VIDEO| ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಅಭಿಮಾನಿ ಬಾಲಕಿಗೆ ನೀಡಿ ಕ್ರೀಡಾಭಿಮಾನಿಗಳ ಮನ ಗೆದ್ದ ವಾರ್ನರ್​!

ನವದೆಹಲಿ: ನಿನ್ನೆ(ಬುಧವಾರ) ನಡೆದ ಪಾಕಿಸ್ತಾನ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಕ್ರೀಡಾಭಿಮಾನಿಗಳ ಮನಸ್ಸು ಗೆದ್ದ ಆಸ್ಟ್ರೇಲಿಯ ಆಟಗಾರ ಡೇವಿಡ್​ ವಾರ್ನರ್​ ಅವರು ತಮಗೆ ನೀಡಿದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಆಸಿಸ್​ ಆಭಿಮಾನಿಯಾಗಿರುವ ಬಾಲಕಿಯೊಬ್ಬಳಿಗೆ ನೀಡುವ ಮೂಲಕ ಎಲ್ಲರ ಹೃದಯವನ್ನು ಮುಟ್ಟಿದರು.

ಭಾರತ ವಿರುದ್ಧ ಕಳೆದ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮುಖಭಂಗ ಅನುಭವಿಸಿದ್ದ ಆಸಿಸ್​ ಪಡೆಯನ್ನು ಉತ್ತೇಜಿಸಲು ಕ್ರೀಡಾಂಗಣದ ಮೂಲೆಯೊಂದರಲ್ಲಿ ಬಾಲಕಿಯೊಬ್ಬಳು ನಿಂತಿದ್ದಳು. ಅತ್ತ ಪಾಕ್​ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರಿಸಿದ ವಾರ್ನರ್ ​(107 ರನ್, 111 ಎಸೆತ, 11 ಬೌಂಡರಿ, 1 ಸಿಕ್ಸರ್) ಶತಕ ಸಿಡಿಸಿ ಸಂಭ್ರಮಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಆದರೆ, ತಮಗೆ ಬಂದ ಪ್ರಶಸ್ತಿಯನ್ನು ವಾರ್ನರ್​, ಕ್ರೀಡಾಂಗಣದಲ್ಲಿ ನಿಂತಿದ್ದ ಆಸಿಸ್​ ಪಡೆಯ ಅಭಿಮಾನಿ ಬಾಲಕಿಗೆ ನೀಡಿ ಗೌರವಿಸಿದರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಆಗಿದ್ದು, ಸಾಕಷ್ಟು ವೈರಲ್​ ಆಗಿದೆ. ವಿಡಿಯೋದಲ್ಲಿರುವಂತೆ ಅಭಿಮಾನಿ ಬಾಲಕಿಗೆ ಪ್ರಶಸ್ತಿಯನ್ನು ನೀಡುವ ವಾರ್ನರ್​ ಅದರ ಮೇಲೆ ತಮ್ಮ ಹಸ್ತಾಕ್ಷರವನ್ನು ಹಾಕುತ್ತಾರೆ. ಈ ಬಗ್ಗೆ ಕ್ರೀಡಾ ಆ್ಯಂಕರ್​ ಜತೆ ಮಾತನಾಡಿರುವ ಬಾಲಕಿ, ನಾವು ಆಸಿಸ್​ ಬಾವುಟವನ್ನು ಹಾರಿಸುತ್ತಿದ್ದೆವು. ಆಗ ನಮ್ಮ ಎದುರು ಹಾದು ಹೋದ ವಾರ್ನರ್​ ನಮ್ಮನ್ನು ನೋಡಿ ಹತ್ತಿರ ಬಂದು ಪ್ರಶಸ್ತಿಯನ್ನು ನೀಡಿದರು. ನಾನು ನಿಜವಾಗಿಯು ಅವರನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾಳೆ.

ನಿನ್ನೆ ಕೂಪರ್ ಅಸೋಸಿಯೇಟ್ಸ್ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ವಾರ್ನರ್ ಹಾಗೂ ನಾಯಕ ಆರನ್ ಫಿಂಚ್ (82 ರನ್, 84 ಎಸೆತ, 6 ಬೌಂಡರಿ, 4 ಸಿಕ್ಸರ್) ಮೊದಲ ವಿಕೆಟ್​ಗೆ ಪೇರಿಸಿದ 146 ರನ್ ಜತೆಯಾಟದ ನಡುವೆಯೂ ಪಾಕಿಸ್ತಾನದ ಮೊಹಮದ್ ಆಮೀರ್ (30ಕ್ಕೆ 5) ಮಾರಕ ದಾಳಿಯಿಂದಾಗಿ 49 ಓವರ್​ಗಳಲ್ಲಿ 307 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಪಾಕಿಸ್ತಾನ ತಂಡ 45.4 ಓವರ್​ಗಳಲ್ಲಿ 266 ರನ್​ಗಳಿಗೆ ಸರ್ವಪತನ ಕಂಡಿತು. (ಏಜೆನ್ಸೀಸ್​)

ವಾರ್ನರ್ ಶತಕದಬ್ಬರಕ್ಕೆ ಬೆಚ್ಚಿದ ಪಾಕ್