ಸಂಧ್ಯಾಕಾಲದಲ್ಲಿ ಕ್ರಿಕೆಟ್ ದಿಗ್ಗಜರು

ಕ್ರಿಕೆಟಿಗರಿಗೆ ರಾಷ್ಟ್ರೀಯ ತಂಡದ ಪರ ಆಡುವುದೇ ಒಂದು ಕನಸಾಗಿರುತ್ತದೆ. ಅದೇ ಆಟಗಾರನಿಗೆ ವಿಶ್ವಕಪ್​ನಂಥ ಮಹತ್ವದ ಟೂರ್ನಿಗಳಲ್ಲಿ ಆಡುವುದು ಒಂದು ಪ್ರತಿಷ್ಠೆಯ ವಿಷಯ. ಸಚಿನ್ ತೆಂಡುಲ್ಕರ್ ಹಾಗೂ ಪಾಕಿಸ್ತಾನದ ಜಾವೇದ್ ಮಿಯಾಂದಾದ್​ರಂಥ ದಿಗ್ಗಜರು ಸತತ 6 ವಿಶ್ವಕಪ್ ಆಡಿದ್ದು ಇತಿಹಾಸ. ವಿಶ್ವಕಪ್ ಗೆದ್ದರೆ ತಂಡದಲ್ಲಿರುವ ಆಟಗಾರನಿಗೆ ಅದು ವೃತ್ತಿಜೀವನದ ಅವಿಸ್ಮರಣೀಯ ಕ್ಷಣವೇ ಸರಿ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರಿಕೆಟ್ ಹಬ್ಬದಲ್ಲಿ ಪ್ರತಿ ಟೂರ್ನಿಯಲ್ಲೂ ಪ್ರತಿ ತಂಡದಲ್ಲೂ ಹಲವು ಬದಲಾವಣೆ ಕಾಣಸಿಗುತ್ತದೆ. ಹಿಂದಿನ ವಿಶ್ವಕಪ್​ನಲ್ಲಿ ಮಿಂಚಿದ ಆಟಗಾರರು ತೆರೆಮರೆಗೆ ಸರಿದರೆ, ಹೊಸ ಆಟಗಾರರ ಸರದಿ ಹುಟ್ಟುಕೊಳ್ಳುತ್ತದೆ. ಇದೀಗ ಕೊನೇ ವಿಶ್ವಕಪ್ ಟೂರ್ನಿಗಾಗಿ ಸಜ್ಜುಗೊಳ್ಳುತ್ತಿರುವ ಕೆಲ ಹಿರಿಯ ಆಟಗಾರರ ಪಟ್ಟಿ ಇಲ್ಲಿದೆ.

ಡೇಲ್ ಸ್ಟೈನ್

ದೇಶ: ದಕ್ಷಿಣ ಆಫ್ರಿಕಾ

ವಿಶ್ವದ ಪ್ರಮುಖ ವೇಗದ ಬೌಲರ್​ಗಳಲ್ಲಿ ಒಬ್ಬರಾಗಿರುವ ಡೇಲ್ ಸ್ಟೈನ್ 15 ವರ್ಷದ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಗಾಯಗೊಂಡು ಮೈದಾನದಿಂದ ಹೊರಗುಳಿದಿದ್ದೇ ಹೆಚ್ಚು. ಫಿಟ್ನೆಸ್ ಸಮಸ್ಯೆಯಿಂದ ಬಳಲಿದ ಸ್ಟೈನ್ ತಂಡದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ದ.ಆಫ್ರಿಕಾ ಪಾಲಿಗೆ ಮರೀಚಿಕೆಯಾಗಿರುವ ಏಕದಿನ ವಿಶ್ವಕಪ್ ಗೆಲುವಿನೊಂದಿಗೆ ವಿದಾಯದ ನಿರೀಕ್ಷೆಯಲ್ಲಿದ್ದಾರೆ. ಜುಲೈ ತಿಂಗಳ ಬಳಿಕ ನಿಗದಿತ ಓವರ್​ಗಳಿಂದ ದೂರ ಉಳಿಯುವುದಾಗಿ 35 ವರ್ಷದ ಸ್ಟೈನ್ ಕಳೆದ ವರ್ಷವೇ ಹೇಳಿದ್ದರು. 2015ರ ವಿಶ್ವಕಪ್ ಟೂರ್ನಿಯ ಸೆಮೀಸ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಿನ ಬಳಿಕ ವಿದಾಯ ಹೇಳಲು ನಿರ್ಧರಿಸಿದ್ದರೂ ಬಳಿಕ ಏಕದಿನ ಕ್ರಿಕೆಟ್​ಗೆ ವಾಪಸಾಗಿದ್ದರು.

ಆಡಿರುವ ಟೂರ್ನಿ: 2, ಪಂದ್ಯಗಳು: 14, ವಿಕೆಟ್: 23.

ಲಸಿತ್ ಮಾಲಿಂಗ

ದೇಶ: ಶ್ರೀಲಂಕಾ

ದ್ವೀಪ ರಾಷ್ಟ್ರ ಶ್ರೀಲಂಕಾ ಕಂಡ ಅಪ್ರತಿಮ ಬೌಲರ್ ಲಸಿತ್ ಮಾಲಿಂಗ. ಮಾಲಿಂಗ 2007, 2011ರ ಟೂರ್ನಿಗಳಲ್ಲಿ ಲಂಕಾ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಯಾರ್ಕರ್ ಹಾಗೂ ಇನ್​ಸ್ವಿಂಗ್ ಎಸೆತಗಳಿಗೆ ಹೆಸರಾಗಿರುವ 35 ವರ್ಷದ ಮಾಲಿಂಗಗೂ ಇದೇ ಕಡೇ ವಿಶ್ವಕಪ್. ಪ್ರಸಕ್ತ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊನೇ ಎಸೆತದಲ್ಲಿ ಪ್ರಶಸ್ತಿ ತಂದುಕೊಟ್ಟ ಮಾಲಿಂಗ ಚುಟುಕು ಕ್ರಿಕೆಟ್​ಗಷ್ಟೇ ಸೀಮಿತವಾಗಲಿದ್ದಾರೆ.

ಆಡಿರುವ ಟೂರ್ನಿ: 3, ಪಂದ್ಯಗಳು: 22, ವಿಕೆಟ್: 43, ಉತ್ತಮ: 38ಕ್ಕೆ 6.

ಇಮ್ರಾನ್ ತಾಹಿರ್

ದೇಶ: ದಕ್ಷಿಣ ಆಫ್ರಿಕಾ

ವಿಕೆಟ್ ಪಡೆದ ಬಳಿಕ ವಿಶೇಷವಾಗಿ ಸಂಭ್ರಮಾಚರಿಸುವ 40 ವರ್ಷದ ಇಮ್ರಾನ್ ತಾಹಿರ್ ವಿಶ್ವಕಪ್ ಟೂರ್ನಿಯೊಂದಿಗೆ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಪ್ರಸಕ್ತ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ದಕ್ಕಿಸಿಕೊಂಡಿರುವ ತಾಹಿರ್ ಚುಟುಕು ಕ್ರಿಕೆಟ್ ಸಲುವಾಗಿಯೇ ಏಕದಿನದಿಂದ ಹಿಂದೆ ಸರಿಯುತ್ತಿದ್ದಾರೆ. 98 ಏಕದಿನ ಪಂದ್ಯಗಳಿಂದ 162 ವಿಕೆಟ್ ಪಡೆದಿದ್ದಾರೆ.

ಆಡಿರುವ ಟೂರ್ನಿ: 2, ಪಂದ್ಯಗಳು: 13, ವಿಕೆಟ್ : 29.

ಕ್ರಿಸ್ ಗೇಲ್

ದೇಶ: ವೆಸ್ಟ್ ಇಂಡೀಸ್

ವಿಶ್ವ ಟಿ20 ಕ್ರಿಕೆಟ್ ಲೋಕದಲ್ಲೇ ದೈತ್ಯ ಬ್ಯಾಟ್ಸ್​ಮನ್ ಎನಿಸಿಕೊಂಡಿರುವ 39 ವರ್ಷದ ಕ್ರಿಸ್ ಗೇಲ್ ಪಾಲಿಗಿದು ಕೊನೇ ವಿಶ್ವಕಪ್ ಟೂರ್ನಿ. 5ನೇ ವಿಶ್ವಕಪ್ ಆಡಲು ಸಜ್ಜುಗೊಳ್ಳುತ್ತಿರುವ ಗೇಲ್, 2 ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಸ್ಪೋಟಕ ಬ್ಯಾಟಿಂಗ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಗೇಲ್ ಕೇವಲ ಚುಟುಕು ಕ್ರಿಕೆಟ್​ನಲ್ಲಿ ಮತ್ತಷ್ಟು ದಿನ ಮುಂದುವರಿಯುವ ಹಂಬಲದಲ್ಲಿದ್ದಾರೆ.

ಆಡಿರುವ ಟೂರ್ನಿ: 4, ಪಂದ್ಯಗಳು: 26, ರನ್: 944, ಗರಿಷ್ಠ ರನ್: 215, ಶತಕ: 2, ವಿಕೆಟ್: 14.

ಜೆಪಿ ಡುಮಿನಿ

ದೇಶ: ದಕ್ಷಿಣ ಆಫ್ರಿಕಾ

ಪ್ರಮುಖ ಆಲ್ರೌಂಡರ್ ಆಗಿರುವ ಜೆಪಿ ಡುಮಿನಿ ಕೇವಲ ಟಿ20 ಕ್ರಿಕೆಟ್​ನಲ್ಲಷ್ಟೇ ಮುಂದುವರಿಯಲು ನಿರ್ಧರಿಸಿದ್ದಾರೆ. ವಿಶ್ವಕಪ್ ಬಳಿಕ ಏಕದಿನಕ್ಕೆ ನಿವೃತ್ತಿ ಹೇಳಲಿದ್ದಾರೆ. ಗಾಯಗೊಂಡ ಬಳಿಕ ಕೆಲದಿನಗಳಿಂದ ತಂಡದಿಂದ ಕಡೆಗಣಿಸಲ್ಪಟ್ಟಿದ್ದ 35 ವರ್ಷದ ಡುಮಿನಿ ಕಳೆದ ಮಾರ್ಚ್​ನಲ್ಲೇ ವಿಶ್ವಕಪ್ ಬಳಿಕ ಏಕದಿನಕ್ಕೆ ವಿದಾಯ ಹೇಳಿದ್ದಾರೆ. ತವರು ನೆಲ ಕೇಪ್​ಟೌನ್​ನಲ್ಲಿ ಕೊನೇ ಬಾರಿಗೆ ಏಕದಿನ ಆಡಿದ ಬಳಿಕ ಈ ನಿರ್ಧಾರ ಪ್ರಕಟಿಸಿದರು. ದ.ಆಫ್ರಿಕಾ ಪರ ಅತಿ ಹೆಚ್ಚು ರನ್​ಗಳಿಸಿರುವ ಅಗ್ರ 10 ಆಟಗಾರರಲ್ಲಿ ಡುಮಿನಿ ಕೂಡ ಒಬ್ಬರು. 194 ಪಂದ್ಯಗಳಿಂದ 5980 ರನ್​ಗಳಿಸಿದ್ದಾರೆ. ಇನ್ನು 6 ಪಂದ್ಯ ಆಡಿದರೆ 200 ಪಂದ್ಯ ಆಡಿದ ದೇಶದ 7ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಆಡಿರುವ ಟೂರ್ನಿ: 2, ಪಂದ್ಯಗಳು: 13, ರನ್: 388, ಗರಿಷ್ಠ ರನ್: 115, ಶತಕ: 1, ವಿಕೆಟ್: 8.

ಧೋನಿ

ದೇಶ: ಭಾರತ

2 ವಿಶ್ವಕಪ್ (2007ರ ಟಿ20, 2011ರ ಏಕದಿನ) ವಿಜೇತ ತಂಡದ ನಾಯಕ ಎಂಎಸ್ ಧೋನಿಗೂ ಇದು ಕಡೆಯ ವಿಶ್ವಕಪ್ ಆಗಲಿದೆ. 5 ವರ್ಷದ ಹಿಂದೆಯೇ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿರುವ ಧೋನಿ ಕೇವಲ ನಿಗದಿತ ಓವರ್​ಗಳಿಗಷ್ಟೇ ಸೀಮಿತವಾಗಿದ್ದಾರೆ. 37 ವರ್ಷದ ಧೋನಿ ಭಾರತ ತಂಡದ ಅನುಭವಿಯಾಗಿದ್ದು, ನಾಯಕ ವಿರಾಟ್ ಕೊಹ್ಲಿಗೆ ಅಗತ್ಯ ಸಲಹೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಮುಂದಿನ ವಿಶ್ವಕಪ್ ವೇಳೆಗೆ ಮಹಿ 40ರ ಗಡಿ ದಾಟುವುದರಿಂದ ವೃತ್ತಿ ಜೀವನದಿಂದಲೂ ಹಿಂದೆ ಸರಿಯಲಿದ್ದಾರೆ.

ಆಡಿರುವ ಟೂರ್ನಿ: 3, ಪಂದ್ಯಗಳು: 20, ರನ್: 507, ಗರಿಷ್ಠ ರನ್: 91, ಕ್ಯಾಚ್/ಸ್ಟಂಪ್: 27/5,

ಶೋಯಿಬ್ ಮಲಿಕ್

ದೇಶ: ಪಾಕಿಸ್ತಾನ

ಕಳೆದ ಎರಡು ದಶಕಗಳಿಂದ ಪಾಕಿಸ್ತಾನ ತಂಡದ ಭಾಗವಾಗಿರುವ ಆಲ್ರೌಂಡರ್ ಶೋಯಿಬ್ ಮಲಿಕ್ ಕೇವಲ ಏಕೈಕ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2007ರಲ್ಲಿ ತಂಡದಲ್ಲಿದ್ದರೂ ಪಂದ್ಯವಾಡುವ ಅವಕಾಶ ಲಭಿಸಿರಲಿಲ್ಲ. ಆಫ್ ಸ್ಪಿನ್ನರ್ ಆಗಿರುವ 37 ವರ್ಷದ ಮಲಿಕ್, 282 ಏಕದಿನ ಆಡಿದ್ದು 7481 ರನ್ ಬಾರಿಸಿ 156 ವಿಕೆಟ್ ಕಬಳಿಸಿದ್ದಾರೆ. ವಿಶ್ವಕಪ್ ಬಳಿಕ ವಿದಾಯ ಹೇಳುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಇವರುಗಳಿಗೂ ಬಹುತೇಕ ಕೊನೇ ವಿಶ್ವಕಪ್

ಈಗಾಗಲೇ 35ರ ಗಡಿ ದಾಟಿರುವ ಕೆಲ ಸ್ಟಾರ್ ಕ್ರಿಕೆಟಿಗರಿಗೂ ಈ ವಿಶ್ವಕಪ್ ಅಂತಿಮವಾಗಬಹುದು. ಭಾರತದ ಶಿಖರ್ ಧವನ್ (33 ವರ್ಷ), ಪಾಕಿಸ್ತಾನದ ಮೊಹಮದ್ ಹಫೀಜ್ (38 ವರ್ಷ), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (32 ವರ್ಷ), ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ (34ವರ್ಷ), ಹಾಶಿಂ ಆಮ್ಲ (36ವರ್ಷ), ಶ್ರೀಲಂಕಾದ ಮಾಜಿ ನಾಯಕ ಏಂಜಲೊ ಮ್ಯಾಥ್ಯೂಸ್ (31 ವರ್ಷ) ಸೇರಿದಂತೆ ಕೆಲ ಆಟಗಾರರಿಗೆ ಇದೇ ಕೊನೇ ವಿಶ್ವಕಪ್ ಟೂರ್ನಿಯಾಗುವ ಸಾಧ್ಯತೆಗಳಿವೆ.

ಒಂದೂ ಪಂದ್ಯವಾಡದೇ ಟ್ರೋಫಿ ಗೆಲುವು!

ಪ್ರತಿ ಬಾರಿ ವಿಶ್ವಕಪ್ ಟೂರ್ನಿ ಎಂದಾಗ ಭಾರತದ ಎಡಗೈ ವೇಗದ ಬೌಲರ್ ಸುನೀಲ್ ವಲ್ಸನ್ ವಿಶೇಷ ಕಾರಣಕ್ಕಾಗಿ ನೆನಪಾಗುತ್ತಾರೆ. ತೆಲಂಗಾಣದ ಸುನೀಲ್ ವಲ್ಸನ್ 1983ರ ಭಾರತ ವಿಶ್ವಕಪ್ ತಂಡದ ಸದಸ್ಯರಾಗಿದ್ದವರು. ವಿಶ್ವಕಪ್ ತಂಡದ ಭಾಗವಾಗಿ ವಿಶ್ವಕಪ್​ನಲ್ಲಿ ಒಂದೂ ಪಂದ್ಯವಾಡದೇ ಟ್ರೋಫಿ ಜಯಿಸಿದ ಮೊದಲ ಆಟಗಾರ ಸುನೀಲ್ ವಲ್ಸನ್. 1983ರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ಸುನೀಲ್ ವಲ್ಸನ್, ಭಾರತ ಟೂರ್ನಿಯಲ್ಲಿ 8 ಪಂದ್ಯವಾಡಿದರೂ ಒಂದೂ ಪಂದ್ಯದಲ್ಲಿ ಅವಕಾಶ ಪಡೆದಿರಲಿಲ್ಲ. ಇನ್ನೂ ಒಂದು ಅಚ್ಚರಿಯ ಸಂಗತಿ ಏನೆಂದರೆ, 1983ರ ವಿಶ್ವಕಪ್ ಮುಗಿದ ಬಳಿಕ ಸುನೀಲ್ ವಲ್ಸನ್ ಮುಂದೆಂದೂ ಭಾರತ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ವಿಶ್ವದ ಏಕೈಕ ಆಟಗಾರ ಸುನೀಲ್ ವಲ್ಸನ್. 1977 ರಿಂದ 1988ರ ಅವಧಿಯಲ್ಲಿ 75 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವಾಡಿದ್ದ ಸುನೀಲ್ ವಲ್ಸನ್ 212 ವಿಕೆಟ್ ಉರುಳಿಸಿದ್ದರು. ಇದರಲ್ಲಿ ಹೆಚ್ಚಿನ ವಿಕೆಟ್​ಗಳು ದೆಹಲಿ ಪರವಾಗಿ ಆಡುವಾಗ ಬಂದಿದ್ದವು. 2003ರ ವಿಶ್ವಕಪ್​ನಲ್ಲಿ ಶೇನ್ ವಾರ್ನ್, ಉದ್ದೀಪನ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಆಸೀಸ್ ತಂಡ ಆಫ್ ಸ್ಪಿನ್ನರ್ ನಥಾನ್ ಹಾರಿಟ್ಜ್​ರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಆಸೀಸ್ ವಿಶ್ವಕಪ್ ಗೆದ್ದರೂ, ಹಾರಿಟ್ಜ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಆಡಿರಲಿಲ್ಲ. ಆದರೆ, ವಿಶ್ವಕಪ್ ಹೊರತಾಗಿ ಹಾರಿಟ್ಜ್ ಆಸೀಸ್ ಪರ 8 ಏಕದಿನ ಪಂದ್ಯ ಆಡಿದ್ದರು.