ಐಸ್‌ಕ್ಯಾಂಡಿ ಸೇವಿಸಿದವರಿಗೆ ವಾಂತಿ, ಬೇಧಿ

ವಿಜಯವಾಣಿ ಸುದ್ದಿಜಾಲ ಬೆಳ್ವೆ
ಬೆಳ್ವೆ, ಹೆಂಗವಳ್ಳಿ, ತೊಂಭತ್ತು, ಅಲ್ಬಾಡಿ, ಗುಮ್ಮೋಲ ಸುತ್ತಮುತ್ತಲಿನ ಭಾಗಗಳಲ್ಲಿ ಕಲುಷಿತ ಐಸ್‌ಕ್ಯಾಂಡಿ ಸೇವಿಸಿದ ಮಕ್ಕಳು, ಮಹಿಳೆಯರು ಸೇರಿದಂತೆ 45ಕ್ಕೂ ಅಧಿಕ ಮಂದಿ ಜ್ವರ, ವಾಂತಿ, ಬೇಧಿಯಿಂದ ಬಳಲಿ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲವರು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬಿದ್ಕಲ್‌ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 25 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 7 ಮಕ್ಕಳು ಹಾಗೂ ಇಬ್ಬರು ಮಹಿಳೆಯರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಆವರ್ಸೆ, ಹಿಲಿಯಾಣ ಹಾಗೂ ಆರ್ಡಿ ಭಾಗಗಳಲ್ಲೂ ಹಲವರಿಗೆ ಇದೇ ರೀತಿ ಅಸೌಖ್ಯ ಕಾಣಿಸಿಕೊಂಡಿದ್ದು, ಗೋಳಿಯಂಗಡಿ, ಕುಂದಾಪುರದ ಕೋಟೇಶ್ವರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕೆಲದಿನಗಳಿಂದ ಈ ಪ್ರದೇಶಕ್ಕೆ ಉಡುಪಿ ಹಾಗೂ ಮಲ್ಪೆ ಭಾಗಗಳಿಂದ ಹಿಂದಿ ಭಾಷೆ ಮಾತನಾಡುವ ಹಲವಾರು ಯುವಕರು ಬೈಕ್‌ನಲ್ಲಿ ಐಸ್‌ಕ್ಯಾಂಡಿ ಮಾರಾಟಕ್ಕಾಗಿ ಬರುತ್ತಿದ್ದು, ಶನಿವಾರ ಹಾಗೂ ಭಾನುವಾರವೂ ಐಸ್‌ಕ್ಯಾಂಡಿ ಮಾರಾಟ ಮಾಡಿದ್ದಾರೆ. ಈ ಐಸ್‌ಕ್ಯಾಂಡಿ ಸೇವಿಸಿದವರಿಗೆ ಸೋಮವಾರ ಬೆಳಗ್ಗೆ ಜ್ವರ, ವಾಂತಿ, ಬೇಧಿ ಕಾಣಿಸಿಕೊಂಡಿದೆ.

 ಚಿಕಿತ್ಸೆಗೆ ವ್ಯವಸ್ಥೆ: ಬೆಳಗ್ಗೆ ಅಸೌಖ್ಯಕ್ಕೊಳಗಾದವರನ್ನು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ವಿಷಯ ತಿಳಿದು ಭಯಗೊಂಡ ನೂರಾರು ಮಂದಿ ಆಸ್ಪತ್ರೆಗೆ ಧಾವಿಸಿದರು. ಮಧ್ಯಾಹ್ನ ವೇಳೆ ಸಂಖ್ಯೆ ಏರಿಕೆಯಾಯಿತು. ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆ ಚಿಕಿತ್ಸೆ, 108 ವಾಹನ ವ್ಯವಸ್ಥೆ ಮಾಡಲಾಗಿದೆ. ವೈದ್ಯಾಧಿಕಾರಿ ಡಾ.ರಾಜೇಶ್ವರಿ ಎ.ಜೆ. ಹಾಗೂ ಸಿಬ್ಬಂದಿ ಸಹಕರಿಸಿದರು.

ಸ್ಥಳಕ್ಕೆ ಗಣ್ಯರ ಭೇಟಿ : ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಬೆಳ್ವೆ ಗ್ರಾಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಹೆಂಗವಳ್ಳಿ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು, ಶಂಕರನಾರಾಯಣ ಪೊಲೀಸ್ ಠಾಣೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿದರು. ಪರಿಸರದಲ್ಲಿ ಐಸ್‌ಕ್ಯಾಂಡಿ ಮಾರಾಟ ಮಾಡುವವರ ಬಗ್ಗೆ ನಿಗಾ ವಹಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಐಸ್‌ಕ್ಯಾಂಡಿಗೆ ಬಳಸಿರುವ ಕಲುಷಿತ ನೀರು ಅಸೌಖ್ಯಕ್ಕೆ ಕಾರಣವಾಗಿರಬಹುದು. ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಎಲ್ಲ ರೀತಿ ವ್ಯವಸ್ಥೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಡಾ.ನಾಗಭೂಷಣ ಉಡುಪ, ತಾಲೂಕು ವೈದ್ಯಾಧಿಕಾರಿ, ಕುಂದಾಪುರ