ನನ್ನ ಕ್ರೀಡಾ ವೃತ್ತಿಜೀವನ ಮುಗಿದ ಬಳಿಕ ರಾಜಕೀಯ ರಂಗ ಪ್ರವೇಶಿಸಿ, ಸಾರ್ವಜನಿಕ ಸೇವೆ ಮಾಡುವೆ: ಧ್ಯುತಿ ಚಂದ್​

ನವದೆಹಲಿ: ಕ್ರೀಡಾ ವೃತ್ತಿಜೀವನ ಮುಗಿದ ಬಳಿಕ ರಾಜಕೀಯ ರಂಗ ಪ್ರವೇಶಿಸಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ಅಥ್ಲೀಟ್​ ಧ್ಯುತಿಚಂದ್​ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗ ನನಗಿನ್ನೂ 23. ಸದ್ಯ 2020 ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ನಿಟ್ಟಿನಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಇನ್ನು 6 ವರ್ಷ ನಾನು ಅಥ್ಲೆಟಿಕ್ಸ್​ನಲ್ಲಿ ಮುಂದುವರಿಯಲಿದ್ದೇನೆ. ಈ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪದಕಗಳನ್ನು ರಾಷ್ಟ್ರಕ್ಕೆ ಗೆದ್ದುಕೊಡಲು ಬಯಸುತ್ತೇನೆ ಎಂದರು.

ನಿವೃತ್ತಿಯ ಬಳಿಕ ಅವಕಾಶವಂಚಿತ ಮಕ್ಕಳಿಗಾಗಿ ಅಕಾಡೆಮಿ ಆರಂಭಿಸಿ, ಅವರಿಗೆ ಕ್ರೀಡೆಗಳಲ್ಲಿ ತರಬೇತಿ ನೀಡುತ್ತೇನೆ. ಬಳಿಕ ರಾಜಕಿಯ ರಂಗ ಪ್ರವೇಶಿಸಿ, ದೇಶ ಸೇವೆ ಮಾಡಲು ಬಯಸುತ್ತೇನೆ. ಆ ಸಂದರ್ಭದಲ್ಲಿ ಯಾವ ಪಕ್ಷ ಉತ್ತಮ ಪ್ರದರ್ಶನ ತೋರುತ್ತಿರುತ್ತದೋ, ಆ ಪಕ್ಷವನ್ನು ಸೇರುವುದಾಗಿ ಹೇಳಿದರು.
ಇಂದಲ್ಲ ನಾಳೆ ಗ್ರಾಮಸ್ಥರು ನನ್ನನ್ನು ಬೆಂಬಲಿಸುತ್ತಾರೆ

ತಾವೊಬ್ಬ ಸಲಿಂಗಿ. ಮತ್ತೊಬ್ಬ ಹೆಣ್ಣಿನೊಂದಿಗೆ ಸಂಬಂಧ ಹೊಂದಿರುವುದಾಗಿ ಬಹಿರಂಗಪಡಿಸಿದ ಭಾರತದ ಮೊದಲ ಅಥ್ಲೀಟ್​ ಎಂಬ ಹೆಗ್ಗಳಿಕೆ ಧ್ಯುತಿ ಚಂದ್​ ಅವರದ್ದಾಗಿದೆ. ತಮ್ಮ ಈ ಸಂಬಂಧದ ಬಗ್ಗೆ ತಮ್ಮ ಗ್ರಾಮಸ್ಥರು ಈಗ ಆಕ್ಷೇಪ ವ್ಯಕ್ತಪಡಿಸುತ್ತಿರಬಹುದು. ಆದರೆ ಮುಂದೆ ಅವರು ತಮ್ಮನ್ನು ಬೆಂಬಲಿಸುತ್ತಾರೆ ಎಂಬ ಬಲವಾದ ನಂಬಿಕೆ ತಮಗಿರುವುದಾಗಿ ಧ್ಯುತಿ ಚಂದ್​ ಹೇಳಿದರು.

ಕೆಲದಿನಗಳ ಹಿಂದೆ ತಮ್ಮ ಸಲಿಂಗ ಸಂಬಂಧದ ವಿಷಯವನ್ನು ಧ್ಯುತಿ ಚಂದ್​ ಬಹಿರಂಗಪಡಿಸಿದ್ದರು. ಆದರೆ ಈ ಬಗ್ಗೆ ಅವರ ಅಕ್ಕ ಹಾಗೂ ಪಾಲಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮಸ್ಥರಿಂದಲೂ ಭಾರಿ ವಿರೋಧ ವ್ಯಕ್ತವಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *