಕೆ ಇನ್ನೂ ಲಭ್ಯವಾಗಿಲ್ಲ. ರಂಗಮಂದಿರ ಅಂಗಳದಲ್ಲಿ ಗಿಡಗಂಟಿ ಬೆಳೆದಿದ್ದು, ರಂಗಮಂದಿರ ಕೊಠಡಿಯಲ್ಲಿ ಮದ್ಯದ ಬಾಟಲಿಗಳು, ಗುಟ್ಖಾ, ಸಿಗರೇಟ್ ತ್ಯಾಜ್ಯ ರಾಶಿ ಬಿದ್ದಿದೆ. ಗಿಡಗಂಟೆಗಳಿಂದ ಆವೃತವಾಗಿರುವುದರಿಂದ ಕುಡುಕರಿಗೆ ಮದ್ಯ ಸೇವಿಸಲು ಅನುಕೂಲ ಎಂಬಂತಿದೆ. ಸುಮಾರು ಶೇ.75 ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಶೌಚಗೃಹ ಇದ್ದರೂ ನೀರಿನ ಸಂಪರ್ಕ ಇಲ್ಲ.

ಜವಾಬ್ದಾರರು ಯಾರು?
ರಂಗಮಂದಿರ ಮಂಜೂರುಗೊಳಿಸಿದ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಸಂಬಂಧಿತ ಅಧಿಕಾರಿಗಳು ಕೂಡ ಕಡೆಗಣಿಸಿದ್ದಾರೆ. ಕನಿಷ್ಠ ಗ್ರಾಮ ಪಂಚಾಯಿತಿ ಆಡಳಿತವಾದರೂ ಕಾಳಜಿ ವಹಿಸಿ ರಂಗಮಂದಿರ ಪೂರ್ಣಗೊಳಿಸಿದರೆ ಗ್ರಾಮಸ್ಥರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಲಭ್ಯವಾಗುತ್ತಿತ್ತು. ಮಂದಿರದ ಎದುರಿನ ವಿಶಾಲ ಅಂಗಳ ದುರಸ್ತಿ ಮಾಡಿದರೆ ಮದುವೆ ಮತ್ತಿತರ ಕಾರ್ಯಕ್ರಮಗಳಿಗೂ ಅವಕಾಶ ನೀಡಬಹುದು. ಖಾಸಗಿ ಸಭಾಭವನಗಳಲ್ಲಿ ದುಬಾರಿ ಬಾಡಿಗೆ ನೀಡಿ ಮದುವೆ ಮಾಡಲು ಅಶಕ್ತರಾಗಿರುವರಿಗೂ ಇದರಿಂದ ಪ್ರಯೋಜನವಾಗಬಹುದು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಮಂದಿರ ಪೂರ್ಣಗೊಳ್ಳದೆ ಸಾರ್ವಜನಿಕರ ಹಣ ಪೋಲಾಗುವಂತಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ನಾನು ಈ ಪಂಚಾಯಿತಿಗೆ ಇತ್ತೀಚೆಗೆ ನೇಮಕಗೊಂಡಿದ್ದೇನೆ. ಸಾರ್ವಜನಿಕ ರಂಗಮಂದಿರ ದುರುಪಯೋಗವಾಗುತ್ತಿರುವುದು ಈಗಷ್ಟೇ ತಿಳಿಯಿತು. ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿ, ಮುಂದೆ ಹೇಗೆ ಬಳಕೆ ಮಾಡಬಹುದು ಎಂಬುದರ ಬಗ್ಗೆ ನಿರ್ಧರಿಸಲಾಗುವುದು.
ಸವಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಇಂದಬೆಟ್ಟು ಗ್ರಾಪಂ

ಸುವರ್ಣ ಗ್ರಾಮ ಯೋಜನೆಯಲ್ಲಿ ಈ ರಂಗಮಂದಿರ ನಿರ್ಮಾಣಗೊಂಡಿದೆ. ಇದನ್ನು ಈಗಾಗಲೇ ಪಿಡಬ್ಲುೃಡಿ ಇಲಾಖೆಯಿಂದ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ರಂಗಮಂದಿರದ ಎದುರು ಗ್ರಿಲ್(ಬಾಗಿಲು) ಇರದ ಕಾರಣ ದುರುಪಯೋಗವಾಗುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದು. ಪಂಚಾಯಿತಿ ಆಡಳಿತ ಗ್ರಿಲ್ ಅಳವಡಿಸಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ನೋಡಿಕೊಳ್ಳಬೇಕು.
ಮಹಮ್ಮದ್, ಇಂಜಿನಿಯರ್, ಲೋಕೋಪಯೋಗಿ ಇಲಾಖೆ

ಸರ್ಕಾರದಿಂದ ನಿರ್ಮಾಣಗೊಂಡ ರಂಗಮಂದಿರ ಜನರಿಗೆ ಉಪಯೋಗವಿಲ್ಲವಾಗಿದೆ. ರಾತ್ರಿ ಹೊತ್ತು ಕೆಲವು ಕುಡುಕರು ಮದ್ಯ ಸೇವಿಸಲು ಉಪಯೋಗಿಸುತ್ತಿದ್ದು, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕೆಲವು ವರ್ಷಗಳ ಹಿಂದೆ ಆಟೋರಿಕ್ಷಾ ಯೂನಿಯನ್‌ನವರು ಸೇರಿ ಸ್ವಚ್ಛಗೊಳಿಸಿ ಸಭೆ ನಡೆಸುತ್ತಿದ್ದೆವು. ಇತ್ತೀಚೆಗೆ ಅದನ್ನೂ ನಿಲ್ಲಿಸಿದ್ದೇವೆ. ಇದನ್ನು ಗ್ರಾಪಂ ಯಾರಿಗಾದರೂ ನಿರ್ವಹಣೆಗೆ ವಹಿಸಿ ಕೊಟ್ಟು ಉಪಯೋಗವಾಗುವಂತೆ ಮಾಡಬೇಕು. ಸಣ್ಣಪುಟ್ಟ ಮದುವೆ ಸಮಾರಂಭ, ಇತರ ಕಾರ್ಯಕ್ರಮ ನಡೆಸಬಹುದು.
ತನಿಯಪ್ಪ, ಅಧ್ಯಕ್ಷರು, ಇಂದಬೆಟ್ಟು ಆಟೋರಿಕ್ಷಾ ಚಾಲಕರ ಯೂನಿಯನ್