ತ್ಯಾಜ್ಯ ನಿರ್ವಹಣೆಗೆ ಸ್ಥಳ ಗುರುತಿಸಿ

ಮಂಡ್ಯ: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಸೂಚಿಸಿದಂತೆ ಘನ ಮತ್ತು ದ್ರವ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗಾಗಿ ಸ್ಥಳ ಗುರುತಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ತ್ವರಿತವಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ(ಪ್ರಭಾರ) ಎನ್.ಡಿ.ಪ್ರಕಾಶ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಸೋಮವಾರ ಪಿಡಿಒಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ, ಮನೆ ಹಂತದಲ್ಲಿಯೇ ಹಸಿ ಮತ್ತು ಒಣ ಕಸ ವಿಂಗಡಣೆ, ನೈರ್ಮಲ್ಯದ ಸುಸ್ಥಿರತೆ ಕಾಯ್ದುಕೊಳ್ಳುವ ಸಂಬಂಧ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಸಿ ಕಸವನ್ನು ಮನೆ ಹಂತದಲ್ಲಿಯೇ ನಿರ್ವಹಿಸಲು ಅನುಕೂಲವಾಗುವಂತೆ ನರೇಗಾ ಯೋಜನೆಯಡಿ ಕಾಂಪೋಸ್ಟ್ ಪಿಟ್ ನಿರ್ಮಿ ಸಲು ಒತ್ತು ನೀಡಬೇಕು. ಒಣ ಕಸವನ್ನು ಸಂಗ್ರಹಿಸಿ ಸ್ಥಳೀಯವಾಗಿ ಮಾರಾಟ ಮಾಡುವ ಮೂಲಕ ನಿರ್ವಹಣೆ ಮಾಡಬೇಕು. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಕ್ರಿಯಾ ಯೋಜನೆಯನ್ನು ಸಕಾಲದಲ್ಲಿ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಇದ್ದರು. ರಾಜ್ಯ ಸಮಾಲೋಚಕರಾದ ನಮ್ರತಾ ಮತ್ತು ಮಹಮ್ಮದ್ ಇಡ್ರಿಸ್ ತರಬೇತಿ ನೀಡಿದರು.

 

Leave a Reply

Your email address will not be published. Required fields are marked *