ಸಂತ ರಾನಡೆ ವಿಚಾರಧಾರೆ ಸತ್ಸಂಗ ಶುರುವಾಗಲಿ

ಬೆಳಗಾವಿ: ದ್ವೈತ- ಅದ್ವೈತ ಸಿದ್ಧಾಂತ ಬೇರೆ ಬೇರೆಯಲ್ಲ. ಅವೆರಡೂ ಒಂದೇ ಆಗಿವೆ ಎಂದು ಪ್ರತಿಪಾದಿಸಿದ ಸಂತ ಗುರುದೇವ ರಾನಡೆ ತಮ್ಮದೇ ಆದ ದೃಷ್ಟಿಕೋನದಲ್ಲಿ ಭಾರತೀಯ ತತ್ವಶಾಸವನ್ನು ವ್ಯಾಖ್ಯಾನಿಸಿದವರು. ಉತ್ಕೃಷ್ಟ ತಾತ್ವಿಕ ವಿಚಾರಗಳನ್ನು ಸಮ ತೂಕದಿಂದ ನಾಡಿಗೆ ನೀಡಿದವರು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಡಾ.ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಹಿಂದವಾಡಿಯ ಗುರುದೇವ ರಾನಡೆ ಮಂದಿರದಲ್ಲಿ ಎಸಿಪಿಆರ್ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ಬೆಳಗ್ಗೆ ಏರ್ಪಡಿಸಿದ್ದ ಗುರುದೇವ ರಾನಡೆ ಅವರ ಜೀವನ ದರ್ಶನ ಕನ್ನಡ ಅನುವಾದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ದ್ವೈತ ಮತ್ತು ಅದ್ವೈತ ಸಿದ್ಧ್ದಾಂತಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಅವರು, ಎರಡೂ ವಿಭಿನ್ನವಲ್ಲ, ಒಂದೇ ಎಂದು ತಮ್ಮ ಕೃತಿಗಳಲ್ಲಿ ಬರೆದಿದ್ದಾರೆ. ಭಾರತೀಯ ತತ್ವಶಾಸ ಓದುವುದರಿಂದ ಮನಃಶಾಂತಿ ಉಂಟಾಗುತ್ತದೆ ಎಂದರು.

ಗುರುದೇವ ರಾನಡೆ ಅವರು ತತ್ವಶಾಸದ ಬಗ್ಗೆ ಮರಾಠಿಯಲ್ಲಿ ಬರೆದಿರುವ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವುದು ಅಗತ್ಯವಾಗಿದೆ. ಗುರುದೇವ ರಾನಡೆ ಅವರ ಪ್ರಕಾರ ದೇವರ ಅನುಭೂತಿಯಾಗಬೇಕಾದರೆ ನಿತ್ಯವೂ ನಾಮಸ್ಮರಣೆ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಗುರುದೇವ ರಾನಡೆ ಅವರ ಕೃತಿಗಳ ಕುರಿತು ಪ್ರತಿ 15 ದಿನಕ್ಕೊಮ್ಮೆ ಸತ್ಸಂಗ ಕಾರ್ಯಕ್ರಮ ಆಯೋಜಿಸಬೇಕು. ಆ ಮೂಲಕ ರಾನಡೆ ಅವರ ಬದುಕು-ಬರಹವನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಎಂದು ಸ್ವಾಮೀಜಿ ಭಕ್ತರಿಗೆ ತಿಳಿಸಿದರು.

ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ತತ್ವ ಶಾಸ ನಮ್ಮ ದೇಶದ ಅತ್ಯಮೂಲ್ಯ ಕೊಡುಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ತತ್ವಶಾಸ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ, ಭಾರತೀಯ ತತ್ವ ಶಾಸ ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದೆ ಎಂದರು. ತತ್ವ ಶಾಸದಲ್ಲಿ ದೇವರ ಅಸ್ತಿತ್ವದ ಬಗ್ಗೆಯೇ ಚಿಂತನೆಗಳಿವೆ. ದೇವರು ಇದ್ದಾನೆ ಎಂದು ಒಂದು ಸಿದ್ಧಾಂತ ಪ್ರತಿಪಾದಿಸಿದರೆ, ದೇವರ ಅಸ್ತಿತ್ವವನ್ನು ಒಪ್ಪಿಕೊಳ್ಳದ ನಾಸ್ತಿಕ ಸಿದ್ಧಾಂತವೂ ಇದೆ. ಎರಡು ವಿಭಿನ್ನ ವಿಚಾರ ಧಾರೆಗಳನ್ನು ಭಾರತೀಯ ತತ್ವ ಸಿದ್ಧಾಂತದಲ್ಲಿ ಮಾತ್ರ ಗುರುತಿಸಬಹುದು. ಅದು ಭಾರತೀಯ ತತ್ವಶಾಸ್ತ್ರದ ಸೌಂದರ್ಯ ಎಂದು ಪ್ರತಿಪಾದಿಸಿದರು.

ತಾವು ಧಾರವಾಡ ವಿಶ್ವವಿದ್ಯಾಲಯದಲ್ಲಿ ತತ್ವಶಾಸ ಓದುವಾಗ ಇಬ್ಬರು ವಿದ್ಯಾರ್ಥಿಗಳು ಇದ್ದೆವು. ನಮಗೆ ಬೋಧಿಸುವುದಕ್ಕಾಗಿ 8 ಪ್ರಾಧ್ಯಾಪಕರು ಇದ್ದರು. ಮನಸ್ಸಿನ ಶಾಂತಿಗಾಗಿ ಭಾರತೀಯ ತತ್ವಶಾಸವನ್ನು ಎಲ್ಲರೂ ಓದುವುದು ಅಗತ್ಯವಾಗಿದೆ ಎಂದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ನಾಡಿನಲ್ಲಿ ತತ್ವಶಾಸ ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ವಿಶ್ವವಿದ್ಯಾಲಯಗಳು ತತ್ವ ಶಾಸ ವಿಭಾಗವನ್ನು ಕಾಲೇಜು ಮಟ್ಟದಲ್ಲಿ ಬಂದ್ ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು. ಈಗ ನಮಗೆ ತತ್ವಶಾಸ ಹೇಳುವವರು ಸಾಕಷ್ಟು ಜನರು ಸಿಗುತ್ತಾರೆ. ಆದರೆ ಕೇಳುವವರೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಎಸಿಪಿಆರ್ ಕಾರ್ಯದರ್ಶಿ ಎಂ.ಬಿ.ಜಿರಲಿ ಪ್ರಾಸ್ತಾವಿಕ ಮಾತನಾಡಿದರು. ಕೃತಿಯ ಕುರಿತು ಡಾ.ಚಂದ್ರಕಾಂಶ ಪೋಕಳೆ ಮಾತನಾಡಿದರು. ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ, ಅನೇಕ ಗಣ್ಯರು ಇದ್ದರು.