More

  ಬೆಂಗ್ಳೂರಿಗೆ ಐಸಿಸ್ ಲಿಂಕ್; ಗೋಣಿಕೊಪ್ಪದಲ್ಲಿ ಉಗ್ರ ಶಿಬಿರ ಆರಂಭಿಸಲು ನಡೆದಿತ್ತು ಸಿದ್ಧತೆ 

  ಬೆಂಗಳೂರು: ಇತ್ತೀಚೆಗೆ ಕರ್ನಾಟಕ, ತಮಿಳುನಾಡು, ಗುಜರಾತ್ ಹಾಗೂ ದೆಹಲಿಯಲ್ಲಿ ಸೆರೆಸಿಕ್ಕ 12 ಉಗ್ರರಿಗೂ ಬೆಂಗಳೂರಿಗೂ ನಂಟು ಇರುವ ಮತ್ತೊಂದು ಆಘಾತಕಾರಿ ಸಂಗತಿ ಬಯಲಾಗಿದೆ.

  ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಜಿಹಾದಿ ಗ್ಯಾಂಗ್ ಇದಕ್ಕಾಗಿ ಮುಂಬೈಯಿಂದ ಬೆಂಗಳೂರಿಗೆ ಪಾರ್ಸಲ್ ರೂಪದಲ್ಲಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುತ್ತಿತ್ತು. ಇದಲ್ಲದೆ ಸ್ಪೋಟಕ ವಸ್ತುಗಳಿಗೆ ಬೇಕಾದ ಬಿಡಿಭಾಗಗಳನ್ನು ರಾಜಧಾನಿಯಲ್ಲೇ ಖರೀದಿಸುತ್ತಿತ್ತೆಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.

  ತರಬೇತಿ ಸಿದ್ಧತೆ: ಐಸಿಸ್ ಬೆಂಬಲಕ್ಕೆ ನಿಂತ ಬೆಂಬಲಿಗರಿಗೆ ಮಡಿಕೇರಿಯ ಗೋಣಿಕೊಪ್ಪದ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ತರಬೇತಿ ನೀಡುವ ಯೋಜನೆ ರೂಪಿಸಿದ್ದ ಉಗ್ರರು ಇದಕ್ಕಾಗಿ ಆರ್ಥಿಕ ಸಹಾಯ ಪಡೆಯಲು ಗೋಣಿಕೊಪ್ಪ ಮೂಲದ ವ್ಯಕ್ತಿಯೊಬ್ಬರನ್ನು ಸಂರ್ಪಸಿದ್ದರು ಎನ್ನಲಾಗಿದೆ.

  ಬೆಂಗಳೂರು ಕೇಂದ್ರ ಸ್ಥಾನ: ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಪಡಿಸಲು ಬೆಂಗಳೂರು ಸೇರಿ ಇನ್ನಿತರ ಪ್ರಮುಖ ನಗರಗಳನ್ನು ಕೇಂದ್ರಸ್ಥಾನವನ್ನಾಗಿಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ದುಷ್ಕೃತ್ಯ ಎಸಗಲು ಸಂಚು ರೂಪಿಸುವ ಹಾಗೂ ಹಣಕಾಸು ಹೊಂದಿಸುವ ಬಗ್ಗೆ ಯುವಕರಿಗೆ ತರಬೇತಿ ನೀಡಲಾಗಿತ್ತೆಂದು ಹೇಳಲಾಗಿದೆ.

  ಎಫ್​ಐಆರ್ ದಾಖಲು: 12 ಮಂದಿ ಬಂಧಿತರ ವಿಚಾರಣೆ ವೇಳೆ ಹಲವು ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಬೆಂಗಳೂರಿನ ಶಂಕಿತ ಮೆಹಬೂಬ್ ಪಾಷಾ ಹಾಗೂ ಇನ್ನಿತರರ ವಿರುದ್ಧ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಅಧಿಕಾರಿಗಳು ದೇಶದ್ರೋಹ ಆರೋಪದ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ. ಮೆಹಬೂಬ್ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಶಸ್ತ್ರಾಸ್ತ್ರ ಸಂಗ್ರಹಿಸುತ್ತಿದ್ದ. ಜತೆಗೆ ವಿದೇಶದ ಉಗ್ರ ಸಂಘಟನೆ ಜತೆಗೆ ನೇರ ಸಂಪರ್ಕ ಇಟ್ಟುಕೊಂಡು ಅವರ ಆಣತಿಯಂತೆ ದುಷ್ಕೃತ್ಯ ಎಸಗಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ತನ್ನ ಬೆಂಬಲಿಗರ ಜತೆ ಸಭೆ ನಡೆಸಿದ್ದ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

  ತಮಿಳುನಾಡು, ಬೆಂಗಳೂರು, ದೆಹಲಿ ಮತ್ತು ಗುಜರಾತ್​ನಲ್ಲಿ ಐಸಿಸ್ ಮತ್ತು ಅಲ್ ಉಮ್ಮಾ ಸಂಘಟನೆಗೆ ಸೇರಿ 12 ಮಂದಿಯನ್ನು ಬಂಧಿಸಲಾಗಿದೆ. ಈ ಗ್ಯಾಂಗ್​ನ ಮುಖಂಡ ತಮಿಳುನಾಡಿನ ಮೊಯ್ದೀನ್ ಸಿ. ಕ್ವಾಜಾ, 2004ರಲ್ಲಿ ಇಸ್ಲಾಂಗೆ ಮತಾಂತರ ಸಂಬಂಧ ಬಂಧನಕ್ಕೆ ಒಳಗಾಗಿದ್ದ.

  ಜೈಲಿನಿಂದ ಬಿಡುಗಡೆ ಆದ ಮೇಲೆ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಎನ್​ಐಎಗೆ ಸೆರೆಸಿಕ್ಕಿದ್ದ. ಜೈಲಿನಿಂದ ಹೊರಬಂದು ಅಲ್ ಉಮ್ಮಾ ಜತೆ ಕೈ ಜೋಡಿಸಿ ಜಿಹಾದಿ ಒಲವು ಹೊಂದಿದ್ದ ಯುವಕರನ್ನು ಸಂಘಟನೆಗೆ ಸೇರಿಸಿಕೊಂಡು ಹಿಂದು ಮತ್ತು ಆರ್​ಎಸ್​ಎಸ್ ಮುಖಂಡರ ಹತ್ಯೆಗೆ ಸ್ಕೆಚ್ ರೂಪಿಸುತ್ತಿದ್ದ. ಐಸಿಸ್ ಜತೆ ನಿಕಟ ಸಂಪರ್ಕ ಹೊಂದಿ ದಕ್ಷಿಣ ಭಾರತದಲ್ಲಿ ಉಗ್ರವಾದ ಬಲಪಡಿಸುತ್ತಿದ್ದ. ಬೆಂಗಳೂರಿನಲ್ಲಿ ಮೆಹಬೂಬ್ ಪಾಷಾನನ್ನು ಸಂಪರ್ಕ ಮಾಡಿ ಉಗ್ರ ಸಂಘಟನೆಗೆ ಸಹಾನುಭೂತಿ ಹೊಂದಿದ್ದ ಮನ್ಸೂರ್, ಹನೀಫ್ ಖಾನ್, ಇಮ್ರಾನ್ ಖಾನ್, ಇಜಾಜ್ ಪಾಷಾ ಮತ್ತು ಮೊಹಮ್ಮದ್ ಜೈದ್​ರನ್ನು ಭೇಟಿ ಮಾಡಿದ್ದ. ಸದ್ದುಗುಂಟೆಪಾಳ್ಯದ ಪೇಯಿಂಗ್ ಗೆಸ್ಟ್​ನಲ್ಲಿ ಸಭೆ ನಡೆಸಿ ಐಸಿಸ್ ಬಲಪಡಿಸುವ ಮತ್ತು ಅದಕ್ಕಾಗಿ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಸಿದ್ದ.

  ಬಿಇ ಪದವೀಧರ ಮತ್ತು ತಾಂತ್ರಿಕ ಪರಿಣತ ಮೊಹಮ್ಮದ್ ಜೈದ್​ಗೆ ಬಾಂಬ್ ತಯಾರಿಸುವ ಜವಾಬ್ದಾರಿ ವಹಿಸಿದ್ದ. ಬಸ್ ಚಾಲಕ ಇಜಾಜ್ ಪಾಷಾಗೆ ಮುಂಬೈಯಿಂದ ಬೆಂಗಳೂರಿಗೆ ಬರುವಾಗ ಶಸ್ತ್ರಾಸ್ತ್ರ ಸಾಗಿಸುವಂತೆ ಮೈಂಡ್ ವಾಷ್ ಮಾಡಿದ್ದ. ಇತ್ತೀಚೆಗೆ ಇಲ್ಲಿಂದ ಮೊಯ್ದೀನ್ ಸಿ. ಕ್ವಾಜಾ ತನ್ನ ಬೆಂಬಲಿಗರ ಜತೆ ರಸ್ತೆ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ತೆರಳಿ ಅಲ್ಲಿಂದ ಪಶ್ಚಿಮ ಬಂಗಾಳದಿಂದ ನೇಪಾಳ ಗಡಿ ತಲುಪಿದ್ದ. ಅಷ್ಟರಲ್ಲಿ ನಿಗಾವಹಿಸಿದ್ದ ಎನ್​ಐಎ, ತಮಿಳುನಾಡು ಕ್ಯೂ ವಿಶೇಷ ತಂಡ ಮತ್ತು ಐಬಿ ಅಧಿಕಾರಿಗಳು ಕ್ವಾಜಾ ಮತ್ತು ಜತೆಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

  ಕಾರು ಕೊಟ್ಟವನ್ಯಾರು?: ಮೊಯ್ದೀನ್ ಸಿ. ಕ್ವಾಜಾ ತನ್ನ ಸಹಚರರ ಜತೆ ಬೆಂಗಳೂರಿಗೆ ಬರುವುದಾಗಿ ಹೇಳಿದಾಗ ನಗರದ ಅನಾಮಧೇಯ ವ್ಯಕ್ತಿ ಆತನಿಗೆ ಇನೋವಾ ಕಾರಿನ ವ್ಯವಸ್ಥೆ ಮಾಡಿದ್ದಾನೆ. ಇಮ್ರಾನ್ ಮತ್ತು ಹನೀಫ್ ಎಂಬುವರು ಕಾರಿನಲ್ಲಿ ಸದ್ದುಗುಂಟೆಪಾಳ್ಯಕ್ಕೆ ಕರೆತಂದಿದ್ದರು. ಬಳಿಕ ಮೊಯ್ದೀನ್ ಕ್ವಾಜಾನನ್ನು ಅದೇ ಕಾರಿನಲ್ಲಿ ರಸ್ತೆ ಮಾರ್ಗವಾಗಿ ಆಂಧ್ರಪ್ರದೇಶ, ಒಡಿಶಾ ಮಾರ್ಗವಾಗಿ ಪಶ್ಚಿಮ ಬಂಗಾಳ ತಲುಪಿ ಬುರ್ಧ್ವಾನ್ ರೈಲು ನಿಲ್ದಾಣಕ್ಕೆ ಬಿಟ್ಟು ವಾಪಸ್ ಬಂದಿದ್ದಾರೆ. ಇಮ್ರಾನ್ ಮತ್ತು ಹನೀಫ್ ಸೆರೆಸಿಕ್ಕಿದ್ದು, ಅನಾಮಧೇಯ ವ್ಯಕ್ತಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

  ಜಿಹಾದಿ ಗ್ಯಾಂಗ್​ನ ಲೀಡರ್

  ಎಫ್​ಐಆರ್​ನಲ್ಲಿ ಸಿಸಿಬಿ ಪೊಲೀಸರು ಉಲ್ಲೇಖಿಸಿರುವ ಮೆಹಬೂಬ್ ಪಾಷಾ, ವೃತ್ತಿಯಲ್ಲಿ ಬಡಗಿ. ಸದ್ದುಗುಂಟೆ ಪಾಳ್ಯದಲ್ಲಿ ಕುಟುಂಬದ ಜತೆ ನೆಲೆಸಿದ್ದ. ಜಿಹಾದಿ ಗ್ಯಾಂಗ್ ಸದಸ್ಯರಿಗೆ ಆಶ್ರಯ ನೀಡುವಲ್ಲಿ ಮುಖ್ಯಪಾತ್ರವಹಿಸಿದ್ದ. ತಮಿಳುನಾಡಿನಲ್ಲಿ ಹಿಂದು ಮುಖಂಡನ ಹತ್ಯೆ ಮಾಡಿ ಬೆಂಗಳೂರಿಗೆ ಬಂದಾಗ ಅವರಿಗೆ ಪೇಯಿಂಗ್ ಗೆಸ್ಟ್ ವ್ಯವಸ್ಥೆ ಮಾಡಿದ್ದ. ತಂಡದ ಸದಸ್ಯರಿಗೆ ಪಿಸ್ತೂಲ್ ಪೂರೈಸುವಲ್ಲಿ ಕೂಡಾ ನೆರವು ನೀಡಿದ್ದ.

  ವಿದೇಶದ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿದ್ದ ಶಂಕಿತರಿಗೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಅವಕಾಶ ಕಲ್ಪಿಸಿದ್ದ. ಕ್ವಾಜಾಗೆ ಬಲಗೈ ಬಂಟನಾಗಿದ್ದ. ದೇಶದಲ್ಲಿ ಚರ್ಚೆಗೆ ಗ್ರಾಸವಾದ ಸಿಎಎ, ಎನ್​ಆರ್​ಸಿ ಪ್ರತಿಭಟನೆಯನ್ನೇ ಬಂಡವಾಳ ಮಾಡಿಕೊಂಡು ಮುಸ್ಲಿಂ ಯುವಕರಲ್ಲಿ ಭಯ ಹುಟ್ಟಿಸಿ ಉಗ್ರ ಸಂಘಟನೆಗೆ ಸೆಳೆಯುತ್ತಿದ್ದ. ಇದೀಗ ಮೆಹಬೂಬ್ ಪಾಷಾ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

  ಶಂಕಿತ ಮೆಹಬೂಬ್ ಪಾಷಾ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ತಮಿಳುನಾಡಿನಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಈತನ ಕೈವಾಡವಿದೆ. ವಿದೇಶಿ ಮುಖಂಡರ ಆಣತಿಯಂತೆ ಕೆಲಸಕ್ಕೆ ಸಿದ್ಧನಾಗಿದ್ದ. ತನಿಖೆ ಮುಂದುವರಿಸಿದ್ದೇವೆ.

  | ಸಂದೀಪ್ ಪಾಟೀಲ್ ಜಂಟಿ ಪೊಲೀಸ್ ಆಯುಕ್ತ(ಸಿಸಿಬಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts