ಗೌತಮ್​ ಗಂಭೀರ್​ಗೆ ವಿರಾಟ್​ ಕೊಹ್ಲಿ ತಿರುಗೇಟು: ಅಷ್ಟಕ್ಕೂ ಕೊಹ್ಲಿಯನ್ನು ಕೆಣಕಿದ್ದ ಗೌತಿ ಮಾತೇನು?

ನವದೆಹಲಿ: “ನಾನು ಹೊರಗಿನವನು ಎಂದು ಭಾವಿಸಿದ್ದರೆ ಆರ್​ಸಿಬಿಯಲ್ಲಿ ಐದು ಪಂದ್ಯಗಳಲ್ಲೂ ಆಡಲಾಗದೇ ಮನೆಯಲ್ಲಿರಬೇಕಿತ್ತು,” ಎಂದು ವಿರಾಟ್​ ಕೊಹ್ಲಿ ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ ವಿರುದ್ಧ ಕಿಡಿ ಕಾರಿದ್ದಾರೆ.

” ಒಂದೂ ಐಪಿಎಲ್​ ಕಪ್​ ಗೆಲ್ಲದಿದ್ದರೂ, ವಿರಾಟ್​ ಕೊಹ್ಲಿ ಅವರು ಈ ವರೆಗೆ ಆರ್​ಸಿಬಿಯಲ್ಲಿ ಉಳಿದಿರುವುದು ಅವರ ಅದೃಷ್ಟ,”ಎಂದು ಕೊಹ್ಲಿ ವಿರುದ್ಧ ಗೌತಮ್​ ಗಂಭೀರ್​ ಟೀಕೆ ಮಾಡಿದ್ದರು. ಅಲ್ಲದೆ, “ರಾಷ್ಟ್ರೀಯ ತಂಡದಲ್ಲಿ ಉಪನಾಯಕನಾಗಿರುವ ರೋಹಿತ್​ ಶರ್ಮಾ ಅವರೇ ಮೂರು ಐಪಿಎಲ್​ ಕಪ್​ಗಳನ್ನು ಗೆದ್ದಿದ್ದಾರೆ,” ಎಂದು ಹೋಲಿಕೆ ಮಾಡಿ ಮೂದಲಿಸಿದ್ದರು.

ಇದರ ವಿರುದ್ಧ ಆಕ್ರೋಶ ಹೊರ ಹಾಕಿರುವ ವಿರಾಟ್​ ಕೊಹ್ಲಿ, “ಐಪಿಎಲ್​ ಗೆಲ್ಲಲು ನಾನು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೇನೆ. ಮಾಡುತ್ತಿದ್ದೇನೆ. ಆದರೆ, ಒತ್ತಡದಲ್ಲಿ ನಾವು ಕೈಗೊಂಡ ಕೆಲವು ತಪ್ಪು ನಿರ್ಧಾರಗಳು ನಮಗೆ ಜಯ ತಂದು ಕೊಡದೇ ಇರಬಹುದು. ಸೋಲಿನ ಬಗ್ಗೆ ನಮಗೆ ವಾಸ್ತವ ಗೊತ್ತಿರಬೇಕು. ಒಂದು ವೇಳೆ ನಾನು ನನ್ನನ್ನು ಹೊರಗಿನವನು ಎಂದು ಭಾವಿಸಿಕೊಂಡಿದ್ದರೆ ಐದು ಪಂದ್ಯಗಳನ್ನೂ ಆಡಲಾರದೆ ಮನೆಯಲ್ಲಿರಬೇಕಿತ್ತು,” ಎಂದು ವಿರಾಟ್​ ತಿರುಗೇಟು ನೀಡಿದ್ದಾರೆ.