ಕ್ರಿಕೆಟ್​ ವಿಶ್ವಕಪ್​ ಚಾಂಪಿಯನ್ಸ್​ಗೆ ಸಿಗಲಿದೆ ಭಾರಿ ಗಂಟು: ಈವರೆಗಿನ ಟೂರ್ನಿಯಲ್ಲೇ ಅತ್ಯಧಿಕ ಬಹುಮಾನ ಇದಾಗಲಿದೆ

ನವದೆಹಲಿ: ಏಕದಿನ ವಿಶ್ವಕಪ್​ ಕ್ರಿಕೆಟ್​ಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್​​​ ತವರು ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ​ ಅದ್ಧೂರಿಯಾಗಿ ಜರುಗಲಿದೆ. ಈ ಮಧ್ಯೆ ಐಸಿಸಿ ಈ ಬಾರಿಯ ವಿಶ್ವಕಪ್​ ಪ್ರಶಸ್ತಿ ಮೊತ್ತವನ್ನು ಪರಿಷ್ಕರಿಸಿರುವುದಾಗಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಶುಕ್ರವಾರ ತಿಳಿಸಿದೆ.

ಈ ಬಾರಿ ವಿಶ್ವಕಪ್​ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿ ವಿಜಯ ಸಾಧಿಸುವ ತಂಡವು 4 ಮಿಲಿಯನ್​ ಡಾಲರ್​(28 ಕೋಟಿ ರೂ.) ಬಹುಮಾನದೊಂದಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಡಲಿದೆ. ಇದುವರೆಗೂ ನಡೆದ ವಿಶ್ವಕಪ್​ ಟೂರ್ನಿಯಲ್ಲೇ ಅತ್ಯಧಿಕ ಬಹುಮಾನ ಮೊತ್ತ ಇದಾಗಲಿದೆ.

ಒಟ್ಟು 10 ಮಿಲಿಯನ್​ ಡಾಲರ್​(70 ಕೋಟಿ ರೂ.) ಮೊತ್ತವನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಬಹುಮಾನವಾಗಿ ನೀಡಲಾಗುತ್ತಿದೆ. ವಿಜೇತರಿಗೆ 4 ಮಿಲಿಯನ್​ ಡಾಲರ್​(28 ಕೋಟಿ ರೂ.), ರನ್ನರ್​ ಅಪ್​ಗೆ 2 ಮಿಲಿಯನ್​ ಡಾಲರ್​​(​14 ಕೋಟಿ ರೂ.), ಸೆಮಿಫೈನಲ್​ನಲ್ಲಿ ಸೋತ ತಂಡಕ್ಕೆ 800,000 ಡಾಲರ್​(5.6ಕೋಟಿ ರೂ.) ಬಹುಮಾನ ಮೊತ್ತವನ್ನು ನೀಡಲಾಗುತ್ತದೆ. ಒಟ್ಟು 46 ದಿನಗಳ ಕಾಲ 11 ಸ್ಥಳಗಳಲ್ಲಿ ಟೂರ್ನಿ ನಡೆಯಲಿದೆ. ಇದೇ ಮೇ ತಿಂಗಳ 30 ರಿಂದ ಪಂದ್ಯಗಳು ಆರಂಭವಾಗಲಿದ್ದು, ಜುಲೈ 14ರಂದು ಕ್ರಿಕೆಟ್​ ಕಾಶಿ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ಫೈನಲ್​ ಪಂದ್ಯ ನಡೆಯುವುದರೊಂದಿಗೆ 2019ನೇ ವಿಶ್ವಕಪ್​ ಟೂರ್ನಿಗೆ ತೆರೆಬೀಳಲಿದೆ.

ಈ ಬಾರಿ ಲೀಗ್​ ಹಂತದ ಪಂದ್ಯದಲ್ಲಿ ಗೆಲ್ಲುವ 10 ತಂಡಗಳಿಗೂ ಬಹುಮಾನ ಸಿಗುವುದು ಈ ಬಾರಿಯ ವಿಶ್ವಕಪ್ ಟೂರ್ನಿಯ ವಿಶೇಷವಾಗಿದೆ. (ಏಜೆನ್ಸೀಸ್​)​