27 ವರ್ಷದ ಬಳಿಕ ವಿಶ್ವಕಪ್​​ ಫೈನಲ್​ ಪ್ರವೇಶಿಸಿದ ಇಂಗ್ಲೆಂಡ್​​: ಫೈನಲ್​ನಲ್ಲಿ ಕಿವೀಸ್​​-ಇಂಗ್ಲೆಂಡ್​​​​​​​​​ ಮುಖಾಮುಖಿ

ಬರ್ಮಿಂಗ್​ಹ್ಯಾಂ: ಇಂಗ್ಲೆಂಡ್​ ತಂಡದ ಸಂಘಟಿತ ಪ್ರದರ್ಶನದ ಮೂಲಕ 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನ 2ನೇ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ಎದುರು 8 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ 4ನೇ ಬಾರಿ ಫೈನಲ್​​ ಪ್ರವೇಶಿಸಿತು.

ಇಲ್ಲಿನ ಎಜ್​​ಬಾಸ್ಟನ್​​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ 49 ಓವರ್​ಗಳಲ್ಲಿ ಆಲೌಟ್​​ನೊಂದಿಗೆ 223 ರನ್​ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್​​​ ಭರ್ಜರಿ ಪ್ರದರ್ಶನದೊಂದಿಗೆ 32.1 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 226 ರನ್​ ಗಳಿಸಿ ಗೆಲುವಿನ ನಗೆ ಬೀರಿತು.

ಇಂಗ್ಲೆಂಡ್​ ಪರ ಜಾಸನ್​​ ರಾಯ್​​​​​​ (85), ಜಾನಿ ಬೇರ್​​ ಸ್ಟೋವ್​​​ (34), ಜೋ ರೂಟ್​​ (49) ಹಾಗೂ ಎಲಿನ್​​​​ ಮೊರ್ಗನ್​​ (45) ಅವರು ಎದುರಾಳಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ತಂಡ ಗೆಲುವಿನ ರೂವಾರಿಗಳಾಗಿ ಮಿಂಚಿದರು.

ಆಸೀಸ್​ನ ಮಿಚೆಲ್​​ ಸ್ಯಾಂಟ್ನರ್​​​​​ ಹಾಗೂ ಪ್ಯಾಟ್​​ ಕಮ್ಮಿನ್ಸ್​​​ ತಲಾ ಒಂದು ವಿಕೆಟ್​ ಪಡೆದರು.

ಇದಕ್ಕೂ ಮೊದಲು ಬ್ಯಾಟ್​​ ಮಾಡಿದ ಆಸ್ಟ್ರೇಲಿಯಾ ನೀರಸ ಪ್ರದರ್ಶನದೊಂದಿಗೆ ಶೀಘ್ರ ವಿಕೆಟ್​ ಕಳೆದುಕೊಂಡಿತು. ಸ್ಫೋಟಕ ಬ್ಯಾಟ್ಸ್​ಮನ್​​ ಸ್ಟೀವ್​​ ಸ್ಮಿತ್​​ (85) ಹಾಗೂ ವಿಕೆಟ್​ ಕೀಪರ್​​ ಅಲೆಕ್ಸ್​ ಕ್ಯಾರಿ (46) ಅವರನ್ನು ಬಿಟ್ಟರೆ ಉಳಿದವರು ಆಂಗ್ಲ ಬೌಲರ್​ಗಳ ದಾಳಿಗೆ ಸಿಲುಕಿ ಶೀಘ್ರ ಪೆವಿಲಿಯನ್​​​ ದಾರಿ ಹಿಡಿದರು.

ಇಂಗ್ಲೆಂಡ್​​ನ ಕ್ರಿಸ್​ ವೋಕ್ಸ್​​​​ ಹಾಗೂ ಆದಿಲ್​ ರಶೀದ್​​​​​ ತಲಾ 3 ವಿಕೆಟ್​​ ಕಬಳಿಸಿದರೆ, ಜೋಫ್ರಾ ಆರ್ಚರ್​​ 2 ಹಾಗೂ ಮಾರ್ಕ್​ ವುಡ್​​​​​ ಒಂದು ವಿಕೆಟ್​​ ಉರುಳಿಸುವಲ್ಲಿ ಯಶಸ್ವಿಯಾದರು.

ಇದೇ ಮೊದಲ ಬಾರಿಗೆ ಇಂಗ್ಲೆಂಡ್​ ಹಾಗೂ ನ್ಯೂಜಿಲೆಂಡ್​ ತಂಡಗಳು ವಿಶ್ವಕಪ್​​ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿದ್ದು, ಯಾವ ತಂಡ ಮೊದಲ ಬಾರಿಗೆ ವಿಶ್ವಕಪ್​ ಮುಡಿಗೇರಿಸಿಕೊಳ್ಳಲಿದೆ ಕಾದು ನೋಡಬೇಕಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *